ಶ್ರೀಲಂಕಾ ಬಿಕ್ಕಟ್ಟು: ಪ್ರತಿಭಟನೆಕಾರರ ಕ್ರಮವನ್ನು ಲೆಜೆಂಡರಿ ಕ್ರಿಕೆಟರ್​ಗಳಾದ ಸಂಗಕ್ಕಾರ ಮತ್ತು ಜಯಸೂರ್ಯ ಸಮರ್ಥಿಸಿದರು

ಅವರು ಪೋಸ್ಟ್ ಮಾಡಿರುವ ಕ್ಲಿಪ್​ನಲ್ಲಿ ಅನೇಕ ಸಾವಿರ ಜನ ತಮ್ಮ ಕೈಗಳಲ್ಲಿ ದೇಶದ ಬಾವುಟವನ್ನು ಬೀಸುತ್ತಿರುವ ದೃಶ್ಯವನ್ನು ನೋಡಬಹುದು. ಧ್ವನಿವರ್ಧಕ ಮೂಲಕ ಮಾತಾಡುತ್ತಿರುವ ವ್ಯಕ್ತಿಯೊಬ್ಬನ ಮಾತುಗಳನ್ನು ಅವರು ಆಲಿಸುತ್ತಿದ್ದಾರೆ.

ಶ್ರೀಲಂಕಾ ಬಿಕ್ಕಟ್ಟು: ಪ್ರತಿಭಟನೆಕಾರರ ಕ್ರಮವನ್ನು ಲೆಜೆಂಡರಿ ಕ್ರಿಕೆಟರ್​ಗಳಾದ ಸಂಗಕ್ಕಾರ ಮತ್ತು ಜಯಸೂರ್ಯ ಸಮರ್ಥಿಸಿದರು
ಸನತ್ ಜಯಸೂರ್ಯ ಮತ್ತು ಕುಮಾರ ಸಂಗಕ್ಕಾರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 7:13 PM

New Delhi: ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯೆದ್ದಿರುವ ಶ್ರೀಲಂಕಾದಲ್ಲಿ ತೀವ್ರ ಸ್ವರೂಪ ಸಂಕಷ್ಟ ಎದುರಿಸುತ್ತಿರುವ ಅಲ್ಲಿನ ಜನ ಶನಿವಾರ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದನ್ನು ದ್ವೀಪರಾಷ್ಟ್ರದ ಬ್ಯಾಟಿಂಗ್ ದಿಗ್ಗಜ (legendary batter) ಮತ್ತು ರಾಷ್ಟ್ರೀಯ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ (Kumara Sangakkara) ಪ್ರತಿಭಟನೆಕಾರರು ಮಾಡಿರುವುದನ್ನು ಸಮರ್ಥಿಸಿದ್ದಾರೆ. ಮೂರು ಸೆಕೆಂಡಗಳ ವಿಡಿಯೋ ಕ್ಲಿಪ್ ಅನ್ನು ಟ್ವೀಟ್ ಮಾಡಿರುವ ಸಂಗಕ್ಕಾರ, ‘ನಮ್ಮ ಭವಿಷ್ಯಕ್ಕೆ ಇದರ ಅವಶ್ಯಕತೆಯಿದೆ’ ಎಂದಿದ್ದಾರೆ.

ಅವರು ಪೋಸ್ಟ್ ಮಾಡಿರುವ ಕ್ಲಿಪ್​ನಲ್ಲಿ ಅನೇಕ ಸಾವಿರ ಜನ ತಮ್ಮ ಕೈಗಳಲ್ಲಿ ದೇಶದ ಬಾವುಟವನ್ನು ಬೀಸುತ್ತಿರುವ ದೃಶ್ಯವನ್ನು ನೋಡಬಹುದು. ಧ್ವನಿವರ್ಧಕ ಮೂಲಕ ಮಾತಾಡುತ್ತಿರುವ ವ್ಯಕ್ತಿಯೊಬ್ಬನ ಮಾತುಗಳನ್ನು ಅವರು ಆಲಿಸುತ್ತಿದ್ದಾರೆ. ರಾಜಪಕ್ಸ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಕಳೆದ ಕೆಲವು ತಿಂಗಳುಗಳಿಂದ ಆಗ್ರಹಿಸುತ್ತಿರುವ ಪ್ರತಿಭಟನೆಕಾರರು ಅವರು ಹಾಗೆ ಮಾಡದ ಕಾರಣ ಶನಿವಾರ ಅವರ ನಿವಾಸದೊಳಗೆ ನುಗ್ಗಿದರು.

ಆ ದೇಶದ ಮತ್ತೊಬ್ಬ ಕ್ರಿಕೆಟರ್ ಮತ್ತು ತಾವಾಡುತ್ತಿದ್ದ ದಿನಗಳಲ್ಲಿ ಸ್ಫೋಟಕ ಬ್ಯಾಟರ್ ಅನಿಸಿಕೊಂಡಿದ್ದ ಸನತ್ ಜಯಸೂರ್ಯ ಸಹ ಪ್ರತಿಭಟನೆಕಾರರನ್ನು ಬೆಂಬಲಿಸಿದ್ದಾರೆ. ಅಧ್ಯಕ್ಷ ರಾಜಪಕ್ಸರನ್ನು ಸನತ್, ‘ವಿಫಲ ನಾಯಕ’ ಎಂದು ಬಣ್ಣಿಸಿದ್ದಾರೆ.

‘ನನ್ನಿಡೀ ಬದುಕಿನಲ್ಲಿ ದೇಶದ ಜನ ಕೇವಲ ಒಂದು ಗುರಿಯೊಂದಿಗೆ ಹೀಗೆ ಒಗ್ಗಟ್ಟಾಗಿದ್ದನ್ನು ಯಾವತ್ತೂ ನೋಡಿರಲಿಲ್ಲ. ಅವರ ಗುರಿ ವಿಫಲ ನಾಯಕನನ್ನು ಅಧ್ಯಕ್ಷನ ಸ್ಥಾನದಿಂದ ಕಿತ್ತೊಗೆಯುವುದಾಗಿದೆ. ನಿಮ್ಮ ಅಧಿಕೃತ ನಿವಾಸದ ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ, ಶಾಂತರೀತಿಯಿಂದ ಕಳಚಿಕೊಳ್ಳಿ’ ಎಂದು ಸನತ್ #GoHomeGota ಹ್ಯಾಷ್ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಪ್ರತಿಭಟನೆಕಾರರು ಶನಿವಾರ ನಡೆಸುವ ಱಲಿ ನಿಯಂತ್ರಣಕ್ಕೆ ಸಿಗಲ್ಲಿಕ್ಕಿಲ ಅಂತ ಶುಕ್ರವಾರ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬಳಿಕ ರಾಜಪಕ್ಸ ಅವರನ್ನು ಸೇನಾ ಹೆಡ್ ಕ್ವಾರ್ಟರ್ಸ್ಗೆ ಸ್ಥಳಾಂತರಿಸಲಾಯಿತು. ಶನಿವಾರ ನಡೆದ ರ್ಯಾಲಿಯನ್ನು ಕಾನೂನುಬಾಹಿರ ಅಂತ ತೀರ್ಪು ನೀಡಿ ಅದನ್ನು ಬಹಿಷ್ಕರಿಸಲು ಆದೇಶ ನೀಡಬೇಕೆಂದು ಶುಕ್ರವಾರ ಪೊಲೀಸರು ಮಾಡಿದ ಮನವಿಯನ್ನು ಮೂರು ನ್ಯಾಯಾಧೀಶರ ಪೀಠವೊಂದು ತಿರಸ್ಕರಿಸಿತು.

ಬಸ್ಸು, ಲಾರಿ ಮತ್ತು ಟ್ರೇನುಗಳಲ್ಲಿ ಕೊಲಂಬೋಗೆ ಆಗಮಿಸಿದ ಪ್ರತಿಭಟನೆಕಾರರು ಶನಿವಾರ ಬೆಳಗ್ಗೆ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ಗಳನ್ನು ತಳ್ಳಿ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದರು. ಗಮ್ಮತ್ತಿನ ಸಂಗತಿಯೆಂದರೆ, ಪ್ರತಿಭಟನೆಕಾರರೊಂದಿಗೆ ಹಲವಾರು ಮಿಲಿಟರಿ ಸಿಬ್ಬಂದಿ ಕೂಡ ಕೈ ಜೋಡಿಸಿದ್ದು ಅಧ್ಯಕ್ಷ ರಾಜಪಕ್ಸ ಅವರ ರಾಜೀನಾಮೆಗಾಗಿ ಒತ್ತಾಯಿಸುತ್ತಿದ್ದಾರೆ.

ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ್ರತಿಭಟನೆಕಾರರು ಸ್ವಿಮ್ಮಿಂಗ್ ಪೂಲ್ ಬಳಿ ಕಂಡರಲ್ಲದೆ ಅಡುಗೆ ಕೋಣೆಗೆ ನುಗ್ಗಿ ಪದಾರ್ಥಗಳನ್ನು ಬೇಯಿಸಿಕೊಂಡು ತಿಂದರು.

ಒಂದು ಪಕ್ಷ ರಾಜಪಕ್ಸ ರಾಜಿನಾಮೆ ಸಲ್ಲಿಸಿದರೆ ಲಂಕಾ ಅಧ್ಯಕ್ಷನ ಸ್ಥಾನವನ್ನು ವಹಿಸಿಕೊಳ್ಳಬಹುದಾದ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ ಸದ್ಯದ ರಾಜಕೀಯ ಸ್ಥಿತಿಗೆ ಒಂದು ಶೀಘ್ರ ಪರಿಹಾರ ಕಂಡುಕೊಳ್ಳಲು ತುರ್ತು ಸಂಪುಟ ಸಭೆಯನ್ನು ಕರೆದರು.

ಇದನ್ನೂ ಓದಿ:   Sri Lanka Crisis: ಶ್ರೀಲಂಕಾ ಅಧ್ಯಕ್ಷ ಪರಾರಿ; ಸರ್ಕಾರಿ ಬಂಗಲೆಗೆ ನುಗ್ಗಿ, ಸ್ವಿಮಿಂಗ್​ ಪೂಲ್​ಗೆ ಜಿಗಿದ ಜನರು