ಭಾರತದ ಹರ್ನಾಜ್ ಸಂಧು 2021ರ ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿದ್ದಾರೆ. ಮಿಸ್ ವರ್ಲ್ಡ್ ಗೌರವಕ್ಕೆ ಜಮೈಕಾದ ಟೋನಿ-ಆನ್ ಸಿಂಗ್ ಪಾತ್ರರಾಗಿದ್ದಾರೆ. ಮಿಸ್ ವರ್ಲ್ಡ್ ಮತ್ತು ಮಿಸ್ ಯೂನಿವರ್ಸ್ ಪದಗಳನ್ನು ಹಲವು ಪರ್ಯಾಯ ಪದಗಳಂತೆ ಬಳಸುತ್ತಾರೆ. ಆದರೂ ಈ ಎರಡೂ ಸ್ಪರ್ಧೆ ಮತ್ತು ಗೌರವದ ನಡುವೆ ಕೆಲ ವ್ಯತ್ಯಾಸಗಳಿವೆ. ಮಿಸ್ ಯೂನಿವರ್ಸ್ ಗೌರವವು ಮಿಸ್ ವರ್ಲ್ಡ್ ಎನ್ನುವುದಕ್ಕಿಂತ ಹೆಚ್ಚು ಪ್ರಭಾವಶಾಲಿ ಎಂದು ಭಾವಿಸಲಾಗಿದೆ. ಆದರೆ ಎರಡರ ಪೈಕಿ ಯಾವುದಕ್ಕೆ ಹೆಚ್ಚು ಗೌರವ ಎಂಬ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಎರಡೂ ಬಿರುದುಗಳ ನಡುವೆ ಇರುವ ಮುಖ್ಯ ವ್ಯತ್ಯಾಸಗಳು ಇವು..
ಮಿಸ್ ಯೂನಿವರ್ಸ್
ಈ ಸೌಂದರ್ಯ ಸ್ಪರ್ಧೆಯು ಜೂನ್ 1952ರಿಂದ ಅಸ್ತಿತ್ವದಲ್ಲಿದೆ. ಈ ಸಂಸ್ಥೆಯ ಕೇಂದ್ರ ಕಚೇರಿ ನ್ಯೂಯಾರ್ಕ್ ನಗರದಲ್ಲಿದೆ. ವಿಶ್ವದಲ್ಲಿ ಮಾನವೀಯತೆಗೆ ಹಾಗೂ ಜನಪರ ಧ್ವನಿಗೆ ಮನ್ನಣೆ ನೀಡುವುದು ಈ ಸ್ಪರ್ಧೆಯ ಉದ್ದೇಶಗಳಲ್ಲಿ ಒಂದು. ಮಿಸ್ ಯೂನಿವರ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಜೂಲಿಯಾ ಮೊರ್ಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಫಿನ್ಲೆಂಡ್ನ ಅರ್ಮಿ ಕುಸೆಲಾ ಮೊದಲ ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿದರು. ಭಾರತದ ಮೊದಲ ಮಿಸ್ ಯೂನಿವರ್ಸ್ ಆಗಿ ಸುಷ್ಮಿತಾ ಸೇನ್ 1994ರಲ್ಲಿ ಆಯ್ಕೆಯಾದರು. ನಂತರ 2000ನೇ ಇಸವಿಯಲ್ಲಿ ಲಾರಾ ದತ್ತ ಹಾಗೂ ಇದೀಗ, ಅಂದರೆ 2021ರಲ್ಲಿ ಹರ್ನಾಜ್ ಸಂಧು ಆಯ್ಕೆಯಾಗಿದ್ದಾರೆ.
ಮಿಸ್ ವರ್ಲ್ಡ್
ವಿಶ್ವದ ಅತ್ಯಂತ ಹಳೆಯ ಸೌಂದರ್ಯ ಸ್ಪರ್ಧೆ ಮಿಸ್ ವರ್ಲ್ಡ್. 1951ರ ಜುಲೈನಿಂದ ಈ ಸ್ಪರ್ಧೆಗಳು ಚಾಲ್ತಿಯಲ್ಲಿವೆ. ಬ್ರಿಟನ್ನ ಲಂಡನ್ನಲ್ಲಿ ಈ ಸಂಸ್ಥೆಯ ಕೇಂದ್ರ ಕಚೇರಿಯಿದೆ. ಉತ್ತಮ ಕಾರಣಕ್ಕಾಗಿ ಸೌಂದರ್ಯ ಎಂಬ ಧೋರಣೆಯನ್ನು ಆಧರಿಸಿ ಮಿಸ್ ವರ್ಲ್ಡ್ ಸ್ಪರ್ಧೆಗಳು ನಡೆಯುತ್ತವೆ. ಮಿಸ್ ವರ್ಲ್ಡ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾಗಿ ಪೌಲಾ ಶುರ್ಗತ್ ಕೆಲಸ ಮಾಡುತ್ತಿದ್ದಾರೆ. ಮೊದಲ ಮಿಸ್ ವರ್ಲ್ಡ್ ಆಗಿ ಸ್ವೀಡನ್ನ ಕಿಕಿ ಹಕನ್ಸನ್ ಆಯ್ಕೆಯಾಗಿದ್ದರು. ಭಾರತದ ಮೊದಲ ಮಿಸ್ ವರ್ಲ್ಡ್ ರೀಟಾ ಫೆರೆರಾ 1966ರಲ್ಲಿ ಆಯ್ಕೆಯಾಗಿದ್ದರು. 1994ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತಾ ಮುಖೆ 1999ರಲ್ಲಿ, ಪ್ರಿಯಾಂಕಾ ಛೋಪ್ರಾ ಜೋನಸ್ 2000ರಲ್ಲಿ ಮತ್ತು ಮಾನುಷಿ ಛಿಲ್ಲರ್ 2017ರಲ್ಲಿ ಮಿಸ್ ವರ್ಲ್ಡ್ ಗೌರವಕ್ಕೆ ಪಾತ್ರರಾಗಿದ್ದರು.
ಇಷ್ಟೇ ಮಹತ್ವದ ಇನ್ನೆರೆಡು ಸ್ಪರ್ಧೆಗಳು
ಟೊಕಿಯೊ ಮೂಲದ ದಿ ಇಂಟರ್ನ್ಯಾಷನಲ್ ಕಲ್ಚರ್ ಅಸೋಸಿಯೇಷನ್ ಸಂಸ್ಥೆ ನಡೆಸುವ ಮಿಸ್ ಇಂಟರ್ನ್ಯಾಷನಲ್ ಹಾಗೂ ಫಿಲಿಪ್ಪೈನ್ಸ್ ಮೂಲದ ಮಿಸ್ ಅರ್ತ್ ಫೌಂಡೇಶನ್ ನಡೆಸುವ ಮಿಸ್ ಅರ್ತ್ ಸ್ಪರ್ಧೆಗಳು ಸಹ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿವೆ.
ಇದನ್ನೂ ಓದಿ: Harnaaz Sandhu: ತೃತೀಯಲಿಂಗಿ ವಿನ್ಯಾಸಗೊಳಿಸಿದ ಗೌನ್ ಧರಿಸಿ ಮಿಂಚಿದ ಭುವನ ಸುಂದರಿ ಹರ್ನಾಜ್ ಸಂಧು!
ಇದನ್ನೂ ಓದಿ: ಶಾಲೆಯಲ್ಲಿ ಓದುವಾಗ ಸಪೂರಳಾಗಿದ್ದ, ಸ್ನೇಹಿತೆಯರಿಂದ ಗೇಲಿಗೊಳಗಾಗುತ್ತಿದ್ದ ಹರ್ನಾಜ್ ಸಂಧು ಈಗ ಭುವನ ಸುಂದರಿ!
Published On - 10:02 pm, Mon, 13 December 21