ನನ್ನ ಮತ್ತು ಬಿಲ್ ನಡುವೆ ಡಿವೋರ್ಸ್ ಗೆ ಕಾರಣವಾದ ಹಲವಾರು ಅಂಶಗಳಲ್ಲಿ ಸೆಕ್ಸ್ ಅಪರಾಧಿ ಜೆಫ್ರೀ ಎಪಸ್ಟೀನ್ ಕೂಡ ಒಬ್ಬನಾಗಿದ್ದ: ಮೆಲಿಂಡಾ
ಗೇಟ್ಸ್ ಪ್ರತಿಷ್ಠಾನದಲ್ಲಿ ಕೆಲಸ ಮುಂದುವರಿಸಿರುವ ಬಗ್ಗೆ ಮಾತಾಡಿರುವ ಅವರು, ಅದರಲ್ಲೇ ನನಗೆ ಸಾಮರ್ಥ್ಯಕ್ಕೆ ಮೀರಿದ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ನಮಗೆ ಪರಿಚಯವೇ ಇರದ ವಿಶ್ವದ ನಾನಾ ಭಾಗಗಳ ಜನರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಗುತ್ತದೆ, ಕೋವಿಡ್ ಅವಧಿಯಲ್ಲಿ ನಮ್ಮ ಕೆಲಸ ಸ್ವಲ್ಪ ಕುಂಠಿತಗೊಂಡಿದ್ದು ನಿಜ ಎಂದು ಹೇಳಿದ್ದಾರೆ.
ನವದೆಹಲಿ: ನಮಗೆಲ್ಲ ಗೊತ್ತಿರುವ ಸಂಗತಿಯೇ ಇದು. ಇಡೀ ಜಗತ್ತು ಮಾರಕ ಕೋವಿಡ್-19 ಎರಡನೇ ಅಲೆ ಉಂಟು ಮಾಡಿದ ಕೋಲಾಹಲದಿಂದ ಚೇತರಿಸಿಕೊಳ್ಳುವ ಹಂತದಲ್ಲಿರುವಾಗಲೇ ವಿಶ್ವದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ಬಿಲ್ ಗೇಟ್ಸ್ (Bill Gates) ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ (Melinda French Gates) ಅವರ ವಿಚ್ಛೇದನದ ಸುದ್ದಿ ಕೇಳಿ ಜನ ಸ್ತಂಬೀಭೂತರಾದರು. ಕುಬೇರ ದಂಪತಿ ಮೇ 2021 ರಲ್ಲಿ ತಮ್ಮ ಡಿವೋರ್ಸ್ (Divorce) ಸಂಗತಿಯನ್ನು ಬಹಿರಂಗಪಡಿಸಿದ್ದರು. ಉದ್ಯಮಲೋಕದ ಭಾರೀ ಕುಳಗಳು ಮತ್ತು ಔದಾರ್ಯತೆ (ದೇಣಿಗೆ ನೀಡುವುದರಲ್ಲಿ) ವಿಷಯದಲ್ಲಿ ಮಿಕ್ಕಿದ ಶ್ರೀಮಂತರನ್ನು ಮೀರಿಸುವ ಹಾಗೆ ತಮ್ಮನ್ನು ತೊಡಗಿಸಿಕೊಂಡಿದ್ದ ಮೆಲಿಂಡಾ ಮತ್ತು ಬಿಲ್ ಗೇಟ್ಸ್ 27 ವರ್ಷಗಳ ಕಾಲ ದಾಂಪತ್ಯ ನಡೆಸಿದ ನಂತರ ಬೇರ್ಪಟ್ಟರು.
ಬೇರೆಯಾದ ನಂತರ ಇವರಿಬ್ಬರ ಬದುಕಿನ ಯಾತ್ರೆ ಸುಗುಮವಾಗೇನೂ ಸಾಗಿಲ್ಲ. ಅಷ್ಟು ವರ್ಷಗಳ ಕಾಲ ಸುಖೀ ದಾಂಪತ್ಯ ಮತ್ತು ಜಗತ್ತೇ ನಿಬ್ಬೆರಗಾಗುವಂತೆ ತಮ್ಮ ಉದ್ಯಮ ಬೆಳಿಸಿದ ನಂತರ ಪರಸ್ಪರ ದೂರಾವಾಗಿ ಬದುಕುವುದು ಸಹಜವಾಗಿ ಕಷ್ಟವೇ. ಇತ್ತೀಚಿಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮೆಲಿಂಡಾ ಅವರು ಡಿವೋರ್ಸ್ ನಂತರದ ಬದುಕಿನ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.
‘ಕೋವಿಡ್ ನಿಂದ ನನಗಾದ ಒಂದು ವಿಚಿತ್ರ ಪ್ರಯೋಜನವೆಂದರೆ ನಾನು ಅಂದುಕೊಂಡಿದ್ದನ್ನು ಮಾಡಲು ಅವಶ್ಯವಿದ್ದ ಖಾಸಗಿ ಸಮಯವನ್ನು ಒದಗಿಸಿದ್ದು. ವಿಚ್ಛೇದನ ಹಲವಾರು ವಿಧಗಳಲ್ಲಿ ಯಾತನಾಮಯ ಅನುಭವ, ಆದರೆ ನೋವಿನಿಂದ ಪಾರಾಗಲು ಒಂಟಿತನ ನನಗೆ ಸಹಾಯ ಮಾಡಿತು,’ ಎಂದು ಮೆಲಿಂಡಾ ಫಾರ್ಚೂನ್ ಬಿಸಿನೆಸ್ ಪತ್ರಿಕೆಗೆ ಹೇಳಿದ್ದಾರೆ.
ಮೀಟಿಂಗ್ಗಳಿಗಿಂತ ಮೊದಲು ಮನಸಾರೆ ಅಳುತ್ತಿದ್ದೆ!
ಡಿವೋರ್ಸ್ ನಂತರ ತಮ್ಮ ಮಾಜಿ ಪತಿ ಮತ್ತು ಅವರ ಸಹೋದ್ಯೋಗಿಗಳೊಂದಿಗೆ ನಡೆಯುತ್ತಿದ್ದ ವರ್ಚ್ಯೂಯಲ್ ಮೀಟಿಂಗ್ ಗಳಲ್ಲಿ ಭಾಗಿಯಾಗುವ ಮೊದಲು ಅಳುತ್ತಿದ್ದೆ ಎಂದು ಹೇಳಿರುವ ಅವರು ತಾನು ಬೆಳೆದು ಬಂದ ಪರಿಸರ, ಪೋಷಕರಿಂದ ಸಿಕ್ಕ ಸಂಸ್ಕಾರ ತನ್ನ ಗರಿಷ್ಟ ಸಾಮರ್ಥ್ಯ ಪ್ರದರ್ಶಿಸಲು ನೆರವಾಯಿತು ಅಂತ ಮೆಲಿಂಡಾ ಹೇಳಿದ್ದಾರೆ.
ವೈಯಕ್ತಿಕ ನೋವು ಹತಾಷೆ ಮತ್ತು ವೃತ್ತಿಬದುಕಿನೆಡೆಯ ಬದ್ಧತೆಯ ತೊಳಲಾಟಗಳ ನಡುವೆ ತಾನು ದೂರಾವಾಗುತ್ತಿರುವ ವ್ಯಕ್ತಿಯೊಂದಿಗೆ ಹೇಗೆ ಕೆಲಸ ಮಾಡಿದೆ ಅನ್ನುವುದನ್ನು ಮೆಲಿಂಡಾ ಸಂದರ್ಶನದಲ್ಲಿ ವಿವರಿಸಿದ್ದಾರೆ.
‘ಬೆಳಗ್ಗೆ 9 ಗಂಟೆಯವರೆಗೆ ನಾನು ಅಳುತ್ತಿದ್ದರೂ 10 ಗಂಟೆಯಷ್ಟೊತ್ತಿಗೆ ನನ್ನಿಂದ ದೂರವಾಗುತ್ತಿದ್ದ ವ್ಯಕ್ತಿಯ ಎದುರು ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಹಾಜರಾಗಬೇಕಿತ್ತು. ನನ್ನ ದುಃಖವನ್ನೆಲ್ಲ ಮೆಟ್ಟಿ ನಿಂತು ಮೀಟಿಂಗ್ ಗಳಲ್ಲಿ ಭಾಗಿಯಾಗುತ್ತಿದ್ದೆ,’ ಅಂತ ಮಾಜಿ ಕಂಪ್ಯೂಟರ್ ಸೈಂಟಿಸ್ಟ್ ಮತ್ತು ಮೈಕ್ರೊಸಾಫ್ಟ್ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಮೆಲಿಂಡಾ ಹೇಳಿದ್ದಾರೆ.
ಇದೆಲ್ಲ ತಾನು ಲೀಡರ್ ಅಂತ ಗುರುತಿಸಿಕೊಳ್ಳಲು ಮತ್ತು ತಾನು ಮಾಡಬೇಕಾದ ಕೆಲಸಗಳನ್ನು ಪೂರೈಸಲು ನೆರವಾಯಿತು ಅಂತ ಅವರು ಹೇಳಿದ್ದಾರೆ.
ಗೇಟ್ಸ್ ಪ್ರತಿಷ್ಠಾನದಲ್ಲಿ ಕೆಲಸ ಮುಂದುವರಿಸಿರುವ ಬಗ್ಗೆ ಮಾತಾಡಿರುವ ಅವರು, ಅದರಲ್ಲೇ ನನಗೆ ಸಾಮರ್ಥ್ಯಕ್ಕೆ ಮೀರಿದ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ನಮಗೆ ಪರಿಚಯವೇ ಇರದ ವಿಶ್ವದ ನಾನಾ ಭಾಗಗಳ ಜನರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಗುತ್ತದೆ, ಕೋವಿಡ್ ಅವಧಿಯಲ್ಲಿ ನಮ್ಮ ಕೆಲಸ ಸ್ವಲ್ಪ ಕುಂಠಿತಗೊಂಡಿದ್ದು ನಿಜ ಎಂದು ಹೇಳಿದ್ದಾರೆ.
ತಮ್ಮ ನಡುವೆ ಯಾವತ್ತೂ ವಿಚ್ಛೇದನದಂಥ ಸಂಗತಿ ತಲೆದೋರದು ಅಂತ ಭಾವಿಸಿದ್ದೆ ಎಂದು ಹೇಳುವ 58-ವರ್ಷ-ವಯಸ್ಸಿನ ಮೆಲಿಂಡಾ, ‘ದುರದೃಷ್ಟವಶಾತ್, ನನ್ನ ಹಾದಿ ಬೇರೆ ಮಾಡಿಕೊಳ್ಳಬೇಕಿದೆ ಅಂತ ನನಗನ್ನಿಸಿತು, ನಮ್ಮ ಡಿವೋರ್ಸ್ ಜನರನ್ನು ಆಘಾತಕ್ಕೊಳಪಡಿಸುತ್ತದೆ ಅನ್ನೋದು ನಮಗೆ ಗೊತ್ತಿತ್ತು, ಅದರ ಬಗ್ಗೆ ನನಗೆ ಕೆಟ್ಟದೆನಿಸಿದ್ದೂ ನಿಜ,’ ಎಂದು ಹೇಳಿದ್ದಾರೆ.
‘ನನ್ನನ್ನು ನಾನು ಅಥವಾ ನನ್ನ ನಿರ್ಧಾರವನ್ನು ನಾನೀಗ ಪ್ರಶ್ನೆ ಮಾಡಿಕೊಳ್ಳುವುದಿಲ್ಲ. ಅಂಥ ಸಾಧ್ಯತೆಯೇ ಇಲ್ಲ. ನಮ್ಮ ದಾಂಪತ್ಯಕ್ಕಾಗಿ ನನ್ನೆದೆಲ್ಲವನ್ನು ನೀಡಿದೆ. ನಮ್ಮ ನಿಶ್ಚಿತಾರ್ಥ ನಡೆದ ದಿನದಿಂದ ಹಿಡಿದು ನಾನು ಗೇಟ್ಸ್ ಮನೆಯಿಂದ ಹೊರಬೀಳುವರೆಗೆ ನಮ್ಮ ದಾಂಪತ್ಯಕ್ಕೆ ಬದ್ಧಳಾಗಿದ್ದೆ,’ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಸೆಕ್ಸ್ ಅಪರಾಧಿ ಜೆಫ್ರೀ ಎಪಸ್ಟೀನ್ ತಮ್ಮ ದಾಂಪತ್ಯ ಮುರಿದು ಬೀಳಲು ಒಂದು ಕಾರಣವಾಗಿದ್ದ ಎನ್ನುವುದನ್ನು ಮೆಲಿಂಡಾ ಬಹಿರಂಗಪಡಿಸಿದ್ದಾರೆ. ತಮ್ಮ ವಿಚ್ಛೇದನಕ್ಕೆ ಕಾರಣವಾದ ‘ಹಲವಾರು ಅಂಶಗಳಲ್ಲಿ’ ಅವನು ಕೂಡ ಒಂದು, ಎಂದು ಮೆಲಿಂಡಾ ಹೇಳಿದ್ದಾರೆ.
‘ನಾನು ಹೇಳಿದ ಹಾಗೆ ಡಿವೋರ್ಸ್ ಕಾರಣವಾದ ಹಲವಾರು ಕಾರಣಗಳಲ್ಲಿ ಇದೂ ಒಂದು,’ ಎಂದು ಹೇಳಿರುವ ಅವರು; ಬಿಲ್, ಎಪಸ್ಟೀನ್ ನನ್ನು ಭೇಟಿಯಾದ ಬಗ್ಗೆ ಮಾತಾಡುತ್ತಾ, ‘ಆದರೆ ಬಿಲ್, ಎಪಸ್ಟೀನ್ ನನ್ನು ಭೇಟಿ ಮಾಡಿದ್ದು ನನಗೆ ಇಷ್ಟವಾಗಲಿಲ್ಲ,’ ಅಂತ ಹೇಳಿದ್ದಾರೆ.