ಖಮೇನಿ ಇದ್ದ ನಿಖರವಾದ ಸ್ಥಳ, ಅಮೆರಿಕ ಹಾಗೂ ಇಸ್ರೇಲ್​ಗೆ ತಿಳಿದಿದ್ಹೇಗೆ?

ಅಮೆರಿಕ ಮತ್ತು ಇಸ್ರೇಲ್ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ್ದು ಹೇಗೆ ಎಂಬುದು ಈಗ ಬಹಿರಂಗವಾಗಿದೆ. ಟ್ರಾಫಿಕ್ ಕ್ಯಾಮೆರಾಗಳನ್ನು ಹ್ಯಾಕ್ ಮಾಡಿ, ಮೊಬೈಲ್ ಸಿಗ್ನಲ್‌ಗಳನ್ನು ಟ್ರ್ಯಾಕ್ ಮಾಡಿ, ವರ್ಷಗಳ ಕಾಲ ಖಮೇನಿ ಚಲನವಲನಗಳನ್ನು ಗುಪ್ತಚರ ಸಂಸ್ಥೆಗಳು ಮೇಲ್ವಿಚಾರಣೆ ಮಾಡಿದ್ದವು. ಈ ಕಾರ್ಯಾಚರಣೆಯಿಂದ ಇರಾನ್ ಪ್ರಮುಖ ನಾಯಕರು ಬಲಿಯಾಗಿದ್ದು, ಇರಾನ್ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

ಖಮೇನಿ ಇದ್ದ ನಿಖರವಾದ ಸ್ಥಳ, ಅಮೆರಿಕ ಹಾಗೂ ಇಸ್ರೇಲ್​ಗೆ ತಿಳಿದಿದ್ಹೇಗೆ?
ಖಮೇನಿ
Image Credit source: Reuters

Updated on: Mar 03, 2026 | 9:33 AM

ಟೆಹ್ರಾನ್, ಮಾರ್ಚ್​ 03: ಅಮೆರಿಕ ಹಾಗೂ ಇಸ್ರೇಲ್(Israel) ಜಂಟಿಯಾಗಿ ಇರಾನ್ ಮೇಲೆ ಸಮರ ಸಾರುತ್ತಿವೆ. ಕಳೆದ ಮೂರು ದಿನಗಳಿಂದ ದಾಳಿ, ಪ್ರತಿದಾಳಿಗಳು ನಡೆಯುತ್ತಿವೆ. ಅಮೆರಿಕ ಹಾಗೂ ಇಸ್ರೇಲ್ ಸೇನೆಯು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯನ್ನು ಹತ್ಯೆ ಮಾಡಿದೆ.

ಹಾಗಾದರೆ ಖಮೇನಿ ಇದ್ದ ಜಾಗ ಅಮೆರಿಕ ಹಾಗೂ ಇಸ್ರೇಲ್ ಪಡೆಗಳಿಗೆ ಅಷ್ಟು ನಿಖರವಾಗಿ ಹೇಗೆ ತಿಳಿಯಿತು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಇಸ್ರೇಲ್ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಅವರ ಭದ್ರತಾ ಸಿಬ್ಬಂದಿಯ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಇರಾನ್‌ನ ಟ್ರಾಫಿಕ್ ಕ್ಯಾಮೆರಾ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಿ ಮೊಬೈಲ್ ಫೋನ್ ಸಿಗ್ನಲ್ ಕೂಡ ಟ್ರ್ಯಾಕ್ ಮಾಡಿತ್ತು. ಇದಕ್ಕೆ ವರ್ಷಗಳ ಕಾಲ ಸಮಯ ತೆಗೆದುಕೊಂಡಿತ್ತು ಎಂದು ಫಿನಾನ್ಶಿಯಲ್ ಟೈಮ್ಸ್​ ವರದಿ ಮಾಡಿದೆ.

ಟೆಹ್ರಾನ್‌ನಲ್ಲಿರುವ ಬಹುತೇಕ ಎಲ್ಲಾ ಟ್ರಾಫಿಕ್ ಕ್ಯಾಮೆರಾಗಳನ್ನು ಹೈಜಾಕ್ ಮಾಡಿ, ವರ್ಷಗಳಿಂದ ಮಾಹಿತಿ ಕದಿಯಲಾಗುತ್ತಿತ್ತು. ದೃಶ್ಯಗಳನ್ನು ಎನ್‌ಕ್ರಿಪ್ಟ್ ಮಾಡಿ ಟೆಲ್ ಅವಿವ್ ಮತ್ತು ದಕ್ಷಿಣ ಇಸ್ರೇಲ್‌ನಲ್ಲಿರುವ ಸರ್ವರ್‌ಗಳಿಗೆ ರವಾನಿಸಲಾಗಿದೆ.

ಅಮೆರಿಕ ಹಾಗೂ ಇಸ್ರೇಲಿ ಗುಪ್ತಚರ ಅಧಿಕಾರಿಗಳು ಖಮೇನಿ ದಿನಚರಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ಅವರು ಇರುವುದೆಲ್ಲಿ, ಯಾರ್ಯಾರನ್ನು ಭೇಟಿಯಾಗುತ್ತಾರೆ, ಹೇಗೆ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ, ಅವರನ್ನು ಕೊಲ್ಲುವುದು ಹೇಗೆ ಎಂಬುದರ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದರು.
ಖಮೇನಿ ಸೇರಿದಂತೆ ಇರಾನಿನ ಉನ್ನತ ಅಧಿಕಾರಿಗಳು ಶನಿವಾರ ಬೆಳಗ್ಗೆ ಟೆಹ್ರಾನ್​ನ ಸರ್ವೋಚ್ಚ ನಾಯಕನ ಮನೆಯಲ್ಲಿ ಸಭೆ ಸೇರಲು ನಿರ್ಧರಿಸಿದ್ದರು.

ಮತ್ತಷ್ಟು ಓದಿ: Iran Israel War: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹುಗೆ ಪಿಎಂ ಮೋದಿ ಕರೆ: ಯುದ್ಧ ನಿಲ್ಲಿಸಲು ಆಗ್ರಹ

ಸ್ಥಳೀಯ ಸಮಯ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇರಾನ್ ಮೇಲೆ ಇಸ್ರೇಲ್  ದಾಳಿ ಆರಂಭಿಸಿತ್ತು. ವೈಮಾನಿಕ ದಾಳಿಗಳು 60 ಸೆಕೆಂಡುಗಳ ಒಳಗೆ ಮೂರು ಗುರಿಗಳನ್ನು ಹೊಡೆಯಲಾಗಿತ್ತು. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಕ್ರಾಂತಿಕಾರಿ ಗಾರ್ಡ್‌ನ ಮುಖ್ಯಸ್ಥರು ಸೇರಿದಂತೆ ಸುಮಾರು 40 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದರು.
ಇರಾನ್ ತನ್ನ ಸರ್ವೋಚ್ಚ ನಾಯಕನ ಮರಣದ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಕೆಟ್ಟ ಸುದ್ದಿ ಬಂದಿತ್ತು.

ಇಸ್ರೇಲ್ ಮಾಜಿ ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರನ್ನು ಸಹ ದಾಳಿಯಲ್ಲಿ ಕೊಂದಿದೆ ಎಂದು ಮೂಲಗಳು ಹೇಳಿವೆ. ಅಯತೊಲ್ಲಾ ಖಮೇನಿಯವರ ಸಾವು ಇರಾನ್ ಬೆಂಬಲಿಗರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಪರಾಧಕ್ಕೆ ಶಿಕ್ಷೆಯಾಗದೆ ಬಿಡುವುದಿಲ್ಲ ಎಂದು ಇರಾನ್‌ನ ಹೊಸ ನಾಯಕ ಪ್ರತಿಜ್ಞೆ ಮಾಡಿದ್ದಾರೆ, ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್ ಸ್ಪಷ್ಟಪಡಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us