ಅಬುಧಾಬಿಯಲ್ಲಿ ಮೋದಿ ಕನ್ನಡ ಮಾತು: ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ತರುವುದೇ ನನ್ನ ಗ್ಯಾರಂಟಿ ಎಂದ ನಮೋ
ಯುಎಇ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಫೆಬ್ರವರಿ 13) ಅಬುಧಾಬಿ ನಗರದಲ್ಲಿ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದರು. ಕನ್ನಡ, ತೆಲುಗು, ಮಲಯಾಳಂನಲ್ಲಿ ಭಾಷಣ ಮಾಡಿರುವುದು ವಿಶೇಷವಾಗಿದೆ. ಹಾಗಾದ್ರೆ, ಏನೆಲ್ಲಾ ಹೇಳಿದ್ದಾರ ಎನ್ನುವ ವಿವರ ಇಲ್ಲಿದೆ.
ಅಬುಧಾಬಿ, (ಫೆಬ್ರವರಿ.13): ಯುಎಇ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರಿಗೆ ಇಂದು (ಫೆಬ್ರವರಿ 13) ಅಬುಧಾಬಿ (Abu Dhabi) ನಗರದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಳಿಕ ಮೋದಿ ‘ಅಹ್ಲಾನ್ ಮೋದಿ’ (Ahlan Modi)ಕಾರ್ಯಕ್ರದಲ್ಲಿ ಪಾಲ್ಗೊಂಡು ಆನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. ಕನ್ನಡ, ತೆಲುಗು, ಮಲಯಾಳಂನಲ್ಲಿ ಭಾಷಣ ಆರಂಭಿಸಿ ಗಮನಸೆಳೆದರು. ನಿಮ್ಮ ಬಗ್ಗೆ ಭಾರತ ಹೆಮ್ಮೆಪಡುತ್ತೆಂದು ಕನ್ನಡದಲ್ಲಿ ಹೇಳಿದ ಮೋದಿ, ಅಬುಧಾಬಿಯಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಇದರ ನೆನಪು ನನ್ನ ಇಡೀ ಜೀವನ ಪೂರ್ತಿ ಇರಲಿದೆ. ನೀವೆಲ್ಲಾ ವಿವಿಧೆಡೆಯಿಂದ ಅಬುಧಾಬಿಗೆ ಬಂದಿದ್ದೀರಿ. ಭಾರತ ಮತ್ತು ಯುಎಇ ಸ್ನೇಹಕ್ಕೆ ಜಿಂದಾಬಾದ್ ಎಂದರು.
ನಾನು ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬಂದಿದ್ದೇನೆ. ನೀವು ಹುಟ್ಟಿದ ಮಣ್ಣಿನ ಪರಿಮಳವನ್ನು ನಾನು ತಂದಿದ್ದೇನೆ. 140 ಕೋಟಿ ಭಾರತೀಯರ ಸಂದೇಶವನ್ನು ನಾನು ತಂದಿದ್ದೇನೆ. ನನ್ನ ಸ್ವಾಗತಿಸಲು ಏರ್‌ಪೋರ್ಟ್‌ಗೆ ಅಧ್ಯಕ್ಷರ ಸೋದರರು ಬಂದಿದ್ದರು. ಇದು 140 ಕೋಟಿ ಭಾರತೀಯರಿಗೆ ಸಿಕ್ಕ ಮನ್ನಣೆ. 2015ರಲ್ಲಿ ನಾನು ಮೊದಲ ಬಾರಿಗೆ ಯುಎಇಗೆ ಭೇಟಿ ನೀಡಿದ್ದೆ. ಕಳೆದ 10 ವರ್ಷದಲ್ಲಿ 7 ಸಲ ನಾನು ಯುಎಇಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಅಬುಧಾಬಿ: ನನಗೆ ಭಾರತ ಇಷ್ಟ, ಮೋದಿಯನ್ನು ನೋಡಲು ಗಾಲಿಕುರ್ಚಿಯಲ್ಲಿ ಬಂದ ಹಿರಿಯ ಮಹಿಳೆ
2047ರೊಳಗೆ ವಿಕಸಿತ ಭಾರತ ನಿರ್ಮಾಣವಾಗಲಿದೆ. ಶಿಕ್ಷಣ, ಸಂಶೋಧನೆ ಸೇರಿ ಹಲವು ಕ್ಷೇತ್ರಗಳಲ್ಲಿ ಭಾರತ-ಯುಎಇ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಭಾರತೀಯರಿಗೆ ಅನುಕೂಲಕ್ಕಾಗಿ ಯುಎಇ ಸರ್ಕಾರ ರುಪೇ ಕಾರ್ಡಗೆ ಜೀವನ ಎಂಬ ಹೆಸರು ನೀಡಿದೆ. ವಿಶ್ವದ ಆರ್ಥಿಕತೆಯಲ್ಲಿ ಭಾರತವನ್ನು 3ನೇ ಸ್ಥಾನಕ್ಕೆ ತರುತ್ತೇನೆ. 3ನೇ ಬಾರಿ ಅಧಿಕಾರಕ್ಕೆ ಬಂದ್ರೆ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ತರುವೆ. ಇದು ನನ್ನ ಗ್ಯಾರಂಟಿ ಎಂದು ಹೇಳಿದರು.
ನನಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. 2015ರಲ್ಲಿ ದೇವಸ್ಥಾನ ನಿರ್ಮಿಸುವಂತೆ ಯುಎಇಗೆ ಮನವಿ ಮಾಡಿದ್ದೆ. ನಾನು ಹೇಳಿದ ತಕ್ಷಣವೇ ಯುಎಇ ಅಧ್ಯಕ್ಷರು ಒಪ್ಪಿಗೆ ನೀಡಿದ್ದರು. ನೀವು ತೋರಿಸಿದ ಜಾಗದಲ್ಲೇ ಮಂದಿರಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿದ್ದರು. ಈಗ ಯುಎಇನಲ್ಲಿ ಭವ್ಯ ಮಂದಿರ ಉದ್ಘಾಟಿಸುವ ಸಮಯ ಬಂದಿದೆ. ಯುಎಇನಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದು, ದೇಗುಲ ನಿರ್ಮಾಣಕ್ಕೆ ಅವಕಾಶ ನೀಡಿದ UAE ಅಧ್ಯಕ್ಷರಿಗೆ ಧನ್ಯವಾದ ಎಂದರು.
10 ಕೋಟಿ ಜನರಿಗೆ ಮನೆ ಮನೆಗೂ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಬಡ ಕುಟುಂಬದವರಿಗೆ ಆಯುಷ್ಮಾನ್ ಭಾರತ್ ಯೋಜನೆ ಜಾರಿ ಮಾಡಲಾಗಿದೆ. ಮೊದಲ ಪ್ರಯತ್ನದಲ್ಲೇ ಮಂಗಳವನ್ನು ತಲುಪಿರುವ ದೇಶ ಭಾರತ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿರುವ ದೇಶ ನಮ್ಮ ಭಾರತ. ಭಾರತ ದೇಶವು 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಡಿಜಿಟಲ್ ಕಾಂತ್ರಿಯು ಯುಎಇ ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Tue, 13 February 24