ಫ್ಲೋರಿಡಾ: ಸಮುದ್ರದ ನಡುವೆ ನೌಕೆಯೊಂದಕ್ಕೆ ಸಿಡಿಲು ಬಡಿದರೂ ಅದರಲ್ಲಿದ್ದ 7 ಜನ ಪವಾಡಸದೃಶ ರೀತಿಯಲ್ಲಿ ಪಾರಾದರು!
ಕೋಸ್ಟ್ ಗಾರ್ಡ್ ಈ ಘಟನೆ ಮತ್ತು ತಮ್ಮ ಸಾಹಸವನ್ನು ಸಂಸ್ಥೆಯ ಆಧಿಕೃತ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್ಬುಕ್ ಪೇಜ್ಗಳಲ್ಲಿ ಪೋಸ್ಟ್ ಮಾಡಿದೆ. ಕೋಸ್ಟ್ ಗಾರ್ಡ್ನ ವಿಡಿಯೋ ಶೂಟ್ ನಲ್ಲಿ ಸಿಡಿಲು ನಾವೆಗೆ ಅಪ್ಪಳಿಸುವುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಅಂದಹಾಗೆ, ಘಟನೆ ನಡೆದಿದ್ದು ಜೂನ್ 26ರಂದು.
Florida (US): ಈ ಏಳು ಜನಕ್ಕೆ ಇದು ಪುನರ್ಜನ್ಮ ಎಂದರೆ ಉತ್ಪ್ರೇಕ್ಷೆ ಅನಿಸದು. ಅಮೇರಿಕಾದಲ್ಲಿ ಫ್ಲೋರಿಡಾ ಹತ್ತಿರ ಕ್ಲೀಯರ್ ವಾಟರ್ ತೀರದಿಂದ (Clearwater Coast) ಸುಮಾರು 100 ಮೈಲಿ ದೂರ ಮೀನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಖಾಸಗಿ ಸಮುದ್ರನೌಕೆಗೆ (private vessel) ಸಿಡಿಲು (lightning) ಬಡಿದು ಅದರಲ್ಲಿದ್ದ 7 ಜನ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಗ ಫ್ಲೋರಿಡಾದ ಕೋಸ್ಟ್ ಗಾರ್ಡ್ ಅವರನ್ನು ಕಾಪಾಡಿ ಸುರಕ್ಷಿತವಾಗಿ ತೀರಕ್ಕೆ ತಂದಿದೆ.
ಕೋಸ್ಟ್ ಗಾರ್ಡ್ ಈ ಘಟನೆ ಮತ್ತು ತಮ್ಮ ಸಾಹಸವನ್ನು ಸಂಸ್ಥೆಯ ಆಧಿಕೃತ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್ಬುಕ್ ಪೇಜ್ಗಳಲ್ಲಿ ಪೋಸ್ಟ್ ಮಾಡಿದೆ. ಕೋಸ್ಟ್ ಗಾರ್ಡ್ನ ವಿಡಿಯೋ ಶೂಟ್ ನಲ್ಲಿ ಸಿಡಿಲು ನಾವೆಗೆ ಅಪ್ಪಳಿಸುವುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಅಂದಹಾಗೆ, ಘಟನೆ ನಡೆದಿದ್ದು ಜೂನ್ 26ರಂದು.
#BREAKING USCG Air Station Clearwater rescued 7 people after their boat was hit by lighting 100 mil offshore of #TampaBay. Everyone is ok & reunited w/ family & friends thanks to them activating their EPIRB. Read more @ https://t.co/sINUsheQ9t #EPIRB #lightningstrikes #USCG pic.twitter.com/08SCd6WKoq
— USCGSoutheast (@USCGSoutheast) June 26, 2022
‘ಯುಎಸ್ಸಿಜಿ ಏರ್ ಸ್ಟೇಶನ್ ಕ್ಲೀಯರ್ ವಾಟರ್ ಸಿಬ್ಬಂದಿಯು ಟಂಪಬೇ ತೀರದಿಂದ 100 ಮೈಲಿ ದೂರದಲ್ಲಿ ನಾವೆಯೊಂದಕ್ಕೆ ಸಿಡಿಲು ಅಪ್ಪಳಿಸಿದಾಗ ಅದರಲ್ಲಿದ್ದ 7 ಜನರನ್ನು ರಕ್ಷಿಸಿದೆ. ಪ್ರತಿಯೊಬ್ಬರು ಸುರಕ್ಷಿತವಾಗಿ ಅರೋಗ್ಯವಾಗಿದ್ದು ತಮ್ಮ ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸೇರಿಕೊಂಡಿದ್ದಾರೆ. ಅವರು ಸಕಾಲಲ್ಲಿ ಈಪಿಐಆರ್ ಬಿಯನ್ನು ಸಕ್ರಿಯಗೊಳಿಸಿದ್ದಕ್ಕೆ ಧನ್ಯವಾದಗಳು’ ಎಂದು ಕೋಸ್ಟ್ ಗಾರ್ಡ್ ತನ್ನ ಟ್ವೀಟ್ನಲ್ಲಿ ಹೇಳಿದೆ.
ಕೋಸ್ಟ್ ಗಾರ್ಡ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಭಯಾನಕ ಸಿಡಿಲು ನಾವೆಯನ್ನು ಅಪ್ಪಳಿಸಿದಾಗ ಅದರಲ್ಲಿ 5 ಮಹಿಳೆಯರು, 2 ಪುರುಷರು ಇದ್ದರು ಮತ್ತು ಅವರನ್ನು ಎಮ್ ಹೆಚ್ ನ-60 ಜೇಹಾಕ್ ಹೆಲಿಕಾಪ್ಟರ್ ಮೂಲಕ ಮೇಲೆತ್ತಲಾಯಿತು. ಅವರೆಲ್ಲರನ್ನು ಏರ್ ಸ್ಟೇಶನ್ ಗೆ ತಂದ ಬಳಿಕ ಅವರಿಗಾಗಿ ಆತಂಕ ಮತ್ತು ಕಾತುರತೆಯಿಂದ ಕಾಯುತ್ತಿದ್ದ ಕುಟುಂಬದ ಸದಸ್ಯರೊಂದಿಗೆ ಮಾತಾಡಿದರು, ಎಂದು ವರದಿ ಹೇಳಿದೆ.
‘ರೇಡಿಯೋ ಬೀಕನ್ (ಈಪಿಐಆರ್‌ಬಿ) ಸೂಚಿಸುವ ತುರ್ತು ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ, ಕೋಸ್ಟ್ ಗಾರ್ಡ್ ಸಿಬ್ಬಂದಿಯು ಡಿಸ್ಟ್ರಿಕ್ಟ್ ಸೆವೆನ್ ಕಮಾಂಡ್ ಸೆಂಟರ್ ಮಾಲೀಕರ ಹೆಂಡತಿಯೊಂದಿಗೆ ಸಂಪರ್ಕ ಸಾಧಿಸುವುದು ಸಾಧ್ಯವಾಯಿತು. ಅವರು ತಮ್ಮ ಪತಿ ಮತ್ತು ಇತರ ಕೆಲವರು ಮೀನು ಹಿಡಿಯುಸ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದಾರೆನ್ನುವ ವಿಷಯ ಬಹಿರಂಗಪಡಿಸಿದರು’ ಎಂದು ಕೋಸ್ಟ್ ಗಾರ್ಡ್ ಹೇಳಿದೆ.
‘ಫ್ಲೋರಿಡಾ ಕಡಲ ಪರಿಸರದಲ್ಲಿ ಸಿಡಿಲು ಅಪ್ಪಳಿಸುವ ದುರ್ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿರುತ್ತವೆ. ದೋಣಿ ಮತ್ತು ಚಿಕ್ಕ ಪ್ರಮಾಣದ ನೌಕೆಗಳಲ್ಲಿ ಯಾನ ಮಾಡುತ್ತಿರುವವರಿಗೆ ಅವು ಅಪಾಯಕಾರಿಯಾಗಿ ಪರಿಣಮಿಸಿದ ನಿದರ್ಶನಗಳಿವೆ,’ ಎಂದು ಕೋಸ್ಟ್ ಗಾರ್ಡ್ ಪೈಲಟ್ ಲಿಫ್ಟಿನಂಟ್ ಡೇವಿಡ್ ಮೆಕಿನ್ಲೇ ಹೇಳಿದ್ದಾರೆ.
‘ಅದೃಷ್ಟವಶಾತ್ ಈ ದೋಣಿಯಲ್ಲಿದ್ದ ನಾವಿಕರೆಲ್ಲ ಈಪಿಐಆರ್‌ಬಿ, ಫ್ಲೇರ್ಗಳು ಮರೀನ್ ವಿ ಹೆಚ್ ಎಫ್ ರೇಡಿಯೋ ಸೇರಿದಂತೆ ಅಗತ್ಯವಿರುವ ಎಲ್ಲ ಸುರಕ್ಷತಾ ಉಪಕರಣಗಳೊಂದಿಗೆ ಯಾನ ಮಾಡುತ್ತಿದ್ದರು. ಹಾಗಾಗೇ ರಕ್ಷಣಾ ಕಾರ್ಯಾಚರಣೆ ತ್ವರಿತ ಗತಿಯಲ್ಲಿ ಆರಂಭವಾಯಿತು ಮತ್ತು ಎಲ್ಲರನ್ನೂ ಕಾಪಾಡುವುದು ಸಾಧ್ಯವಾಯಿತು,’ ಎಂದು ಮೆಕಿನ್ಲೇ ಹೇಳಿದ್ದಾರೆ.
ಸದರಿ ನೌಕೆಯ ಮಾಲೀಕ ಸಿಡಿಲು ಬಡಿದು ಅದಕ್ಕಾಗಿರುವ ಹಾನಿ ಸರಿದೂಗಿಸಿಕೊಳ್ಳಲು ವಿಮಾ ಕಂಪನಿಯ ಕದ ತಟ್ಟಿದ್ದಾರೆ. ನಾವೆಗೆ ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರು: ಮುಳುಗಡೆಯಾಗಿದ್ದ ವಿದೇಶಿ ಸರಕು ಸಾಗಣೆ ಹಡಗಿನಿಂದ ತೈಲ ಸೋರಿಕೆ ಆತಂಕ! ಕೋಸ್ಟ್ ಗಾರ್ಡ್ ಮಿನಿ ಜೆಟ್ ಆಗಮನ