ರಷ್ಯಾ ಗಡಿ ಮೂಲಕ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲು ಪ್ರಯತ್ನ; ಮಾಸ್ಕೋದೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿರುವ ಭಾರತ ಸರ್ಕಾರ

| Updated By: Lakshmi Hegde

Updated on: Mar 02, 2022 | 1:25 PM

ಒಂದು ಅಂದಾಜಿನ ಪ್ರಕಾರ ಇದುವರೆಗೆ ಪೋಲ್ಯಾಂಡ್​, ಸ್ಲೋವಾಕಿಯಾ, ಹಂಗೇರಿ, ಮೊಲ್ಡೋವಾ, ರೊಮೇನಿಯಾ ಸರ್ಕಾರಗಳ ಸಹಾಯದಿಂದ, ಪಶ್ಚಿಮ ಗಡಿಗಳ ಮೂಲಕ ಸುಮಾರು 13 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ.

ರಷ್ಯಾ ಗಡಿ ಮೂಲಕ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲು ಪ್ರಯತ್ನ; ಮಾಸ್ಕೋದೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿರುವ ಭಾರತ ಸರ್ಕಾರ
ಖಾರ್ಕೀವ್​​ನಲ್ಲಿ ಯುದ್ಧ ಚಿತ್ರಣ
Follow us on

ಉಕ್ರೇನ್​ನ ಖಾರ್ಕಿವ್​ನಲ್ಲಿ ಭಾರತದ ವಿದ್ಯಾರ್ಥಿ ನವೀನ್​ ರಷ್ಯಾ ದಾಳಿಯಿಂದ (Russia Attack on Ukraine) ಮೃತಪಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರ ಅಲ್ಲಿನ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಉಕ್ರೇನ್​ ಪಶ್ಚಿಮ ಗಡಿಯಲ್ಲಿ ಆಪರೇಶನ್​ ಗಂಗಾ ತ್ವರಿತವಾಗಿ ನಡೆಯುತ್ತಿದೆ. ಅಂದರೆ ಸದ್ಯ ರೊಮೇನಿಯಾ, ಪೋಲ್ಯಾಂಡ್, ಹಂಗೇರಿ, ಸ್ಲೊವೊಕಿಯಾ​ ಮತ್ತಿತರ ಗಡಿಭಾಗದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇದೀಗ ಭಾರತ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಖಾರ್ಕೀವ್​ (Kharkiv) ಮತ್ತು ಸುಮಿ ಸೇರಿ ಇತರ ರಷ್ಯಾದ ಗಡಿಭಾಗಕ್ಕೆ ಸಮೀಪದಲ್ಲಿರುವ ಭಾರತದ ವಿದ್ಯಾರ್ಥಿಗಳನ್ನು ರಷ್ಯಾ ಗಡಿ ಮೂಲಕ ಸ್ಥಳಾಂತರ ಮಾಡುವ ಸಂಬಂಧ ಮಾಸ್ಕೋದೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದೆ. ಮಾಸ್ಕೋದಲ್ಲಿರುವ ಭಾರತ ರಾಯಭಾರಿ ಕಚೇರಿಯ, ರಷ್ಯಾ ಮಾತನಾಡುವವರ ತಂಡವೊಂದು ಬೆಲ್ಗೊರೊಡ್ ಎಂಬಲ್ಲಿ ಬೀಡುಬಿಟ್ಟಿದೆ (ಇದು ಉಕ್ರೇನ್​​ನ ಖಾರ್ಕೀವ್​ ಮತ್ತು ಸುಮಿ ಪ್ರದೇಶಗಳ ಸಮೀಪವೇ ಇದೆ). ಈ ತಂಡ ಬೆಲ್ಗೊರೊಡ್​ ಬಳಿ ಇದ್ದು, ರಷ್ಯಾದ ರಾಜತಾಂತ್ರಿಕ ಸಂಪರ್ಕದ ಮೂಲಕ, ಅತ್ಯುನ್ನತ ಮಟ್ಟದಲ್ಲಿ ಸ್ಥಳಾಂತರ ಪ್ರಕ್ರಿಯೆ ನಡೆಸುವ ಪ್ರಯತ್ನದಲ್ಲಿ ತೊಡಗಿದೆ.

ಒಂದು ಅಂದಾಜಿನ ಪ್ರಕಾರ ಇದುವರೆಗೆ ಪೋಲ್ಯಾಂಡ್​, ಸ್ಲೋವಾಕಿಯಾ, ಹಂಗೇರಿ, ಮೊಲ್ಡೋವಾ, ರೊಮೇನಿಯಾ ಸರ್ಕಾರಗಳ ಸಹಾಯದಿಂದ, ಪಶ್ಚಿಮ ಗಡಿಗಳ ಮೂಲಕ ಸುಮಾರು 13 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇನ್ನೂ 3 ಸಾವಿರಗಳಷ್ಟು ವಿದ್ಯಾರ್ಥಿಗಳು ಉಕ್ರೇನ್​ನಿಂದ ಪಶ್ಚಿಮ ಗಡಿಗಳತ್ತ ಧಾವಿಸುತ್ತಿದ್ದಾರೆ. ಇನ್ನೊಂದೆಡೆ ಖಾರ್ಕೀವ್​  ಮತ್ತು ಸುಮಿ ಯುದ್ಧವಲಯಗಳಲ್ಲಿ ಸುಮಾರು 4 ಸಾವಿರ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ.  ಭಾರತದ ವಿದೇಶಾಂಗ ಇಲಾಖೆ ಸಚಿವ ಎಸ್​.ಜೈಶಂಕರ್​ ಅವರು ರಷ್ಯನ್​ ಮತ್ತು ಹಂಗೇರಿಯನ್ ಭಾಷೆಯನ್ನು ಮಾತನಾಡಬಲ್ಲವರು. ಅಲ್ಲದೆ, ಉಕ್ರೇನ್​ನ ಪಶ್ಚಿಮ ಗಡಿಯಲ್ಲಿರುವ ಬಹುತೇಕ ಎಲ್ಲ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಆ ಭಾಗದಲ್ಲಿ ಆಪರೇಶನ್​ ಗಂಗಾ ಕೂಡ ತುಂಬ ಸುಲಲಿತವಾಗಿ ನಡೆಯುತ್ತಿದೆ.

ಹೀಗೆ ಉಕ್ರೇನ್​ನಿಂದ ಪಶ್ಚಿಮದ ಗಡಿಗಳಿಗೆ ಹೋಗಿ ಗಡಿದಾಟುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಅಲ್ಲಿ ಟ್ರಾಫಿಕ್ ಜಾಮ್​ ಆಗುತ್ತಿದೆ. ಅದು ಬಿಟ್ಟರೆ ಇನ್ಯಾವುದೇ ಸಮಸ್ಯೆಯೂ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯಕ್ಕೆ ಅಡ್ಡಿಬರುತ್ತಿಲ್ಲ. ಪೋಲ್ಯಾಂಡ್​, ರೊಮೇನಿಯಾ, ಹಂಗೇರಿ ಸೇರಿ ಆ ಭಾಗದ ಎಲ್ಲ ದೇಶಗಳೂ ಭಾರತಕ್ಕೆ ಸಂಪೂರ್ಣವಾಗಿ ಸಹಕಾರ ನೀಡುತ್ತಿವೆ. ಇಲ್ಲಿಯೂ ಕೂಡ ರಷ್ಯಾ ಮಾತನಾಡುವ ಭಾರತೀಯರ ತಂಡವನ್ನು ನಿಯೋಜಿಸಲಾಗಿದೆ ಎಂದು ಪೋಲ್ಯಾಂಡ್​-ಉಕ್ರೇನ್​ ಗಡಿಯಲ್ಲಿರುವ ಭಾರತದ ಹಿರಿಯ ರಾಯಭಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ನೆಲೆ ನಿಂತವರ ಸಮಸ್ಯೆ ಕೇಂದ್ರ ಸರ್ಕಾರ ಮುಂಗಾಣಲಿಲ್ಲವೇಕೆ: ರಾಮಲಿಂಗಾ ರೆಡ್ಡಿ ಪ್ರಶ್ನೆ

Published On - 12:58 pm, Wed, 2 March 22