
ವಾಷಿಂಗ್ಟನ್, ಆ.29: ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುವ ಎಚ್-1ಬಿ (H-1B) ಸೇರಿದಂತೆ ವಿದೇಶಿ ಉದ್ಯೋಗಿಗಳಿಗೆ ಲಭ್ಯವಿದ್ದ 60 ದಿನಗಳ ಕಾಲಾವಕಾಶವನ್ನು (Grace Period) ರದ್ದುಗೊಳಿಸುವ ಅಮೆರಿಕದ ಟ್ರಂಪ್ ಆಡಳಿತದ ಪ್ರಸ್ತಾವನೆಗೆ ಶ್ವೇತಭವನದ ‘ಆಫೀಸ್ ಆಫ್ ಇನ್ಫಾರ್ಮೇಶನ್ ಅಂಡ್ ರೆಗ್ಯುಲೇಟರಿ ಅಫೇರ್ಸ್’ (OIRA) ಅನುಮೋದನೆ ನೀಡಿದೆ. ಅಮೆರಿಕದ ಒಳನಾಡಿನ ಭದ್ರತಾ ಇಲಾಖೆ (DHS) ಸಲ್ಲಿಸಿದ್ದ ಈ ಪ್ರಸ್ತಾವನೆಯು ವೈಟ್ ಹೌಸ್ ನಿಯಂತ್ರಕ ಪರಾಮರ್ಶೆಯಲ್ಲಿ ತೇರ್ಗಡೆಯಾಗಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಇದು ಜಾರಿಗೆ ಬಂದರೆ ಉದ್ಯೋಗ ಕಳೆದುಕೊಳ್ಳುವ ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಭಾರೀ ಹಿನ್ನಡೆಯಾಗಲಿದೆ.
2017 ರಿಂದ ಜಾರಿಯಲ್ಲಿದ್ದ ನಿಯಮದಂತೆ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಎಚ್-1ಬಿ ಅಥವಾ ಇತರ ಸಬ್-ವೀಸಾ ಹೊಂದಿರುವ ಉದ್ಯೋಗಿ ಕಂಪನಿಯಿಂದ ವಜಾಗೊಂಡರೆ ಅಥವಾ ಉದ್ಯೋಗ ತೊರೆದರೆ, ಅವರಿಗೆ 60 ದಿನಗಳ ಕಾಲಾವಕಾಶ ಸಿಗುತ್ತಿತ್ತು.
ಹೊಸ ಉದ್ಯೋಗದಾತರನ್ನು ಹುಡುಕಿ ವೀಸಾ ಸ್ಪಾನ್ಸರ್ ಪಡೆದುಕೊಳ್ಳಬಹುದು. ತಮ್ಮ ವೀಸಾ ವಿಭಾಗವನ್ನು ಬದಲಾಯಿಸಿಕೊಳ್ಳಬಹುದು. ಅಥವಾ ದೇಶ ತೊರೆಯಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಈ ನಿಯಮವು H-1B ಅಲ್ಲದೆ E-1, E-2, E-3, H-1B1, L-1, O-1 ಮತ್ತು TN ವೀಸಾ ಹೊಂದಿರುವವರಿಗೂ ಅನ್ವಯಿಸುತ್ತಿತ್ತು.
ಉದ್ಯೋಗ ಕಳೆದುಕೊಂಡ ನಂತರ ಸಿಗುತ್ತಿದ್ದ ಈ 60 ದಿನಗಳ ರಕ್ಷಣಾತ್ಮಕ ಕಾಲಾವಕಾಶವನ್ನು ಪೂರ್ಣವಾಗಿ ರದ್ದುಗೊಳಿಸಲು ಡಿಎಚ್‌ಎಸ್ (DHS) ಬಯಸಿದೆ. ಈ ನಿಯಮ ಜಾರಿಯಾದರೆ, ಕೆಲಸ ಕಳೆದುಕೊಂಡ ಉದ್ಯೋಗಿಗಳು ತಕ್ಷಣವೇ ಹೊಸ ಕೆಲಸ ಹುಡುಕಬೇಕು ಅಥವಾ ಯಾವುದೇ ಕಾಲಾವಕಾಶವಿಲ್ಲದೆ ಅಮೆರಿಕದಿಂದ ಕಾಲ್ತೆಗೆಯಬೇಕಾಗುತ್ತದೆ. ವೈಟ್ ಹೌಸ್ ವಿಮರ್ಶೆ ಪೂರ್ಣಗೊಂಡಿದ್ದರೂ, ಇನ್ನೂ ಅಧಿಕೃತ ಕರಡು ಪ್ರಕಟವಾಗಿಲ್ಲ. ಇದು ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಗೊಂಡ ನಂತರ ಸಾರ್ವಜನಿಕರ ಅಭಿಪ್ರಾಯಕ್ಕೆ ಸಮಯ ನೀಡಲಾಗುತ್ತದೆ.
ಅಮೆರಿಕದ H-1B ವೀಸಾ ಯೋಜನೆ ಫಲಾನುಭವಿಗಳಲ್ಲಿ ಭಾರತೀಯರೇ ಸಿಂಹಪಾಲು ಹೊಂದಿದ್ದಾರೆ. 2024 ರ ಹಣಕಾಸು ವರ್ಷದಲ್ಲೇ ಒಟ್ಟು ಅನುಮೋದಿತ H-1B ಅರ್ಜಿಗಳಲ್ಲಿ ಶೇ. 71 ರಷ್ಟು ಭಾರತೀಯರದ್ದಾಗಿತ್ತು. ಕೆಲಸ ಕಳೆದುಕೊಂಡ ತಕ್ಷಣ ಹೊಸ ಕಂಪನಿಯಲ್ಲಿ ಪ್ರಕ್ರಿಯೆ ಮುಗಿಸುವುದು ಸುಲಭವಲ್ಲ. ಈ ನಿಯಮ ಜಾರಿಯಾದರೆ ಐಟಿ ಮತ್ತು ಟೆಕ್ ವಲಯದಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಭವಿಷ್ಯದ ಅಭದ್ರತೆ ಎದುರಾಗಲಿದೆ.
ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಮಾಜಿ ಶ್ವೇತಭವನ ಸಲಹೆಗಾರ ಅಜಯ್ ಜೈನ್ ಭುಟೋರಿಯಾ ಈ ಪ್ರಸ್ತಾವನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “60 ದಿನಗಳ ಗ್ರೇಸ್ ಪೀರಿಯಡ್ ರದ್ದು ಮಾಡುವುದು ತೀರಾ ಅಮಾನವೀಯ ಮತ್ತು ಜಾರಿಗೆ ತರಲು ಸಾಧ್ಯವಿಲ್ಲದ ನಿರ್ಧಾರ. ಏಕಾಏಕಿ ಕೆಲಸ ಕಳೆದುಕೊಂಡಾಗ 60 ದಿನಗಳ ಸಮಯವೇ ತುಂಬಾ ಕಡಿಮೆಯಿರುತ್ತದೆ. ಅದನ್ನು ಪೂರ್ಣವಾಗಿ ರದ್ದು ಮಾಡಿದರೆ, ವರ್ಷಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ ತೆರಿಗೆ ಪಾವತಿಸಿದ ನೌಕರರು ತಮ್ಮ ಬಾಡಿಗೆ ಮನೆ ಖಾಲಿ ಮಾಡಲು, ಮಕ್ಕಳ ಶಾಲೆ ಬದಲಾಯಿಸಲು ಹಾಗೂ ವೈಯಕ್ತಿಕ ವ್ಯವಹಾರಗಳನ್ನು ಮುಗಿಸಲು ಸಮಯವೇ ಸಿಗುವುದಿಲ್ಲ. ಈ ಸಮಯವನ್ನು 60 ದಿನಗಳ ಬದಲಾಗಿ 180 ದಿನಗಳಿಗೆ (6 ತಿಂಗಳು) ಹೆಚ್ಚಿಸಬೇಕು.” ಎಂದು ಹೇಳಿದ್ದಾರೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ