ಭಾರತದಿಂದ ಬಚಾವಾದ ಖುಷಿಗೆ ಟ್ರಂಪ್ ಹೆಸರನ್ನು ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ಪಾಕಿಸ್ತಾನ
ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಾಮನಿರ್ದೇಶನ ಮಾಡಿದೆ. ಭಾರತ-ಪಾಕಿಸ್ತಾನ ಸೇನಾ ಉದ್ವಿಗ್ನತೆಯ ಸಮಯದಲ್ಲಿ ಟ್ರಂಪ್ ನೆರವಾದರೆಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಭಾರತ ಟ್ರಂಪ್ ಮಧ್ಯಸ್ಥಿಕೆ ವದಂತಿಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ ಮತ್ತು ಪಾಕಿಸ್ತಾನದ ನೇರ ಮನವಿಯ ನಂತರವೇ ದಾಳಿ ನಿಲ್ಲಿಸಲಾಯಿತು ಎಂದು ಹೇಳಿದೆ.

ನವದೆಹಲಿ, ಜೂನ್ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ (Nobel Peace Prize) ಪಾಕಿಸ್ತಾನ (Pakistan) ನಾಮನಿರ್ದೇಶನ ಮಾಡಿದೆ. ಇತ್ತೀಚಿನ ಭಾರತ – ಪಾಕಿಸ್ತಾನ ಸೇನಾ ಉದ್ವಿಗ್ನತೆಯ ಸಮಯದಲ್ಲಿ ಟ್ರಂಪ್ ರಾಜತಾಂತ್ರಿಕ ನಡೆಯ ಮೂಲಕ ಕದನ ವಿರಾಮಕ್ಕೆ ಕಾರಣರಾದರು ಎಂದು ಪಾಕಿಸ್ತಾನ ಹೇಳಿಕೊಂಡಿದ್ದು, ಇದಕ್ಕಾಗಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದೆ. ಆದರೆ, ಭಾರತ – ಪಾಕಿಸ್ತಾನ ಸಂಘರ್ಷದಲ್ಲಿ ಮತ್ತು ಕದನ ವಿರಾಮದಲ್ಲಿ ಮೂರನೇಯವರ ಪಾತ್ರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಮಾತುಗಳಲ್ಲಿ ಈಗಾಗಲೇ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ದೂರವಾಣಿ ಮಾತುಕತೆ ವೇಳೆಯೂ ಮೋದಿ ಅದನ್ನೇ ಪುನರುಚ್ಚರಿಸಿದ್ದಾರೆ. ಪಾಕಿಸ್ತಾನ ನೇರವಾಗಿ ಮನವಿ ಮಾಡಿದ ನಂತರವೇ ದಾಳಿ ನಿಲ್ಲಿಸಲಾಯಿತು ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಟ್ರಂಪ್ ಹಳೇ ರಾಗವನ್ನೇ ಮುಂದುವರಿಸಿದ್ದರು.
ಮತ್ತೊಂದೆಡೆ, ಅಮೆರಿಕದ ಸಲಹೆಯ ನಂತರ ಪಾಕಿಸ್ತಾನವು ಭಾರತದ ಜತೆ ನೇರ ಮಾತುಕತೆ ಮಾಡಿ ದಾಳಿ ನಿಲ್ಲಿಸುವಂತೆ ಮನವಿ ಮಾಡಿತ್ತು ಎಂದೂ ಹೇಳಲಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯದಲ್ಲಿ, ‘2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರನ್ನು ಔಪಚಾರಿಕವಾಗಿ ನಾಮನಿರ್ದೇಶನ ಮಾಡಲು ಸರ್ಕಾರ ನಿರ್ಧರಿಸಿದೆ’ ಎಂದು ಪಾಕಿಸ್ತಾನವು ಎಕ್ಸ್ ಸಂದೇಶದಲ್ಲಿ ತಿಳಿಸಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ಟ್ರಂಪ್ ಶ್ವೇತಭವನದಲ್ಲಿ ಔತಣಕೂಟ ಏರ್ಪಡಿಸಿದ ಬೆನ್ನಲ್ಲೇ ಈ ನಾಮನಿರ್ದೇಶನದ ಘೋಷಣೆ ಹೊರಬಿದ್ದಿದೆ. ಟ್ರಂಫ್ ಹಾಗೂ ಮುನೀರ್ ನಡುವಣ ಸಭೆಯಲ್ಲಿ ನಡೆದ ಮಾತುಕತೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಮುನೀರ್ ಈಗಾಗಲೇ ಟ್ರಂಪ್ ಅವರ ನೊಬೆಲ್ ನಾಮನಿರ್ದೇಶನವನ್ನು ಬೆಂಬಲಿಸಿದ್ದರು.
ಗಮನಿಸಬೇಕಾದ ಅಂಶವೆಂದರೆ, ಕೆಲವು ಸಮಯದ ಹಿಂದಷ್ಟೇ ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, ಡೊನಾಲ್ಡ್ ಟ್ರಂಪ್ ಅವರ ನೊಬೆಲ್ ಬಯಕೆಯ ಬಗ್ಗೆ ಮಾತನಾಡಿದ್ದರು. ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ‘ಡೊನಾಲ್ಡ್ ಟ್ರಂಪ್ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದಿಲ್ಲ. ನೊಬೆಲ್ ಮೇಲಿನ ಅವರ ದುರಾಸೆಯಲ್ಲಿ, ಅವರು ಅಮೆರಿಕದ ಭದ್ರತೆಗೆ ಅಪಾಯವನ್ನು ಉಂಟುಮಾಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದರು. ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಔತಣಕೂಟಕ್ಕೆ ಕರೆಸಿದ ಬಗ್ಗೆಯೂ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ನೀಡುವುದಿಲ್ಲ, ಮತ್ತೆ ಕ್ರೆಡಿಟ್ ಪಡೆಯಲು ಮುಂದಾದ ಟ್ರಂಪ್
ಈ ಮಧ್ಯೆ ಮತ್ತದೇ ಹಳೆ ಚಾಳಿ ಮುಂದುವರಿಸಿರುವ ಟ್ರಂಪ್, ಪಾಕಿಸ್ತಾನ – ಭಾರತ ಯುದ್ಧ ಸ್ಥಗಿತವಾದದ್ದು ತಮ್ಮದೇ ಮಧ್ಯಸ್ಥಿಕೆಯಲ್ಲಿ. ಈ ಕೆಲಸಕ್ಕಾಗಿ ತಮಗೆ ಯಾರು ನೊಬೆಲ್ ಶಾಂತಿ ಪ್ರಶಸ್ತಿ ನೀಡುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ