ಮೌಂಟ್ ಎವರೆಸ್ಟ್​ ಪರ್ವತಾರೋಹಿಗಳಿಗೆ ವಿಷ ನೀಡಿದ ಆರೋಪ; 185 ಕೋಟಿ ರೂ. ಹಗರಣ ಬಯಲು

ಮೌಂಟ್ ಎವರೆಸ್ಟ್​ ಪರ್ವತವನ್ನು ಹತ್ತಬೇಕೆಂಬುದು ಟ್ರೆಕ್ಕರ್​ಗಳೆಲ್ಲರ ಕನಸು. ಆದರೆ, ಅದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಪೂರ್ವಸಿದ್ಧತೆಯೂ ಇರಬೇಕು, ಸೂಕ್ತ ಮಾರ್ಗದರ್ಶಕರೂ ಇರಬೇಕು. ಆದರೆ, ಈ ಮೌಂಟ್ ಎವರೆಸ್ಟ್ ಪರ್ವತಾರೋಹಣದಲ್ಲೇ ದೊಡ್ಡ ಹಗರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಇದು ಸಣ್ಣ ಮೊತ್ತದ ಹಗರಣವಲ್ಲ. ಬರೋಬ್ಬರಿ 20 ಮಿಲಿಯನ್ ಡಾಲರ್ (185 ಕೋಟಿ ರೂ.) ಹಗರಣವಿದು. ವಿದೇಶಿ ಪರ್ವತಾರೋಹಿಗಳಿಗೆ ವಿಷಪ್ರಾಶನ ಮಾಡಿದ ಆರೋಪವನ್ನು ಮೌಂಟ್ ಎವರೆಸ್ಟ್ ಮಾರ್ಗದರ್ಶಕರು ಹೊತ್ತಿದ್ದಾರೆ.

ಮೌಂಟ್ ಎವರೆಸ್ಟ್​ ಪರ್ವತಾರೋಹಿಗಳಿಗೆ ವಿಷ ನೀಡಿದ ಆರೋಪ; 185 ಕೋಟಿ ರೂ. ಹಗರಣ ಬಯಲು
Mount Everest
Image Credit source: PTI

Updated on: Apr 02, 2026 | 7:22 PM

ನವದೆಹಲಿ, ಏಪ್ರಿಲ್ 2: ವಿಶ್ವದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಶಿಖರದ ಮಾರ್ಗದರ್ಶಕರು ಪರ್ವತಾರೋಹಿಗಳಿಗೆ (climbers) ವಿಷಪ್ರಾಶನ ಮಾಡಿದ್ದಾರೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೌಂಟ್ ಎವರೆಸ್ಟ್ (Mount Everest) ಮಾರ್ಗದರ್ಶಕರು ಪರ್ವತಾರೋಹಿಗಳಿಗೆ ವಿಷದ ಆಹಾರವನ್ನು ನೀಡಿ ಅವರನ್ನು ಅನಾರೋಗ್ಯಕ್ಕೆ ಒಳಪಡಿಸಿದ್ದಾರೆ, ಹೆಲಿಕಾಪ್ಟರ್ ಮೂಲಕ ಅಲ್ಲಿಂದ ತೆರಳಲು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಈ ಪ್ರಕರಣದಲ್ಲಿ 32 ವ್ಯಕ್ತಿಗಳ ಮೇಲೆ ಆರೋಪ ಹೊರಿಸಲಾಗಿದೆ. 9 ಜನರನ್ನು ಬಂಧಿಸಲಾಗಿದೆ, ಉಳಿದವರು ಪರಾರಿಯಾಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರವಾಸಿಗರನ್ನು ಆಸ್ಪತ್ರೆಗೆ ಕರೆದೊಯ್ಯಲು ಹೆಲಿಕಾಪ್ಟರ್ ಅನ್ನು ಕರೆಸಲಾಗುತ್ತದೆ. ಇದಾದ ನಂತರ ಅವರು ವಿಮೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಮಾರ್ಗದರ್ಶಕರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರ್ಗದರ್ಶಕರು ತಮ್ಮ ಜೊತೆಗಿದ್ದ ವಿದೇಶಿ ಪ್ರಯಾಣಿಕರು ಸಾಯುವ ಅಪಾಯವಿದೆ ಎಂದು ಬೆದರಿಸಿದರು. ಆದರೆ, ಅಂತಹ ಯಾವುದೇ ಸಮಸ್ಯೆ ಇರಲಿಲ್ಲ. ಆ ಪ್ರವಾಸಿಗರಿಗೆ ನೀಡಲಾದ ಆಹಾರದಲ್ಲಿ ಪಾಯ್ಸನ್ ಇತ್ತು ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ. ಮಾರ್ಗದರ್ಶಕರು ಪ್ರವಾಸಿಗರ ಆಹಾರಕ್ಕೆ ಡೈಮಾಕ್ಸ್ (ಅಸೆಟಾಜೋಲಾಮೈಡ್) ಮಾತ್ರೆಗಳನ್ನು ಹಾಕುತ್ತಿದ್ದರು. ಬಳಿಕ ವೈದ್ಯಕೀಯ ತುರ್ತುಸ್ಥಿತಿಗಾಗಿ ರಕ್ಷಣಾ ಹೆಲಿಕಾಪ್ಟರ್ ಅನ್ನು ಕರೆಸಲು ಅಗತ್ಯವಾದ ಲಕ್ಷಣಗಳನ್ನು ಉಂಟುಮಾಡಲು ಹೆಚ್ಚು ನೀರನ್ನು ನೀಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?

ಇದು ಒಂದು ಬಗೆಯಾದರೆ ಇನ್ನೊಂಂದು ಮಾರ್ಗವೆಂದರೆ ಮಾರ್ಗದರ್ಶಕರೊಂದಿಗೆ ಪರ್ವತಾರೋಹಿಗಳನ್ನು ಕೂಡ ಈ ಹಗರಣದಲ್ಲಿ ಸೇರಿಸಿಕೊಳ್ಳುವುದು. ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣ ನಂತರ ಮುಂದೆ ಹೋಗಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದ ಪ್ರಯಾಣಿಕರಿಗೆ ಮಾರ್ಗದರ್ಶಕರು ಅನಾರೋಗ್ಯವಾಗಿದೆ ಎಂದು ನಟಿಸುವ ಆಯ್ಕೆಯನ್ನು ನೀಡುತ್ತಿದ್ದರು. ನಂತರ ಮಾರ್ಗದರ್ಶಕರು ಹೆಲಿಕಾಪ್ಟರ್ ಅನ್ನು ಕರೆಸುತ್ತಿದ್ದರು.


ರಕ್ಷಣಾ ಹೆಲಿಕಾಪ್ಟರ್ ಅನ್ನು ಕರೆಸಿದ ನಂತರ ಒಂದೇ ಹೆಲಿಕಾಪ್ಟರ್ ಬಂದು ಬಹು ಪ್ರಯಾಣಿಕರನ್ನು ಹೊತ್ತೊಯ್ದಿತು. ಆದರೂ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನಲ್ಲಿ ವಿಮಾ ಹಣಕ್ಕೆ ಪೂರ್ಣ ಬೆಲೆಯ ಇನ್‌ವಾಯ್ಸ್‌ಗಳನ್ನು ಸಲ್ಲಿಸಲಾಯಿತು. ಇದಾದ ನಂತರ ಇದೊಂದು ಹಗರಣ ಎಂಬುದು ಬೆಳಕಿಗೆ ಬಂದಿತು. ಕೆಲವೊಮ್ಮೆ ಆ ಪರ್ವತಾರೋಹಿಗಳು ದಾಖಲಾಗುವ ಆಸ್ಪತ್ರೆಗಳ ವೈದ್ಯರನ್ನು ಕೂಡ ಈ ನಾಟಕದಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. ವೈದ್ಯಕೀಯ ಅಧಿಕಾರಿಗಳು ಡಿಸ್ಚಾರ್ಜ್ ಸಮ್ಮರಿ ನಕಲಿ ಮಾಡಿರುವ ಮತ್ತು ಈ ಪ್ರಕರಣಗಳಲ್ಲಿ ಭಾಗಿಯಾಗದ ಹಿರಿಯ ವೈದ್ಯರ ಡಿಜಿಟಲ್ ಸಹಿಗಳನ್ನು ಬಳಸಿರುವ ಪ್ರಕರಣಗಳೂ ನಡೆದಿವೆ.

ಇದನ್ನೂ ಓದಿ: Phone Hijack Scam: ಫೋನ್ ಹೈಜಾಕ್ ಹಗರಣ ಎಂದರೇನು?: ಲಕ್ಷಾಂತರ ಹಣ ಕಳೆದುಕೊಳ್ಳುವ ಮುನ್ನ ಎಚ್ಚರ

CIB ತನಿಖೆಯ ವರದಿ ಪ್ರಕಾರ, “ಅನಾರೋಗ್ಯ”ಕ್ಕೆ ಚಿಕಿತ್ಸೆ ಪಡೆಯಬೇಕಾಗಿದ್ದ ಕೆಲವು ರೋಗಿಗಳು ಆಸ್ಪತ್ರೆಯ ಕೆಫೆಟೇರಿಯಾದಲ್ಲಿ ಬಿಯರ್ ಸೇವಿಸುತ್ತಿರುವುದು ಕಂಡುಬಂದಿದೆ. CIB 32 ವ್ಯಕ್ತಿಗಳ ಮೇಲೆ ಆರೋಪ ಹೊರಿಸಿದೆ ಎಂದು ಔಟ್ಲೆಟ್ ವರದಿ ಮಾಡಿದೆ. ಅವರಲ್ಲಿ 9 ಜನರನ್ನು ಬಂಧಿಸಲಾಗಿದೆ ಮತ್ತು ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆಪಾದಿತ ಹಗರಣದಲ್ಲಿ ಹೆಸರಿಸಲಾದವರಲ್ಲಿ 3 ಹೆಲಿಕಾಪ್ಟರ್ ಕಂಪನಿಗಳ ನಿರ್ವಾಹಕರು ಮತ್ತು ಸಿಬ್ಬಂದಿ, ವಿವಿಧ ಆಸ್ಪತ್ರೆಗಳ ವೈದ್ಯರು ಮತ್ತು ನಿರ್ವಾಹಕರು ಕೂಡ ಸೇರಿದ್ದಾರೆ.

ಅಧಿಕಾರಿಗಳ ಪ್ರಕಾರ, ಆಪಾದಿತ ಹಗರಣದಲ್ಲಿ ಭಾಗಿಯಾಗಿರುವ ಗುಂಪುಗಳು ಕನಿಷ್ಠ 185 ಕೋಟಿ ರೂ. ವಿಮಾ ಪಾವತಿಗಳನ್ನು ಪಡೆದಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:18 pm, Thu, 2 April 26

Follow Us