ಟೊರಾಂಟೋ, ಏಪ್ರಿಲ್ 29: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ (Justin Trudeau) ಅವರು ಖಲ್ಸಾ ದಿನದ ಅಂಗವಾಗಿ ಭಾನುವಾರ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳು (Pakistan Zindabad) ಮೊಳಗಿವೆ. ಅಲ್ಲದೇ ಕೆನಡಾದಲ್ಲಿರುವ ಎಂಟು ಲಕ್ಷ ಸಿಖ್ ಧರ್ಮೀಯ ನಾಗರಿಕರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ತಮ್ಮ ಸರ್ಕಾರ ರಕ್ಷಿಸಲು ಸದಾ ಬದ್ಧವಾಗಿದೆ ಎಂದು ಕೆನಡಾ ಪ್ರಧಾನಿಗಳು ಭರವಸೆ ನೀಡಿದ್ದಾರೆ. ‘ಕೆನಡಾದಲ್ಲಿರುವ ಸಿಖ್ ಸಮುದಾಯದವರ ಕಥೆ ಕೆನಡಾದ ಕಥೆಯೇ ಆಗಿದೆ. ಈ ದೇಶದಲ್ಲಿರುವ ಎಂಟು ಲಕ್ಷ ಕೆನಡಿಯನ್ ಸಿಖ್ಖರ ಹಕ್ಕು ಮತ್ತು ಸ್ವಾತಂತ್ರ್ಯ ರಕ್ಷಿಸಲು ಸದಾ ನಾವಿದ್ದೇವೆ. ದ್ವೇಷ ಮತ್ತು ತಾರತಮ್ಯತೆ ವಿರುದ್ಧ ನಿಮ್ಮ ಸಮುದಾಯವನ್ನು ನಾವು ಸದಾ ರಕ್ಷಿಸುತ್ತೇವೆ,’ ಎಂದು ಜಸ್ಟಿನ್ ಟ್ರೂಡೋ ಹೇಳಿದ್ದಾರೆ.
‘ನಿಮ್ಮ ಧರ್ಮವನ್ನು ಯಾವ ಭಯ ಇಲ್ಲದೇ ಮುಕ್ತವಾಗಿ ಆಚರಿಸುವ ಹಕ್ಕು ನಿಮಗಿದೆ. ಕೆನಡಾ ಸಂವಿಧಾನದಲ್ಲಿ ಈ ಮೂಲಭೂತ ಹಕ್ಕಿನ ಖಾತ್ರಿ ಇದೆ. ನಿಮ್ಮ ಹಕ್ಕು ಮತ್ತು ಸ್ವಾತಂತ್ರ್ಯದ ರಕ್ಷಣೆಗೆ ನಾವು ಸದಾ ನಿಲ್ಲುತ್ತೇವೆ’ ಎಂದು ಹೇಳಿದ ಟ್ರೂಡೋ, ಗುರುದ್ವಾರ ಸೇರಿದಂತೆ ಧಾರ್ಮಿಕ ಕೇಂದ್ರ, ಕಮ್ಯೂನಿಟಿ ಸೆಂಟರ್ಗಳಲ್ಲಿ ಭದ್ರತೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ಸಿದ್ದವಾಗುತ್ತಿದೆ ವಿಶ್ವದಲ್ಲೇ ಅತಿದೊಡ್ಡ ಏರ್ಪೋರ್ಟ್; 400 ಗೇಟ್, 5 ರನ್ವೇ ಇರುವ ಟರ್ಮಿನಲ್ನ ವಿಶೇಷತೆಗಳು ಹಲವು
ನಿನ್ನೆ ವೈಶಾಖಿ ದಿನ ಖಲ್ಸಾ ದಿನವಾಗಿ ಕೆನಡಾದಲ್ಲಿ ಆಚರಿಸಲಾಗುತ್ತಿದೆ. ಭಾರತದಲ್ಲಿ ಖಲ್ಸಾ ಚಳವಳಿ ಮತ್ತು ಖಲಿಸ್ತಾನ್ ಹೋರಾಟವನ್ನು ನಿಷೇಧಿಸಲಾಗಿದೆ. ಸಿಖ್ಖರು ಸಾಕಷ್ಟು ಸಂಖ್ಯೆಯಲ್ಲಿರುವ ಕೆನಡಾದಲ್ಲಿ ಖಲಿಸ್ತಾನ್ ಪರ ಹೋರಾಟಗಾರರು ಸಕ್ರಿಯವಾಗಿದ್ದಾರೆ. ಅಲ್ಲಿ ಖಲಿಸ್ತಾನ್ ಪರ ಹೋರಾಟ ಮತ್ತು ಭಾರತ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಕೆಲ ವರದಿಗಳ ಪ್ರಕಾರ ಕೆನಡಾ ಸರ್ಕಾರ ಕೂಡ ಈ ಶಕ್ತಿಗಳಿಗೆ ಪ್ರಚೋದನೆ ನೀಡುತ್ತವೆ ಎನ್ನಲಾಗಿದೆ.
ನಿನ್ನೆ ನಡೆದ ಖಲ್ಸಾ ದಿನದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಕೆನಡಾ ಪ್ರಧಾನಿ ವೇದಿಕೆ ಏರಲು ಶುರು ಮಾಡುತ್ತಿರುವಂತೆಯೇ ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಲು ಆರಂಭಿಸಿದವು. ಅವರು ಭಾಷಣ ಆರಂಭಿಸುವವಷ್ಟರಲ್ಲಿ ಘೋಷಣೆಗಳು ತಾರಕಕ್ಕೇರಿದವು.
ವೈಶಾಖಿ ದಿನವನ್ನು ಸಿಖ್ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಅದೇ ದಿನ ಖಲ್ಸಾ ದಿನವೂ ಹೌದು. ಟೊರಾಂಟೋದಲ್ಲಿ ನಿನ್ನೆ ಭಾನುವಾರ ನಡೆದ ಖಲ್ಸಾ ದಿನ ಕಾರ್ಯಕ್ರಮಕ್ಕೆ ಎಂಟು ಲಕ್ಷ ಸಮೀಪದಷ್ಟು ಸಿಖ್ ಧರ್ಮಿಯರು ಕೆನಡಾದ ವಿವಿಧೆಡೆ ಹೋಗಿ ಸೇರಿದ್ದರು. ಕೆನಡಾ ಕಂಡ ಅತಿದೊಡ್ಡ ಸಭೆಗಳಲ್ಲಿ ಅದೂ ಒಂದು.
ಇದನ್ನೂ ಓದಿ: ಅಮೆರಿಕ: ಭೀಕರ ರಸ್ತೆ ಅಪಘಾತ; ಮೂವರು ಭಾರತೀಯರು ಸಾವು
ನಿಮ್ಮ ಪ್ರೀತಿಪಾತ್ರರನ್ನು ಹೆಚ್ಚು ಬಾರಿ ನೋಡಲು ಬಯಸುತ್ತೀರಿ ಎಂಬುದು ಗೊತ್ತು. ಭಾರತ ಮತ್ತು ಕೆನಡಾ ಮಧ್ಯೆ ಫ್ಲೈಟ್ ಸಂಖ್ಯೆ ಮತ್ತು ಮಾರ್ಗಗಳ ಸಂಖ್ಯೆ ಹೆಚ್ಚಿಸಲು ಹೊಸ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಕೆನಡಾ ಪ್ರಧಾನಿ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ