ಭಾರತದ ಜಲ ದಿಗ್ಬಂಧನಕ್ಕೆ ಕಂಗೆಟ್ಟು ಚೀನಾ ಸಹಾಯ ಕೋರಿದ ಪಾಕಿಸ್ತಾನ

ಭಾರತದ 'ಆಪರೇಷನ್ ಸಿಂಧೂರ್' ಪಾಕಿಸ್ತಾನಕ್ಕೆ ಸಿಂಧೂ ನದಿಯ ನೀರನ್ನು ನಿರ್ಬಂಧಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೂ ನೀರು ಹರಿಸುವುದಿಲ್ಲ ಎಂಬ ಭಾರತದ ಖಡಕ್ ನಿಲುವಿನಿಂದಾಗಿ ಪಾಕಿಸ್ತಾನ ತೀವ್ರ ಜಲಕ್ಷಾಮ ಎದುರಿಸುತ್ತಿದೆ. ರಾಜತಾಂತ್ರಿಕ ಒತ್ತಡಕ್ಕೆ ಚೀನಾವನ್ನು ಎಳೆಯಲು ಪ್ರಯತ್ನಿಸುತ್ತಿದೆ. ಆದರೆ, ಆರ್ಥಿಕ ಹಿತಾಸಕ್ತಿಗಳು ಮತ್ತು ಸಿಂಧೂ ಜಲ ಒಪ್ಪಂದದಲ್ಲಿ ಚೀನಾಕ್ಕೆ ಪಾತ್ರವಿಲ್ಲದ ಕಾರಣ ಅದರ ಮಧ್ಯಪ್ರವೇಶ ಅಸಂಭವ.

ಭಾರತದ ಜಲ ದಿಗ್ಬಂಧನಕ್ಕೆ ಕಂಗೆಟ್ಟು ಚೀನಾ ಸಹಾಯ ಕೋರಿದ  ಪಾಕಿಸ್ತಾನ
ಸಿಂಧೂ ನದಿ

Updated on: Jul 03, 2026 | 11:35 AM

ಇಸ್ಲಾಮಾಬಾದ್, ಜುಲೈ 03: ಗಡಿಯಾಚೆಗಿನ ಭಯೋತ್ಪಾದನೆಗೆ ಪಹಲ್ಗಾಮ್ ದಾಳಿಯ ಮೂಲಕ ಪ್ರಚೋದನೆ ನೀಡಿದ್ದ ಪಾಕಿಸ್ತಾನ(Pakistan)ಕ್ಕೆ ಭಾರತವು ‘ಆಪರೇಷನ್ ಸಿಂಧೂರ್’ ಮತ್ತು ‘ಸಿಂಧೂ ಜಲ ಒಪ್ಪಂದ’ದ ಕಠಿಣ ನಿಲುವುಗಳ ಮೂಲಕ ಭಾರಿ ಹೊಡೆತ ನೀಡಿದೆ. ಭಾರತವು ಸಿಂಧೂ ನದಿಯ ನೀರನ್ನು ನಿರ್ಬಂಧಿಸಿದಾಗಿನಿಂದ ತೀವ್ರ ಜಲಕ್ಷಾಮ ಎದುರಿಸುತ್ತಿರುವ ಪಾಕಿಸ್ತಾನ, ಈಗ ಭಾರತದ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಈ ವಿವಾದದೊಳಗೆ ಚೀನಾವನ್ನು ಎಳೆದು ತಂದಿದೆ.

ಪಾಕಿಸ್ತಾನದ ಹೊಸ ಚೀನಾ ತಂತ್ರವೇನು?
ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಹಿರ್ ಅಂದ್ರಾಬಿ ಇತ್ತೀಚೆಗೆ ನೀಡಿರುವ ಹೇಳಿಕೆಯಲ್ಲಿ, ಹಿಮಾಲಯ ಪ್ರದೇಶದಲ್ಲಿ ಹುಟ್ಟುವ ನದಿಗಳು ಕೇವಲ ಭಾರತ-ಪಾಕಿಸ್ತಾನಕ್ಕೆ ಮಾತ್ರ ಸೇರಿದ್ದಲ್ಲ, ಅವು ಇಡೀ ಮಾನವಕುಲದ ಹಂಚಿಕೆಯ ಪರಂಪರೆಯಾಗಿದೆ ಎಂದಿದ್ದಾರೆ. ಸಿಂಧೂ ನದಿಯಿಂದ ಹಿಡಿದು ಮೆಕಾಂಗ್ ನದಿಯವರೆಗೆ ಹರಿಯುವ ವಿಶಾಲ ನದಿ ವ್ಯವಸ್ಥೆಗಳು ಚೀನಾದಲ್ಲೇ ಹುಟ್ಟುವುದರಿಂದ, ಈ ನೀರಿನ ಬಿಕ್ಕಟ್ಟಿನಲ್ಲಿ ಚೀನಾ ಕೂಡ ಅತ್ಯಂತ ಪ್ರಮುಖ ಪಾಲುದಾರ ಮತ್ತು ಚೀನಾದ ಪಾತ್ರ ಇಲ್ಲಿ ನಿರ್ಣಾಯಕವಾಗಿದೆ ಎಂದು ಹೇಳುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು ಮೂಲೆಗುಂಪು ಮಾಡಲು ಪಾಕಿಸ್ತಾನ ಯತ್ನಿಸಿದೆ.

ಚೀನಾವನ್ನು ಎಳೆಯಲು ಪ್ರಮುಖ ಕಾರಣಗಳೇನು?
ಪಾಕಿಸ್ತಾನದ ಕೃಷಿ ಮತ್ತು ಕುಡಿಯುವ ನೀರಿಗೆ ಸಿಂಧೂ ನದಿಯೇ ಪ್ರಮುಖ ಆಧಾರವಾಗಿದೆ. ಭಾರತವು ತನ್ನ ಕಟ್ಟುನಿಟ್ಟಿನ ಕ್ರಮಗಳ ಮೂಲಕ ನೀರನ್ನು ನಿಲ್ಲಿಸಿರುವುದರಿಂದ ಪಾಕಿಸ್ತಾನ ಸದ್ಯ ಹನಿ ನೀರಿಗೂ ಪರದಾಡುವಂತಾಗಿದೆ. ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲುವವರೆಗೂ ಸಿಂಧೂ ಜಲ ಒಪ್ಪಂದ ಮುಂದುವರಿಯಲ್ಲಎಂದು ಭಾರತ ಖಡಕ್ ಆಗಿ ಹೇಳಿರುವುದರಿಂದ, ಚೀನಾ ತನ್ನ ಪರವಾಗಿ ಮಾತನಾಡಿ ಭಾರತದ ಮೇಲೆ ಒತ್ತಡ ಹೇರಲಿ ಎಂಬುದು ಪಾಕಿಸ್ತಾನದ ಆಸೆಯಾಗಿದೆ.

ಪಾಕಿಸ್ತಾನದ ಆಟ ಚೀನಾ ಮುಂದೆ ನಡೆಯಲ್ಲವೇಕೆ?
ಪಾಕಿಸ್ತಾನಕ್ಕೆ ಚೀನಾ ಆಪ್ತ ಮಿತ್ರನಾಗಿದ್ದರೂ ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳು ನಡೆಯುತ್ತಿದ್ದರೂ, ಈ ವಿವಾದದಲ್ಲಿ ಚೀನಾ ತಲೆಹಾಕುವ ಸಾಧ್ಯತೆ ತೀರಾ ಕಡಿಮೆ. ಅದಕ್ಕೆ ಎರಡು ಪ್ರಮುಖ ಕಾರಣಗಳಿವೆ.

ಮತ್ತಷ್ಟು ಓದಿ: ಪಾಕ್-ಅಫ್ಘಾನ್ ಗಡಿಯಲ್ಲಿ ಭೀಕರ ಸೇನಾ ದಾಳಿ, ಉದ್ವಿಗ್ನತೆ: 35 ನಾಗರಿಕರ ಸಾವು

ಅಮೆರಿಕದ ಇತ್ತೀಚಿನ ಸುಂಕ ನೀತಿಗಳಿಂದಾಗಿ ಭಾರತ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧಗಳು ಸುಧಾರಿಸುತ್ತಿವೆ. ಹೀಗಾಗಿ ಭಾರತವನ್ನು ಎದುರುಹಾಕಿಕೊಳ್ಳಲು ಚೀನಾ ಬಯಸುವುದಿಲ್ಲ.

ಐತಿಹಾಸಿಕ ಸಿಂಧೂ ಜಲ ಒಪ್ಪಂದವು ಕೇವಲ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತ್ರ ನಡೆದಿರುವ ಒಪ್ಪಂದವಾಗಿದೆ. ಇದರಲ್ಲಿ ಚೀನಾಕ್ಕೆ ಯಾವುದೇ ಕಾನೂನಾತ್ಮಕ ಪಾತ್ರವಿಲ್ಲದ ಕಾರಣ ಅದು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.

ಭಾರತದ ನಿಲುವು ಅತ್ಯಂತ ಸ್ಪಷ್ಟ
ಭಾರತವು ಮೊದಲಿನಿಂದಲೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ರಕ್ತ ಹಾಗೂ ನೀರು ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸಿಂಧೂ ನದಿಯ ನೀರಿನ ಬಳಕೆಯ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಪ್ರಸ್ತುತ ಪ್ರವಾಹದ ನೀರು ಪಾಕಿಸ್ತಾನವನ್ನು ಸದ್ಯಕ್ಕೆ ಬಚಾವ್ ಮಾಡಿದೆಯಾದರೂ, ಭಾರತದ ಈ ಜಲ ದಿಗ್ಬಂಧನ ಪಾಕ್ ನಾಯಕರ ನಿದ್ದೆಗೆಡಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us