Explainer | ಬ್ರಿಟನ್​, ಕೆನಡಾ ಮತ್ತು ಅಮೆರಿಕಗಳಲ್ಲಿ ಹೇಗೆ ನಡೆಯುತ್ತಿದೆ ಕೊರೊನಾ ಲಸಿಕೆ ವಿತರಣೆ?

ನಿರ್ದಿಷ್ಟ ಉಷ್ಣಾಂಶದಲ್ಲಿಯೇ ಸಂಗ್ರಹ ಮಾಡಬೇಕು ಎನ್ನುವುದು ಕೊರೊನಾ ಲಸಿಕೆಯ ವಿತರಣೆಗೆ ಇರುವ ಬಹುದೊಡ್ಡ ಸವಾಲು. ಈ ಸವಾಲು ಎದುರಿಸಲು ಭಾರತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಈಗಾಗಲೇ ಲಸಿಕೆ ವಿತರಣೆ ಆರಂಭವಾಗಿರುವ ಅಮೆರಿಕ, ಕೆನಡಾ ಮತ್ತು ಬ್ರಿಟನ್​ಗಳಲ್ಲಿ ಲಸಿಕೆ ನೀಡುವ ಕಾರ್ಯ ಹೇಗೆ ಸಾಗಿದೆ? ನಮ್ಮ ದೇಶಕ್ಕೂ ಪಾಠವಾಗಬಲ್ಲ ಆ ಮೂರೂ ದೇಶಗಳ ಮಾಹಿತಿ ಇಲ್ಲಿದೆ.

Explainer | ಬ್ರಿಟನ್​, ಕೆನಡಾ ಮತ್ತು ಅಮೆರಿಕಗಳಲ್ಲಿ ಹೇಗೆ ನಡೆಯುತ್ತಿದೆ ಕೊರೊನಾ ಲಸಿಕೆ ವಿತರಣೆ?
ಪ್ರಾತಿನಿಧಿಕ ಚಿತ್ರ
Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 14, 2020 | 4:13 PM

ನಿರ್ದಿಷ್ಟ ಉಷ್ಣಾಂಶದಲ್ಲಿಯೇ ಸಂಗ್ರಹ ಮಾಡಬೇಕು ಎನ್ನುವುದು ಕೊರೊನಾ ಲಸಿಕೆಯ ವಿತರಣೆಗೆ ಇರುವ ಬಹುದೊಡ್ಡ ಸವಾಲು. ಈ ಸವಾಲು ಎದುರಿಸಲು ಭಾರತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಈಗಾಗಲೇ ಲಸಿಕೆ ವಿತರಣೆ ಆರಂಭವಾಗಿರುವ ಅಮೆರಿಕ, ಕೆನಡಾ ಮತ್ತು ಬ್ರಿಟನ್​ಗಳಲ್ಲಿ ಲಸಿಕೆ ನೀಡುವ ಕಾರ್ಯ ಹೇಗೆ ಸಾಗಿದೆ? ನಮ್ಮ ದೇಶಕ್ಕೂ ಪಾಠವಾಗಬಲ್ಲ ಆ ಮೂರೂ ದೇಶಗಳ ಮಾಹಿತಿ ಇಲ್ಲಿದೆ.

ಕೊರೊನಾ ಲಸಿಕೆಗಾಗಿ ಜಗತ್ತು ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಈಗಾಗಲೇ ಕೆಲವು ದೇಶಗಳು ಲಸಿಕೆ ಬಳಕೆಗೆ ಅಧಿಕೃತ ಅನುಮತಿ ನೀಡಿವೆ. ಬ್ರಿಟನ್​ ಮತ್ತು ಕೆನಡಾ ನಂತರ ಅಮೆರಿಕಾ ಸಹ ಶುಕ್ರವಾರದಂದು ಕೊರೊನಾ ಲಸಿಕೆ ಬಳಕೆಗೆ ಒಪ್ಪಿಗೆ ಸೂಚಿಸಿದೆ.

ಇನ್ನು ಕೆಲವೇ ದಿನಗಳಲ್ಲಿ ಅಮೆರಿಕಾದಲ್ಲಿ ಕೊರೊನಾ ಲಸಿಕೆ ವಿತರಣೆ ಆಗುವ ಸಾಧ್ಯತೆಯೂ ಇದೆ. ಆದರೆ, ಪ್ರತಿ ದೇಶಗಳ ಆರೋಗ್ಯ ವ್ಯವಸ್ಥೆ ಮತ್ತು ಜನಜೀವನದಲ್ಲಿ ಅಜಗಜಾಂತರ ಇರುವುದರಿಂದ ಕೊರೊನಾ ಲಸಿಕೆ ಬೀರುವ ಪರಿಣಾಮದಲ್ಲಿಯೂ ಏರುಪೇರಾಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ. ಈ ತೆರನಾದ ದೃಷ್ಟಿಕೋನವನ್ನು ಇಟ್ಟುಕೊಂಡು ಕೊರೊನಾ ಲಸಿಕೆ ಮುಂದಿನ ದಿನಗಳಲ್ಲಿ ಹೇಗೆ ಲಭ್ಯವಾಗಬಹುದು ಎಂಬ ವಿವರವನ್ನು ನೀಡಲಾಗಿದೆ.

ಅಮೆರಿಕಾ, ಬ್ರಿಟನ್​, ಕೆನಡಾ ದೇಶಗಳ ತಜ್ಞರು ಮೊಟ್ಟ ಮೊದಲು ಅಂಗೀಕರಿಸಿದ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಫೈಜರ್​ ಮತ್ತು ಅದರ ಒಡನಾಡಿ ಸಂಸ್ಥೆ ಬಯೋಎನ್​ಟೆಕ್. ಇದೇ ಲಸಿಕೆ ಇನ್ನು ಕೆಲ ಸಮಯದಲ್ಲಿ ಯುರೋಪ್​ ಪ್ರಾಂತ್ಯದಲ್ಲೂ ಅನುಮತಿ ಪಡೆಯುವ ಸಾಧ್ಯತೆ ಇದೆ.

ಫೈಜರ್​ ಮತ್ತು ಬಯೋಎನ್​ಟೆಕ್​ ಬೆನ್ನಹಿಂದೆಯೇ ಇನ್ನೂ ಹಲವು ಸಂಸ್ಥೆಗಳು ತಾವು ಉತ್ಪಾದಿಸಿದ ಲಸಿಕೆಯನ್ನು ಹಿಡಿದುಕೊಂಡು ಅನುಮತಿ ಪಡೆಯಲು ಹಾತೊರೆಯುತ್ತಿವೆ. ಮಾಡೆರ್ನಾ ಮತ್ತು ನ್ಯಾಶನಲ್​ ಇನ್​ಸ್ಟಿಟ್ಯೂಟ್ ಆಫ್​ ಹೆಲ್ತ್​, ಆಸ್ಟ್ರೋಜೆನೆಕಾ ಮತ್ತು ಆಕ್ಸ್​ಫರ್ಡ್​ ವಿವಿ ತಯಾರಿಸಿದ ಕೊರೊನಾ ಲಸಿಕೆಗಳು ಮಾರುಕಟ್ಟೆಗೆ ಕಾಲಿಡಲು ಸಿದ್ಧವಾಗಿವೆ.

ಇವುಗಳಲ್ಲದೇ ಇನ್ನೂ ಹಲವು ಸಂಸ್ಥೆಗಳು ಒಂದೆರೆಡು ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಲು ಸನ್ನದ್ಧಗೊಳ್ಳುತ್ತಿವೆ. ಆದ್ದರಿಂದ 2021ರ ಆರಂಭದಲ್ಲೇ ಹತ್ತು ಹಲವು ಲಸಿಕೆಗಳ ಹೆಸರು ಕಿವಿಗೆ ಬೀಳುವ ಸಾಧ್ಯತೆ ಇದೆ. ಆದರೆ, ಇವು ಮಾರುಕಟ್ಟೆ ಪ್ರವೇಶಿಸಬೇಕೆಂದರೆ ಅನುಮತಿ ಸಿಗುವುದು ಬಹುಮುಖ್ಯ. ಜೊತೆಗೆ, ಆ ಕೊರೊನಾ ಲಸಿಕೆಗೆ ತಗುಲುವ ಉತ್ಪಾದನಾ ವೆಚ್ಚ ಅವುಗಳ ಬಳಕೆಯ ಪ್ರಮಾಣವನ್ನು ನಿರ್ಧರಿಸುವುದು ಖಚಿತ.

ಪ್ರಸ್ತುತ ಸಿದ್ಧಗೊಂಡಿರುವ ಫೈಜರ್​, ಬಯೋಎನ್​ಟೆಕ್ ಮತ್ತು ಮಾಡೆರ್ನಾ NIH ಲಸಿಕೆಗಳು ಈ ಹಿಂದೆ ಬೇರೆ ಕಾಯಿಲೆಗಳಿಗೆ ಬಳಸಲಾಗುತ್ತಿದ್ದ ಲಸಿಕೆಗಳಿಂತ ಸಂಪೂರ್ಣ ವಿಭಿನ್ನವಾಗಿವೆ. ಈ ಕೊರೊನಾ ಲಸಿಕೆಗಳನ್ನು ಸಂಗ್ರಹಿಸಲು -94ಡಿಗ್ರಿಯ ಅಲ್ಟ್ರಾ ಕೋಲ್ಡ್ ಸ್ಟೋರೇಜ್ ಅಗತ್ಯವಿದೆ.

ಅಷ್ಟು ಕಡಿಮೆ ಉಷ್ಣಾಂಶದಲ್ಲಿ ಲಸಿಕೆಯನ್ನು ಸಂಗ್ರಹಿಸುವುದು ಬಹುತೇಕ ರಾಷ್ಟ್ರಗಳಿಗೆ ಅಸಾಧ್ಯ. ಆದ್ದರಿಂದ ಹೆಚ್ಚಿನ ರಾಷ್ಟ್ರಗಳು ತಮ್ಮಲ್ಲಿರುವ ವ್ಯವಸ್ಥೆಗೆ ಅನುಗುಣವಾಗಿ ಅಲ್ಲಿಗೆ ಹೊಂದಿಕೊಳ್ಳಬಲ್ಲ ಕೊರೊನಾ ಲಸಿಕೆಯನ್ನು ನಿರೀಕ್ಷಿಸುತ್ತಿವೆ.

ಬ್ರಿಟನ್, ಅಮೆರಿಕಾ, ಕೆನಡಾ ದೇಶಗಳ ಸಿದ್ಧತೆ ಹೇಗಿದೆ?

ಬ್ರಿಟನ್​ ದೇಶದ ಆರೋಗ್ಯ ವ್ಯವಸ್ಥೆ ಉತ್ಕೃಷ್ಟ ಮಟ್ಟದಲ್ಲಿದೆ. ಹೀಗಾಗಿ ಬ್ರಿಟನ್ ತನ್ನ ಎಲ್ಲಾ ಪ್ರಜೆಗಳಿಗೂ ಕೊರೊನಾ ಲಸಿಕೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕಳೆದ ವಾರದಿಂದಲೇ ಲಂಡನ್​ನಿಂದ ಲಸಿಕೆ ವಿತರಣೆ ಶುರುಮಾಡಿದೆ. ಬ್ರಿಟನ್ ಸರ್ಕಾರ 50 ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿ ಕೊರೊನಾ ಲಸಿಕೆ ನೀಡಲು ಬೇಕಾದ ಸಕಲ ಸವಲತ್ತುಗಳೂ ಸಿಗುವಂತೆ ಮುನ್ನೆಚ್ಚರಿಕೆ ವಹಿಸಿದೆ. ಮೊದಲು ಯಾವ ವಯೋಮಾನದವರಿಗೆ ಲಸಿಕೆ ಸಿಗಬೇಕು, ಯಾರಿಗೆ ಎಷ್ಟು ಡೋಸ್ ನೀಡಬೇಕು ಎಂಬುದನ್ನು ಆಯಾ ಆಸ್ಪತ್ರೆಗಳು ನಿರ್ಧರಿಸುವಂತೆ ಸೂಚನೆ ನೀಡಿದೆ.

ಇತ್ತ ಅಮೆರಿಕಾದಲ್ಲಿ ಅವಶ್ಯತೆಗಿಂತಲೂ ಮಿಗಿಲಾಗಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ರಾಜ್ಯಗಳಿಗೆ ಕೊರೊನಾ ಲಸಿಕೆ ವಿತರಿಸುವ ಯೋಜನೆ ಇದೆ. ಆದರೆ, ಕೆಲವು ರಾಜ್ಯಗಳು ಈಗಾಗಲೇ ತಕರಾರು ತೆಗೆದಿದ್ದು ನಮಗೆ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲು ಸೂಕ್ತ ಮಾಹಿತಿಯೇ ಸಿಕ್ಕಿಲ್ಲ ಎಂದು ತಿಳಿಸಿವೆ.

ಇನ್ನು ಕೆನಡಾದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇದ್ದರೂ ಅಲ್ಲಿಯ ಆಡಳಿತ ಅಮೆರಿಕಾದಂತೆಯೇ ಇದೆ. ಆದ್ದರಿಂದ ಕೊರೊನಾ ಲಸಿಕೆ ವಿತರಣೆಯ ಜವಾಬ್ದಾರಿ ಅಲ್ಲಿನ ಕೇಂದ್ರ ಸರ್ಕಾರದ ಮೇಲಿದ್ದು, ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡುವ ಜವಾಬ್ದಾರಿಯೂ ಕೇಂದ್ರದ ಮೇಲೆಯೇ ಇದೆ.

ಎಷ್ಟು ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಸಿಗಲಿದೆ?

ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೆನಡಾ ದೇಶ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಫೈಜರ್​ ಮತ್ತು ಬಯೋಎನ್​ಟೆಕ್ ಕೊರೊನಾ ಲಸಿಕೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್ ಶೇ.30ರಷ್ಟು ಲಸಿಕೆಯನ್ನು ತರಿಸಿಕೊಳ್ಳಲು ಸಿದ್ಧವಾಗಿದ್ದು, ಅಮೆರಿಕಾ ಶೇ.15ರಷ್ಟು ಲಸಿಕೆಯನ್ನು ಕಾಯ್ದಿರಿಸಿದೆ.

ಈ ಮೂರೂ ದೇಶಗಳು ಪೂರ್ವಭಾವಿಯಾಗಿ ಕೊರೊನಾ ಲಸಿಕೆಯನ್ನು ಕಾಯ್ದಿರಿಸಿರುವದರಿಂದ ಅಲ್ಲಿನ ಪ್ರಜೆಗಳು ಲಸಿಕೆಯಿಂದ ವಂಚಿತರಾಗುವ ಸಾಧ್ಯತೆ ಬಹಳ ಕಡಿಮೆಯಿದೆ. ಈ ಕಾರಣದಿಂದಲೇ ದೇಶದಲ್ಲಿ ಕೋಲ್ಡ್​ ಸ್ಟೋರೇಜ್, ಸಿರೆಂಜ್ ಉತ್ಪಾದನೆ ಮತ್ತು ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಮಾಡಲು ಸಿದ್ಧತೆ ಆಗುತ್ತಿದೆ.

ಈ ತಿಂಗಳ ಅಂತ್ಯದಲ್ಲಿ ಬ್ರಿಟನ್​ ಮುಂಗಡವಾಗಿ ಕಾಯ್ದಿರಿಸಿದ ಕೊರೊನಾ ಲಸಿಕೆಯಲ್ಲಿ 8 ಲಕ್ಷ ಡೋಸ್​ಗಳನ್ನು ಪಡೆಯುವ ಸಾಧ್ಯತೆ ಇದೆ. ಆದರೆ, ಅಮೆರಿಕಾ ಮಾತ್ರ ಡಿಸೆಂಬರ್​ ಅಂತ್ಯದ ವೇಳೆಗೆ 4 ಕೋಟಿ ಡೋಸ್​ ಲಸಿಕೆ ಸಿಗಲಿದೆ ಎಂದು ಹೇಳಿಕೊಂಡಿದೆ. ಅಮೆರಿಕಾದ ಲೆಕ್ಕಾಚಾರದ ಪ್ರಕಾರ ಡಿಸೆಂಬರ್​ಗೂ ಮುನ್ನ ಅಲ್ಲಿನ 2 ಕೋಟಿ ಪ್ರಜೆಗಳಿಗೆ ಕೊರೊನಾ ಲಸಿಕೆ ಸಿಗಲಿದೆ. ಆದರೆ, ವಾಸ್ತವವಾಗಿ ಇದು ಕಷ್ಟ ಎನ್ನುವುದು ತಜ್ಞರ ಅಭಿಪ್ರಾಯ.

ಕೆನಡಾ ಮತ್ತು ಅಮೆರಿಕಾ ವ್ಯಾಪ್ತಿಯಲ್ಲಿ ಬ್ರಿಟನ್​ಗಿಂತಲೂ ದೊಡ್ಡ ದೇಶಗಳು. ಸಂಗ್ರಹಣೆಗೆ ಅಗತ್ಯ ಸಿದ್ಧತೆಗಳು ಇಲ್ಲದ ಸ್ಥಳಕ್ಕೆ ಲಸಿಕೆ ಫೈಜರ್ ಕಂಪನಿ​ ಲಸಿಕೆ ಪೂರೈಸುವುದು ಸದ್ಯದ ಮಟ್ಟಿಗೆ ಅನುಮಾನ. ಆ ದೇಶಗಳ ಗ್ರಾಮೀಣ ಭಾಗಗಳಲ್ಲಿ ಲಸಿಕೆ ವಿತರಣೆಗೆ ಇದು ತೊಡಕಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಅಮೆರಿಕಾದಲ್ಲಿ ರಜೆಯ ಅವಧಿಯು ಅತ್ಯಂತ ಒತ್ತಡದ ಸಮಯವಾಗಿರುವುದರಿಂದ ಆ ವೇಳೆಯಲ್ಲೂ ಕೊರೊನಾ ಲಸಿಕೆ ಪೂರೈಕೆ ನಿಧಾನವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಔಷಧ ತಯಾರಿಕಾ ಕಂಪೆನಿಗಳು ಎಷ್ಟು ಲಸಿಕೆ ಪೂರೈಸಲಿವೆ. ಒತ್ತಡದ ನಡುವೆ ಯಾವ ಯಾವ ದೇಶಗಳಿಗೆ ಆದ್ಯತೆ ನೀಡಲಿವೆ ಎಂಬುದು ಕುತೂಹಲಕಾರಿ ಸಂಗತಿ.

ಕೇರಳದಲ್ಲಿ ಕೋವಿಡ್-19 ಲಸಿಕೆ ಉಚಿತ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ

Corona Vaccine: ಚೀನಾದ ಲಸಿಕೆ ನಿರಾಕರಿಸಿದ ಬ್ರೆಜಿಲ್ ನಾಗರಿಕರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada