ಕತ್ತಲೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯನ್ನು ಭೇಟಿಯಾದ್ರಾ ಇರಾನ್ ಅಧ್ಯಕ್ಷ?

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಮೊಜ್ತಬಾ ಖಮೇನಿ ಜೊತೆ ಕತ್ತಲೆಯಲ್ಲಿ ರಹಸ್ಯವಾಗಿ ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿ ಖಮೇನಿಯ ಗುರುತಿನ ಬಗ್ಗೆ ಅನುಮಾನಗಳಿವೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸುಪ್ರೀಂ ಲೀಡರ್ ಕುರಿತು ಅಮೆರಿಕ ಅಧ್ಯಕ್ಷರ ಹೇಳಿಕೆ, IRGC ಅಧಿಕಾರ ನಿಯಂತ್ರಣ ಇರಾನ್‌ನಲ್ಲಿನ ಆಡಳಿತ ಬಿಕ್ಕಟ್ಟನ್ನು ಸೂಚಿಸುತ್ತದೆ. ಅಧ್ಯಕ್ಷರು ಅವಮಾನಿತರಾಗಿದ್ದಾರೆ ಎನ್ನಲಾಗಿದ್ದು, ಈ ಭೇಟಿ ಬೋಗಸ್ ಎಂಬ ಅನುಮಾನವಿದೆ.

ಕತ್ತಲೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯನ್ನು ಭೇಟಿಯಾದ್ರಾ ಇರಾನ್ ಅಧ್ಯಕ್ಷ?
ಮೊಜ್ತಬಾ ಖಮೇನಿ

Updated on: Aug 07, 2026 | 9:26 AM

ಟೆಹ್ರಾನ್, ಆಗಸ್ಟ್​ 07: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅವರ ಆರೋಗ್ಯ ಮತ್ತು ಅವರಿರುವ ರಹಸ್ಯ ಸ್ಥಳದ ಕುರಿತು ಜಾಗತಿಕ ಮಟ್ಟದಲ್ಲಿ ಅನುಮಾನಗಳು ಹೆಚ್ಚುತ್ತಿರುವ ನಡುವೆಯೇ ಮತ್ತೊಂದು ರಹಸ್ಯ ವರದಿ ಹೊರಬಿದ್ದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Masoud Pezeshkian) ಅವರು ಟೆಹ್ರಾನ್‌ನ ಅಜ್ಞಾತ ಸ್ಥಳದಲ್ಲಿ ಕಾರಿನ ಹಿಂಭಾಗದ ಸೀಟಿನಲ್ಲಿ ಮೊಜ್ತಬಾ ಖಮೇನಿ ಅವರನ್ನು ಭೇಟಿಯಾಗಿದ್ದಾರೆ. ಆದರೆ ಸಂಪೂರ್ಣ ಕತ್ತಲೆಯಿಂದಾಗಿ ಮುಖ ಕಾಣಿಸದಿದ್ದಾಗ, ನೀವು ನಿಜವಾಗಿಯೂ ಖಮೇನಿಯೇ ಎಂದು ಪೆಜೆಶ್ಕಿಯಾನ್ ಆ ವ್ಯಕ್ತಿಯನ್ನೇ ಕೇಳಿದ್ದಾರೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ವರದಿ ಮಾಡಿದೆ.

ಇರಾನ್ ರಾಜಕೀಯ ಬಿಕ್ಕಟ್ಟಿನ ನಡುವೆ ಅಧ್ಯಕ್ಷ ಪೆಜೆಶ್ಕಿಯಾನ್ ರಾಜೀನಾಮೆ ಬೆದರಿಕೆ ಹಾಕಿದ ನಂತರ ಈ ಭೇಟಿಯನ್ನು ಏರ್ಪಡಿಸಲಾಗಿತ್ತು. ಟೆಹ್ರಾನ್‌ನ ರಹಸ್ಯ ಸ್ಥಳವೊಂದರಲ್ಲಿ ಗಾಢ ಕಪ್ಪು ಕಿಟಕಿಗಳಿದ್ದ ಕಾರಿನ ಹಿಂಭಾಗದಲ್ಲಿ ಖಮೇನಿ ಎಂದ ಹೇಳಲಾದ ವ್ಯಕ್ತಿ ಕುಳಿತಿದ್ದರು.

ಕೈಕುಲುಕಲೂ ಸಿಗದ ಅವಕಾಶ: ಸಂಪೂರ್ಣ ಕತ್ತಲೆಯಲ್ಲಿ ನಡೆದ ಈ ಭೇಟಿಯಲ್ಲಿ ಯಾವುದೇ ಹಸ್ತಲಾಘವಕ್ಕೆ ಅವಕಾಶವಿರಲಿಲ್ಲ. ಅಧ್ಯಕ್ಷರನ್ನು ನಡೆಸಿಕೊಂಡ ರೀತಿಯಿಂದ ಅವರು ತೀವ್ರ “ಅವಮಾನಿತರಾಗಿದ್ದಾರೆ” ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ. ಎರಡನೇ ಸಭೆಗೆ ಪೆಜೆಶ್ಕಿಯಾನ್ ವಿನಂತಿಸಿದರೂ ಅದನ್ನು ತಕ್ಷಣವೇ ನಿರಾಕರಿಸಲಾಗಿದೆ.

ಮತ್ತಷ್ಟು ಓದಿ: ‘ಭಾರತವನ್ನು ಇರಾನ್ ಎಂದೂ ಮರೆಯುವುದಿಲ್ಲ’; ಅಯತೊಲ್ಲಾ ಖಮೇನಿ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ಟೆಹ್ರಾನ್ ಕೃತಜ್ಞತೆ

ಖಮೇನಿ ಬದುಕಿದ್ದಾರೆಯೇ? ಟ್ರಂಪ್ ಹೇಳಿಕೆ ಮತ್ತು ಊಹಾಪೋಹ
ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಲೀಡರ್: ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮಾಜಿ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಆ ದಾಳಿಯಲ್ಲಿ ಮೊಜ್ತಬಾ ಕೂಡ ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೂ ಹಾಜರಾಗಿರಲಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಪ್ರತಿಕ್ರಿಯಿಸಿ, “ಇರಾನ್‌ನ ಉನ್ನತ ನಾಯಕರೆಲ್ಲರೂ ಕೊಲ್ಲಲ್ಪಟ್ಟಿದ್ದಾರೆ. ಮೊಜ್ತಬಾ ಖಮೇನಿ ಇದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಪ್ರತಿಪಾದಿಸಿದ್ದರು. ಇರಾನ್‌ನಲ್ಲಿ ನಾಗರಿಕ ಸರ್ಕಾರಕ್ಕಿಂತ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಮಿಲಿಟರಿ ಶಕ್ತಿಗಳೇ ಸಂಪೂರ್ಣ ಆಡಳಿತ ನಿಯಂತ್ರಣ ತೆಗೆದುಕೊಂಡಿವೆ. ಅಧ್ಯಕ್ಷ ಪೆಜೆಶ್ಕಿಯಾನ್ ಇತ್ತೀಚೆಗೆ ಈ ಪರಿಸ್ಥಿತಿಯಲ್ಲಿ ಸುಪ್ರೀಂ ಲೀಡರ್ ಅವರನ್ನು ಸಂಪರ್ಕಿಸುವುದು ತೀರಾ ಕಷ್ಟಕರವಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು.

ಬೋಗಸ್ ಭೇಟಿಯ ಅನುಮಾನ: ಈ ಇತ್ತೀಚಿನ ವರದಿಯು ಇರಾನ್ ಸೇನೆಯು ಅಧ್ಯಕ್ಷರನ್ನು ಸಮಾಧಾನಪಡಿಸಲು ಖಮೇನಿ ರೀತಿಯೇ ಇರುವವರನ್ನು ಕಾರಿನಲ್ಲಿ ಕೂರಿಸಿ ಭೇಟಿ ಮಾಡಿಸಿದೆಯೇ ಎಂಬ ಬಲವಾದ ಅನುಮಾನಗಳನ್ನು ಹುಟ್ಟುಹಾಕಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us