Pakistan: ಪಾಕಿಸ್ತಾನದ ಲಾಹೋರ್​ನಲ್ಲಿ ಮಹಾರಾಜ ರಣಜೀತ್ ಸಿಂಗ್ ಪ್ರತಿಮೆ ಧ್ವಂಸ

Maharaja Ranjit Singh | ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಇರುವ ಲಾಹೋರ್ ಕೋಟೆಯ ಕಾಂಪ್ಲೆಕ್ಸ್​ನಲ್ಲಿರುವ ಮಹಾರಾಜ ರಣಜೀತ್ ಸಿಂಗ್ ಅವರ ಪ್ರತಿಮೆಯನ್ನು ಮೂರನೇ ಬಾರಿಗೆ ಧ್ವಂಸ ಮಾಡಲಾಗಿದೆ.

Pakistan: ಪಾಕಿಸ್ತಾನದ ಲಾಹೋರ್​ನಲ್ಲಿ ಮಹಾರಾಜ ರಣಜೀತ್ ಸಿಂಗ್ ಪ್ರತಿಮೆ ಧ್ವಂಸ
ಮಹಾರಾಜ ರಣಜೀತ್ ಸಿಂಗ್ ಪ್ರತಿಮೆ ಧ್ವಂಸ
Follow us
| Updated By: ಸುಷ್ಮಾ ಚಕ್ರೆ

Updated on:Aug 17, 2021 | 3:28 PM

ಲಾಹೋರ್: ಪಾಕಿಸ್ತಾನದ ಲಾಹೋರ್​ನಲ್ಲಿ ನಿರ್ಮಿಸಲಾಗಿದ್ದ ಪಂಜಾಬ್ ಮಹಾರಾಜ ರಣಜೀತ್ ಸಿಂಗ್ ಪ್ರತಿಮೆಯನ್ನು ತೆಹ್ರೀಕ್-ಇ-ಲಬ್ಬಾಯ್ಕ್ ಗುಂಪಿನವರು ಧ್ವಂಸ ಮಾಡಿದ್ದಾರೆ. ಇಂದು ಈ ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಇರುವ ಲಾಹೋರ್ ಕೋಟೆಯ ಕಾಂಪ್ಲೆಕ್ಸ್​ನಲ್ಲಿರುವ ಮಹಾರಾಜ ರಣಜೀತ್ ಸಿಂಗ್ ಅವರ ಪ್ರತಿಮೆಯನ್ನು ಮೂರನೇ ಬಾರಿಗೆ ಧ್ವಂಸ ಮಾಡಲಾಗಿದೆ.

9 ಅಡಿ ಎತ್ತರದ ಈ ಪ್ರತಿಮೆಯನ್ನು ಕಂಚಿನಿಂದ ನಿರ್ಮಿಸಲಾಗಿದೆ. ಮಹಾರಾಜ ರಣಜೀತ್ ಸಿಂಗ್ ಅವರ 180ನೇ ಜನ್ಮದಿನಾಚರಣೆಯ ನೆನಪಿಗಾಗಿ 2019ರ ಜೂನ್ ತಿಂಗಳಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ರಣಜೀತ್ ಸಿಂಗ್ ಸಿಖ್ ಸಮುದಾಯದ ಮೊದಲ ಮಹಾರಾಜ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 40 ವರ್ಷಗಳ ಕಾಲ ಪಂಜಾಬನ್ನು ಆಳಿದ ರಣಜೀತ್ ಸಿಂಗ್ 1839ರಲ್ಲಿ ಸಾವನ್ನಪ್ಪಿದ್ದರು.

ಕೈಯಲ್ಲಿ ಖಡ್ಗ ಹಿಡಿದು, ಸಿಖ್ ಸಮುದಾಯದ ಉಡುಗೆ ತೊಟ್ಟು, ಕುದುರೆ ಮೇಲೆ ಕುಳಿತಿರುವ ರಣಜೀತ್ ಸಿಂಗ್ ಅವರ ಪ್ರತಿಮೆಯನ್ನು ಲಾಹೋರ್​ನಲ್ಲಿ ಸ್ಥಾಪಿಸಲಾಗಿದೆ. 2019ರಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಿ ಎರಡೇ ತಿಂಗಳಲ್ಲಿ ತೆಹ್ರೀಕ್-ಇ-ಲಬ್ಬಾಯ್ಕ್ ಇಬ್ಬರು ಅದನ್ನು ಮುರಿದುಹಾಕಿದ್ದರು. ಆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಆ ಪ್ರತಿಮೆಯನ್ನು ಸರಿಪಡಿಸಲು 8 ತಿಂಗಳು ಬೇಕಾಗಿತ್ತು. ಇದೀಗ ಮೂರನೇ ಬಾರಿಗೆ ಮಹಾರಾಜ ರಣಜೀತ್ ಸಿಂಗ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.

ಮಹಾರಾಜ ರಣಜೀತ್ ಸಿಂಗ್ ಸಿಖ್ ಸಾಮ್ರಾಜ್ಯದ ರಾಜರಾಗಿದ್ದರು. ಅವರು ಶೇರ್-ಇ-ಪಂಜಾಬ್ ಎಂದೇ ಪ್ರಸಿದ್ಧರಾಗಿದ್ದರು. ಆ ದಿನಗಳಲ್ಲಿ, ಸಿಖ್ಖರು ಮತ್ತು ಅಫ್ಘನ್ನರ ಆಳ್ವಿಕೆ ಪಂಜಾಬ್​ನಲ್ಲಿ ನಡೆಯುತ್ತಿತ್ತು. ರಣಜೀತ್ ಸಿಂಗ್ ಅವರ ತಂದೆ ಮಹನ್ ಸಿಂಗ್ ಸುಕಾರ್ಕಿಯ ಮಿಸ್ಸಾಲ್​ನ ಕಮಾಂಡರ್ ಆಗಿದ್ದರು. ಕಿರಿಯ ವಯಸ್ಸಿನಲ್ಲೇ ಸಿಡುಬಿನಿಂದ ಮಹಾರಾಜ ರಣಜೀತ್ ಸಿಂಗ್ ಅವರ ದೃಷ್ಟಿ ಮಂದವಾಯಿತು. 1801ರ ಏಪ್ರಿಲ್ 12ರಂದು ರಣಜೀತ್ ಸಿಂಗ್ ಮಹಾರಾಜರ ಪಟ್ಟ ಪಡೆದರು. ಬಳಿಕ ಲಾಹೋರ್ ಅನ್ನು ರಾಜಧಾನಿಯಾಗಿ ಮಾಡಿಕೊಂಡ ರಣಜೀತ್ ಸಿಂಗ್ ನೆನಪಿಗಾಗಿ ಲಾಹೋರ್​ನಲ್ಲಿ ಅವರ ಪ್ರತಿಮೆ ನಿರ್ಮಿಸಲಾಗಿದೆ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಾಬೂಲ್​ ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದ ರಷ್ಯಾ!

MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ

(Maharaja Ranjit Singh statue vandalised in Pakistan Lahore 1 detained)

Published On - 3:25 pm, Tue, 17 August 21