ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಅಳೆದದ್ದು ಭಾರತೀಯ, ಆದ್ರೆ ಹೆಸರು ಮಾತ್ರ ಬ್ರಿಟಿಷ್ ಅಧಿಕಾರಿದ್ದು

Mount Everest: ಜಗತ್ತಿನ ಅತ್ಯುನ್ನತ ಶಿಖರವನ್ನು ಮೊದಲು ಅಳೆದಿದ್ದು ಬ್ರಿಟಿಷ್‌ ಸರ್ವೇಯರ್‌ ಜಾರ್ಜ್ ಎವರೆಸ್ವ್‌ ಎಂದು ಹೇಳಲಾಗುತ್ತೆ. ಆದರೆ ಅದು ತಪ್ಪು. ಮೌಂಟ್ ಎವರೆಸ್ಟ್​ನ ಎತ್ತರವನ್ನು ಸರಿಯಾಗಿ ಹಳೆದು ಬಹಿರಂಗ ಪಡಿಸಿದ ವ್ಯಕ್ತಿ ಭಾರತೀಯ ಗಣಿತಶಾಸ್ತ್ರಜ್ಞ ರಾಧಾನಾಥ್‌ ಸಿಕ್ದರ್‌. ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯ. ಮೌಂಟ್ ಎವರೆಸ್ಟ್ ಅನ್ನು ಸಿಕ್ದರ್ ಪರ್ವತ ಅಥವಾ ರಾಧಾನಾಥ ಪರ್ವತ ಎನ್ನಬಹುದಿತ್ತು. ಆದರೆ ಈ ಸತ್ಯ ಇತಿಹಾಸ ಪುಟಗಳಲ್ಲೇ ಮರೆಯಾಗಿದೆ.

ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಅಳೆದದ್ದು ಭಾರತೀಯ, ಆದ್ರೆ ಹೆಸರು ಮಾತ್ರ ಬ್ರಿಟಿಷ್ ಅಧಿಕಾರಿದ್ದು
ಭಾರತೀಯ ಗಣಿತಶಾಸ್ತ್ರಜ್ಞ ರಾಧಾನಾಥ್‌ ಸಿಕ್ದರ್‌, ಮೌಂಟ್ ಎವರೆಸ್ಟ್
Follow us
ಆಯೇಷಾ ಬಾನು
|

Updated on: Jun 15, 2024 | 10:25 AM

ಮೌಂಟ್‌ ಎವರೆಸ್ಟ್ (Mount Everest).. ಇದು ಪ್ರಪಂಚದ ಅತ್ಯುನ್ನತ ಶಿಖರ. ಒಮ್ಮೆಯಾದರೂ ಈ ಶಿಖರವನ್ನು ಏರಬೇಕು ಎಂಬುವುದು ಬಹುತೇಕ ಸಾಹಸಿಗಳ ಕನಸಾಗಿರುತ್ತೆ. ಇದಕ್ಕಾಗಿ ವರ್ಷಾನುಗಟ್ಟಲೆ ದೇಹ ದಂಡಿಸಿ, ತಯಾರಿ ನಡೆಸುವುದೂ ಉಂಟು. ಅಷ್ಟೇ ಅಲ್ಲ ಈ ಪರ್ವತ ತಲೆಮಾರುಗಳಿಂದ ವಿಜ್ಞಾನಿಗಳನ್ನೂ ಆಕರ್ಷಿಸುತ್ತಿದೆ. ಒಂದಷ್ಟು ರಹಸ್ಯಗಳನ್ನು ತನ್ನೊಡಲಲ್ಲಿಟ್ಟುಕೊಂಡಿದೆ. ಈ ಪರ್ವತದಲ್ಲಿ ರಾತ್ರಿಯ ಸಮಯದಲ್ಲಿ ಪರ್ವತದ ಶಿಖರವನ್ನು ಸುತ್ತುವರೆದಿರುವ ಹಿಮನದಿಗಳಿಂದ ವಿಲಕ್ಷಣವಾದ ಶಬ್ದಗಳು ಕೇಳಿಬರುತ್ತದೆ ಎಂಬ ಮಾತಿದೆ. ಜೊತೆಗೆ ಪರ್ವತ ಏರುವಾಗ ಪರ್ವತಾರೋಹಿಗಳು ನಾಪತ್ತೆಯಾದ ಘಟನೆಗಳೂ ನಡೆದಿವೆ. ಇದೆಲ್ಲ ಒಂದು ಕಡೆಯಾದ್ರೆ ಮತ್ತೊಂದೆಡೆ ಈ ಪರ್ವತದ ಎತ್ತರವನ್ನು ಮೊಟ್ಟ ಮೊದಲ ಬಾರಿಗೆ ಅಳೆದದ್ದು ಭಾರತೀಯ (Radhanath Sikdar). ಆದ್ರೆ ಈ ಪರ್ವತಕ್ಕೆ ಹೆಸರು ಸಿಕ್ಕಿದ್ದು ಮಾತ್ರ ಓರ್ವ ಬ್ರಿಟಿಷ್ ಅಧಿಕಾರಿಯದ್ದು.

ಪ್ರತಿ ವರ್ಷ ಮೇ 29 ರಂದು ಅಂತಾರಾಷ್ಟ್ರೀಯ ಎವರೆಸ್ಟ್ ದಿನವನ್ನು ಆಚರಿಸಲಾಗುತ್ತದೆ. 1953ರಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಮತ್ತು ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಅಲ್ಲಿ 15 ನಿಮಿಷಗಳ ಕಾಲ ಸಮಯ ಕಳೆದು ಸಾಧನೆ ಮಾಡಿದ್ದರು. ಅವರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತೆ. ಆದರೆ ನಾವಿಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಿರುವ ರಾಧಾನಾಥ್‌ ಸಿಕ್ದರ್‌ ಅವರನ್ನೇ ಮರೆತುಬಿಟ್ಟಿದ್ದೇವೆ. ಇತಿಹಾಸ ಕೂಡ ಭಾರತೀಯನ ಸಾಧನೆಯನ್ನು ಮರೆ ಮಾಚಿದೆ.

ಭಾರತ ಅಳೆಯಲು ಮುಂದಾದ ಬ್ರಿಟಿಷರು

ಅದು 1802. ಬ್ರಿಟಿಷರ ಆಳ್ವಿಕೆ ಸಮಯ. ಇಡೀ ಭಾರತವನ್ನು ಲೂಟಿ ಮಾಡಬೇಕೆಂಬ ಉದ್ದೇಶ ಹೊಂದಿದ್ದ ಬ್ರಿಟಿಷರು ಭಾರತದ ಅಧಿಕೃತ ನಕ್ಷೆ ತಯಾರಿಸಲು ಮುಂದಾಗುತ್ತಾರೆ. ಭಾರತದ ನಕ್ಷೆ ಇದ್ರೆ ದೇಶ ಆಳುವುದು ಸುಲಭ, ಸಪತ್ತಿನ ವಿವರಸಿಗುತ್ತೆ ಎಂದು ಭೂಮಾಪನ ಇಲಾಖೆಯನ್ನು ಅಸ್ತಿತ್ವಕ್ಕೆ ತರಲಾಗುತ್ತೆ. ಆಗಿನ ಗವರ್ನರ್‌ ಜನರಲ್‌ ಲಾರ್ಡ್‌ ವೆಲ್ಲೆಸ್ಲಿ ನಕ್ಷೆ ತಯಾರಿಸಲು ತೀರ್ಮಾನಿಸುತ್ತಾರೆ. ನಕ್ಷೆ ತಯಾರಿಸುವ ಯೋಜನೆಗೆ ‘ದಿ ಗ್ರೇಟ್‌ ಟ್ರಿಗ್ನಾಮೆಟ್ರಿಕಲ್‌ ಸರ್ವೆ’ ಎಂಬ ಹೆಸರಿಡಲಾಯಿತು. ಬಳಿಕ ನಕ್ಷೆ, ಸರ್ವೆಗಳಲ್ಲಿ ಆಸಕ್ತಿ ಹೊಂದಿದ್ದ ಸೈನಿಕ ವಿಲಿಯಂ ಲ್ಯಾಂಬ್ಟನ್‌ಗೆ ನಕ್ಷೆ ತಯಾರಿಸುವ ಹೊಣೆ ನೀಡಲಾಗುತ್ತೆ.

ನಕ್ಷೆ ತಯಾರಿಕೆಗೆ ನಿಂತ ಲ್ಯಾಂಬ್ಟನ್‌, ದಕ್ಷಿಣದ ಕನ್ಯಾಕುಮಾರಿಯಿಂದ ಶುರುವಾಗಿ ಉತ್ತರ ಭಾರತದ ಹಿಮಾಲಯದ ಕಡೆಗೆ ಹೋಗುವಷ್ಟರಲ್ಲಿ 2 ದಶಕಗಳು ಉರುಳಿ ಹೋದವು. ಹವಾಮಾನ ವೈಪರೀತ್ಯ, ರೋಗರುಜಿನ, ಹಾವುಕಡಿತ, ವನ್ಯಮೃಗಗಳ ದಾಳಿಯಂಥ ಹತ್ತಾರು ಸಮಸ್ಯೆಗಳಿಂದಾಗಿ ನಕ್ಷೆ ತಯಾರಿಸುವಲ್ಲಿ ತೊಡಗಿದ್ದ ನೂರಾರು ಭಾರತೀಯರು ಮೃತಪಟ್ಟರು. ಅಷ್ಟೇ ಅಲ್ಲ ಲ್ಯಾಂಬ್ಟನ್‌ ಅವರು ಕೂಡ 1823ರಲ್ಲಿ ಟಿಬಿ ಕಾಯಿಲೆಯಿಂದ ಸಾವನ್ನಪ್ಪಿದರು. ಆದರೆ ಭಾರತದ ನಕ್ಷೆ ಮಾತ್ರ ಪೂರ್ಣಗೊಂಡಿರಲಿಲ್ಲ. ಇನ್ನೂ ಅರ್ಧದಷ್ಟು ಕೆಲಸ ಬಾಕಿ ಇತ್ತು.

ನಕ್ಷೆ ತಯಾರಿಸುವಲ್ಲಿ ರಾಧಾನಾಥ್‌ ಸಿಕ್ದರ್‌ ಪಾತ್ರ

ನಕ್ಷೆ ತಯಾರಿಸುವ ಕೆಲಸ ಅರ್ಧಕ್ಕೆ ನಿಂತು ಹೋಗಿತ್ತು. ಆಗ ಬಂದದ್ದೆ ಜಾರ್ಜ್ ಎವರೆಸ್ವ್‌. ಲ್ಯಾಂಬ್ಟನ್‌ನ ಸಹಾಯಕನಾಗಿದ್ದ ಜಾರ್ಜ್ ಎವರೆಸ್ವ್‌ರಿಗೆ ಭಾರತದ ನಕ್ಷೆ ತಯಾರಿಸುವ ಹೊಣೆ ನೀಡಲಾಯಿತು. ಇವರು ಸಹಾಯವಾಗಲಿ ಎಂದು ಗಣಿತ ಸೂತ್ರ ಪ್ರವೀಣ, ಲೆಕ್ಕಪಂಡಿತ, ಬಂಗಾಳದ ರಾಧಾನಾಥ್‌ ಸಿಕ್ದರ್‌ ಅವರನ್ನು ಈ ಮಹಾಯೋಜನೆಗೆ ನಿಯೋಜಿಸಿಕೊಂಡ. ಆದರೆ ಇಲ್ಲಿ ವಿಪರ್ಯಾಸವೆಂದರೆ ಎವರೆಸ್ವ್‌ಗೂ ಸರ್ವೆ ಪೂರ್ಣಗೊಳಿಸಲಾಗಲಿಲ್ಲ. ಭಾರತ ಅಳೆಯಲು ಬಂದಿದ್ದ ಎವರೆಸ್ಟ್ ನಕ್ಷೆ ತಯಾರಿಸುವಲ್ಲಿ ಸೋತು ಕೊನೆಗೆ 1842ರಲ್ಲಿಇಂಗ್ಲೆಂಡಿಗೆ ವಾಪಾಸ್ ಆದ. ನಂತರ ಈ ಸರ್ವೆ ಮುನ್ನಡೆಸಿದವನು ಸ್ಕಾಟ್‌ ವಾ.

ಇಲ್ಲಿ ವಿಶೇಷವೆಂದರೆ ಗೋಳಾಕಾರದ ತ್ರಿಕೋನಮಿತಿಯಲ್ಲಿ ಪರಿಣತಿ ಸಾಧಿಸಿದ್ದ ಸಿಕ್ದರ್‌ ಅವರ ಚಾತುರತೆ, ಜಾಣ್ಮೆ ಬುದ್ಧಿವಂತ ಬ್ರಿಟಿಷರನ್ನೇ ಸವಾಲು ಮಾಡುವಂತಿತ್ತು. ಇವರು ತಮ್ಮ 19 ವರ್ಷದ ವಯಸ್ಸಿನಲ್ಲೇ ‘ಹ್ಯೂಮನ್‌ ಕಂಪ್ಯೂಟರ್‌’ನ ಕೆಲಸದೊಂದಿಗೆ ತಿಂಗಳಿಗೆ 30 ರೂಪಾಯಿ ಸಂಬಳ ಪಡೆದು, ಮುಂದಿನ 2 ದಶಕಗಳ ಕಾಲ ಸಮೀಕ್ಷಾ ತಂಡದೊಂದಿಗೆ ಮಾಪನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಅತಿ ಎತ್ತರದ ಪರ್ವತ ಕಂಡು ಹಿಡಿದ ಸ್ಕಾಟ್‌ ವಾ ಮತ್ತು ತಂಡ

ಕೊನೆಗೆ ನಕ್ಷೆ ಕಾರ್ಯ ಹಿಮಾಲಯಕ್ಕೆ ಬಂದು ನಿಂತಿತು. ಅದೊಂದು ದಿನ ಸ್ಕಾಟ್‌ ವಾ ಮತ್ತು ತಂಡ ‘ಪೀಕ್‌-15’ ಎಂಬ ಶಿಖರವನ್ನು ಗುರುತಿಸಿದರು. 28 ಸಾವಿರ ಅಡಿಗಳಷ್ಟು ಎತ್ತರವಿರುವ ಕಾಂಚನಜುಂಗಾವೇ ಅತಿ ಎತ್ತರದ ಶಿಖರ ಎಂದು ಹೇಳುತ್ತಿದ್ದ ಬ್ರಿಟಿಷರು ಪೀಕ್ 15 ಎತ್ತರದ ಪರ್ವತ ಎಂಬ ತರ್ಕಕ್ಕೆ ಬಂದರು. ಆದರೆ ಬ್ರಿಟಿಷರಿಗೆ ಪೀಕ್ 15ನ ನಿಖರ ಅಳತೆ ತಿಳಿದಿರಲಿಲ್ಲ. ಹೀಗಾಗಿ ಸ್ಕಾಟ್‌ ಈ ಪರ್ವತದ ಅಳತೆಯ ಕೆಲಸವನ್ನು ತನ್ನ ಅಧೀನ ಅಧಿಕಾರಿ ಜೇಮ್ಸ್ ನಿಕ್ಸನ್‌ಗೆ ವಹಿಸಿದ. 5 ವಿಭಿನ್ನ ಸ್ಥಳಗಳಿಂದ 30 ವೀಕ್ಷಣೆಗಳ ಲೆಕ್ಕಾಚಾರದೊಂದಿಗೆ ಪೀಕ್‌-15 ಶಿಖರವು 30,200 ಅಡಿ ಎತ್ತರವಿದೆ ಎಂದು ಹೇಳಲಾಯಿತು. ಆದರೆ ಅಳತೆ ವೇಳೆ ನಿಕೋಲ್ಸನ್‌ ದೊಡ್ಡ ತಪ್ಪು ಮಾಡಿದ್ದ. ಎತ್ತರವನ್ನು ಅಳೆಯುವಾಗ ಬೆಳಕಿನ ಪ್ರತಿಫಲನವನ್ನೇ ಪರಿಗಣಿಸಿರಲಿಲ್ಲ. ಇದು ಅವನ ಎಲ್ಲಾ ಡೇಟಾವನ್ನು ಗೊಂದಲಕ್ಕೀಡು ಮಾಡಿತ್ತು. ಈ ತಪ್ಪನ್ನು ಸರಿಪಡಿಸುವ ಮುನ್ನವೇ ನಿಕೋಲ್ಸನ್​ಗೆ ಮಲೇರಿಯಾ ಬಂದು ಆತ ಮೃತಪಟ್ಟ.

ಪೀಕ್ 15 ಪರ್ವತ ಅಳೆಯುವ ಕೆಲಸ ನಿಂತು ಹೋಯಿತು ಎಂಬ ಚಿಂತೆ ಸ್ಕಾಟ್‌ ವಾಗೆ ಕಾಡಲು ಆರಂಭವಾಯಿತು. ಇಂತಹ ಕಷ್ಟದ ಸಮಯದಲ್ಲಿ ಆಸರೆಯಾಗಿದ್ದೇ ರಾಧಾನಾಥ್‌ ಸಿಕ್ದರ್‌. ತಮ್ಮ ಜಾಣ್ಮೆ, ಚಾತುರತೆ ಬಳಸಿ ಪರ್ವತ ಅಳೆಯಲು ನಿಂತರು. ಬಹಳಷ್ಟು ಸಮಯ ಪೀಕ್‌-15 ಸುತ್ತಮುತ್ತ ಕಳೆದ ಸಿಕ್ದರ್‌, ಅದೊಂದು ದಿನ ಡೆಹ್ರಾಡೂನ್‌ನ ಕಚೇರಿಗೆ ಓಡಿಬಂದು, ‘ಜಗತ್ತಿನ ಎತ್ತರದ ಶಿಖರವನ್ನು ಗುರುತಿಸಿದೆ’ ಎಂದು ಕುಣಿದಾಡಿದರು.

ರಾಧಾನಾಥ್‌ ಸಿಕ್ದರ್‌ ಮುಂದಿಟ್ಟ ಸೂತ್ರಗಳ ಲೆಕ್ಕಾಚಾರ ಆಧರಿಸಿ, ಈ ಪರ್ವತದ ಶಿಖರದ ಎತ್ತರವು ನಿಖರವಾಗಿ 29 ಸಾವಿರ ಅಡಿಗಳು ಎಂದು ತೀರ್ಮಾನಕ್ಕೆ ಬರಲಾಯಿತು. ಆದರೆ, ರೌಂಡ್‌ ಫಿಗರ್‌ ಸಂಖ್ಯೆ ಮುಂದೊಂದು ದಿನ ಪ್ರಶ್ನೆಗಳಿಗೆ ಕಾರಣವಾಗಬಾರದು ಎಂಬ ಉದ್ದೇಶದಿಂದ 2 ಅಡಿಗಳನ್ನು ಸೇರಿಸಿ, 29,002 ಅಡಿ ಎಂದು ಪರಿಗಣಿಸಲಾಯಿತು. ವಿಶ್ವದ ಅತಿ ಎತ್ತರದ ಶಿಖರವನ್ನು ಅಳೆಯಲು 4 ವರ್ಷಗಳನ್ನೇ ತೆಗೆದುಕೊಂಡು, 1852ರಲ್ಲಿ ಪೂರ್ಣಗೊಳಿಸಲಾಗಿತ್ತು.

ಗುರು ದಕ್ಷಿಣೆ ಎಂದು ಪರ್ವತಕ್ಕೆ ಎವರೆಸ್ಟ್ ಹೆಸರು

ಅತಿ ಎತ್ತರದ ಪೀಕ್-15 ಶಿಖರದ ನಿಖರ ಅಳತೆ ತಿಳಿದ ನಂತರ ಈ ಶಿಖರಕ್ಕೆ ಏನೆಂದು ಹೆಸರಿಡಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಕೊನೆಗೆ ರಾಯಲ್‌ ಜಿಯೋಗ್ರಫಿಕಲ್‌ ಸೊಸೈಟಿ 1865ರಲ್ಲಿ ಈ ಶಿಖರವನ್ನು ‘ಮೌಂಟ್‌ ಎವರೆಸ್ಟ್‌’ ಎಂದು ಘೋಷಿಸಿತು. ಇತಿಹಾಸಕಾರ ಜಾನ್‌ ಕೀ ಪ್ರಕಾರ, ಸ್ಕಾಟ್‌ ತನ್ನ ಗುರು ಎವರೆಸ್ಟ್‌ಗೆ ನೀಡಿದ ಗುರುದಕ್ಷಿಣೆ ಇದಾಗಿತ್ತು. 1870ರ ಮೇ 17ರಂದು ಕುಷ್ಠರೋಗದಿಂದ ಮಡಿದ ಸಿಕ್ದರ್‌ನ ಸಮಾಧಿ ಕೋಲ್ಕತ್ತಾ ಸನಿಹದ ಚಂದನ್‌ನಗರದ ಕ್ಯಾಥೋಲಿಕ್‌ ಸ್ಮಶಾನದಲ್ಲಿದೆ. ಸಮಾಧಿಗಲ್ಲಿನ ಮೇಲೆ, ಪರ್ವತ ಏರುತ್ತಿರುವ ಮನುಷ್ಯನ ಆಕೃತಿ ಕೆತ್ತಲಾಗಿದೆ. ‘ಮೌಂಟ್‌ ಎವರೆಸ್ವ್‌ನ ಎತ್ತರವನ್ನು ಅಳೆದವ’ ಎಂಬ ಸಾಲುಗಳೂ ಇವೆ.

ಭೂಗೋಳ ಮತ್ತು ಹವಾಮಾನ; ಪ್ರತಿ ವರ್ಷ ಬೆಳೆಯುತ್ತೆ ಮೌಂಟ್ ಎವರೆಸ್ಟ್

ಇನ್ನು ಮೌಂಟ್ ಎವರೆಸ್ಟ್ ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿದೆ. ಮೌಂಟ್ ಎವರೆಸ್ಟ್ ಹಿಮಾಲಯದ ಭಾಗವಾಗಿದೆ. ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯ ಚಲನೆಯಿಂದಾಗಿ ಯುರೇಷಿಯ ಮತ್ತು ಇಂಡೋ-ಆಸ್ಟ್ರೇಲಿಯನ್ ಭೂತಳಗಳ ಘರ್ಷಣೆಯಿಂದಾಗಿ ಈ ಪರ್ವತ ರೂಪುಗೊಂಡಿತು ಎಂದು ಭೂವಿಜ್ಞಾನಿಗಳು ಹೇಳುತ್ತಾರೆ. ಅಷ್ಟೇ ಅಲ್ಲದೆ ಇಂಡೋ-ಆಸ್ಟ್ರೇಲಿಯನ್ ಪ್ಲೇಟ್ ಇವತ್ತಿಗೂ ಉತ್ತರ ದಿಕ್ಕಿಗೆ ಚಲಿಸುತ್ತಿರುವುದರಿಂದ ಹಿಮಾಲಯ ಪರ್ವತಗಳು ಪ್ರತಿ ವರ್ಷ ಕೆಲವು ಸೆಂಟಿಮೀಟರ್‌ಗಳಷ್ಟು ಬೆಳೆಯುತ್ತಿವೆ ಎಂಬುವುದು ವಿಜ್ಞಾನಿಗಳ ಮಾತು. ಈ ಮಾತಿನಂತೆ ಪ್ರತಿ ವರ್ಷ ಮೌಂಟ್ ಎವರೆಸ್ಟ್ ಬೆಳೆಯುತ್ತಿರುವುದು ವರದಿಗಳಿಂದ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿಯೇ ಕೈಲಾಸ ಪರ್ವತದಲ್ಲಿಯೂ ಬದಲಾವಣೆಗಳಾಗುತ್ತಿವೆ ಎಂಬುವುದನ್ನು ನಾವಿಲ್ಲಿ ನೆನೆಯಬಹುದು.

ಮೌಂಟ್ ಎವರೆಸ್ಟ್ ಮೂರು ದಿಕ್ಕಿನಲ್ಲಿ ಪಿರಮಿಡ್ ಆಕಾರದಲ್ಲಿದೆ. ಜುಲೈನಲ್ಲಿ ಇಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗುತ್ತೆ ಅಂದ್ರೆ ಸುಮಾರು -18 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಜನವರಿಯಲ್ಲಿ, ತಾಪಮಾನವು -76 ಡಿಗ್ರಿ ಎಫ್ (-60 ಡಿಗ್ರಿ ಸಿ) ಗೆ ಇರುತ್ತದೆ. ಈ ಸಮಯದಲ್ಲಿ ಪರ್ವತದ ಸಮೀಪಕ್ಕೂ ಜನ ಹೋಗಲಾಗುವುದಿಲ್ಲ. ಅಷ್ಟೊಂದು ಮೂಳೆ ಕೊರೆಯುವ ಚಳಿ ಇರುತ್ತದೆ.

ಮೌಂಟ್​ ಎವರೆಸ್ಟ್​ಗೆ ಇದೆ ನಾನಾ ಹೆಸರುಗಳು

ಭಾರತೀಯರು ಮೌಂಟ್ ಎವರೆಸ್ಟ್ ಅನ್ನು ಗೌರೀಶಂಕರ ಶಿಖರವೆಂದು ಕರೆಯುತ್ತಾರೆ. ಟಿಬೆಟ್ಟನ್ನರು ಚೊಮೊಲುಂಗ್ಮ ಎಂದೂ, ಚೀನಾದಲ್ಲಿ ಕೊಮೊಲಾಂಗ್ಮಾ ಹಾಗೂ ನೇಪಾಳಿಗರು ಸಾಗರ ಮಾತಾ ಪರ್ವತ ಎಂದು ಕರೆಯುತ್ತಾರೆ.

4 ವರ್ಷದ ಹಿಂದೆ ಮೌಂಟ್ ಎವರೆಸ್ಟ್ ಎತ್ತರ ಅಳೆದಿದ್ದ ನೇಪಾಳ ಸರ್ಕಾರ

ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎತ್ತರದ ಕುರಿತು 4 ವರ್ಷದ ಹಿಂದೆ ಅಂದರೆ 2020ರಲ್ಲಿ ನೇಪಾಳ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಮೌಂಟ್ ಎವರೆಸ್ಟ್ ಎತ್ತರ 8848.86 ಮೀಟರ್. 2015ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನೇಪಾಳ ಭೂಕಂಪನದ ನಂತರ ಮೌಂಟ್ ಎವರೆಸ್ಟ್ ನ ಎತ್ತರದಲ್ಲಿ ಬದಲಾವಣೆಯಾಗಿದೆ ಎಂದು ಅನೇಕ ತಜ್ಞರು ವಾದಿಸುತ್ತಿದ್ದರು. ಹೀಗಾಗಿ ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್​ನ ಎತ್ತರವನ್ನು ಅಳೆಯಲು ಮುಂದಾಗಿತ್ತು. ಇದಕ್ಕಾಗಿ ನೇಪಾಳಿ ಅಧಿಕಾರಿಗಳು ಮತ್ತು ತಜ್ಞರನ್ನು ನಿಯೋಜಿಸಲಾಯಿತು. ಬಳಿಕ ನೇಪಾಳ ಸರ್ಕಾರವು ತನ್ನ ದೇಶೀಯ ಪ್ರಯತ್ನಗಳಲ್ಲಿ ಚೀನಾದೊಂದಿಗೆ ಸಮನ್ವಯ ಸಾಧಿಸಿತು.

2019ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನೇಪಾಳಕ್ಕೆ ಬಂದಾಗ ಉಭಯ ರಾಷ್ಟ್ರಗಳು ಜಂಟಿಯಾಗಿ ಮೌಂಟ್ ಎವರೆಸ್ಟ್​ನ ಎತ್ತರವನ್ನು ಅಳೆದು ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಈ ಮೂಲಕ ಶಿಖರದ ಎತ್ತರ 8848.86 ಮೀಟರ್ ಎಂದು ಗುರುತಿಸಲಾಗಿದೆ. 1954ರಲ್ಲಿ ಸರ್ವೆ ಆಫ್ ಇಂಡಿಯಾ ಈ ಶಿಖರವನ್ನು ಅಳೆದಿತ್ತು. ಆಗ ಎತ್ತರ 8,848 ಮೀಟರ್ ಇದೆ ಎಂದು ಘೋಷಿಸಲಾಗಿತ್ತು. 66 ವರ್ಷಗಳ ಬಳಿಕ ಮೌಂಟ್ ಎವರೆಸ್ಟ್ ನ ಎತ್ತರದಲ್ಲಿ 0.86 ಮೀಟರ್ ಹೆಚ್ಚಳ ಕಂಡುಬಂದಿದೆ ಎಂದು 2020ರಲ್ಲಿ ನೇಪಾಳ ಸರ್ಕಾರ ಎತ್ತರವನ್ನು ಅಳೆದು ಘೋಷಣೆ ಮಾಡಿತ್ತು.

ಪರ್ವತಾರೋಹಿಗಳಿಗೆ ಶರ್ಪಾಗಳೇ ಗೈಡ್

ನೇಪಾಳದ ಗುಡ್ಡಗಾಡು ಜನಾಂಗದವರಾಗಿರುವ ಶೆರ್ಪಾ ಸಮುದಾಯಗಳು ಪರ್ವತ ಏರಲು ವಿದೇಶಿ ಸಾಹಸಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಜೀವನವನ್ನು ನಡೆಸುತ್ತವೆ. ಇಲ್ಲಿನ ಪರ್ವತಗಳ ಬಗ್ಗೆ ಇಂಚಿಂಚು ಮಾಹಿತಿಗಳನ್ನು ತಿಳಿದುಕೊಂಡಿರುವ ಶೆರ್ಪಾಗಳು ಅತ್ಯಂತ ಸಾಹಸಿಗಳು. ಮೊಟ್ಟ ಮೊದಲ ಬಾರಿಗೆ ಪರ್ವತ ಏರಿದ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಅವರ ಜೊತೆಗೆ ಗೈಡ್ ಆಗಿ ಹೋಗಿದ್ದ ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾ ಅವರು ಈಗ ಇತಿಹಾಸದ ಪುಟ ಸೇರಿದ್ದಾರೆ. ಈ ಶೆರ್ಪಾಗಳು ಲೋಕಲ್ ಗೈಡ್ ಆಗಿ ಪರ್ವತಾರೋಹಿಗಳಿಗೆ ಬೇಕಾಗುವ ಆಹಾರ, ನೀರು, ಔಷಧ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ನಮ್ಮ ಹೆಗಲ ಮೇಲೆ ಹೊತ್ತು ಮಾರ್ಗದರ್ಶನ ಮಾಡುತ್ತ ಪರ್ವತ ಏರಲು ಸಹಾಯ ಮಾಡುತ್ತಾರೆ. ಕಮಿ ರೀಟಾ ಶೆರ್ಪಾ ಎನ್ನುವವರು 24 ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ.

ಪರ್ವತ ಹತ್ತುವಾಗ ಶವಗಳನ್ನು ದಾಟಿ ಸಾಗುವ ಸ್ಥಿತಿ

ಇನ್ನು 1953ರಲ್ಲಿ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ, ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾರ ಬಳಿಕ 1924ರಲ್ಲಿ ಮತ್ತಿಬ್ಬರು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರಲು ಹೋಗಿ ನಾಪತ್ತೆಯಾಗಿದ್ದರು. ಈವರೆಗೆ ಸಾವಿರಾರು ಪರ್ವತಾರೋಹಿಗಳು 11,000 ಕ್ಕೂ ಹೆಚ್ಚು ಬಾರಿ ಮೌಂಟ್ ಎವರೆಸ್ಟ್ ಏರಿದ್ದಾರೆ. ಈ ಪ್ರಯತ್ನದಲ್ಲಿ ಮೇ.2024ರ ವರೆಗೆ ಸುಮಾರು 340 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಶೋಕನೀಯವೆಂದರೆ ಮೌಂಟ್ ಎವರೆಸ್ಟ್ ಮೇಲೆ 200ಕ್ಕೂ ಹೆಚ್ಚು ಮೃತ ದೇಹಗಳು ಹಾಗೇ ಉಳಿದಿವೆ. ಮಂಜುಗಡ್ಡೆಗಳಿಂದ ಸಂರಕ್ಷಿಸಲ್ಪಡುತ್ತಿವೆ. ಪರ್ವತಾರೋಹಿಗಳು ಪರ್ವತ ಹತ್ತುವಾಗ ಈ ಶವಗಳು ಅಡ್ಡಬರುತ್ತವೆ. ಅವುಗಳನ್ನು ದಾಟಿ ನಾವು ಪರ್ವತ ಏರಬೇಕು ಎಂದು ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸ್ಮಿತಾ ಲಕ್ಷ್ಮಣ್ ಮೌಂಟ್ ಎವರೆಸ್ಟ್ ಹತ್ತಿದ ಕರ್ನಾಟಕದ ಮೊದಲ ಮಹಿಳೆ

ಇತ್ತೀಚೆಗೆ ದ್ವಿತೀಯ ಪಿಯುಸಿ ಓದುತ್ತಿರುವ 16 ವರ್ಷದ ಕಾಮ್ಯಾ ಕಾರ್ತಿಕೇಯನ್ ಎಂಬ ಬಾಲಕಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಎರಡನೇ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರು. ಇನ್ನು ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಸ್ಮಿತಾ ಲಕ್ಷ್ಮಣ್ ಅವರು ಮೌಂಟ್ ಎವರೆಸ್ಟ್ ಏರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಎವರೆಸ್ಟ್ ಶಿಖರ ಏರಲು ಬಯಸುವ ವಿದೇಶಿಗರು ಚೀನಾಕ್ಕೆ ಪ್ರವಾಸಿ ವೀಸಾ ಪಡೆಯುವ ಜೊತೆಗೆ ಅರೆ ಸ್ವಾಯತ್ತ ಪ್ರದೇಶವಾದ ಟಿಬೆಟ್‌ಗೂ ಪ್ರತ್ಯೇಕ ವೀಸಾ ಹೊಂದಿರಬೇಕು. ಎವರೆಸ್ಟ್ ಶಿಖರ ಏರುವ ಅವಧಿಯು ಸಾಮಾನ್ಯವಾಗಿ ಏಪ್ರಿಲ್ ಅಂತ್ಯದಿಂದ ಮೇ ಮಧ್ಯದವರೆಗೆ ಇರುತ್ತದೆ. ಈ ಸಮಯದಲ್ಲೇ ಶಿಖರ ಏರಲು ಸೂಕ್ತ ಸಮಯ. ಚೀನಾದಲ್ಲಿ ಕೊಮೊಲಾಂಗ್ಮಾ ಎಂದು ಕರೆಯಲ್ಪಡುವ ಪರ್ವತವನ್ನು ಏರಡಲಿರುವ ಎಲ್ಲ ಪಾಸ್‌ಗಳನ್ನು ಬೀಜಿಂಗ್ ಪ್ರವಾಸೋದ್ಯಮ ಅಧಿಕಾರಿ ಅಥವಾ ಕೌನ್ಸಿಲ್ ಬದಲಿಗೆ ಚೀನಾ ಟಿಬೆಟ್ ಪರ್ವತಾರೋಹಣ ಸಂಘ ವಿತರಿಸುತ್ತದೆ.‌ ಮೌಂಟ್ ಎವರೆಸ್ಟ್ ಹತ್ತಲು ಬರೋಬ್ಬರಿ 20-25 ಲಕ್ಷ ರೂಪಾಯಿ ಬೇಕಾಗುತ್ತದೆ. ಹಾಘೂ ಪರ್ವತವನ್ನು ಏರಿ ತುತ್ತತುದಿ ತಲುಪಲು 10 ವಾರ ಬೇಕಾಗುತ್ತದೆ.

ಮೌಂಟ್ ಎವರೆಸ್ಟ್ ಅನ್ನು ನೇಪಾಳದ ಕಡೆಯಿಂದ ಹತ್ತುವುದಕ್ಕಿಂತ ಚೀನಾದ ಕಡೆಯಿಂದ ಏರುವುದು ಉತ್ತಮ. ಇದು ಹೆಚ್ಚು ಸುರಕ್ಷಿತ ಮಾರ್ಗ ಎಂದು ಅನೇಕರು ತಿಳಿಸಿದ್ದಾರೆ.

ಮೌಂಟ್ ಎವರೆಸ್ಟ್ ಸಮಸ್ಯೆಗಳ ಆಗರ

ಮೂಳೆ ಕೊರೆಯುವ ಚಳಿ, ಆಳ ಅಳೆಯಲಾಗದ ಹಿಮಪಾತ, ಯಾವಾಗಂದರೆ ಆವಾಗ ಕುಸಿಯುವ ಹಿಮ, ಆಮ್ಲಜನಕದ ಕೊರತೆ ಹೀಗೆ ಅನೇಕ ತೊಂದರೆಗಳನ್ನು ಪರ್ವತಾರೋಹಿಗಳು ಎದುರಿಸುತ್ತಾರೆ. ಜೊತೆಗೆ ಅತಿವೇಗದ ಗಾಳಿ, ಕೆಡುವ ಹವಾಮಾನ, ಎತ್ತರಕ್ಕೇರಿದಂತೆ ಕಾಡುವ ಬೇನೆ ಎದೆ ಬಡಿತ ನಿಲ್ಲಿಸುವಂತಿರುತ್ತದೆ.

ಮೌಂಟ್ ಎವರೆಸ್ಟ್​ನಲ್ಲಿದೆ ಡೆತ್ ಝೋನ್

8000 ಮೀ (26000 ಅಡಿ) ಎತ್ತರ ದಾಟಿದ ನಂತರ ಎದುರಾಗುವ ಎತ್ತರವನ್ನು ಸಾವಿನ ವಲಯ ಅಥವಾ Death Zone ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಆಮ್ಲಜನಕ ಅತ್ಯಂತ ಕಡಿಮೆಯಾಗುತ್ತದೆ. ಸಿಲಿಂಡರುಗಳ ಮೂಲಕ ಉಸಿರಾಡಬೇಕಾಗುತ್ತೆ. ಇಲ್ಲಿ ಎದುರಾಗುವ ಅಪಾಯಗಳು ಅತಿ ಅನೀರೀಕ್ಷಿತವಾಗಿದ್ದು ಪರ್ವತಾರೋಹಿಗಳು ಕೆಲವೊಮ್ಮೆ ಮಾನಸಿಕ ಕ್ಲೇಶಕ್ಕೂ ಒಳಗಾಗುತ್ತಾರೆ.

ವಿಶ್ವದ ಅತಿ ಎತ್ತರದ ಬೆಟ್ಟ

8848 ಮೀಟರ್ (29029 ಅಡಿ) ಎತ್ತರವಿರುವ ಮೌಂಟ್ ಎವರೆಸ್ಟ್ ವಿಶ್ವದ ಅತಿ ಎತ್ತರದ ಬೆಟ್ಟ. ಆದರೆ ಇದು ಸಾಗರ ಮಟ್ಟದಿಂದ ಅಳೆಯುವ ಎತ್ತರವಾಗಿದೆ. ಒಂದು ವೇಳೆ ಸಾಗರದ ತಳದಿಂದ ಎದ್ದಿದ್ದು ನೆಲದ ಮೇಲಕ್ಕೂ ಚಾಚಿರುವ ಪರ್ವತದ ನಿಜವಾದ ಎತ್ತರವನ್ನು ಪರಿಗಣಿಸುವುದಾದರೆ ಪೆಸಿಫಿಕ್ ಮಹಾಸಾಗರದ ನಡುವೆ ಹವಾಯಿ ಬಳಿ ಇರುವ ಮೌನಾ ಕಿಯಾ ಎಂಬ ದ್ವೀಪ ವಾಸ್ತವವಾಗಿ ಸಮುದ್ರ ತಳದಲ್ಲಿ ಬುಡವಿರುವ ಅತಿ ಎತ್ತರದ ಬೆಟ್ಟವಾಗಿದೆ. ಸಮುದ್ರ ತಳ ಇದರ ಬುಡದಿಂದ ಶಿಖರ ಅಳೆಯುವುದಾದರೆ 33,000 ಅಡಿಗಳ ಎತ್ತರದ ಮೂಲಕ ವಿಶ್ವದ ಅತಿ ಎತ್ತರದ ಬೆಟ್ಟವಾಗಿದೆ. ಇದು ನೇಪಾಳ ಮತ್ತು ಟಿಬೆಟ್ (ಚೀನಾ) ನಡುವೆ ಇರುವ ಹಿಮಾಲಯ ಪರ್ವತ ಶ್ರೇಣಿಯ ಸಾವಿರಾರು ಬೆಟ್ಟಗಳ ನಡುವೆ ಇದೆ.

ಮೌಂಟ್ ಎವರೆಸ್ಟ್ ಕೊಳಕಾದ ಪರ್ವತ

ಮೌಂಟ್ ಎವರೆಸ್ಟ್ ಏರಲು ಪ್ರತಿ ವರ್ಷ ನೂರಾರು ಮಂದಿ ಅರ್ಜಿ ಹಾಕಿ ಬರ್ತಾರೆ. ಅನೇಕ ಮಂದಿ ತಮ್ಮ ದೇಶಗಳ ಬಾವುಟ, ಇನ್ನಿತರ ವಸ್ತುಗಳನ್ನು ಶಿಖರದ ಮೇಲೆಯೇ ಬಿಸಾಕಿಬಿಡುತ್ತಾರೆ. ಆ ತ್ಯಾಜ್ಯ ಮಂಜುಗಡ್ಡೆಯಾಗಿ ಕೊಳೆತುಹೋಗದೆ ಪ್ರಕೃತಿಗೆ ಮಾರಕವಾಗುತ್ತಿದೆ. ಇನ್ನು ಬೇಸ್ ಕ್ಯಾಂಪ್ ಪ್ರದೇಶಗಳಲ್ಲಿ “fecal time bomb’ ಸೃಷ್ಟಿಯಾಗಿವೆ. ಅಂದರೆ ಪರ್ವತಾರೋಹಿಗಳು ತಂಗುವ ಪ್ರದೇಶಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ಅದು ಐಸ್‌ನಲ್ಲಿ ಕೊಳೆಯದೆ “fecal time bomb’ ಆಗಲು ಕಾರಣವಾಗಿದೆ.

Mount Everest Indian mathematician radhanath sikdar Who calculated height of mount everest and things you might not know about mount everest

ಮೌಂಟ್ ಎವರೆಸ್ಟ್

ಮಿಲಿಟರಿ ಪೋಸ್ಟ್, ಕ್ಯಾಂಪ್‌ಗಳು ಮತ್ತು ಮಿಲಿಟರಿ ವಸತಿಗಳನ್ನು ಕಟ್ಟಿಕೊಂಡು ಲಕ್ಷಾಂತರ ವಾಹನಗಳನ್ನು ಚಲಿಸುತ್ತ ವಿಷ ಅನಿಲ ಸುರಿಸುತ್ತಾ ಹಿಮಾಲಯದ ಗಾಳಿಯನ್ನು ಕಲುಚಿತಗೊಳಿಸುತ್ತಿವೆ. ಹೀಗೆ ಎಂದೆರಡಲ್ಲ ಶಿಖರ ಏರಲು ಬರುವ ಪರ್ವತಾರೋಹಿಗಳಿಂದಲೇ ಪ್ರಕೃತಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಪೈಕಿ ಕೆಲ ಪರ್ವತಾರೋಹಿಗಳು ಸ್ವಚ್ಛತೆ ಬಗ್ಗೆ ಗಮನ ಹರಿಸುವುದನ್ನೂ ನಾವು ನೋಡಬಹುದು.

ಇನ್ನು ಅಂತಿಮವಾಗಿ ದೇಶ, ವಿದೇಶದ ಸಾಹಸಿ ಜನರನ್ನು ಆಕರ್ಷಿಸುತ್ತಿರುವ ಹಿಮಾಲಯ ಪ್ರಕೃತಿಯ ಅತ್ಯುನ್ನತ ಕೊಡುಗೆ. ಮೌಂಟ್ ಎವರೆಸ್ಟ್ ಏರುತ್ತ ಸಾಹಸ ಪ್ರದರ್ಶಿಸುವ ನಾವು ಅದೇ ಶಿಖರದ ಅಂದ ಹಾಳಾಗದಂತೆ ನೋಡಿಕೊಳ್ಳುವ ಹೊಣೆಯನ್ನೂ ಹೊರಬೇಕು. ಜೊತೆಗೆ ಪ್ರಕೃತಿಯ ವಿಸ್ಮಯಕ್ಕೆ ತಲೆ ಬಾಗಬೇಕು. ಹಾಲಿವುಡ್​ನ ಎವರೆಸ್ಟ್ ಎಂಬ ಸಿನಿಮಾದಲ್ಲಿ ಮೌಂಟ್ ಎವರೆಸ್ಟ್ ಏರಲು ಪರ್ವತಾರೋಹಿಗಳು ಎದುರಿಸುವ ಸಮಸ್ಯೆ, ಸಂಕಟ, ನೋವು, ಛಲ ಎಲ್ಲದರ ಬಗ್ಗೆ ವಿವರಿಸಲಾಗಿದೆ. ನೈಜ್ಯ ಘಟನೆ ಆಧರಿಸಿ ಮಾಡಲಾಗಿರುವ ಈ ಸಿನಿಮಾ ಮೌಂಟ್ ಎವರೆಸ್ಟ್​ನ ನಿಗೂಢ ಮುಖವನ್ನು ಬಯಲು ಮಾಡಿದೆ.

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ