‘ಶವಗಳು, ಪ್ರಾಣಿಗಳು ನದಿಯಲ್ಲಿ ತೇಲಿ ಬರುತ್ತಿದ್ದವು’: ನೇಪಾಳ ಪ್ರವಾಹದ ಭೀಕರತೆ ಬಿಚ್ಚಿಟ್ಟ ಸಂತ್ರಸ್ತ

ನೇಪಾಳದ ಭೀಕರ ಪ್ರವಾಹದಲ್ಲಿ ಕನಿಷ್ಠ 270 ಮಂದಿ ಮೃತಪಟ್ಟಿದ್ದು, 800ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಿಂದ ಬದುಕುಳಿದವರು ಕಣ್ಣೆದುರು ನಡೆದ ದುರಂತದ ಭೀಕರತೆಯನ್ನು ವಿವರಿಸಿದ್ದಾರೆ. ‘ನದಿಯಲ್ಲಿ ಶವಗಳು, ಪ್ರಾಣಿಗಳು ತೇಲಿ ಬರುತ್ತಿದ್ದವು’’, ‘‘ಭೂಕಂಪದಂತೆ ಶಬ್ದ ಕೇಳಿಸಿತು’’ ಎಂಬ ಸಂತ್ರಸ್ತರ ಮಾತುಗಳು ದುರಂತದ ತೀವ್ರತೆಯನ್ನು ತೆರೆದಿಟ್ಟಿವೆ.

‘ಶವಗಳು, ಪ್ರಾಣಿಗಳು ನದಿಯಲ್ಲಿ ತೇಲಿ ಬರುತ್ತಿದ್ದವು’: ನೇಪಾಳ ಪ್ರವಾಹದ ಭೀಕರತೆ ಬಿಚ್ಚಿಟ್ಟ ಸಂತ್ರಸ್ತ
ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ, ಹಠಾತ್ ಪ್ರವಾಹದೊಂದಿಗೆ ಕೊಚ್ಚಿ ಬಂದಿದ್ದ ಮಣ್ಣು ಮತ್ತು ಹೂಳನ್ನು ಕಾರ್ಮಿಕರು ತೆರವುಗೊಳಿಸುತ್ತಿರುವುದು
Image Credit source: PTI

Updated on: Aug 28, 2026 | 10:10 AM

ಮುಖ್ಯಾಂಶಗಳು

  • ನದಿಯಲ್ಲಿ ಶವಗಳು, ಪ್ರಾಣಿಗಳು ತೇಲಿಬರುತ್ತಿದ್ದವೆಂದ ಪ್ರತ್ಯಕ್ಷದರ್ಶಿ
  • ಭೂಕಂಪದಂತೆ ಪ್ರವಾಹದ ಶಬ್ದ ಕೇಳಿಸಿತು
  • ಮನೆ, ಜಮೀನು, ಜಾನುವಾರು ಎಲ್ಲವೂ ನಾಶ

ಕಾಠ್ಮಂಡು, ಆಗಸ್ಟ್ 28: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ (Nepal Flood) ಪರಿಣಾಮದ ಕರಾಳ ಚಿತ್ರಣ ಒಂದೊಂದಾಗಿ ಹೊರಬರುತ್ತಿದೆ. ಬದುಕುಳಿದ ಸಂತ್ರಸ್ತರು ತಮ್ಮ ಕಣ್ಣೆದುರು ನಡೆದ ಘೋರ ದುರಂತವನ್ನು ವಿವರಿಸುತ್ತಿದ್ದಾರೆ. ಪ್ರವಾಹದಲ್ಲಿ ಕನಿಷ್ಠ 270 ಮಂದಿ ಮೃತಪಟ್ಟಿದ್ದು, 800ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಏಕಾಏಕಿ ನುಗ್ಗಿದ ಕೆಸರು ಮತ್ತು ನೀರಿನ ರಭಸಕ್ಕೆ ಮನೆಗಳು, ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿವೆ. ಪ್ರವಾಹದ ಭೀಕರತೆಯನ್ನು ವಿವರಿಸಿದ ಸ್ಥಳೀಯ ಸಂತ್ರಸ್ತರೊಬ್ಬರು, ‘ನದಿಯಲ್ಲಿ ಹಲವು ಶವಗಳು ಮತ್ತು ಪ್ರಾಣಿಗಳು ತೇಲಿಬರುತ್ತಿರುವುದು ಕಾಣುತ್ತಿದ್ದವು. ಇಂದು ರಕ್ಷಣಾ ಕಾರ್ಯಾಚರಣೆ ತಂಡ 10ರಿಂದ 12 ಶವಗಳನ್ನು ಹೊರತೆಗೆದಿದೆ’ ಎಂದು ಹೇಳಿದ್ದಾರೆ.

ನುವಾಕೋಟ್ ಜಿಲ್ಲೆಯ ಕಲ್ಪನಾ ಮಲ್ಲಾ ಎಂಬವರು, ಕುಟುಂಬದ ಸದಸ್ಯರು ಕಣ್ಣೆದುರೇ ಪ್ರವಾಹದ ಪಾಲಾದ ನೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗನಿಂದ ರಕ್ಷಿಸಲ್ಪಟ್ಟ ಅವರು, ‘ಅವರಿಗೆ ಪ್ರವಾಹದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾವುದೇ ಅವಕಾಶವೇ ಇರಲಿಲ್ಲ’ ಎಂದು ಅಸಹಾಯಕತೆಯಿಂದ ತಿಳಿಸಿದ್ದಾರೆ.

‘ಭೂಕಂಪದಂತೆ ಶಬ್ದ ಕೇಳಿಸಿತು’

ಪ್ರವಾಹಕ್ಕೂ ಒಂದು ಗಂಟೆ ಮೊದಲು ಕಾಠ್ಮಂಡುವಿನತ್ತ ತೆರಳಿದ್ದ ಸೋನಂ ದೋರ್ಜೆ, ತಮ್ಮ ಗ್ರಾಮವನ್ನು ಅಪ್ಪಳಿಸಿದ ಪ್ರವಾಹದ ಭೀಕರತೆಯನ್ನು ವಿವರಿಸಿದ್ದಾರೆ. ‘ಏಕಾಏಕಿ ಭೂಕಂಪದಂತೆ ಶಬ್ದ ಕೇಳಿತು’ ಎಂದು ಅವರು ಹೇಳಿದ್ದಾರೆ. ಪ್ರವಾಹದ ಬಳಿಕ ಸಹೋದರಿ ಸೇರಿದಂತೆ ಕುಟುಂಬದ ಹಲವು ಸದಸ್ಯರು ನಾಪತ್ತೆಯಾಗಿದ್ದಾರೆ ಎಂದು ಸೋನಂ ತಿಳಿಸಿದ್ದಾರೆ.

ಕಟ್ಟಡದ ಮೇಲಂತಸ್ತಿಗೂ ನುಗ್ಗಿದ ಪ್ರವಾಹ

ಮತ್ತೊಬ್ಬ ಸಂತ್ರಸ್ತ ಕೇದಾರ್ ನಾಥ್ ಪರಾಜುಲಿ ಅವರು ಕಟ್ಟಡದ ಮೇಲಂತಸ್ತಿನಲ್ಲಿದ್ದರೂ ಪ್ರವಾಹದ ನೀರು ಅಲ್ಲಿಗೂ ತಲುಪಿದ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾವು ಮೇಲಂತಸ್ತಿನಲ್ಲಿ ಉಳಿದುಕೊಂಡಿದ್ದೆವು. ಪ್ರವಾಹದ ನೀರು ಮೇಲಕ್ಕೆ ಏರುತ್ತಲೇ ಹೋಯಿತು. ಕೊನೆಗೆ ಇಡೀ ನೆಲ ಕೆಸರಿನಿಂದ ಮುಚ್ಚಿಹೋಯಿತು’ ಎಂದು ಅವರು ಹೇಳಿದ್ದಾರೆ.

ಮನುಷ್ಯರಷ್ಟೇ ಅಲ್ಲ, ಜಾನುವಾರುಗಳೂ ಬಲಿ

ಈ ದುರಂತದಲ್ಲಿ ಮನುಷ್ಯರ ಜತೆಗೆ ಜಾನುವಾರುಗಳ ಜೀವಹಾನಿಯೂ ಆಗಿದೆ. ಗೋಮಾ ಪಂಡಿತ್ ಎಂಬ ವ್ಯಕ್ತಿ, ಎಮ್ಮೆಗಳು ಸೇರಿದಂತೆ ಎಲ್ಲ ಜಾನುವಾರುಗಳನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ‘ನನ್ನ ಕೃಷಿ ಭೂಮಿಯೂ ಕೊಚ್ಚಿಹೋಗಿದೆ. ಹತ್ತು ಚೀಲ ಸಾಸಿವೆ ಬೀಜ, ಟನ್‌ಗಟ್ಟಲೆ ಜೋಳ ಮತ್ತು ಭತ್ತ ಎಲ್ಲವೂ ನಾಶವಾಗಿದೆ. ಈಗ ಏನೂ ಉಳಿದಿಲ್ಲ’ ಎಂದು ಅವರು ಕಣ್ಣೀರಿನ ನೋವಿನಿಂದ ಹೇಳಿದ್ದಾರೆ.

ಹೇಗೆ ಸಂಭವಿಸಿತು ದುರಂತ?

ಬುಧವಾರ ಬೆಳಗಿನ ಜಾವ ಚೀನಾ-ನೇಪಾಳ ಗಡಿಯಲ್ಲಿರುವ ಲೆಂಡೆ ಖೋಲಾ ನದಿ ಕಣಿವೆಯಲ್ಲಿ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ಕುಸಿದಿದೆ. ಇದರಿಂದ ಭೀಕರ ಪ್ರವಾಹ ಉಂಟಾಗಿ, ಕೆಳಭಾಗದಲ್ಲಿದ್ದ ಗ್ರಾಮಗಳತ್ತ ನೀರು ಮತ್ತು ಕೆಸರು ರಭಸವಾಗಿ ಹರಿದು ಬಂದಿದೆ. ಪ್ರವಾಹದ ನೀರು ಮನೆಗಳು ಹಾಗೂ ಪ್ರಮುಖ ಮೂಲಸೌಕರ್ಯಗಳನ್ನು ಕೊಚ್ಚಿಕೊಂಡು ಹೋಗಿದ್ದು, ಹಲವು ಸೇತುವೆಗಳು ಮತ್ತು ರಸ್ತೆಯ ಕಿಲೋಮೀಟರ್‌ಗಳಷ್ಟು ಭಾಗ ನಾಶವಾಗಿದೆ. ಕೈಲಾಸ ಮಾನಸ ಸರೋವರ ಯಾತ್ರೆಯ ಪ್ರಮುಖ ಮಾರ್ಗವೂ ದುರಂತಕ್ಕೆ ತುತ್ತಾಗಿದ್ದು, ಹಲವು ಯಾತ್ರಾರ್ಥಿಗಳು ಮೃತಪಟ್ಟಿರುವ ಅಥವಾ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us