ಪುಟಿನ್ಗೆ ಉಕ್ರೇನ್ ಜೊತೆಗಿನ ಯುದ್ಧ ಮುಗಿಸುವುದು ಇಷ್ಟವಿಲ್ಲ; ಯುರೋಪಿಯನ್ ನಾಯಕರ ಜೊತೆ ಟ್ರಂಪ್ ಮಾತುಕತೆ
'ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಅಧ್ಯಕ್ಷ ಪುಟಿನ್ ಬಯಸುವುದಿಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪಿಯನ್ ನಾಯಕರ ಜೊತೆಗಿನ ಖಾಸಗಿ ಸಂಭಾಷಣೆಯ ವೇಳೆ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಯುರೋಪಿಯನ್ ನಾಯಕರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ. ತಾವೇ ಈ ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಪುಟಿನ್ ಭಾವಿಸಿದ್ದಾರೆ. ಹೀಗಾಗಿ, ಅವರು ರಾಜಿಯಾಗಲು ಸಿದ್ಧರಿಲ್ಲ ಎಂದು ತಮಗೆ ಪರಿಚಿತರಾಗಿರುವ ಮೂವರಿಗೆ ತಿಳಿಸಿದ್ದಾರೆ.

ನವದೆಹಲಿ, ಮೇ 22: ಅಮೆರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪಿಯನ್ ನಾಯಕರ ಜೊತೆ ನಡೆಸಿದ ಖಾಸಗಿ ಸಂಭಾಷಣೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ತಯಾರಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ರಷ್ಯಾ ಯುದ್ಧದಲ್ಲಿ ಮೇಲುಗೈ ಸಾಧಿಸಿದೆ ಮತ್ತು ಪ್ರಸ್ತುತ ಗೆಲ್ಲುತ್ತಿದೆ ಎಂದು ಅವರು ನಂಬುತ್ತಾರೆ. ಟ್ರಂಪ್ ಜೊತೆಗಿನ ಖಾಸಗಿ ದೂರವಾಣಿ ಸಂಭಾಷಣೆಯಲ್ಲಿ ಪುಟಿನ್ ತಾವು ಕದನ ವಿರಾಮವನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ‘ಶಾಂತಿ’ಯನ್ನು ಬಯಸುವುದಾಗಿ ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಸೋಮವಾರ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಸೇರಿದಂತೆ ಹಲವಾರು ಯುರೋಪಿಯನ್ ನಾಯಕರೊಂದಿಗೆ ನಡೆದ ಫೋನ್ ಕರೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕದನ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ; ಸಂಸದರಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ
ಇದಲ್ಲದೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಫೋನ್ ಕರೆಯು ಉಕ್ರೇನ್‌ನಲ್ಲಿ 3 ವರ್ಷಗಳಷ್ಟು ಹಳೆಯದಾದ ಯುದ್ಧವನ್ನು ಕೊನೆಗೊಳಿಸುವಲ್ಲಿ ಪ್ರಗತಿಯನ್ನು ಸಾಧಿಸುವಲ್ಲಿ ವಿಫಲವಾದ ಒಂದು ದಿನದ ನಂತರ ಉಕ್ರೇನ್ನ ಯುರೋಪಿಯನ್ ಮಿತ್ರರಾಷ್ಟ್ರಗಳು ಮಂಗಳವಾರ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ದಾಳಿಯನ್ನು ನಿಲ್ಲಿಸಲು ತಾನೇ ಕದನವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇನೆಂದು ಹೇಳಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ-ಉಕ್ರೇನ್ ನಡುವೆ ಕದನವಿರಾಮ ಉಂಟುಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೆ, ಭಾರತ ತನ್ನ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ನಿಲ್ಲಿಸುವಲ್ಲಿ ಅಮೆರಿಕ ಯಾವುದೇ ಪಾತ್ರ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಅಮೆರಿಕ: ಫ್ರೀ ಪ್ಯಾಲೆಸ್ತೀನ್ ಘೋಷಣೆ, ಗುಂಡಿನ ದಾಳಿ, ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿ ಹತ್ಯೆ
“ನಾವು ಈಗ ರಷ್ಯಾದಿಂದ ಒಂದು ವಿಷಯವನ್ನು ನಿರೀಕ್ಷಿಸುತ್ತೇವೆ ಎಂದು ನಾವು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದೇವೆ. ಅದೆಂದರೆ, ಯಾವುದೇ ಷರತ್ತುಗಳಿಲ್ಲ ತಕ್ಷಣದ ಕದನ ವಿರಾಮ” ಎಂದು ಜರ್ಮನ್ ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




