ಭೋಟೆ ಕೋಶಿ ನದಿಯ ಹರಿವು ಹೆಚ್ಚಾಗುತ್ತಿದ್ದಂತೆ ನೇಪಾಳದಲ್ಲಿ ಕಟ್ಟೆಚ್ಚರ, ಮತ್ತೆ ಪ್ರವಾಹದ ಭೀತಿ

ನೇಪಾಳದಲ್ಲಿ ಭೋಟೆ ಕೋಶಿ ನದಿಯ ಹರಿವು ಹೆಚ್ಚಾಗಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಟಿಬೆಟ್ ಗಡಿಯಲ್ಲಿ ಹೊಸ ಕೃತಕ ಸರೋವರದ ಅಪಾಯದಿಂದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಟ್ಟೆಚ್ಚರ ಘೋಷಿಸಿದೆ. ಪ್ರವಾಹದಲ್ಲಿ 675 ಸಾವುಗಳು, 2,400ಕ್ಕೂ ಹೆಚ್ಚು ನಾಪತ್ತೆ. ಭಾರತವು 'ಆಪರೇಷನ್ ಮೈತ್ರಿ' ಮಾದರಿಯಲ್ಲಿ 68.5 ಟನ್‌ಗೂ ಹೆಚ್ಚು ಪರಿಹಾರ ಸಾಮಗ್ರಿ ಹಾಗೂ ರಕ್ಷಣಾ ತಂಡಗಳನ್ನು ಕಳುಹಿಸಿ ನೆರವಾಗಿದೆ.

ಭೋಟೆ ಕೋಶಿ ನದಿಯ ಹರಿವು ಹೆಚ್ಚಾಗುತ್ತಿದ್ದಂತೆ ನೇಪಾಳದಲ್ಲಿ ಕಟ್ಟೆಚ್ಚರ, ಮತ್ತೆ ಪ್ರವಾಹದ ಭೀತಿ
ನೇಪಾಳ

Updated on: Aug 30, 2026 | 8:04 AM

ಕಠ್ಮಂಡು, ಆಗಸ್ಟ್​ 30: ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ವಿನಾಶಕಾರಿ ಜಲಪ್ರಳಯದ ಬೆನ್ನಲ್ಲೇ ಭೋಟೆ ಕೋಶಿ ನದಿಯಲ್ಲಿ ನೀರಿನ ಹರಿವು ಮತ್ತು ಭಾರಿ ಶಬ್ದ ದಿಢೀರ್ ಹೆಚ್ಚಾಗಿದೆ. ಇದರಿಂದಾಗಿ ನದಿಯ ಕೆಳಭಾಗದ ಪ್ರದೇಶಗಳಿಗೆ ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊಸ ಪ್ರವಾಹ(Flood)ದ ತುರ್ತು ಎಚ್ಚರಿಕೆ ನೀಡಿದೆ. ಈ ಮಹಾದುರಂತದಲ್ಲಿ ಮೃತಪಟ್ಟವರ ಸಂಖ್ಯೆ 675ಕ್ಕೆ ಏರಿಕೆಯಾಗಿದ್ದು, 2,400 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಭೋಟೆ ಕೋಶಿ ನದಿ ತೀರದಲ್ಲಿ ಹೊಸ ಕಟ್ಟೆಚ್ಚರ

3 ಜಿಲ್ಲೆಗಳಿಗೆ ಅಲರ್ಟ್: ರಸುವಾ, ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳ ನದಿ ತೀರದ ನಿವಾಸಿಗಳು ತಕ್ಷಣವೇ ಸುರಕ್ಷಿತ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಟಿಬೆಟ್ ಗಡಿಯಲ್ಲಿ ನದಿಯ ಹರಿವಿಗೆ ಅಡ್ಡಲಾಗಿ ಹೊಸ ಕೃತಕ ಸರೋವರ ನಿರ್ಮಾಣವಾಗಿದ್ದು, ಅದು ಒಡೆದರೆ ಮತ್ತೊಂದು ಸುತ್ತಿನ ಪ್ರವಾಹ ನುಗ್ಗುವ ಸಾಧ್ಯತೆಯಿದೆ ಎಂದು ಚೀನಾ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಶವಗಳ ಪತ್ತೆ ವಿವರ: ಚಿತಾವಾನ್‌ನಲ್ಲಿ 246, ನವಲ್ಪರಾಸಿ ಪೂರ್ವದಲ್ಲಿ 165, ಪಶ್ಚಿಮದಲ್ಲಿ 63, ಗೂರ್ಖಾದಲ್ಲಿ 57, ಧಾಡಿಂಗ್‌ನಲ್ಲಿ 45, ನುವಾಕೋಟ್‌ನಲ್ಲಿ 51, ತನಾಹುದಲ್ಲಿ 35ಹಾಗೂ ರಸುವಾದಲ್ಲಿ 13 ಮೃತದೇಹಗಳು ಪತ್ತೆಯಾಗಿವೆ.

ಭಾರತೀಯರ ರಕ್ಷಣೆ ಮತ್ತು ನಾಪತ್ತೆಯಾದವರ ವಿವರ:

ಕೈಲಾಸ ಮಾನಸ ಸರೋವರ ಯಾತ್ರಿಕರು ಹಾಗೂ ಜಲವಿದ್ಯುತ್ ಯೋಜನೆಗಳ ಕಾರ್ಮಿಕರು ಸೇರಿದಂತೆ 275 ಕ್ಕೂ ಹೆಚ್ಚು ಭಾರತೀಯರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ, ಇದುವರೆಗೆ 108 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಮತ್ತಷ್ಟು ಓದಿ: ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು

ರಸುವಾ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ರಿಪು ಕುಮಾರ್, ಚಾನೇಶ್ವರ ನರ್ಜರಿ, ಕೃಪಾ ಶಂಕರ್ ಮತ್ತು ಮೊಹಮ್ಮದ್ ಮಿನ್ಹಾಜುದ್ದೀನ್ ಅವರನ್ನು ರಕ್ಷಿಸಿ ಕಠ್ಮಂಡುಗೆ ಸ್ಥಳಾಂತರಿಸಲಾಗುತ್ತಿದೆ.

ಚೀನಾದಿಂದ ಗಡಿ ದಾಟಿದ ಪ್ರಜೆಗಳು: ಟಿಬೆಟ್ ಭಾಗದಲ್ಲಿದ್ದ 595 ಭಾರತೀಯರು ಸುರಕ್ಷಿತವಾಗಿ ಗಡಿ ದಾಟಿದ್ದು, ಉಳಿದ 900 ಭಾರತೀಯರು ಚೀನಾ ಭಾಗದಲ್ಲಿ ಸುರಕ್ಷಿತವಾಗಿದ್ದಾರೆ.

ಭಾರತದಿಂದ ‘ಆಪರೇಷನ್ ಮೈತ್ರಿ’ ಮಾದರಿಯ ಬೃಹತ್ ಪರಿಹಾರ ನೆರವು

ವಾಯುಪಡೆಯ ಸಿ-130ಜೆ ವಿಮಾನ ರವಾನೆ: ಭಾರತೀಯ ವಾಯುಪಡೆಯ ವಿಮಾನದ ಮೂಲಕ 11 ಟನ್ ಪರಿಹಾರ ಸಾಮಗ್ರಿಗಳು, ಸುರಂಗ ರಕ್ಷಣಾ ತಜ್ಞರು ಹಾಗೂ ಮೃತದೇಹಗಳ ಗುರುತಿಸುವಿಕೆಗಾಗಿ ಡಿಎನ್‌ಎ (DNA) ವಿಧಿವಿಜ್ಞಾನ ತಂಡವನ್ನು ಕಳುಹಿಸಲಾಗಿದೆ.

ಪೋಸ್ಟ್​

ಭಾರತವು ಇದುವರೆಗೆ ಒಟ್ಟು 68.5 ಟನ್ ಪರಿಹಾರ ಸಾಮಗ್ರಿಗಳನ್ನು ಪೂರೈಸಿದೆ. ರಸ್ತೆ ಸಂಪರ್ಕ ಮರುಸ್ಥಾಪಿಸಲು 230 ಅಡಿ ಉದ್ದದ ಸ್ಟೀಲ್ ಸೇತುವೆ ಸಾಮಗ್ರಿಗಳು ತಲುಪಿದ್ದು, ಹೆಚ್ಚುವರಿಯಾಗಿ 7 ಬೈಲಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ನವದೆಹಲಿಯ ವಿದೇಶಾಂಗ ಸಚಿವಾಲಯ ಹಾಗೂ ಕಠ್ಮಂಡು-ಬೀಜಿಂಗ್ ರಾಯಭಾರ ಕಚೇರಿಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ ತೆರೆಯಲಾಗಿದೆ.

ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿ: ಕೋಶಿ, ಬಾಗ್ಮತಿ ಮತ್ತು ಗಂಡಕಿ ಪ್ರಾಂತ್ಯಗಳಲ್ಲಿ ಭಾರಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಹೆಲಿಕಾಪ್ಟರ್ ಶೋಧ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡಿದೆ.

11,000 ಸಿಬ್ಬಂದಿ ನಿಯೋಜನೆ: ನೇಪಾಳ ಸೇನೆಯ 5 ಸಾವುರ ಯೋಧರು ಸೇರಿದಂತೆ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿದ್ದು, ಇದುವರೆಗೆ 163 ವಿದೇಶಿಗರು ಸೇರಿ 2,500 ಜನರನ್ನು ಸುರಕ್ಷಿತ ಸ್ಥಳಕ್ಕೆ ಏರ್‌ಲಿಫ್ಟ್ ಮಾಡಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us