ಇರಾನ್​ನ ಭದ್ರತಾ ಮುಖ್ಯಸ್ಥರ ಹತ್ಯೆಯಾಗಿದೆ ಎಂದ ಇಸ್ರೇಲ್; ಕೆಲವೇ ಗಂಟೆಗಳಲ್ಲಿ ಕೈಬರಹದ ಪೋಸ್ಟ್ ಹಾಕಿದ ಅಲಿ ಲಾರಿಜಾನಿ!

ಇರಾನ್​ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿತ್ತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ಅದೇ ಅಲಿ ಲಾರಿಜಾನಿ ತಮ್ಮ ಎಕ್ಸ್​ ಅಕೌಂಟ್​​ನಲ್ಲಿ ಕೈಬರಹದ ನೋಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ತಾವು ಸತ್ತಿಲ್ಲ ಎಂದು ಅವರು ಜಗತ್ತಿಗೆ ನೀಡಿರುವ ಸಂದೇಶವೋ ಅಥವಾ ಬೇರೆ ಯಾರಾದರೂ ಅವರ ಅಕೌಂಟಿನಿಂದ ಪೋಸ್ಟ್ ಮಾಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಇರಾನ್ ಇದುವರೆಗೂ ಲಾರಿಜಾನಿ ಅವರ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ, ಈ ಅಲಿ ಲಾರಿಜಾನಿ ಸಾಮಾನ್ಯ ವ್ಯಕ್ತಿಯಲ್ಲ. ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗೆ ಅವರೇ ಮಾಸ್ಟರ್​ಮೈಂಡ್.

ಇರಾನ್​ನ ಭದ್ರತಾ ಮುಖ್ಯಸ್ಥರ ಹತ್ಯೆಯಾಗಿದೆ ಎಂದ ಇಸ್ರೇಲ್; ಕೆಲವೇ ಗಂಟೆಗಳಲ್ಲಿ ಕೈಬರಹದ ಪೋಸ್ಟ್ ಹಾಕಿದ ಅಲಿ ಲಾರಿಜಾನಿ!
Ali Larijani

Updated on: Mar 17, 2026 | 7:33 PM

ಟೆಹ್ರಾನ್, ಮಾರ್ಚ್ 17: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿದ ಬಳಿಕ ಶುರುವಾದ ಸಂಘರ್ಷ ಇನ್ನೂ ಮುಂದುವರೆದಿದೆ. ಈ ದಾಳಿಯಲ್ಲಿ ಮೊದಲ ದಿನವೇ ಇರಾನ್​ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಇರಾನ್ (Iran- Israel War) ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆಲ್ಲ ದಾಳಿ ನಡೆಸಿತ್ತು. ಈ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಇರಾನ್​ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್​ ಘೋಷಿಸಿತ್ತು.

ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ಲಾರಿಜಾನಿ ತಮ್ಮ ಎಕ್ಸ್​ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ಕೈಬರಹದ ನೋಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಅವರ ಸಾವಿನ ಬಗ್ಗೆ ಗೊಂದಲ ಸೃಷ್ಟಿಸಿದೆ. ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇಂದು ಹೇಳಿದ್ದರು. ಆದರೂ ಟೆಹ್ರಾನ್‌ನಿಂದ ಯಾವುದೇ ದೃಢೀಕರಣ ಬಂದಿರಲಿಲ್ಲ.

ಇದನ್ನೂ ಓದಿ: ನಾವು ಕೇಳಿದರೂ ಇರಾನ್ ಒಪ್ಪಂದಕ್ಕೆ ಸಿದ್ಧವಿಲ್ಲ; ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್ ಪ್ರತಿಕ್ರಿಯೆ

“ಲಾರಿಜಾನಿ ಮತ್ತು ಬಸಿಜ್ ಕಮಾಂಡರ್ ಅವರನ್ನು ರಾತ್ರೋರಾತ್ರಿ ಕೊಲ್ಲಲಾಯಿತು. ಈ ಮೂಲಕ ಅವರು ಅಯತೊಲ್ಲಾ ಅಲಿ ಖಮೇನಿ ಮುಂತಾದ ದುಷ್ಟರೊಂದಿಗೆ ನರಕದಲ್ಲಿ ಸೇರಿಕೊಂಡರು” ಎಂದು ಕ್ಯಾಟ್ಜ್ ಹೇಳಿದ್ದರು.


ಆದರೆ, ಅದಾದ ಕೆಲವೇ ಗಂಟೆಗಳಲ್ಲಿ “ಇಸ್ಲಾಮಿಕ್ ಗಣರಾಜ್ಯದ ಹುತಾತ್ಮರಿಗೆ ಸಂತಾಪ ಮತ್ತು ಗೌರವ ಸಲ್ಲಿಸುತ್ತೇನೆ” ಎಂದು ಅಲಿ ಲಾರಿಜಾನಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಇಸ್ಲಾಮಿಕ್ ಗಣರಾಜ್ಯ ಇರಾನ್ ನೌಕಾಪಡೆಯ ವೀರ ಹುತಾತ್ಮರ ಅಂತ್ಯಕ್ರಿಯೆಯ ಸಮಾರಂಭದಲ್ಲಿ ಅವರ ನೆನಪು ಇರಾನಿನ ರಾಷ್ಟ್ರದ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಪ್ರಾಣತ್ಯಾಗ ಸಶಸ್ತ್ರ ಪಡೆಗಳ ರಚನೆಯೊಳಗೆ ಮುಂಬರುವ ವರ್ಷಗಳಲ್ಲಿ ಇಸ್ಲಾಮಿಕ್ ಗಣರಾಜ್ಯದ ಸೈನ್ಯದ ಅಡಿಪಾಯವನ್ನು ಬಲಪಡಿಸುತ್ತವೆ. ಈ ಹುತಾತ್ಮರಿಗೆ ಶಾಂತಿ ನೀಡಬೇಕೆಂದು ನಾನು ಸರ್ವಶಕ್ತ ದೇವರನ್ನು ಬೇಡಿಕೊಳ್ಳುತ್ತೇನೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಇರಾನ್​ನ ಕರಾವಳಿ ಮೇಲೆ ಬಾಂಬ್ ಹಾಕುತ್ತೇನೆ; ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಶಪಥ ಮಾಡಿದ ಟ್ರಂಪ್

ಈ ಪೋಸ್ಟ್ ಅನ್ನು ಲಾರಿಜಾನಿ ಮಾಡಿದ್ದಾರೋ, ಅವರು ಜೀವಂತವಾಗಿದ್ದಾರೋ ಅಥವಾ ಸತ್ತಿದ್ದಾರೋ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಒಂದುವೇಳೆ ಲಾರಿಜಾನಿಯ ಹತ್ಯೆ ನಿಜವಾಗಿದ್ದರೆ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ ಇದು ಇರಾನ್​ಗೆ ಆಗಿರುವ ಅತ್ಯಂತ ಹೆಚ್ಚಿನ ನಷ್ಟಗಳಲ್ಲಿ ಒಂದಾಗಲಿದೆ.

ಲಾರಿಜಾನಿ ಅವರನ್ನು ಶುಕ್ರವಾರ ಟೆಹ್ರಾನ್‌ನಲ್ಲಿ ಕುದ್ಸ್ ದಿನದ ರ್ಯಾಲಿಗಳ ಸಮಯದಲ್ಲಿ ಕೊನೆಯದಾಗಿ ನೋಡಲಾಗಿತ್ತು. ಅದಾದ ನಂತರ ಅವರು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅದೇ ದಿನ, ಲಾರಿಜಾನಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ ಸಂಬಂಧಿಸಿದ ಇತರರು ಸೇರಿದಂತೆ 10 ಇರಾನಿನ ಗುಪ್ತಚರ ಮತ್ತು ಮಿಲಿಟರಿ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕ 10 ಮಿಲಿಯನ್ ಯುಎಸ್ ಡಾಲರ್‌ಗಳವರೆಗೆ ಬಹುಮಾನವನ್ನು ಘೋಷಿಸಿತ್ತು. ಡೊನಾಲ್ಡ್ ಟ್ರಂಪ್ ಕ್ಷಮೆಯಾಚಿಸುವವರೆಗೆ ಇರಾನ್ ಗಲ್ಫ್ ದೇಶಗಳಲ್ಲಿನ ಅಮೆರಿಕದ ನೆಲೆಗಳ ಮೇಲಿನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಲಾರಿಜಾನಿ ಕಳೆದ ವಾರ ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:33 pm, Tue, 17 March 26

Follow Us