10 ನಿಮಿಷದ ಟೀ ಬ್ರೇಕ್ ಉಳಿಸಿತು 28 ಯಾತ್ರಿಕರ ಪ್ರಾಣ: ನೇಪಾಳ ಜಲಪ್ರಳಯದಿಂದ ಪವಾಡಸದೃಶವಾಗಿ ಪಾರಾದ ಕನ್ನಡಿಗರು

ನೇಪಾಳದ ಭೀಕರ ಜಲಪ್ರಳಯದಲ್ಲಿ, ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕ, ಆಂಧ್ರ, ತೆಲಂಗಾಣದ 28 ಯಾತ್ರಿಕರು ಕೇವಲ ಹತ್ತು ನಿಮಿಷಗಳ ಚಹಾ ವಿರಾಮದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ. ಚಾಲಕನ ಸಮಯಪ್ರಜ್ಞೆ ಮತ್ತು ವೀಸಾ ವಿಳಂಬವು ಅವರ ಜೀವ ಉಳಿಸಿತು. ಮುಖ್ಯ ಸೇತುವೆ ಕೊಚ್ಚಿಹೋಗುವ ಮುನ್ನವೇ ಅವರು ಯು-ಟರ್ನ್ ಮಾಡಿ ಸುರಕ್ಷಿತವಾಗಿ ಕಠ್ಮಂಡುವಿಗೆ ಮರಳಿದರು. ಇದು ಸಾವು-ಬದುಕಿನ ನಡುವೆ ನಡೆದ ರೋಚಕ ಪಾರುಗಾಣಿಕೆಯ ಕಥೆ.

10 ನಿಮಿಷದ ಟೀ ಬ್ರೇಕ್ ಉಳಿಸಿತು 28 ಯಾತ್ರಿಕರ ಪ್ರಾಣ: ನೇಪಾಳ ಜಲಪ್ರಳಯದಿಂದ ಪವಾಡಸದೃಶವಾಗಿ ಪಾರಾದ ಕನ್ನಡಿಗರು
ನೇಪಾಳ ಪ್ರವಾಹ

Updated on: Aug 30, 2026 | 1:31 PM

ಕಠ್ಮಂಡು, ಆಗಸ್ಟ್ 30: ನೇಪಾಳದಲ್ಲಿ ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ  ಪ್ರವಾಹ(Flood)ದಲ್ಲಿ ನೂರಾರು ಜನರು ಸಾವನ್ನಪ್ಪಿರುವ ನಡುವೆ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ 28 ಯಾತ್ರಿಕರು ಕೇವಲ ಹತ್ತೇ ಹತ್ತು ನಿಮಿಷದ ಚಹಾ ವಿರಾಮ ಹಾಗೂ ಚಾಲಕನ ಸಮಯಪ್ರಜ್ಞೆಯಿಂದಾಗಿ ಸಾವಿನ ದವಡೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಈ ತಂಡವು ಶನಿವಾರ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದು, ತಮ್ಮ ರೋಚಕ ಬದುಕುಳಿಯುವಿಕೆಯ ಅನುಭವವನ್ನು ಹಂಚಿಕೊಂಡಿದೆ.

ಜೀವ ಉಳಿಸಿದ ‘ಟೀ ಬ್ರೇಕ್’ಹಾಗೂ ಚಾಲಕನ ಸಮಯಪ್ರಜ್ಞೆ
10 ನಿಮಿಷದ ವಿಳಂಬ: ತಿರುಪತಿ ಮೂಲದ ಸೈನ್ ಇನ್ ಟ್ರಾವೆಲ್ಸ್ ಎಂಡಿ ಪೆಮ್ಮಸಾನಿ ವೆಂಕಟರಮಣ ಅವರ ಪ್ರಕಾರ, ತಂಡವು ನೇಪಾಳ-ಟಿಬೆಟ್ ಗಡಿಯ ಸಯಾಬ್ರುಬೇಸಿಗೆ ತೆರಳಬೇಕಿತ್ತು. ಮಾರ್ಗಮಧ್ಯೆ ಸುಮಾರು ೮೦ ಕಿ.ಮೀ ಕ್ರಮಿಸಿದ ನಂತರ ಮಾಡಿದ ಸಣ್ಣ ಚಹಾ ವಿರಾಮ ಅವರ ಜೀವ ಉಳಿಸಿದೆ.

ತಕ್ಷಣದ ಯು-ಟರ್ನ್: ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಮುಂದೆ ಪ್ರವಾಹ ಅಪ್ಪಳಿಸುತ್ತಿರುವ ಮಾಹಿತಿ ಚಾಲಕನಿಗೆ ಸಿಕ್ಕಿತು. ಕ್ಷಣಾರ್ಧದಲ್ಲೂ ತಡಮಾಡದ ಚಾಲಕ ಬಸ್ಸನ್ನು ತಕ್ಷಣ ಯು ಟರ್ನ್ ಮಾಡಿ, ಪರ್ಯಾಯ ಸುರಕ್ಷಿತ ಮಾರ್ಗದ ಮೂಲಕ ಕಠ್ಮಂಡುವಿಗೆ ವಾಪಸ್ ತಂದಿದ್ದಾರೆ.

ಮತ್ತಷ್ಟು ಓದಿ: ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು

ವೀಸಾ ವಿಳಂಬವೇ ಆಯಿತು ವರದಾನ

ಕೊಚ್ಚಿಹೋದ ಸಯಾಬ್ರುಬೇಸಿ ಸೇತುವೆ: ವಿಶಾಖಪಟ್ಟಣದ ಯಾತ್ರಿಕ ಕೃಷ್ಣಯ್ಯ ಮುತ್ಯಾಲ ತಿಳಿಸಿದಂತೆ, ಟಿಬೆಟ್ ವೀಸಾ ಪಡೆಯಲು ಆದ 3 ದಿನಗಳ ವಿಳಂಬವೇ ಅವರ ಪಾಲಿಗೆ ವರದಾನವಾಗಿದೆ.

ಸರಿಯಾದ ಸಮಯಕ್ಕೆ ತಲುಪಿದ್ದರೆ ಆಪತ್ತು: ವೀಸಾ ಸಕಾಲಕ್ಕೆ ಸಿಕ್ಕಿದ್ದರೆ, ಪ್ರವಾಹಕ್ಕೆ ಸಯಾಬ್ರುಬೇಸಿ ಮುಖ್ಯ ಸೇತುವೆ ಕೊಚ್ಚಿಹೋದ ನಿಖರ ಸಮಯದಲ್ಲಿ ಅವರ ಬಸ್ ಅದೇ ಸೇತುವೆಯ ಮೇಲಿರುತ್ತಿತ್ತು.

ಕಣ್ಣೆದುರೇ ಕೊಚ್ಚಿಹೋದ ಬಸ್‌ಗಳು

ತಿರುಪತಿಯ ಕಲ್ಪನಾ ಮಾತನಾಡಿ, “ಕೋಲ್ಕತ್ತಾದಿಂದ ಬಂದಿದ್ದ ಯಾತ್ರಿಕರಿದ್ದ ಎರಡು ಬಸ್‌ಗಳು ಸೇರಿದಂತೆ ಹಲವು ವಾಹನಗಳು ಪ್ರವಾಹದ ಅಬ್ಬರಕ್ಕೆ ನಮ್ಮ ಕಣ್ಣೆದುರೇ ಕೊಚ್ಚಿಹೋದವು. ಇಡೀ ಊರುಗಳಿಗೆ ಊರೇ ಮುಳುಗಡೆಯಾಗಿದ್ದವು. ಚಾಲಕ ನಮ್ಮನ್ನು ಕಠ್ಮಂಡು ಹೋಟೆಲ್‌ಗೆ ಮುಟ್ಟಿಸುವವರೆಗೂ ಜೀವ ಕೈಯಲ್ಲೇ ಹಿಡಿದು ಕುಳಿತಿದ್ದೆವು” ಎಂದು ಭೀಕರತೆಯನ್ನು ವಿವರಿಸಿದ್ದಾರೆ.

ದೆಹಲಿಗೆ ಏರ್‌ಲಿಫ್ಟ್: ನೇಪಾಳದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ವಿದೇಶಾಂಗ ಸಚಿವಾಲಯ (MEA) ವಿಶೇಷ ಸಮನ್ವಯ ನಡೆಸುತ್ತಿದ್ದು, ಈ 28 ಯಾತ್ರಿಕರಿಗೆ ಸೆಪ್ಟೆಂಬರ್ 1 ರಂದು ಕಠ್ಮಂಡುವಿನಿಂದ ನವದೆಹಲಿಗೆ ವಿಮಾನ ಟಿಕೆಟ್ ದೃಢಪಡಿಸಲಾಗಿದೆ.

ಕರ್ನಾಟಕ ಸರ್ಕಾರದ ಸಹಾಯವಾಣಿ: ಪ್ರವಾಹ ಪೀಡಿತ ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೆಹಲಿಯ ಕರ್ನಾಟಕ ಭವನ ಮತ್ತು ವಿದೇಶಾಂಗ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:31 pm, Sun, 30 August 26

Loading...
Unable to load recommendations.
Follow Us