ರಾತ್ರೋರಾತ್ರಿ ಇರಾನ್ ಮೇಲೆ ಅಮೆರಿಕ ದಾಳಿ: ಮೂರು ಪರಮಾಣು ಕೇಂದ್ರಗಳು ಉಡೀಸ್!
US airstrikes on Iran: ಇಸ್ರೇಲ್ ಮತ್ತು ಇರಾನ್ ಸಂಘರ್ಷ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಪ್ರವೇಶಿಸಿದ್ದು, ತಡರಾತ್ರಿ ಇರಾನ್ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ಬಗ್ಗೆ ಟ್ವಿಟರ್ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇತ್ತ ಇರಾನ್ ಕೂಡ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಅಮೆರಿಕ, ಜೂನ್ 22: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ (Israel-Iran conflict) ಅಮೆರಿಕ ಎಂಟ್ರಿ ಕೊಟ್ಟಿದ್ದು, ತಡರಾತ್ರಿ ಇರಾನ್ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಾಹಿತಿ ನೀಡಿದ್ದಾರೆ. ಇತ್ತ ಇರಾನ್ ‘ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ’ ಎಂದು ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.
ತಮ್ಮ ಅಮೆರಿಕ ಸೇನೆಗೆ ಅಭಿನಂದನೆ ಸಲ್ಲಿಸಿದ ಟ್ರಂಪ್
ಜಗತ್ತಿನ ಅತ್ಯಂತ ಪ್ರಬಲ ಸೇನೆ, ಶಸ್ತ್ರಾಸ್ತ್ರಗಳನ್ನ ಹೊಂದಿರುವ ಅಮೆರಿಕ ಇದೀಗ ಇರಾನ್ ಮೇಲೆ ರಾತ್ರೋರಾತ್ರಿ ದಾಳಿ ಮಾಡುವ ಮೂಲಕ ಮೂರು ಪರಮಾಣು ಕೇಂದ್ರಗಳನ್ನು ಉಡೀಸ್ ಮಾಡಿದೆ. ಈ ಬಗ್ಗೆ ಸತ್ವಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ‘ಇರಾನ್ನ 3 ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಪಹಾನ್ ಮೇಲೆ ದಾಳಿ ಯಶಸ್ವಿಯಾಗಿದೆ. ಎಲ್ಲಾ ಯುದ್ಧ ವಿಮಾನಗಳು ಸುರಕ್ಷಿತವಾಗಿ ತಮ್ಮ ನೆಲೆಗೆ ಮರಳುತ್ತಿವೆ. ಈಗ ಯುದ್ಧ ವಿಮಾನಗಳು ಇರಾನಿನ ವಾಯುಪ್ರದೇಶ ತೊರೆಯುತ್ತಿವೆ. ಈಗ ಶಾಂತಿಯ ಸಮಯ ಎಂದು ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಟ್ವೀಟ್
— Donald J. Trump (@realDonaldTrump) June 21, 2025
ಇತ್ತ ಪರಮಾಣು ಕೇಂದ್ರ ಫೋರ್ಡೋ ಮೇಲಿನ ದಾಳಿಯನ್ನು ಇರಾನ್ನ ಸ್ಥಳೀಯ ಆಡಳಿತ ಕೋಮ್ ದೃಢಪಡಿಸಿದೆ. ಫೋರ್ಡೋ ಮೇಲೆ ಆರು ಅಮೆರಿಕನ್ ಬಾಂಬರ್‌ಗಳು ದಾಳಿ ಮಾಡಿವೆ. ನಟಾಂಜ್ ಮತ್ತು ಎಸ್ಪಹಾನ್ ಮೇಲೆ ಅಮೆರಿಕನ್ ಜಲಾಂತರ್ಗಾಮಿ ನೌಕೆಗಳು 30 ಟೊಮಾಹಾಕ್ ಕ್ಷಿಪಣಿಗಳೊಂದಿಗೆ ದಾಳಿ ಮಾಡಿದ್ದು, ಇರಾನ್‌ನಿಂದ 400 ಮೈಲುಗಳಷ್ಟು ದೂರದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ: ಭಾರತದಿಂದ ಬಚಾವಾದ ಖುಷಿಗೆ ಟ್ರಂಪ್ ಹೆಸರನ್ನು ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ಪಾಕಿಸ್ತಾನ
ಇರಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಪರಮಾಣು ಸೋರಿಕೆಯ ಯಾವುದೇ ಬೆದರಿಕೆ ಇಲ್ಲ ಎಂದು ಐಆರ್‌ಐಬಿ ಎಂಬ ಇರಾನ್ ಸರ್ಕಾರಿ ಚಾನೆಲ್ ಹೇಳಿದೆ.
ಡೊನಾಲ್ಡ್ ಟ್ರಂಪ್ ಭಾಷಣ
ಇನ್ನು ಇರಾನ್ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕ ವಾಯುನೆಲೆಯಲ್ಲಿ ಅಲರ್ಟ್ ಆಗಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 7.30ಕ್ಕೆ ದೇಶವನ್ನು ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡಲಿದ್ದಾರೆ. ಪರಮಾಣು ನೆಲೆಗಳ ಮೇಲಿನ ದಾಳಿ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 am, Sun, 22 June 25








