AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಘೋರಾತಿ ಘೋರ; ತಾಲಿಬಾನ್ ಸಿದ್ಧಾಂತ ಹೇಗಿತ್ತು? ಈಗ ಏನ್ ಹೇಳ್ತಿದೆ?

ಅಫ್ಘಾನಿಸ್ತಾನ ತಾಲಿಬಾನ್ ಕಪಿಮುಷ್ಠಿಗೆ ಬೀಳ್ತಿದ್ದಂತೆ ಅಲ್ಲಿನ ಜನ ಗಢಗಢ ಅಂತಾ ನಡುಗಿ ಹೋಗ್ತಿದ್ದಾರೆ.. ನರಕಯಾತನೆ ಅನುಭವಿಸ್ಬೇಕಾ ಅಂತಾ ಕೊರಗುತ್ತಿದ್ದಾರೆ. ಮಹಿಳೆಯರಂತೂ ತಾಲಿಬಾನ್ ಸಿದ್ಧಾಂತ ನೆನೆದು ಮನೆ ಬಿಟ್ಟು ಹೊರ ಬರ್ತಿಲ್ಲ. ಹಾಗಾದ್ರೆ, ತಾಲಿಬಾನ್ ನಿಯಮ ಹೇಗಿತ್ತು? ಈಗ ಏನ್ ಹೇಳ್ತಿದೆ? ಅದರ ಡಿಟೈಲ್ಸ್ ಇಲ್ಲಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಘೋರಾತಿ ಘೋರ; ತಾಲಿಬಾನ್ ಸಿದ್ಧಾಂತ ಹೇಗಿತ್ತು? ಈಗ ಏನ್ ಹೇಳ್ತಿದೆ?
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Aug 18, 2021 | 8:30 AM

Share

ಅಫ್ಘಾನಿಸ್ತಾನ ಕ್ರೂರಿ ತಾಲಿಬಾನ್ ಉಗ್ರರ ಕಪಿಮುಷ್ಠಿಗೆ ಬಿದ್ದಿದೆ. ಅಫ್ಘಾನಿಸ್ತಾನದ ಚಿತ್ರಣವೇ ಬದಲಾಗಿ ಹೋಗಿದೆ. ಮಹಿಳೆಯರಂತೂ ಮನೆಯಿಂದ ಹೊರ ಬರೋಕು ಭಯ ಪಡ್ತಿದ್ದಾರೆ. ತಾಲಿಬಾನ್ನ ಹಳೇ ಸಿದ್ಧಾಂತಗಳನ್ನ ನೆನೆದು ಜೀವ ಭಯದಿಂದ ನಡುಗುತ್ತಿದ್ದಾರೆ. ಕೆಲವರಂತೂ ದೇಶಬಿಟ್ಟು ಹೋಗಲು ಭಾರಿ ಸರ್ಕಸ್ ಮಾಡ್ತಿದ್ದಾರೆ.

ನಿಯಮ ಉಲ್ಲಂಘಿಸಿದ್ರೆ ಸಾರ್ವಜನಿಕ ವಲಯದಲ್ಲೇ ಶಿಕ್ಷೆ ಯಾವಾಗ ತಾಲಿಬಾನ್ ಅಟ್ಟಹಾಸ ಮೆರೆದು ಅಫ್ಘಾನಿಸ್ತಾನವನ್ನ ವಶಕ್ಕೆ ಪಡೆದುಕೊಳ್ತೋ ಆ ಕ್ಷಣದಿಂದ್ಲೇ ಮಹಿಳೆಯರು ಗೂಡು ಸೇರಿದ್ರು. ಆವತ್ತಿನಿಂದ್ಲೂ ಮಹಿಳೆಯರಿಂದ ಹಿಡಿದು ಮಕ್ಕಳ ತನಕ ಕಾಪಾಡು ಅಂತಾ ದೇವರಲ್ಲಿ ಬೇಡಿಕೊಳ್ತಾನೆ ಇದ್ದಾರೆ. ನರಕ ಅನುಭವಿಸ್ಬೇಕಾ ಅಂತಾ ಆಲೋಚಿಸ್ತಿದ್ದಾರೆ. ಯಾಕಂದ್ರೆ, ಈ ಹಿಂದೆ 1996 ರಿಂದ 2001ರ ಡಿಸೆಂಬರ್ ವರೆಗಿನ ಅವಧಿಯಲ್ಲಿ ಇದೇ ತಾಲಿಬಾನ್ ಅಫ್ಘಾನಿಸ್ತಾನ ದೇಶವನ್ನು ಆಳ್ವಿಕೆ ಮಾಡಿತ್ತು. ಆಗ ಖಟ್ಟರ್ ಷರಿಯಾ ಕಾನೂನು ಜಾರಿಗೊಳಿಸಿತ್ತು. ಹಾಗಾದ್ರೆ, ತಾಲಿಬಾನ್ ವಿಧಿಸಿದ್ದ ಕಟ್ಟು ಪಾಡುಗಳು ಹೇಗಿತ್ತು ಗೊತ್ತಾ?

ತಾಲಿಬಾನ್ ಆಡಳಿತ ಹೇಗಿತ್ತು? ಖಟ್ಟರ್ ಷರಿಯಾ ಕಾನೂನಿನಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕು, ಫ್ರೀಡಂ ಇರಲಿಲ್ಲ. ಅಂದ್ರೆ, ಮಹಿಳೆಯರು ಶಿಕ್ಷಣ ಪಡೆಯುವಂತಿರಲಿಲ್ಲ. ಉದ್ಯೋಗಕ್ಕೂ ಹೋಗುವಂತಿರಲಿಲ್ಲ. ಜೊತೆಗೆ ಹಿಜಬ್ ಧರಿಸಿಯೇ ಮಹಿಳೆಯರು ಹೊರ ಬರಬೇಕಿತ್ತು. ಮುಖ್ಯವಾಗಿ ಕುಟುಂಬದ ಪುರುಷನ ಜೊತೆಗೆ ಮಾತ್ರ ಓಡಾಡಬೇಕಿತ್ತು. ಅಪ್ಪಿ ತಪ್ಪಿಯೂ ಪರ ಪುರುಷರ ಜೊತೆ ಮಾತನಾಡುವಂತೆ ಇರಲಿಲ್ಲ, ಓಡಾಡುವಂತಿರಲಿಲ್ಲ. ಅಲ್ದೆ, ಮಾಡ್ರನ್ ಡ್ರೆಸ್ ಧರಿಸುವಂತಿರಿಲಿಲ್ಲ. ಹಾಡು, ಡ್ಯಾನ್ಸ್, ಸಂಗೀತಕ್ಕೂ ಬ್ರೇಕ್ ಕೊಡಲಾಗಿತ್ತು.

ರೂಲ್ಸ್ ಬ್ರೇಕ್ ಮಾಡಿದ್ರೆ ಜನರ ಎದುರೇ ಶಿಕ್ಷೆ ಷರಿಯಾ ಕಾನೂನು, ನೀತಿ, ನಿಯಮಗಳನ್ನು ಯಾರೂ ಕೂಡ ಉಲಂಘಿಸುವಂತಿರಲಿಲ್ಲ. ಒಂದು ವೇಳೆ ನಿಯಮ ಉಲಂಘಿಸಿದ್ರೆ, ಅಂಥವರನ್ನು ಪ್ರತಿ ಶುಕ್ರವಾರ ಸಾರ್ವಜನಿಕವಾಗಿ ನಡುರಸ್ತೆಯಲ್ಲೇ ಹತ್ಯೆ ಮಾಡ್ತಿದ್ರು. ಮಹಿಳೆಯರನ್ನೂ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಕಲ್ಲು ಹೊಡೆದು ಸಾಯಿಸುತ್ತಿದ್ದರು. ಪುರುಷರು ಸಣ್ಣಪುಟ್ಟ ತಪ್ಪು ಮಾಡಿದ್ರೂ ಗುಂಡು ಹೊಡೆದು ಕೊಂದು ಹಾಕ್ತಿದ್ರು.

ಹೊಸ ವೇಷದಲ್ಲಿ ಜನರ ಮುಂದೆ ಬರುತ್ತಾ ತಾಲಿಬಾನ್? ಸದ್ಯ, ಇದೇ ಭಾನುವಾರ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈಗ ಈ ಹಿಂದಿನ ಖಟ್ಟರ್ ಷರಿಯಾ ಕಾನೂನು ಜಾರಿಗೆ ತರುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಈ ಪ್ರಶ್ನೆಗೆ ಈಗ ತಾಲಿಬಾನ್ ವಕ್ತಾರರೇ ಉತ್ತರ ನೀಡಿದ್ದಾರೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ನಿನ್ನೆ ರಾತ್ರಿ ಅಫ್ಘಾನಿಸ್ತಾನದ ಪ್ರೆಸಿಡೆನ್ಸಿಯಲ್ ಪ್ಯಾಲೇಸ್ನಲ್ಲಿ ಹೊಸ ನಿಯಮ ಜಾರಿಗೊಳಿಸೋದಾಗಿ ತಿಳಿಸಿದ್ದಾರೆ.

ತಾಲಿಬಾನ್ನ ಹೊಸ ವೇಷ? ಇಸ್ಲಾಮಿಕ್ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುತ್ತೆ ಅಂತಾ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿದ್ದಾರೆ. ಸಮಾಜದಲ್ಲಿ ಮಹಿಳೆಯರು ಬಹಳ ಸಕ್ರಿಯವಾಗಿರುತ್ತಾರೆ. ಆದ್ರೆ ಇಸ್ಲಾಂನ ವ್ಯಾಪ್ತಿಯಲ್ಲಿ ಮಾತ್ರ ಸಕ್ರಿಯವಾಗಿರುತ್ತಾರೆ ಎಂದಿದ್ದಾರೆ. ಇದೇ ವೇಳೆ ಬೇರೆ ದೇಶಗಳ ಜೊತೆಗೆ ಶಾಂತಿಯುತ ಸಂಬಂಧ ಹೊಂದಲು ಬಯಸುವುದಾಗಿ ಜಬೀವುಲ್ಲಾ ತಿಳಿಸಿದ್ದಾರೆ. ಆಂತರಿಕ, ಬಾಹ್ಯವಾಗಿ ಯಾವುದೇ ವೈರಿಗಳನ್ನು ಹೊಂದಲು ಬಯಸಲ್ಲ. ಅಫ್ಘಾನಿಸ್ತಾನ ನೆಲವನ್ನು ನಮ್ಮ ನೆರೆಹೊರೆಯ ದೇಶಗಳ ವಿರುದ್ಧ ಬಳಸಿಕೊಳ್ಳಲು ಅವಕಾಶ ಕೊಡಲ್ಲ ಎಂದು ಜಬೀವುಲ್ಲಾ ನೆರೆಹೊರೆಯ ದೇಶಗಳಿಗೆ ಭರವಸೆ ನೀಡಿದ್ದಾರೆ. ಅಲ್ದೆ, ಅಂತಾರಾಷ್ಟ್ರೀಯ ಸಮುದಾಯ ನಮ್ಮನ್ನು ಗುರುತಿಸಬೇಕು. ಕಾಬೂಲ್ನಲ್ಲಿರುವ ವಿದೇಶಗಳ ರಾಯಭಾರ ಕಚೇರಿ, ಸಂಘಟನೆಗಳಿಗೆ ಭದ್ರತೆ ನೀಡುತ್ತೇವೆ ಅಂತ್ಲೂ ಜಬೀವುಲ್ಲಾ ಹೇಳಿದ್ದಾರೆ.

ಈ ಮೂಲಕ ತಾನು ಬದಲಾಗಿದ್ದೇನೆ ಎಂದು ತಾಲಿಬಾನ್ ಹೇಳುತ್ತಿದೆ. ಮಹಿಳೆಯರು ಉದ್ಯೋಗ ಮಾಡಲು ಕೂಡ ಅವಕಾಶ ಕೊಡುವುದಾಗಿ ಹೇಳಿದೆ. 1996 ರಿಂದ 2001ರ ಅವಧಿಯ ತಾಲಿಬಾನ್ ಸಿದ್ಧಾಂತಕ್ಕೂ ಈಗಿನ ಸಿದ್ಧಾಂತಕ್ಕೂ ಸ್ವಲ್ಪ ವ್ಯತ್ಯಾಸ ಇದೆ. ಆದರೆ, ಮುಂದೆ ತಾಲಿಬಾನ್ ಹೇಗೆ ವರ್ತಿಸುತ್ತೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಾಲಿಬಾನ್ ನಲ್ಲೇ ಖಟ್ಟರ್ ಮತ್ತು ಉದಾರವಾದಿ ಎಂಬ ಎರಡು ಬಣಗಳಾದ್ರೆ, ಆಗ ಯಾರ ಕೈ ಮೇಲಾಗುತ್ತೆ ಎಂಬುದು ಗೊತ್ತಿಲ್ಲ. ಏನೇ ಇರಲಿ, ಅಫ್ಘಾನಿಸ್ತಾನದಲ್ಲಿ ಜನರಿಗೆ ತಾಲಿಬಾನ್ ಮೇಲೆ ನಂಬಿಕೆ ಇಲ್ಲ. ಇದರಿಂದಾಗಿ ಭಯದಿಂದ ದೇಶಬಿಟ್ಟು ಹೋಗಲು ಜನ ಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಈ ಯಾತ್ರಾಸ್ಥಳದಲ್ಲಿ 99 ಲಕ್ಷ 99 ಸಾವಿರದ 999 ವಿಗ್ರಹಗಳು ಇವೆ! ಕೋಟಿಗೆ ಒಂದೇ ಒಂದು ವಿಗ್ರಹ ಕಡಿಮೆಯಿದೆ! ಏನಿದರ ಮರ್ಮ?