Indian Crows: ಕೀನ್ಯಾದಲ್ಲಿ ಕಾಗೆ ಕಾಟ ವಿಪರೀತ; ಕರಟಕ ದಮನಕ್ಕೆ ನಿರ್ಧಾರ ಕೈಗೊಂಡ ಸರ್ಕಾರ, ಏನಿದು ವಿಷಯ?
ಭಾರತದ ಕಾಗೆಗಳು ಮಹಾ ಉಪದ್ರವಿಗಳು ಎಂದು ಕೀನ್ಯಾ ಸರ್ಕಾರ ಹೇಳಿದ್ದು ಈ ವರ್ಷದೊಳಗೆ ಸುಮಾರು 10 ಲಕ್ಷ ಕಾಗೆಗಳನ್ನು ಕೊಲ್ಲಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇಲ್ಲಿನ ಕಾಗೆಗಳು ಕೋಳಿ ಸಾಕಣೆಗಾರರಿಗೆ, ಕೃಷಿ ಮತ್ತು ಹೋಟೆಲ್ ಉದ್ಯಮಿಗಳಿಗೆ ಸಮಸ್ಯೆ ಸೃಷ್ಟಿಸುವ ಪಕ್ಷಿಗಳು. ಕಾಗೆಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಇಲ್ಲಿನ ಸ್ಥಳೀಯ ಪ್ರಭೇದದ ಹಕ್ಕಿಗಳು ಅಳಿವಿನಂಚಿನಲ್ಲಿವೆ. ಕೀನ್ಯಾದಲ್ಲಿ ಭಾರತದ ಕಾಗೆಗಳು ಹೆಚ್ಚಳವಾಗಿದ್ದು ಹೇಗೆ? ಇವುಗಳ ನಿರ್ನಾಮಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು? ಇಲ್ಲಿದೆ ಮಾಹಿತಿ
ಕಾಗೆಗಳು ತೊಂದರೆ ಉಂಟುಮಾಡುವವುಗಳಲ್ಲ, ಅವುಗಳು ಪರಿಸರವನ್ನು ಸ್ವಚ್ಛಗೊಳಿಸುವ ಪಕ್ಷಿಗಳು. ಕಾಗೆಗಳಲ್ಲಿ ಹಲವು ವಿಧದ ಕಾಗೆಗಳಿದ್ದರೂ ಭಾರತದ ಕಾಗೆ ಅಥವಾ ನಾಡ ಕಾಗೆ (Indian House Crow) ನಮಗೆಲ್ಲರಿಗೂ ಗೊತ್ತು. ಕಪ್ಪು ರೆಕ್ಕ ಪುಕ್ಕ, ಕುತ್ತಿಗೆಯಲ್ಲಿ ಬೂದುಬಣ್ಣದ ಚಿಕ್ಕ ಗರಿಗಳನ್ನು ಹೊಂದಿರುವ ಕಾಗೆಯೇ ಭಾರತ ಕಾಗೆ (Indian Crow). ಆದಾಗ್ಯೂ, ಪೂರ್ವ ಆಫ್ರಿಕಾದ ಕೀನ್ಯಾದ (Kenya) ಸರ್ಕಾರವು ಭಾರತದ ಈ ಕಾಗೆಗಳು ಪರಿಸರ ವ್ಯವಸ್ಥೆಯನ್ನು ನಾಶಪಡಿಸುವ ಪಕ್ಷಿಗಳು ಎಂದು ಹೇಳುತ್ತದೆ. ಅಷ್ಟೇ ಅಲ್ಲ 2024 ರ ಅಂತ್ಯದ ವೇಳೆಗೆ ದೇಶದಲ್ಲಿ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ಸರ್ಕಾರ ಸಿದ್ಧತೆ ನಡೆಸಿದೆ. ಭಾರತದ ಕಾಗೆಗಳು ಆಕ್ರಮಣಕಾರಿಯಾಗಿದ್ದು ತಮ್ಮ ದೇಶದಲ್ಲಿ ಸ್ಥಳೀಯ ಪ್ರಾಣಿಗಳಿಗೆ ತೀವ್ರವಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು ಕೀನ್ಯಾ ಇದಕ್ಕೆ ಕೊಟ್ಟ ಕಾರಣ. ಅಷ್ಟಕ್ಕೂ ಭಾರತೀಯ ಕಾಗೆಗಳು ಕೀನ್ಯಾದಲ್ಲಿ ಇಷ್ಟೊಂದು ಉಪದ್ರವಿಗಳಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ
ಭಾರತೀಯ ಕಾಗೆಗಳು ಕೀನ್ಯಾದಲ್ಲಿ ವನ್ಯಜೀವಿಗಳಿಗೆ ಸಾಕಷ್ಟು ತೊಂದರೆ ನೀಡುತ್ತಿವೆ ಎಂದು ಕೀನ್ಯಾ ವನ್ಯಜೀವಿ ಸೇವೆ (ಕೆಡಬ್ಲ್ಯೂಎಸ್) ಅಧಿಕಾರಿಗಳು ಹೇಳಿದ್ದಾರೆ. ಈ ಕಾಗೆಗಳು ಪ್ರವಾಸಿಗರಿಗೆ ತೊಂದರೆ ನೀಡುವುದರ ಜತೆಗೆ ಇತರ ಸ್ಥಳೀಯ ಪಕ್ಷಿ ಪ್ರಭೇದಗಳಿಗೂ ಕಂಟಕವಾಗಿದೆ. ಇದು ಹೋಟೆಲ್ ಮಾಲೀಕರಿಗೆ ಮಾತ್ರವಲ್ಲ ರೈತರಿಗೂ ಸಮಸ್ಯೆಯನ್ನುಂಟು ಮಾಡಿದೆ ಎಂದು ಕೆಡಬ್ಲ್ಯೂಎಸ್ ಮಹಾನಿರ್ದೇಶಕರ ಪ್ರತಿನಿಧಿಯಾಗಿರುವ ವನ್ಯಜೀವಿ ಮತ್ತು ಸಮುದಾಯ ಸೇವೆಗಳ ನಿರ್ದೇಶಕ ಚಾರ್ಲ್ಸ್ ಮುಸ್ಯೋಕಿ ಹೇಳಿದ್ದಾರೆ. ಭಾರತೀಯ ಕಾಗೆಗಳು ಕೀನ್ಯಾದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕರಾವಳಿ ಪ್ರವಾಸೋದ್ಯಮ ಮತ್ತು ಕೃಷಿಗೆ ಇವು ಪ್ರಮುಖ ಸವಾಲುಗಳಾಗಿವೆ. ಇಲ್ಲಿನ ಜನರ ಮನವಿಯನ್ನು ಸರ್ಕಾರ ನಿರ್ಲಕ್ಷಿಸುವಂತಿಲ್ಲ ಎಂದು ಚಾರ್ಲ್ಸ್ ಮುಸ್ಯೋಕಿ ಹೇಳಿದ್ದಾರೆ.
ಭಾರತೀಯ ಕಾಗೆಗಳು ಕೀನ್ಯಾದ ಸ್ಥಳೀಯ ಪಕ್ಷಿ ಪ್ರಭೇದಗಳಿಗಿಂತ ಹೆಚ್ಚು ಆಕ್ರಮಣಕಾರಿ. ಅವು ಸ್ಥಳೀಯ ಪಕ್ಷಿಗಳ ಗೂಡುಗಳನ್ನು ನಾಶಮಾಡುತ್ತವೆ, ಮೊಟ್ಟೆಗಳನ್ನು ನಾಶಮಾಡುತ್ತವೆ. ಹಕ್ಕಿಮರಿಗಳನ್ನು ಬೇಟೆಯಾಡುತ್ತವೆ. ಸ್ಥಳೀಯ ಪಕ್ಷಿಗಳ ಸಂಖ್ಯೆಯಲ್ಲಿ ಇಂತಹ ಗಮನಾರ್ಹ ಇಳಿಕೆಯು ಪ್ರಸ್ತುತ ಪ್ರದೇಶದಲ್ಲಿ ಕೀಟಗಳು ಮತ್ತು ಹುಳಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರಿಂದ ಇಡೀ ದೇಶದ ಪರಿಸರ ವ್ಯವಸ್ಥೆಗೆ ಹಾನಿಯಾಗಲಿದೆ’ ಅಂತಾರೆ ಕೀನ್ಯಾದ ಖ್ಯಾತ ಪಕ್ಷಿ ವೀಕ್ಷಕ ಮತ್ತು ಪಕ್ಷಿ ಸಂರಕ್ಷಣಾ ತಜ್ಞ ಕಾಲಿನ್ ಜಾಕ್ಸನ್.
ಕಾಗೆಗಳನ್ನು ಕೊಲ್ಲುತ್ತಿರುವುದು ಇದೇ ಮೊದಲಲ್ಲ
ಕೀನ್ಯಾ ಸರ್ಕಾರವು ಭಾರತೀಯ ಕಾಗೆಗಳನ್ನು ಸಾಮೂಹಿಕವಾಗಿ ಕೊಲ್ಲುತ್ತಿರುವುದು ಇದೇ ಮೊದಲಲ್ಲ ಎಂದು ಕೆ.ಡಬ್ಲ್ಯೂ.ಎಸ್. ಅಧಿಕಾರಿಗಳು ಹೇಳುತ್ತಾರೆ. 20 ವರ್ಷಗಳ ಹಿಂದೆ ಇದೇ ಪ್ರಮಾಣದಲ್ಲಿ ಭಾರತದ ಕಾಗೆಗಳನ್ನು ಕೊಲ್ಲಲಾಗಿತ್ತು. ಆದರೆ ಮನುಷ್ಯನೊಂದಿಗೆ ಅತ್ಯಂತ ನಿಕಟವಾಗಿ ಬಾಳುವ ಪಕ್ಷಿಗಳಾಗಿದ್ದರಿಂದ ಇವುಗಳ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಇವುಗಳು ಬದುಕಬಲ್ಲವು. ಹಾಗಾಗಿ ಇವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇರುತ್ತದೆ ಎಂದು ಕೆ.ಡಬ್ಲ್ಯೂ.ಎಸ್. ಅಧಿಕಾರಿಗಳು ಹೇಳುತ್ತಾರೆ. ವೈಜ್ಞಾನಿಕ ವಿಧಾನಗಳ ಮೂಲಕ ಕಾಗೆಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದ್ದು, ಕೀನ್ಯಾದ ಕೀಟ ನಿಯಂತ್ರಣ ಮತ್ತು ಉತ್ಪನ್ನಗಳ ಮಂಡಳಿ (PCPB) ಹೋಟೆಲ್ ಮಾಲೀಕರು ಮತ್ತು ರೈತರು ಕಾಗೆಗಳಿಗೆ ವಿಷವನ್ನು ನೀಡಬಹುದು ಹೇಳಿದೆ. ಆಕ್ರಮಣಕಾರಿ ಪ್ರಭೇದಗಳನ್ನು ಕೊಲ್ಲಲು ವಿಷವನ್ನು ಬಳಸುವುದು ಉತ್ತಮ ಮಾರ್ಗವಾಗಿದೆ ಎಂದು ಪಿಸಿಪಿಬಿ ಹೇಳುತ್ತದೆ. ಅಂದಹಾಗೆ ಕೀನ್ಯಾದ ಕರಾವಳಿ ಪ್ರದೇಶದಲ್ಲಿ ಸುಮಾರು ಒಂದು ಮಿಲಿಯನ್ ಭಾರತೀಯ ಕಾಗೆಗಳಿವೆ ಎಂದು ಅಂದಾಜಿಸಲಾಗಿದೆ.
ಕಸದ ಬಿಕ್ಕಟ್ಟಿನ ಸಮಯದಲ್ಲಿ ಕಾಪಾಡಿದ್ದು ಇದೇ ಕಾಗೆಗಳು ಆಫ್ರಿಕಾದಲ್ಲಿನ ಕಸದ ಬಿಕ್ಕಟ್ಟನ್ನು ನಿಯಂತ್ರಿಸಲು 1890 ರ ದಶಕದಲ್ಲಿ ಜಂಜಿಬಾರ್‌ನಲ್ಲಿ ಕಾಗೆಗಳನ್ನು ಕರೆತರಲಾಗಿತ್ತು. Kenyans.co ಪ್ರಕಾರ, ಈ ಜಾತಿಗಳು 1940 ರ ದಶಕದಲ್ಲಿ ಸ್ವಾಹಿಲಿ ಕರಾವಳಿಯಲ್ಲಿ ಬರಲು ಪ್ರಾರಂಭಿಸಿದವು. ಅಂದಿನಿಂದ, ಇವುಗಳು ಸ್ಥಳೀಯ ಅಧಿಕಾರಿಗಳಿಗೆ ಅಸಾಧಾರಣ ಸವಾಲಾಗಿ ಮಾರ್ಪಟ್ಟಿವೆ. ಎಲ್ಲ ಆಹಾರಗಳನ್ನು ತಿನ್ನುವ ಮತ್ತು ನಗರ ಪರಿಸರಕ್ಕೆ ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯವೇ ಕಾಗೆಗಳ ಸಂತತಿ ಹೆಚ್ಚಾಗಲು ಕಾರಣ ಅಂತಾರೆ ಇವರು.
ಕೀನ್ಯಾದಲ್ಲಿ ಮೊಂಬಾಸಾ, ಮಲಿಂಡಿ, ವಟಮು ಮತ್ತು ಕಿಲಿಫಿಯಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಕೇಂದ್ರಗಳಲ್ಲಿ ಹೇರಳವಾದ ತ್ಯಾಜ್ಯವನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಗೆಗಳ ಸಂಖ್ಯೆ ಜಾಸ್ತಿ ಇದೆ . ಕಾಗೆಗಳು 1947 ರಲ್ಲಿ ಹಡಗುಗಳ ಮೂಲಕ ಅಥವಾ ನೆರೆಯ ಜಾಂಜಿಬಾರ್‌ನಿಂದ ಮೊಂಬಾಸಾವನ್ನು ಪ್ರವೇಶಿಸಿವೆ ಎಂದು ನಂಬಲಾಗಿದೆ.
ಆಕ್ರಮಣಕಾರಿ ಜಾತಿ ಕಾಗೆಗಳು
ಈ ಆಕ್ರಮಣಕಾರಿ ಜಾತಿಯ ಕಾಗೆಗಳಿಂದ ಕಷ್ಟ ಅನುಭವಿಸಿದ್ದು ಕೀನ್ಯಾ ಮಾತ್ರವಲ್ಲ.ಈ ಪಕ್ಷಿಗಳು ಯುರೋಪ್‌ನಿಂದ ಪಶ್ಚಿಮ ಏಷ್ಯಾ, ಆಸ್ಟ್ರೇಲಿಯಾದಿಂದ ಅಮೆರಿಕದವರೆಗೆ ಕಂಡುಬರುತ್ತವೆ. ಆದ್ದರಿಂದ, ಕೀನ್ಯಾ ಸಮಸ್ಯೆಯನ್ನು ಹೇಗೆ ಎದುರಿಸಲು ಯೋಜಿಸುತ್ತಿದೆ ಎಂಬುದನ್ನು ನೋಡಬೇಕಿದೆ.
ನಾಡ ಕಾಗೆ, ಭಾರತೀಯ ಕಾಗೆ, ಬೂದು-ಕುತ್ತಿಗೆಯ ಕಾಗೆ, ಸಿಲೋನ್ ಕಾಗೆ ಮತ್ತು ಕೊಲಂಬೊ ಕಾಗೆ ಮುಂತಾದ ವಿವಿಧ ಹೆಸರುಗಳಿಂದ ಕೂಡ ಕರೆಯಲ್ಪಡುವ ಈ ಕಾಗೆಗಳು ಹಡಗುಗಳ ಮೂಲಕ ಪ್ರಪಂಚದ ಅನೇಕ ಭಾಗಗಳಿಗೆ ಸಂಚರಿಸಿವೆ. ಈ ಕಾಗೆಗಳು 1940 ರ ದಶಕದಲ್ಲಿ ಪೂರ್ವ ಆಫ್ರಿಕಾಕ್ಕೆ ಬಂದಿವೆ ಎಂದು ನಂಬಲಾಗಿದೆ. ಕೀನ್ಯಾದಲ್ಲಿ ಮಾತ್ರವಲ್ಲದೆ ಇವು ಉಷ್ಣವಲಯದಾದ್ಯಂತ ಆಕ್ರಮಣಕಾರಿ ಸಾಮರ್ಥ್ಯವುಳ್ಳವುಗಳಾಗಿವೆ. ಆಕ್ರಮಣಕಾರಿ ಕಾಗೆಗಳ ಜನಸಂಖ್ಯೆಯು ಸಂರಕ್ಷಿತ ರಾಷ್ಟ್ರೀಯ ಮೀಸಲು ಪ್ರದೇಶಗಳಂತಹ ವಿಶೇಷ ಆವಾಸಸ್ಥಾನಗಳನ್ನು ಆಕ್ರಮಿಸಬಹುದೆಂದು ಸಂರಕ್ಷಣಾಕಾರರು ಭಯಪಡುತ್ತಾರೆ. ಅಪರೂಪದ, ಅನನ್ಯ ಅಥವಾ ವಿನಾಶದ ಅಂಚಿನಲ್ಲಿರುವ ತಳಿಗಳಾದ ಸೊಕೊಕೆ ಸ್ಕೋಪ್ಸ್ ಗೂಬೆ (Otus ireneae) ನಂತಹ ತಳಿಗಳಿಗೆ ಇವು ಮಾರಕವಾಗಿ ಪರಿಣಮಿಸಿವೆ.
ಪ್ರವಾಸೋದ್ಯಮಕ್ಕೂ ಹೊಡೆತ
ಕೀನ್ಯಾದಲ್ಲಿ ಪ್ರವಾಸೋದ್ಯಮ, ವಿದೇಶೀ ವಿನಿಮಯ ಗಳಿಕೆ ಮತ್ತು ಕೃಷಿ ರಫ್ತುಗಳಿಂದ ಜನರು ಸಂಪಾದನೆ ಮಾಡುತ್ತದೆ. ಆದರೆ ಈ ಭಾರತೀಯ ಕಾಗೆಗಳು ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮಗಳಿಗೆ ಹೊಡೆತ ನೀಡುತ್ತಿವೆ. ಇವುಗಳು ಪ್ರವಾಸಿಗರಿಗೆ ಊಟವನ್ನು ಆನಂದಿಸಲು ಬಿಡುವುದಿಲ್ಲ. ಹಿಂಡು ಹಿಂಡಾಗಿ ಬರುವ ಕಾಗೆಗಳು ಪ್ರವಾಸಿಗಳ ತಾಣದಲ್ಲಿ ಹೆಚ್ಚಾಗಿವೆ ಅಂತಾರೆ ಹೋಟೆಲ್ ಉದ್ಯಮಿಗಳು. ಇತ್ತ ರೈತರು ಕೂಡಾ ಕಾಗೆಗಳ ಹಾವಳಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡಿದ ಸ್ಥಳೀಯ ಕೋಳಿ ಸಾಕಾಣಿಕೆದಾರ ಮ್ವಾಂಜನಿ ರೂನ್ಯ ಅವರು ಕಾಗೆಗಳು ಕೃಷಿಯನ್ನೂ ನಾಶ ಮಾಡುವುದಲ್ಲದೆ ಕೋಳಿ ಮರಿಗಳನ್ನು ಹೊತ್ತೊಯ್ಯುತ್ತಿವೆ. ನಾವು ಕೋಳಿ ಮರಿಗಳ ಮೇಲೆ ಕಣ್ಣಿಟ್ಟಿರಬೇಕಾಗುತ್ತದೆ. ಈ ಕಾಗೆಗಳು ಒಂದು ದಿನದಲ್ಲಿ ಸುಮಾರು 20 ಮರಿಗಳನ್ನು ಕಬಳಿಸುತ್ತವೆ. ಇವುಗಳು ಕೋಳಿ ಅಥವಾ ಬಾತುಕೋಳಿ ಮರಿಗಳನ್ನು ಕಬಳಿಸಲು ಚಾಲಾಕಿ ಕಾಗೆಗಳು. ಅಮ್ಮ ಕೋಳಿಯ ಗಮನವನ್ನು ಬೇರೆಡೆ ಸೆಳೆದು ಒಮ್ಮಿಂದೊಮ್ಮೆಲೇ ಗುಂಪಾಗಿ ಮರಿಗಳ ಮೇಲೆ ದಾಳಿ ಮಾಡುತ್ತವೆ ಎಂದು ರೂನ್ಯಾ ಹೇಳಿದ್ದಾರೆ.
ಮೊಂಬಾಸಾಕ್ಕೆ ತಲೆನೋವಾದ ಕಾಗೆ
ಆಕ್ರಮಣಕಾರಿ ಹಕ್ಕಿ ಎಂದು ವಿಜ್ಞಾನಿಗಳು ವಿವರಿಸಿರುವ ಭಾರತೀಯ ನಾಡ ಕಾಗೆ, ಕೀನ್ಯಾದ ಕರಾವಳಿ ನಗರವಾದ ಮೊಂಬಾಸಾ ನಿವಾಸಿಗಳಿಗೆ ತಲೆನೋವಾಗಿ ಬಿಟ್ಟಿದೆ. ಪ್ರವಾಸಿಗರ ಪ್ಲೇಟ್‌ಗಳಿಂದ ಆಹಾರವನ್ನು ಕಸಿದುಕೊಳ್ಳುವ ಇವುಗಳು ಇತರ ಪಕ್ಷಿ ಪ್ರಭೇದಗಳನ್ನು ಬೆದರಿಸುತ್ತವೆ. ಕಾಗೆಗಳು ಪೂರ್ವ ಆಫ್ರಿಕಾದಲ್ಲಿ ಜಾಸ್ತಿ ಇರದೇ ಇದ್ದರೂ ಮೊಂಬಾಸಾದಲ್ಲಿ ಸಾಕಷ್ಟು ಇವೆ. ನೀವು ಇಲ್ಲಿ ಆಕಾಶದತ್ತ ನೋಡಿದರೆ ಕಪ್ಪು ಮತ್ತು ಬೂದು ಬಣ್ಣದ ನಾಡ ಕಾಗೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷಿಗಳು ನಿಮಗೆ ಅಪರೂಪವಾಗಿ ಕಾಣಿಸುತ್ತವೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
ಪೂರ್ವ ಆಫ್ರಿಕಾದಲ್ಲಿ ಆದಾಗ್ಯೂ, ಕಸವನ್ನು ನಿಯಂತ್ರಿಸುವ ಸಲುವಾಗಿ ಅವುಗಳನ್ನು ಉದ್ದೇಶಪೂರ್ವಕವಾಗಿ 1890 ರ ಸುಮಾರಿಗೆ ಪರಿಚಯಿಸಲಾಯಿತು ಎಂದು ಸಂಶೋಧಕರು ಹೇಳುತ್ತಾರೆ. 1947 ರಲ್ಲಿ ನಾಡ ಕಾಗೆ ಕೀನ್ಯಾವನ್ನು ತಲುಪಿತು. ಅಂದಿನಿಂದ ಅದರ ಸಂಖ್ಯೆಗಳು ಹೆಚ್ಚುತ್ತಲೇ ಇವು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದರ ಜೊತೆಗಿನ ಕಸದ ರಾಶಿಗಳಿಂದಾಗಿ ಇವುಗಳಿಗೆ ಉತ್ತಮ ಆಹಾರ ಸಿಗುತ್ತಿರುವುದರಿಂದ ಇವುಗಳ ಸಂತತಿ ಬೆಳೆಯುತ್ತಲೇ ಇವೆ ಅಂತಾರೆ ಇಲ್ಲಿನ ಜನ.
ಇದನ್ನೂ ಓದಿ: ಸಮಾಜ ಸೇವೆಯಲ್ಲ, ಇದು ‘ಕರ್ತವ್ಯ’; ಜನಾನುರಾಗಿ ಈ ಬೆಂಗಳೂರು ಹುಡುಗ ವಿನೋದ್
ಕಳಪೆ ಕಸ ನಿರ್ವಹಣೆಯೂ ಕಾರಣ
ಮೊಂಬಾಸಾದಲ್ಲಿನ ಕಳಪೆ ಕಸ ನಿರ್ವಹಣೆಯೇ ಕಾಗೆಗಳು ಹೆಚ್ಚಲು ಕಾರಣ. ಡಂಪಿಂಗ್ ಸೈಟ್‌ಗಳು ವಸತಿ ಪ್ರದೇಶಗಳನ್ನು ಅಂದಗೆಡಿಸಿದ್ದು, ಇಲ್ಲಿ ಮನುಷ್ಯರಿಗಿಂತ ಹೆಚ್ಚು ಕಾಗೆಗಳು ಇವೆ. ಈ ಕಾಗೆಗಳು ಬಿಸಾಡಿದ ಆಹಾರ ವಸ್ತುಗಳನ್ನು ಮಾತ್ರವಲ್ಲ ರುಚಿಕರವಾದ ತಿಂಡಿಗಳ ಮೇಲೂ ಕಣ್ಣಿಟ್ಟಿವೆ. ಹೋಟೆಲ್ ಗಳಲ್ಲಿ ಬರುವ ಗ್ರಾಹಕರ ತಟ್ಟೆಯಿಂದ ಇವು ಆಹಾರ ಕಬಳಿಸುತ್ತವೆ. ಹಾಗಾಗಿ ಕೆಲವು ಹೋಟೆಲ್ಗಳು ಕಾಗೆ ಓಡಿಸುವುದಕ್ಕಾಗಿಯೇ ಜನರನ್ನು ನೇಮಿಸಿವೆ.
“ಇಲ್ಲಿ ಕಾಗೆಗಳ ಸಂಖ್ಯೆ ಜಾಸ್ತಿಯೇ ಇದೆ. ನಮ್ಮದು ಓಪನ್ ರೆಸ್ಟೋರೆಂಟ್ ಆಗಿರುವುದರಿಂದ ಕಾಗೆಗಳು ಗ್ರಾಹಕರಿಗೆ ತೊಂದರೆ ಕೊಡುತ್ತಿರುತ್ತವೆ ಎಂದು ಮೊಂಬಾಸಾ ಬೀಚ್ ರೆಸಾರ್ಟ್‌ನಲ್ಲಿ ರೆಸ್ಟೋರೆಂಟ್ ಅನ್ನು ನಿರ್ವಹಿಸುವ ಡೊನಾಲ್ಡ್ ಶಿಪೆಂಜಿ ಹೇಳುತ್ತಾರೆ. ಈ ಕಾಗೆಗಳು ರೆಸ್ಟೋರೆಂಟ್ ಒಳಗೆ ನುಗ್ಗಿ ಆಹಾರ ಕಿತ್ತುಕೊಳ್ಳುತ್ತವೆ. ಕುರ್ಚಿ,ಮೇಜುಗಳ ಮೇಲೆ ಹಿಕ್ಕೆ ಹಾಕುತ್ತವೆ. ಇದೆಲ್ಲ ನಮಗೆ ದೊಡ್ಡ ಸಮಸ್ಯೆಯಾಗಿದೆ ಅಂತಾರೆ ಹೋಟೆಲ್ ಮಾಲೀಕರು. ಅದೇ ರೀತಿ ಕಸದ ತೊಟ್ಟಿ ಮೇಲೆ ಕೂತು ಅಲ್ಲಿಂದ ರೆಸ್ಟೋರೆಂಟ್ ಟೇಬಲ್ ಮೇಲೆ ಬಂದು ಕೂರುವ ಈ ಕಾಗೆಗಳು ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಸ್ಥಳೀಯ ಹಕ್ಕಿಗಳಿಗಿಲ್ಲ ಉಳಿಗಾಲ
ಇತರ ಪಕ್ಷಿ ಪ್ರಭೇದಗಳ ಕಡೆಗೆ ಕಾಗೆಗಳ ಆಕ್ರಮಣಕಾರಿ ವರ್ತನೆಯು ಪಕ್ಷಿ ವೈವಿಧ್ಯತೆಯ ಮೇಲೆ ಪರಿಣಾಮ ಬೀರುವ ಬಗ್ಗೆ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸಂರಕ್ಷಣಾಕಾರರು ಹೇಳುವಂತೆ ಸ್ಥಳೀಯ ಜಾತಿಗಳು ಸೇರಿದಂತೆ ಅನೇಕ ಇತರ ಪಕ್ಷಿ ಪ್ರಭೇದಗಳನ್ನು ಕಾಗೆಗಳು ಓಡಿಸಿವೆ.
ಕಾಗೆಗಳು ಕೋಳಿಗಳನ್ನು ಗುರಿಯಾಗಿಸಿದ್ದು, ಇದು ಕೋಳಿ ಸಾಕಣೆ ಮಾಡುವವರಿಗೆ ಹೊಡತ ನೀಡಿವೆ. ಕಾಗೆಗಳ ಉಪದ್ರವದಿಂದ ತಪ್ಪಿಸಿಕೊಳ್ಳಲು ಕೋಳಿ ಸಾಕಣೆಗಾರರು ಕೋಳಿ ಮರಿಗಳಿಗೆ ಹಳದಿ, ಕೆಂಪು, ನೀಲಿ ಮತ್ತು ಹಸಿರು ಗಾಢಬಣ್ಣಗಳನ್ನು ಬಳಿದಿದ್ದಾರೆ. ಮರಿ ಕೋಳಿಗಳು ಸ್ವಲ್ಪ ದೊಡ್ಡ ಕೋಳಿಗಳು ಆಗುವವವರೆಗೆ ಮನೆಯವರು, ಸಾಕಣೆಗಾರರು ಇದರ ಮೇಲೆ ನಿಗಾ ಇಡಲೇ ಬೇಕಾಗಿದೆ.
ಕಾಗೆಗಳ ಕಾಟ ತಡೆಯುವುದು ಸುಲಭವಲ್ಲ
1999 ಮತ್ತು 2005 ರ ನಡುವೆ, ಎ ರೋಚಾ ಕೀನ್ಯಾ, ಸಂರಕ್ಷಣೆ ಮತ್ತು ಸಂಶೋಧನಾ ಸಂಸ್ಥೆ, ಕೀನ್ಯಾದ ಕರಾವಳಿಯ ಮತ್ತೊಂದು ಪಟ್ಟಣವಾದ ಮಲಿಂಡಿಯಲ್ಲಿ ಕಾಗೆಗಳನ್ನು ತೊಡೆದುಹಾಕಲು ಸ್ಟಾರ್ಲೈಸೈಡ್ ಎಂಬ ವಿಷವನ್ನು ಬಳಸಿತು. ಅವರ ದಾಖಲೆಗಳ ಪ್ರಕಾರ ಕಾಗೆಗಳನ್ನು ನೂರರಿಂದ 50 ಕ್ಕಿಂತ ಕಡಿಮೆಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತೋರಿಸುತ್ತವೆ. ಆದರೆ ನಂತರ ಕೀನ್ಯಾ ಸರ್ಕಾರವು ಸ್ಟಾರ್ಲೈಸೈಡ್ ಆಮದನ್ನು ನಿಷೇಧಿಸಿತು. ಇಂದು ಕಾಗೆಗಳು ಸಾವಿರಾರು ಸಂಖ್ಯೆಯಲ್ಲಿ ಮಾಲಿಂಡಿಯಲ್ಲಿವೆ.
ಕಾಗೆಗಳನ್ನು ಬಲೆಗೆ ಬೀಳಿಸುವುದು ಅಷ್ಟು ಸುಲಭವಲ್ಲ. ತಜ್ಞರು ಹೇಳುವಂತೆ ಕಾಗೆಗಳು ಬುದ್ಧಿವಂತ ಪಕ್ಷಿಗಳು. ಅವು ಬಲೆಗಳು ಹೇಗೆ ಕಾಣುತ್ತವೆ ಮತ್ತು ಅವುಗಳನ್ನು ಹೊಂದಿಸುವ ಜನರನ್ನು ಸಹ ನೆನಪಿಸಿಕೊಳ್ಳುತ್ತವೆ. ಹಾಗಾಗಿ ಪಕ್ಷಿಗಳ ಆಹಾರದ ಪ್ರವೇಶವನ್ನು ಕಡಿಮೆ ಮಾಡುವುದು ಕಾಗೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ ಎಂದು ಸಂರಕ್ಷಣಾಕಾರರು ವಾದಿಸುತ್ತಾರೆ, ಮೊದಲು ಅವುಗಳ ಮುಖ್ಯ ಆಹಾರ ಮೂಲವನ್ನು ಒದಗಿಸುವ ಕಸವನ್ನು ಕಡಿಮೆ ಮಾಡಬೇಕು ಅಂತಾರೆ ಇವರು.
ಮತ್ತಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Tue, 16 July 24