International Yoga Day 2023: ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ವಿಶ್ವಸಂಸ್ಥೆಯಲ್ಲಿ ಯೋಗಾಭ್ಯಾಸ ಮುನ್ನಡೆಸಲಿರುವ ಪ್ರಧಾನಿ ಮೋದಿ
ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಯೋಗಾಭ್ಯಾಸ ನಡೆಯಲಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಯೋಗಾಭ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಲಿದ್ದಾರೆ.

ವಿಶ್ವದಾದ್ಯಂತ ಇಂದು (ಜೂನ್ 21) 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day 2023) ಆಚರಿಸಲಾಗುತ್ತಿದೆ. ಭಾರತದ ವಿವಿಧ ಕಡೆಗಳಲ್ಲಿ ನಡೆದ ಯೋಗಾ ದಿನಾಚರಣೆಗಳಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದೇ ಮೊದಲ ಬಾರಿಗೆ ವಿದೇಶದಲ್ಲಿ ಆಯೋಜಿಸಿರುವ ಯೋಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಹೌದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಯೋಗಾಭ್ಯಾಸವನ್ನು ಮೋದಿ ಮುನ್ನಡೆಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು, ವಿವಿಧ ದೇಶಗಳ ರಾಯಭಾರಿಗಳು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಹ್ವಾನದ ಮೇರೆಗೆ ಮೋದಿ ಅವರು ನಿನ್ನೆ ರಾತ್ರಿ ಅಮೆರಿಕದ ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ (UN) ಪ್ರಧಾನ ಕಚೇರಿಯಲ್ಲಿ ಆಯೋಜಿಸಿರುವ ಯೋಗ ದಿನಾಚರಣೆಯಲ್ಲಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. “ಪ್ರಧಾನಿ ಮೋದಿ ಅವರು ಭಾಗಿಯಾಗುತ್ತಿರುವುದರಿಂದ ಈ ವರ್ಷದ ಯೋಗ ಆಚರಣೆಯು ಅತ್ಯಂತ ವಿಶಿಷ್ಟ ಸಂದರ್ಭ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಯೋಗಾಭ್ಯಾಸದ ಜಾಗೃತಿಯನ್ನು ಹರಡಲು ಜಾಗತಿಕವಾಗಿ ಗುರುತಿಸಲ್ಪಟ್ಟ ದಿನದ ಕಲ್ಪನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯ (UNGA) 69 ನೇ ಅಧಿವೇಶನದಲ್ಲಿ ಮಂಡಿಸಿದ್ದರು. ಅದೇ ವರ್ಷದ ಡಿಸೆಂಬರ್ 11 ರಂದು, ಎಲ್ಲಾ 193 ಯುಎನ್ ದೇಶಗಳು ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಯೋಗದ ಮಹತ್ವ, ಮಾನ್ಯತೆ ಮತ್ತು ಯೋಗದ ಮಹತ್ವವನ್ನು ಸರ್ವಾನುಮತದಿಂದ ಒಪ್ಪಿಕೊಂಡ ನಂತರ UNGA ವಿಶ್ವ ಯೋಗ ದಿನವನ್ನು ಸ್ಥಾಪಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಜೂನ್ 21ರಂದು ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ: ಇಲ್ಲಿದೆ ಕಾರ್ಯಕ್ರಮದ ವೇಳಾಪಟ್ಟಿ
ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರು ತಮ್ಮ 3 ದಿನಗಳ ರಾಜ್ಯ ಪ್ರವಾಸದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರು ಸೇರಿದಂತೆ ಒಟ್ಟು 24 ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ.
ಅಮೆರಿಕ ಪ್ರವಾಸಕ್ಕೂ ಮುನ್ನ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯೊಂದಿಗೆ ಮಾತನಾಡಿದ್ದ ಮೋದಿ, ಜಾಗತಿಕವಾಗಿ ಭಾರತ ಹಿರಿಯ ಪಾತ್ರ ವಹಿಸಲು ಅರ್ಹತೆ ಹೊಂದಿದೆ ಎಂದು ಹೇಳಿದ್ದಾರೆ. ಭಾರತ ಜಾಗತಿಕವಾಗಿ ದೊಡ್ಡ ಪಾತ್ರ ಬಯಸುತ್ತದೆ. ಅದಕ್ಕೆ ಅರ್ಹತೆ ಹೊಂದಿದೆ. ಬೇರೆ ಯಾವ ದೇಶದ ಸ್ಥಾನವನ್ನೂ ಭಾರತ ಕಸಿಯುವುದಿಲ್ಲ. ಭಾರತ ಜಾಗತಿಕವಾಗಿ ತನ್ನ ಅರ್ಹ ಸ್ಥಾನ ಗಳಿಸುತ್ತಿದೆ ಎಂದಿದ್ದಾರೆ. ಅಲ್ಲದೆ, ಅಭಿವೃದ್ಧಿಶೀಲ ದೇಶಗಳ ಆಶೋತ್ತರಕ್ಕೆ ಭಾರತ ಧ್ವನಿಯಾಗುವ ರೀತಿಯಲ್ಲಿ ಭಾರತದ ನಾಯಕತ್ವಕ್ಕೆ ಮನ್ನಣೆ ಸಿಗಬೇಕು ಎಂಬುದು ಅವರ ಆಶಯ ಅಂತಾ ವಾಲ್ ಸ್ಟ್ರೀಟ್ ಜರ್ನಲ್ ಸಂದರ್ಶನದ ತಿರುಳನ್ನು ತಿಳಿಸಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




