
ಟೆಲ್ ಅವಿವ್, ಆಗಸ್ಟ್ 9: ಗಾಜಾದಲ್ಲಿ ಶಾಂತಿ ನೆಲಸುವಂತೆ ಮಾಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿರುವ 15 ಅಂಶಗಳ ಯೋಜನೆಯನ್ನು (Trump’s Gaza peace plan) ಇಸ್ರೇಲ್ ತಿರಸ್ಕರಿಸಿದೆ. ಹಮಾಸ್ ಸಂಪೂರ್ಣ ಶಸ್ತ್ರ ತ್ಯಜಿಸುವವರೆಗೂ ಗಾಜಾದಿಂದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಹಾಗೆಯೇ, ತನ್ನ ಸೈನಿಕರ ಎಲ್ಲಾ ರಜೆಗಳನ್ನು ರದ್ದುಗೊಳಿಸಿ ತೀವ್ರ ಕಟ್ಟೆಚ್ಚರ ವಹಿಸಿದೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಮತ್ತೊಮ್ಮೆ ಯುದ್ಧದ ಭೀತಿ ಎದುರಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಇರಾನ್ ಮೇಲಿನ ಹೊಸ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ.
ಸೈನಿಕರ ರಜೆ ರದ್ದು: ಇಸ್ರೇಲ್ ರಕ್ಷಣಾ ಪಡೆಗಳು (IDF) ತಮ್ಮ ಸೈನಿಕರು ಹಾಗೂ ಅಧಿಕಾರಿಗಳ ಎಲ್ಲಾ ರಜೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿವೆ. ಯಾವುದೇ ಕ್ಷಣದಲ್ಲಾದರೂ ಎದುರಾಗಬಹುದಾದ ತುರ್ತು ಪರಿಸ್ಥಿತಿಗೆ ಸಿದ್ಧವಾಗಿರಲು ಸೇನೆಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಮೊಜ್ತಬಾ ಖಮೇನಿ ಮೃತಪಟ್ಟರೆ ಯಾರಾಗಲಿದ್ದಾರೆ ಇರಾನ್ ಸುಪ್ರೀಂ ನಾಯಕ?
ನೆತನ್ಯಾಹು ಎಚ್ಚರಿಕೆ: ಅಮೆರಿಕವು ಇರಾನ್ ಜೊತೆ ರಾಜತಾಂತ್ರಿಕ ಸಂಧಾನಕ್ಕೆ ಯತ್ನಿಸುತ್ತಿದ್ದರೂ, ಇರಾನ್‌ನ ಪರಮಾಣು ಯೋಜನೆಗಳು ಹಾಗೂ ಸಶಸ್ತ್ರ ಗುಂಪುಗಳ ಚಟುವಟಿಕೆಗಳು ತಮ್ಮ ದೇಶದ ಭದ್ರತೆಗೆ ಬೆದರಿಕೆಯಾಗಿವೆ ಎಂದು ಇಸ್ರೇಲ್ ಭಾವಿಸಿದೆ. ಇರಾನ್ ಮೇಲಿನ ತೀವ್ರ ದಾಳಿಗೆ ಇಸ್ರೇಲ್ ಸಿದ್ಧವಾಗಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಅಮೆರಿಕವು ವಲಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಸಂಘರ್ಷ ಶಮನಗೊಳಿಸಲು ಪ್ರಯತ್ನಿಸುತ್ತಿದ್ದರೂ, ಇಸ್ರೇಲ್ ನಾಯಕತ್ವವು ಇರಾನ್‌ಗೆ ಕಟ್ಟುನಿಟ್ಟಿನ ನಿಯಮ ವಿಧಿಸಬೇಕು ಎಂದು ಪಟ್ಟು ಹಿಡಿದಿದೆ.
ಇದನ್ನೂ ಓದಿ: ರಷ್ಯಾದ ದಾಳಿಗೆ ಕೈವ್ನಲ್ಲಿ ಮಗು ಸೇರಿ ನಾಲ್ವರು ಬಲಿ
ಇರಾನ್ ಹಾಗೂ ಪ್ರಾಕ್ಸಿ ಗುಂಪುಗಳ ಭೀತಿ: ಇಸ್ರೇಲಿ ಪಡೆಗಳು ಕೇವಲ ಇರಾನ್ ಮಾತ್ರವಲ್ಲದೆ, ಲೆಬನಾನ್‌ನ ಹಿಜ್ಬುಲ್ಲಾ ಸೇರಿದಂತೆ ಇತರ ಪ್ರಾದೇಶಿಕ ಸಂಘಟನೆಗಳಿಂದ ಎದುರಾಗಬಹುದಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಯನ್ನು (Air Defence Systems) ಸಜ್ಜುಗೊಳಿಸಿವೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ