US President Election: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವುದಾಗಿ ಘೋಷಿಸಿದ ಜೋ ಬಿಡೆನ್
ಜೋ ಬಿಡೆನ್ ಔಪಚಾರಿಕವಾಗಿ 2024ರ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸದ್ದು, ತಾನು ಈಗಾಗಲೇ ಪ್ರಾರಂಭಿಸಿದ್ದನ್ನು ಮುಗಿಸಲು ಇನ್ನೂ ನಾಲ್ಕು ವರ್ಷಗಳ ಕಾಲಾವಕಾಶ ನೀಡುವಂತೆ ಅಮೆರಿಕನ್ನರಲ್ಲಿ ಕೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (US President Joe Biden)ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಔಪಚಾರಿಕವಾಗಿ ಅವರು 2024ರ ಚುನಾವಣೆಯ (US President Election) ಪ್ರಚಾರವನ್ನು ಪ್ರಾರಂಭಿಸಿದ್ದು, ತಾನು ಈಗಾಗಲೇ ಪ್ರಾರಂಭಿಸಿದ್ದನ್ನು ಮುಗಿಸಲು ಇನ್ನೂ ನಾಲ್ಕು ವರ್ಷಗಳ ಕಾಲಾವಕಾಶ ನೀಡುವಂತೆ ಅಮೆರಿಕನ್ನರಲ್ಲಿ ಕೇಳಿದ್ದಾರೆ. 2019 ರಲ್ಲಿ ರಾಜಕೀಯಕ್ಕೆ ಮರಳಿದ ನಾಲ್ಕನೇ ವಾರ್ಷಿಕೋತ್ಸವದಂದೇ ಅವರು ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಕೂಡಾ ಮತ್ತೆ ಸ್ಪರ್ಧಿಸಲಿದ್ದು, ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಜೋ ಬಿಡೆನ್ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರೂ 80 ವರ್ಷದ ಇವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಅಮೆರಿಕನ್ನರು ಸಿದ್ಧರಿದ್ದಾರೆಯೇ ಎಂಬುದು ಕುತೂಹಲದ ಸಂಗತಿ ಆಗಿದೆ.
ಬಿಡೆನ್ ಅವರ ಹೊಸ ಪ್ರಚಾರ ತಂಡವು ಬಿಡುಗಡೆ ಮಾಡಿದ ವಿಡಿಯೊದಲ್ಲಿ ಅವರು ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಅವರು ಅಮೆರಿಕನ್ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮ ಕೆಲಸ ಎಂದು ಘೋಷಿಸಿದರು. ಇದು ಜನವರಿ 6, 2021 ರಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಿಂದ ಯುಎಸ್ ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಚಿತ್ರಣದೊಂದಿಗೆ ಈ ವಿಡಿಯೊ ಆರಂಭವಾಗುತ್ತದೆ.
ನಾಲ್ಕು ವರ್ಷಗಳ ಹಿಂದೆ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ, ನಾವು ಅಮೆರಿಕದ ಆತ್ಮಕ್ಕಾಗಿ ಹೋರಾಡುತ್ತಿದ್ದೇವೆ ಮತ್ತು ನಾವು ಈಗಲೂ ಹೋರಾಡುತ್ತಿದ್ದೇವೆ ಎಂದು ಹೇಳಿದ್ದೆ . ಇದು ತೃಪ್ತಿಪಡುವ ಸಮಯವಲ್ಲ. ಹೀಗಾಗಿ ಮತ್ತೊಮ್ಮ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಕೆಲಸವನ್ನು ಮುಗಿಸೋಣ. ನಾವು ಮಾಡಬಹುದು ಎಂದು ನನಗೆ ತಿಳಿದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Operation Kaveri: ಆಪರೇಷನ್ ಕಾವೇರಿ; ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಆರಂಭ
ರಿಪಬ್ಲಿಕನ್ ಪಕ್ಷವನ್ನು ಅಮೆರಿಕದ ಸ್ವಾತಂತ್ರ್ಯಕ್ಕೆ ಬೆದರಿಕೆ ಎಂದು ಬಿಡೆನ್ ಹೇಳಿದ್ದಾರೆ. MAGA ಬಗ್ಗೆ ಟೀಕಿಸಿದ ಅವರು ಮಹಿಳೆಯರ ಆರೋಗ್ಯ ರಕ್ಷಣೆ, ಸಾಮಾಜಿಕ ಭದ್ರತೆಯನ್ನು ಕಡಿತಗೊಳಿಸುವ ಮತ್ತು ಪುಸ್ತಕಗಳನ್ನು ನಿಷೇಧಿಸುವ ಪ್ರಯತ್ನಗಳ ವಿರುದ್ಧ ಹೋರಾಡುವುದಾಗಿ ಅವರು ಪ್ರತಿಜ್ಞೆ ಮಾಡಿದರು. MAGA ಎಂಬುದು ಟ್ರಂಪ್ ಅವರ “ಮೇಕ್ ಅಮೇರಿಕಾ ಗ್ರೇಟ್ ಎಗೇನ್” ರಾಜಕೀಯ ಘೋಷಣೆಯ ಸಂಕ್ಷಿಪ್ತ ರೂಪವಾಗಿದೆ.ನವೆಂಬರ್ 2024 ರ ಚುನಾವಣೆಯಲ್ಲಿ ಬಿಡೆನ್ ಎದುರಾಳಿಯಾಗಿ ರಿಪಬ್ಲಿಕನ್ ಪಕ್ಷದ ಸ್ಪರ್ಧಿಯಾಗಿ ಟ್ರಂಪ್ ಸ್ಪರ್ಧಿಸುವ ಸಾಧ್ಯತೆ ಇದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Tue, 25 April 23