ಜಪಾನ್ ಸಂಸ್ಥೆ ಜೊತೆ ಐತಿಹಾಸಿಕ ಒಪ್ಪಂದ; ಕೆಲವೇ ತಿಂಗಳಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ
ಡೆಂಗ್ಯೂ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಭಾರತ ದೊಡ್ಡ ಮೈಲಿಗಲ್ಲು ಸಾಧಿಸಿದ್ದು, ದೇಶದ ಮೊದಲ ಡೆಂಗ್ಯೂ ಲಸಿಕೆ 'ಕ್ಯೂಡೆಂಗಾ' ಮುಂದಿನ ವರ್ಷ ಅಂದರೆ 2027ರ ಮೊದಲಾರ್ಧದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಜಪಾನ್‌ನ ಪ್ರಸಿದ್ಧ 'ಟಕೆಡಾ ಫಾರ್ಮಾಸ್ಯುಟಿಕಲ್ಸ್' ಸಂಸ್ಥೆಯೊಂದಿಗೆ ಭಾರತದ 'ಡಾ. ರೆಡ್ಡೀಸ್ ಲ್ಯಾಬೊರೇಟರೀಸ್' ಮಾಡಿಕೊಂಡಿರುವ ಐತಿಹಾಸಿಕ ಒಪ್ಪಂದದ ಭಾಗವಾಗಿ ಈ ಲಸಿಕೆಯನ್ನು ದೇಶದಾದ್ಯಂತ ವಿತರಿಸಲಾಗುವುದು. ಕಳೆದ ಜುಲೈನಲ್ಲಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಮಾರುಕಟ್ಟೆ ಮಾನ್ಯತೆ ಪಡೆದಿದ್ದ ಈ ಲಸಿಕೆ ಡೆಂಗ್ಯೂ ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.

ನವದೆಹಲಿ, ಸೆಪ್ಟೆಂಬರ್ 18: ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದಿಂದ (CDSCO) ಅನುಮೋದನೆ ಪಡೆದಿರುವ ದೇಶದ ಮೊದಲ ಡೆಂಗ್ಯೂ ಲಸಿಕೆ ‘ಕ್ಯೂಡೆಂಗಾ’ ಗುಣಮಟ್ಟ ಪರಿಶೀಲನಾ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದು, 2027ರ ಮೊದಲಾರ್ಧದಲ್ಲಿ ಭಾರತದ ಖಾಸಗಿ ಮಾರುಕಟ್ಟೆಗೆ ಲಭ್ಯವಾಗಲಿದೆ. ಜಪಾನ್‌ನ ಜಾಗತಿಕ ಔಷಧ ದೈತ್ಯ ಸಂಸ್ಥೆ ‘ಟಕೆಡಾ ಫಾರ್ಮಾಸ್ಯುಟಿಕಲ್ಸ್’ ಹಾಗೂ ಭಾರತದ ‘ಡಾ. ರೆಡ್ಡೀಸ್ ಲ್ಯಾಬೊರೇಟರೀಸ್’ ಈ ಕುರಿತು ಪ್ರಮುಖ ಸಹಯೋಗವನ್ನು ಅಧಿಕೃತವಾಗಿ ಘೋಷಿಸಿವೆ. ಈ ಒಪ್ಪಂದದ ಪ್ರಕಾರ, ಭಾರತದಾದ್ಯಂತ ಖಾಸಗಿ ವಲಯದಲ್ಲಿ ಮಕ್ಕಳು ಹಾಗೂ ವಯಸ್ಕರಿಗೆ ಈ ಲಸಿಕೆಯನ್ನು ವಿತರಿಸುವ ಹಾಗೂ ಪ್ರಚಾರ ಮಾಡುವ ಸಂಪೂರ್ಣ ಹಕ್ಕನ್ನು ‘ಡಾ. ರೆಡ್ಡೀಸ್’ ಸಂಸ್ಥೆ ಪಡೆದುಕೊಂಡಿದೆ.
ಕೊನೆಯ ಹಂತದ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕ್ಯೂಡೆಂಗಾ ಲಸಿಕೆಯ ಎರಡನೇ ಡೋಸ್ ಪಡೆದ 1 ವರ್ಷದ ನಂತರ ಪ್ರಯೋಗಕ್ಕೊಳಪಟ್ಟವರಲ್ಲಿ ಡೆಂಗ್ಯೂ ವಿರುದ್ಧ ಶೇ. 80.2ರಷ್ಟು ರಕ್ಷಣೆ ಕಂಡುಬಂದಿದೆ. ಈ ಲಸಿಕೆ ಪಡೆದ 18 ತಿಂಗಳ ನಂತರ ನಡೆಸಿದ ಅಧ್ಯಯನದ ಪ್ರಕಾರ, ಡೆಂಗ್ಯೂ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶಗಳನ್ನು ಶೇ. 90.4ರಷ್ಟು ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: Dengue: ಜ್ವರ ಇಲ್ಲದಿದ್ದರೂ ಡೆಂಗ್ಯೂ ಬರಬಹುದೇ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಈ ಲಸಿಕೆಯನ್ನು 4 ರಿಂದ 60 ವರ್ಷದವರೆಗಿನ ಎಲ್ಲರಿಗೂ 3 ತಿಂಗಳ ಅಂತರದಲ್ಲಿ 2 ಡೋಸ್‌ಗಳಲ್ಲಿ ನೀಡಲಾಗುತ್ತದೆ. ಹಿಂದೆ ಡೆಂಗ್ಯೂ ಸೋಂಕು ತಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಅಗತ್ಯವಿಲ್ಲದೇ ಇದನ್ನು ನೇರವಾಗಿ ನೀಡಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ಲಸಿಕೆಯ ಬೆಲೆ ಎಷ್ಟಿರಲಿದೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಸ್ಥಳೀಯ ನಿಯಂತ್ರಕ ಪ್ರಕ್ರಿಯೆಗಳು ಮತ್ತು ದರ ನಿಗದಿಗೆ ಸಂಬಂಧಿಸಿದ ಸಮಾಲೋಚನೆಗಳು ಪ್ರಸ್ತುತ ನಡೆಯುತ್ತಿವೆ. ಆರಂಭಿಕ ಹಂತದಲ್ಲಿ ‘ಟಕೆಡಾ’ ಮತ್ತು ‘ಡಾ. ರೆಡ್ಡೀಸ್’ ಜಂಟಿಯಾಗಿ ಭಾರತದ ಖಾಸಗಿ ಆಸ್ಪತ್ರೆಗಳು ಮತ್ತು ಹೆಲ್ತ್‌ಕೇರ್ ನೆಟ್‌ವರ್ಕ್‌ಗಳ ಮೂಲಕ ಲಸಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲು ನಿರ್ಧರಿಸಿವೆ.
ಇದನ್ನೂ ಓದಿ: ಡೆಂಗ್ಯೂ ಲಸಿಕೆಗೆ ಸಿಕ್ಕಿದೆ ಗ್ರೀನ್ ಸಿಗ್ನಲ್; ಭಾರತದ ಮೊದಲ ‘ಕ್ಯೂಡೆಂಗಾ’ ಲಸಿಕೆಯನ್ನು ಯಾರ್ಯಾರು ಪಡೆಯಬಹುದು
ಭಾರತದಲ್ಲಿ ಡೆಂಗ್ಯೂ ಆತಂಕ:
2025ರಲ್ಲಿ ಭಾರತದಲ್ಲೇ 1,13,450 ಡೆಂಗ್ಯೂ ಪ್ರಕರಣಗಳು ಹಾಗೂ 95 ಸಾವುಗಳು ವರದಿಯಾಗಿದ್ದವು. ಕಳೆದ 2 ದಶಕಗಳಲ್ಲಿ ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಬರೋಬ್ಬರಿ 11 ಪಟ್ಟು ಹೆಚ್ಚಾಗಿದ್ದು, ಮುಂಗಾರು ಹಾಗೂ ಮುಂಗಾರಿನ ನಂತರದ ದಿನಗಳಲ್ಲಿ ಈಡಿಸ್ ಸೊಳ್ಳೆಗಳ ಸಂತಾನೋತ್ಪತ್ತಿಯಿಂದಾಗಿ ಆಸ್ಪತ್ರೆಗಳ ಮೇಲೆ ಭಾರಿ ಒತ್ತಡ ಉಂಟಾಗುತ್ತಿತ್ತು. ಈಗ ಲಸಿಕೆ ಪ್ರವೇಶಿಸುತ್ತಿರುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಬಹುದೊಡ್ಡ ಬಲ ತಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




