
ಪಾಕಿಸ್ತಾನ, ಅಕ್ಟೋಬರ್ 14: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹಾಡಹಗಲೇ ನಡೆದಿರುವಂತೆ ಕಾಣುವ ಗುಂಡಿನ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಇಮ್ರಾನ್ ಎಂದು ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಹೇಳಿಕೊಂಡಿವೆ. ಆದರೆ, ಈ ಮಾಹಿತಿ ಇನ್ನೂ ದೃಢಪಟ್ಟಿಲ್ಲ. ಬೈಕ್ ಸವಾರನೊಬ್ಬ ಕಟ್ಟಡದ ಗೇಟ್ನಿಂದ ರಸ್ತೆಗೆ ಬರುತ್ತಿದ್ದಂತೆ, ಬಿಳಿ ಬಟ್ಟೆ ಧರಿಸಿದ್ದ ಅಪರಿಚಿತ ಶೂಟರ್ ಆತನ ಸಮೀಪಕ್ಕೆ ಓಡಿ ಬಂದು ಪಿಸ್ತೂಲ್ನಿಂದ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಅಕ್ಟೋಬರ್ 13ರ ಬೆಳಗ್ಗೆ 11.54ರ ಸಮಯವನ್ನು ಸೂಚಿಸುವ ಟೈಮ್ಸ್ಟ್ಯಾಂಪ್ ಹೊಂದಿರುವ ವಿಡಿಯೋದಲ್ಲಿ, ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬರು ಕಟ್ಟಡದ ಆವರಣದ ಗೇಟ್ನಿಂದ ಹೊರಬರುತ್ತಿರುವುದು ಕಾಣಿಸುತ್ತದೆ. ಈ ವೇಳೆ ಬಿಳಿ ಬಟ್ಟೆ ಧರಿಸಿರುವ ವ್ಯಕ್ತಿಯೊಬ್ಬರು ಅವರ ಸಮೀಪ ಬಂದು ಗುಂಡು ಹಾರಿಸುತ್ತಾರೆ ಎಂದು ವಿಡಿಯೋದಲ್ಲಿ ಕಾಣುತ್ತದೆ.
ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ಪ್ರಯತ್ನಿಸಿದರೂ, ನಿಯಂತ್ರಣ ತಪ್ಪಿ ಕೆಳಗೆ ಬೀಳುತ್ತಾರೆ. ಬಳಿಕ ದಾಳಿಕೋರ ಗುಂಡು ಹಾರಿಸುವುದನ್ನು ಮುಂದುವರಿಸುತ್ತಾನೆ. ಮತ್ತೊಂದು ಬಂದೂಕನ್ನು ತೆಗೆದು ಗುಂಡು ಹಾರಿಸಿದ ಬಳಿಕ ಅಲ್ಲಿಂದ ಪರಾರಿಯಾಗುತ್ತಾನೆ. ವಿಡಿಯೋ ಅಂತ್ಯದಲ್ಲಿ ಬೈಕ್ ಸವಾರ ರಸ್ತೆಯಲ್ಲಿ ಚಲನೆಯಿಲ್ಲದೆ ಬಿದ್ದಿರುವುದು ಕಾಣಿಸುತ್ತದೆ.
ಮತ್ತಷ್ಟು ಓದಿ:
ಕ್ವೆಟ್ಟಾ ಬಳಿ ಪಾಕಿಸ್ತಾನ ಸೇನೆಯ ವಿಮಾನ ಪತನ; ಇಬ್ಬರು ಪೈಲಟ್ಗಳು ಸಜೀವದಹನ
ಲಷ್ಕರ್ ಕಮಾಂಡರ್ ಇಮ್ರಾನ್ ಹತ್ಯೆಯೇ?
ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಕೆಲವು ಖಾತೆಗಳು, ಮೃತಪಟ್ಟ ವ್ಯಕ್ತಿ ಇಮ್ರಾನ್ ಎಂಬ ಲಷ್ಕರ್-ಎ-ತೊಯ್ಬಾ ಸಂಘಟನೆಯ ಹಿರಿಯ ಕಾರ್ಯಕರ್ತ ಎಂದು ಹೇಳಿವೆ. ಅಲ್ಲದೆ, ಅವರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕವಿತ್ತು ಎಂಬ ಆರೋಪಗಳನ್ನೂ ಮಾಡಲಾಗಿದೆ.
ವಿಡಿಯೋ
ಆದರೆ, ವಿಡಿಯೋದಿಂದ ವ್ಯಕ್ತಿಯ ಗುರುತನ್ನು ಖಚಿತಪಡಿಸಲು ಸಾಧ್ಯವಿಲ್ಲ. ಆತ ಲಷ್ಕರ್ ಸಂಘಟನೆಗೆ ಸೇರಿದವನೇ, ಐಎಸ್ಐ ಜೊತೆ ಸಂಪರ್ಕ ಹೊಂದಿದ್ದನೇ ಅಥವಾ ದಾಳಿಯ ಹಿಂದೆ ಯಾವ ಉದ್ದೇಶವಿತ್ತು ಎಂಬುದಕ್ಕೂ ಸದ್ಯಕ್ಕೆ ಪುರಾವೆಗಳಿಲ್ಲ. ವಿಡಿಯೋದಲ್ಲಿನ ಸ್ಥಳವೂ ಸ್ವತಂತ್ರವಾಗಿ ದೃಢಪಟ್ಟಿಲ್ಲ. ಕೇವಲ ಟೈಮ್ಸ್ಟ್ಯಾಂಪ್ ಇರುವುದರಿಂದ ದೃಶ್ಯವನ್ನು ಯಾವ ಸ್ಥಳದಲ್ಲಿ ಮತ್ತು ಯಾವ ಸಮಯದಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಖಚಿತವಾಗುವುದಿಲ್ಲ.
ಪಾಕಿಸ್ತಾನ ಸರ್ಕಾರದಿಂದ ಅಧಿಕೃತ ಮಾಹಿತಿ ಇಲ್ಲ
ಲಭ್ಯವಿರುವ ವರದಿಗಳ ಪ್ರಕಾರ, ಪಾಕಿಸ್ತಾನದ ಪೊಲೀಸರು, ಪಂಜಾಬ್ ಪ್ರಾಂತೀಯ ಅಧಿಕಾರಿಗಳು ಅಥವಾ ಸೇನೆಯಿಂದ ಈ ಘಟನೆಯ ಬಗ್ಗೆ ಅಧಿಕೃತ ದೃಢೀಕರಣ ಉಲ್ಲೇಖವಾಗಿಲ್ಲ. ಘಟನೆಯ ತನಿಖೆ, ಆರೋಪಿಗಳ ಬಂಧನ ಅಥವಾ ಮೃತಪಟ್ಟ ವ್ಯಕ್ತಿಯ ಗುರುತಿನ ಕುರಿತು ಪರಿಶೀಲಿತ ಮಾಹಿತಿಯೂ ಲಭ್ಯವಿಲ್ಲ. ಕರಾಚಿಯಲ್ಲಿ ಲಷ್ಕರ್ನ ಮತ್ತೊಬ್ಬ ಕಮಾಂಡರ್ ಹಂಜಲಾ ಅದ್ನಾನ್ನನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದ ಪ್ರಮುಖ ಉಗ್ರನನ್ನು ರಾವಲಕೋಟ್ನಲ್ಲಿ ಹತ್ಯೆ ಮಾಡಲಾಗಿತ್ತು.
ಹೀಗಾಗಿ, ಲಷ್ಕರ್ ಕಮಾಂಡರ್ ಇಮ್ರಾನ್ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ದೃಢಪಟ್ಟಿಲ್ಲ. ಸಂಬಂಧಿತ ಅಧಿಕಾರಿಗಳು ಅಥವಾ ವಿಶ್ವಾಸಾರ್ಹ ಸ್ವತಂತ್ರ ಮೂಲಗಳು ವಿಡಿಯೋವನ್ನು ಪರಿಶೀಲಿಸಿ ವ್ಯಕ್ತಿಯ ಗುರುತನ್ನು ಖಚಿತಪಡಿಸುವವರೆಗೆ ಈ ಸುದ್ದಿಯನ್ನು ದೃಢಪಟ್ಟ ಘಟನೆ ಎಂದು ಪರಿಗಣಿಸುವುದು ಸರಿಯಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ