ಇರಾನ್ ಮೇಲೆ 4-5 ವಾರ ದಾಳಿ ಮುಂದುವರೆಯಲಿದೆ; ಟ್ರಂಪ್ ಘೋಷಣೆ

ಇರಾನ್ ಮೇಲೆ ಅಮೆರಿಕ ದಾಳಿ ನಡೆಸಲು ಕಾರಣವೇನೆಂಬುದರ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಇರಾನ್ ಕ್ಷಿಪಣಿಗಳೊಂದಿಗೆ ಅಮೆರಿಕದ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿತ್ತು. ನಾವು ಅಯತೊಲ್ಲಾ ಖಮೇನಿಯನ್ನು ಕೊಲ್ಲದಿದ್ದರೆ ಅವರೇ ನಮ್ಮನ್ನು ಕೊಲ್ಲುತ್ತಿದ್ದರು. ಹೀಗಾಗಿ, ನಾವು ಇರಾನ್ ಮೇಲೆ ದಾಳಿ ನಡೆಸಿದೆವು. ಈ ದಾಳಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇನ್ನೂ ನಾಲ್ಕೈದು ವಾರ ದಾಳಿ ಮುಂದುವರೆಯಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ಇರಾನ್ ಮೇಲೆ 4-5 ವಾರ ದಾಳಿ ಮುಂದುವರೆಯಲಿದೆ; ಟ್ರಂಪ್ ಘೋಷಣೆ
Donald Trump

Updated on: Mar 02, 2026 | 11:29 PM

ವಾಷಿಂಗ್ಟನ್, ಮಾರ್ಚ್ 2: ಇರಾನ್ ವಿರುದ್ಧ ದಾಳಿ ನಡೆಸಲು 5 ವಾರಗಳಿಂದ ತಯಾರಿ ನಡೆಸಲಾಗಿತ್ತು. ಇನ್ನೂ ದಾಳಿ ನಿಂತಿಲ್ಲ. ಅಗತ್ಯವಿದ್ದರೆ ಯುದ್ಧವನ್ನು ತೀವ್ರಗೊಳಿಸುತ್ತೇವೆ. ಇರಾನ್ (Iran War) ವಿರುದ್ಧ ಇನ್ನೂ 4-5 ವಾರ ಯುದ್ಧ ಮುಂದುವರಿಯಲಿದೆ. ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮೇಲುಗೈ ಸಾಧಿಸಿದೆ ಎಂದು ವಾಷಿಂಗ್ಟನ್​ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಬಲವಾದ ಎಚ್ಚರಿಕೆ ನೀಡಿದ್ದು, ಇರಾನ್ ಮೇಲೆ ಮತ್ತೊಂದು ದೊಡ್ಡ ದಾಳಿ ನಡೆಯಲಿದೆ ಎಂದು ಹೇಳಿದ್ದಾರೆ. ನಾವು ಇದುವರೆಗೂ ದಾಳಿಯ ತೀವ್ರತೆಯನ್ನು ಹೆಚ್ಚಿಸಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ದಾಳಿಗಳನ್ನು ನಡೆಸಲಾಗುವುದು. ಪ್ರಾಣ ಉಳಿಸಿಕೊಳ್ಳಲು ಇರಾನಿನ ಜನರು ಮನೆಯೊಳಗೆ ಇರಬೇಕೆಂದು ಮತ್ತು ಹೊರಗೆ ಹೋಗದಂತೆ ಟ್ರಂಪ್ ಮನವಿ ಮಾಡಿದ್ದಾರೆ.

ಇರಾನ್ ಅಮೆರಿಕಕ್ಕೆ ದ್ರೋಹ ಬಗೆದಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇರಾನ್ ವಿರುದ್ಧ ಐದು ವಾರಗಳ ಸಿದ್ಧತೆಗಳು ನಡೆದಿವೆ. ಅಗತ್ಯವಿದ್ದರೆ, ಯುದ್ಧವು ಉಲ್ಬಣಗೊಳ್ಳುತ್ತದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳನ್ನು ಶರಣಾಗಿಸಬೇಕು, ಇಲ್ಲದಿದ್ದರೆ ಜಗತ್ತು ಹಿಂದೆಂದೂ ನೋಡಿರದ ಕಾರ್ಯಾಚರಣೆಗಳನ್ನು ನಾವು ನಡೆಸಬೇಕಾಗುತ್ತದೆ. ಇರಾನ್ ಭಯೋತ್ಪಾದನೆಯ ಜಾಗತಿಕ ಪ್ರಾಯೋಜಕ. ಇರಾನ್ ಅಮೆರಿಕದ ಮೇಲೆ ದಾಳಿ ಮಾಡಲು ಬಯಸಿತ್ತು. ನಾನು ಜನರಲ್ ಸೊಲೈಮಾನಿಯನ್ನು ಕೊಂದೆ. ಇಲ್ಲಿಯವರೆಗೆ, 10 ಇರಾನಿನ ಯುದ್ಧನೌಕೆಗಳು ನಾಶವಾಗಿವೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಅಯತೊಲ್ಲಾ ಖಮೇನಿಯ ಪತ್ನಿಯೂ ನಿಧನ

ಇರಾನ್ ಮೇಲೆ ದಾಳಿ ನಡೆಸಿ ನನಗೆ ಇನ್ನೂ ಬೇಸರವಾಗಿಲ್ಲ. ಈ ದಾಳಿ ಇನ್ನೂ ನಾಲ್ಕೈದು ವಾರ ಮುಂದುವರೆಯಲಿದೆ. ಇರಾನ್ ಶರಣಾಗುವವರೆಗೂ ದಾಳಿ ನಡೆಸುತ್ತಲೇ ಇರುತ್ತೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.


ಇರಾನ್ ಮಾಧ್ಯಮವು ದಾಳಿಗಳಲ್ಲಿ ಕನಿಷ್ಠ 555 ಜನರು ಸಾವನ್ನಪ್ಪಿದ್ದಾರೆ ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ಇದರಲ್ಲಿ ಮಿನಾಬ್‌ನಲ್ಲಿ ಬಾಲಕಿಯರ ಶಾಲೆಯ ಮೇಲೆ ಅಮೆರಿಕ, ಇಸ್ರೇಲ್ ಮಿಲಿಟರಿ ದಾಳಿ ನಡೆಸಿದಾಗ ಸುಮಾರು 115 ಜನರು ಸಾವನ್ನಪ್ಪಿದ್ದಾರೆ. ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಅಮೇರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 5 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಯುಎಸ್ ಮಿಲಿಟರಿ ಪ್ರಕಟಿಸಿದೆ.

ಇದನ್ನೂ ಓದಿ: ಇರಾನ್​ ಜೊತೆಗಿನ ಸಂಘರ್ಷದಲ್ಲಿ ಇಸ್ರೇಲ್ ಜೊತೆ ನಿಂತಿದ್ದಕ್ಕೆ ಪ್ರಧಾನಿ ಮೋದಿಗೆ ನೆತನ್ಯಾಹು ಧನ್ಯವಾದ

ಲೆಬನಾನ್‌ನಲ್ಲಿ, ದೇಶದ ದಕ್ಷಿಣ ಭಾಗದಲ್ಲಿ ಇಸ್ರೇಲಿ ದಾಳಿಯಿಂದಾಗಿ 31 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಸಂಘರ್ಷದಿಂದಾಗಿ ಸುಮಾರು 149 ಜನರು ಗಾಯಗೊಂಡಿದ್ದಾರೆ. ಯುಎಇಯಲ್ಲಿ, ದುಬೈ ಮತ್ತು ಅಬುಧಾಬಿಯಲ್ಲಿ ನಡೆದ ದಾಳಿಯಲ್ಲಿ ಒಬ್ಬ ಪಾಕಿಸ್ತಾನಿ, ಒಬ್ಬ ನೇಪಾಳಿ ಮತ್ತು ಒಬ್ಬ ಬಾಂಗ್ಲಾದೇಶಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:26 pm, Mon, 2 March 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us