AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂಲಿಯನ್ ಅಸ್ಸೆಂಜ್ ಬಿಡುಗಡೆಗೆ ಕಾರಣವಾದ ಪ್ರಸಿದ್ಧ ವಕೀಲ ಬ್ಯಾರಿ ಪೊಲಾಕ್ ಈಗ ನಿಕೋಲಸ್​ರನ್ನೂ ಬಿಡಿಸ್ತಾರಾ?

ಜೂಲಿಯನ್ ಅಸ್ಸೆಂಜ್ ಅವರನ್ನು ಅಮೆರಿಕ ಜೈಲಿನಿಂದ ಬಿಡುಗಡೆಗೊಳಿಸಿ ಖ್ಯಾತಿ ಗಳಿಸಿದ್ದ ಪ್ರಸಿದ್ಧ ವಕೀಲ ಬ್ಯಾರಿ ಪೊಲಾಕ್ ಈಗ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರ ರಕ್ಷಣೆಗೆ ನಿಂತಿದ್ದಾರೆ. ಮಾದಕವಸ್ತು ಕಳ್ಳಸಾಗಣೆ ಆರೋಪಗಳನ್ನು ಎದುರಿಸುತ್ತಿರುವ ಮಡುರೋ ಪ್ರಕರಣವು ಅಮೆರಿಕದ ನೀತಿ, ಅಂತರರಾಷ್ಟ್ರೀಯ ಕಾನೂನಿಗೆ ಸವಾಲಾಗಿದೆ. ಅಸಾಧ್ಯವನ್ನು ಸಾಧ್ಯವಾಗಿಸುವ ಪೊಲಾಕ್ ಅವರ ಸಾಮರ್ಥ್ಯ ಜಗತ್ತಿನ ಕುತೂಹಲ ಕೆರಳಿಸಿದೆ.

ಜೂಲಿಯನ್ ಅಸ್ಸೆಂಜ್ ಬಿಡುಗಡೆಗೆ ಕಾರಣವಾದ ಪ್ರಸಿದ್ಧ ವಕೀಲ ಬ್ಯಾರಿ ಪೊಲಾಕ್ ಈಗ ನಿಕೋಲಸ್​ರನ್ನೂ ಬಿಡಿಸ್ತಾರಾ?
ನ್ಯಾರಿ ಪೊಲ್ಯಾಕ್
ನಯನಾ ರಾಜೀವ್
|

Updated on:Jan 06, 2026 | 2:55 PM

Share

ವಾಷಿಂಗ್ಟನ್, ಜನವರಿ 06: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ(Nicolas Maduro) ಈಗ ಅಮೆರಿಕದ ವಶದಲ್ಲಿದ್ದಾರೆ. ಅದಕ್ಕೂ ಮುನ್ನ ತಾಕತ್ತಿದ್ದರೆ ತನ್ನ ಹಿಡೀರಿ ಎಂದು ನಿಕೋಲಸ್ ಡೊನಾಲ್ಡ್​ ಟ್ರಂಪ್​ಗೆ ಸವಾಲು ಹಾಕಿದ್ದರು. ಸವಾಲನ್ನು ಸವಾಲಾಗಿಯೇ ಸ್ವೀಕರಿಸಿ ಅಮೆರಿಕ ಸೇನೆಯು ಕ್ಯಾರಕಾಸ್​ನಲ್ಲಿ ನಿಕೋಲಸ್ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಈಗ ನಿಕೋಲಸ್ ಅಮೆರಿಕದ ವಶದಲ್ಲಿದ್ದಾರೆ.  ನಿಕೋಲಸ್​ನಷ್ಟೇ ಅವರ ವಕೀಲ ಬ್ಯಾರಿ ಪೊಲಾಕ್ ಅವರ ಬಗ್ಗೆಯೂ ಹೆಚ್ಚು ಚರ್ಚೆ ನಡೆಯುತ್ತಿದೆ. ಸಾಮಾನ್ಯ ವಕೀಲರ ಬಗ್ಗೆ ಇಷ್ಟೇಕೆ ಚರ್ಚೆ ಎಂದು ನಿಮಗೆ ಅನಿಸಬಹುದು ಆದರೆ ಅವರು ಸಾಮಾನ್ಯ ವಕೀಲರಲ್ಲ.

ಅಸಾಧ್ಯವಾದುದ್ದನ್ನು ಕೂಡ ಸಾಧ್ಯವಾಗಿಸಿ ತೋರಿಸುವ ಛಲ ಅವರಿಗಿದೆ. ಅಮೆರಿಕದ ಜೈಲಿನಿಂದ ಜೂಲಿಯನ್ ಅಸ್ಸೆಂಜ್ ಅವರ ಬಿಡುಗಡೆಗೆ ಕಾರಣರಾದ ಪ್ರಸಿದ್ಧ ವಕೀಲರಿವರು. ಇದೀಗ ಅಮೆರಿಕದಲ್ಲಿ ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಆರೋಪಗಳನ್ನು ನಿಕೋಲಸ್ ಎದುರಿಸುತ್ತಿದ್ದಾರೆ. ಅವರ ರಕ್ಷಣೆಗೆ ಬ್ಯಾರಿ ಮುಂದಾಗಿದ್ದಾರೆ.

ನಿಕೋಲಸ್ ಮಡುರೊ ಅವರ ವಕೀಲ ಬ್ಯಾರಿ ಯಾರು? ಅಮೆರಿಕದಲ್ಲಿ ನಿಕೋಲಸ್ ಮಡುರೊ ವಿರುದ್ಧದ ಐತಿಹಾಸಿಕ ಮತ್ತು ಪ್ರಮುಖ ಕಾನೂನು ಹೋರಾಟವು ಹೊಸ ತಿರುವು ಪಡೆದುಕೊಂಡಿದೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಅಮೆರಿಕದ ಜೈಲಿನಿಂದ ಬಿಡುಗಡೆ ಮಾಡುವುದು ಅಸಾಧ್ಯವೆಂದುಕೊಂಡಿರುವಾಗ ಪೋಲಾಕ್ ಅವರು ಅಸ್ಸಾಂಜೆಯನ್ನು ಹೊರಕ್ಕೆ ತಂದಿದ್ದರು.ಈಗ ನ್ಯಾಯಾಲಯದಲ್ಲಿ ವೆನೆಜುವೆಲಾದ ಅಧ್ಯಕ್ಷ ಮಡುರೊ ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಮತ್ತಷ್ಟು ಓದಿ: Video: ವೆನೆಜುವೆಲಾದ ಅಧ್ಯಕ್ಷೀಯ ಭವನದ ಬಳಿ ಗುಂಡಿನ ದಾಳಿ, ಸ್ಫೋಟದ ಸದ್ದು

ಬ್ಯಾರಿ ಜೆ ಪೊಲಾಕ್ ವಾಷಿಂಗ್ಟನ್ ಡಿಸಿಯಲ್ಲಿ ಪ್ರಸಿದ್ಧ ವಕೀಲರಾಗಿದ್ದು, ಕಳೆದ ಮೂರು ದಶಕಗಳಿಂದ ಅಮೆರಿಕದ ಅತ್ಯಂತ ಸೂಕ್ಷ್ಮ ಮತ್ತು ವಿವಾದಾತ್ಮಕ ಪ್ರಕರಣಗಳನ್ನು ಗೆದ್ದು ಬೀಗಿದ್ದಾರೆ. ಪ್ರತಿಷ್ಠಿತ ಕಾನೂನು ಸಂಸ್ಥೆ ಹ್ಯಾರಿಸ್, ಸೇಂಟ್ ಲಾರೆಂಟ್ ಹಾಗೂ ವೆಚ್ಸ್ಲರ್‌ನಲ್ಲಿ ಪಾಲುದಾರರಾಗಿದ್ದಾರೆ ಮತ್ತು ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಅಪರಾಧ ಮತ್ತು ಹೆಚ್ಚಿನ ಮಟ್ಟದ ಫೆಡರಲ್ ವಿಚಾರಣೆಗಳಲ್ಲಿ ಅನುಭವಿ. ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಆಳವಾಗಿ ಅಧ್ಯಯನ ಮಾಡುವ ಮತ್ತು ಜಡ್ಜ್​ ಮುಂದೆ ಪರಿಣಾಮಕಾರಿಯಾಗಿ ವಾದಿಸುವ ಚಾಕಚಕ್ಯತೆ ಅವರಿಗಿದೆ.

ಪೊಲಾಕ್ ಅವರನ್ನು ಆರಿಸಿಕೊಂಡಿದ್ದೇಕೆ? ಮಡುರೊ ವಿರುದ್ಧದ ಪ್ರಕರಣ ಸಾಮಾನ್ಯವಾದುದ್ದಲ್ಲ, ಅಮೆರಿಕದಲ್ಲಿ ಕೊಕೇನ್ ಪೂರೈಕೆ ಜಾಲವನ್ನು ರಕ್ಷಿಸಲು ಮಡುರೊ 25 ವರ್ಷಗಳ ಕಾಲ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್​ಗಳ ವಾದವಾಗಿದೆ. ಪೊಲಾಕ್ ಅವರ ಅನುಭವವು ಮಡುರೊಗೆ ನಿರ್ಣಾಯಕವಾಗಿದೆ.

ನಿಕೋಲಸ್ ಪ್ರಕರಣ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದಲ್ಲಿ ಮಡುರೊ ಅವರ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನ್ಯಾ. ಆಲ್ವಿನ್ ಹೆಲ್ಲರ್‌ಸ್ಟೈನ್ ಅಧ್ಯಕ್ಷತೆ ವಹಿಸಿದ್ದಾರೆ. ಸಿನಾಲೋವಾ ಕಾರ್ಟೆಲ್‌ನಂತಹ ಮಾದಕವಸ್ತು ಜಾಲಗಳಿಗೆ ಮಡುರೊ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಿದ್ದಾರೆ ಮತ್ತು ಮಾದಕವಸ್ತು ಕಳ್ಳಸಾಗಣೆದಾರರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಸಹ ಒದಗಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಅಮೆರಿಕದ ಬೇಹುಗಾರಿಕೆ ಕಾನೂನುಗಳ ಅಡಿಯಲ್ಲಿ ನಡೆದ ಅಸ್ಸಾಂಜೆಯವರ ಪ್ರಕರಣವನ್ನು ಬಹುತೇಕ ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಆದಾಗ್ಯೂ, ಪೊಲಾಕ್ ಅವರ ಮಾತು ಮತ್ತು ಕಾನೂನು ತಂತ್ರವು ಅಮೆರಿಕವನ್ನು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಮಾಡಿತು. ಅದಕ್ಕಾಗಿಯೇ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಸಿಲುಕಿರುವವರು ಅವರನ್ನು ಮೊದಲ ಹಾಗೂ ಕಟ್ಟಕಡೆಯ ಭರವಸೆಯ ವಕೀಲ ಎಂದೇ ಭಾವಿಸುತ್ತಾರೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸೆಂಜ್ ತಮ್ಮ 13 ವರ್ಷಗಳ ಕಾನೂನು ಹೋರಾಟವನ್ನು ಕೊನೆಗೊಳಿಸಿ, ಯುಎಸ್ ಜತೆ ಒಪ್ಪಂದ ಮಾಡಿಕೊಂಡು, ನ್ಯಾಯಾಲಯದಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡು ಬಂಧಮುಕ್ತರಾಗಿದ್ದು 2024ರ ಜೂನ್ 26ರಂದು ತಮ್ಮ ತಾಯ್ನಾಡು ಆಸ್ಟ್ರೇಲಿಯಾಗೆ ಹೋಗಿದ್ದರು. ಅವರಿಗೆ 62 ತಿಂಗಳುಗಳ ಶಿಕ್ಷೆ ವಿಧಿಸಲಾಗಿತ್ತು.

ಮಡುರೊ ಪತ್ನಿಯನ್ನು ರಕ್ಷಿಸುವವರ್ಯಾರು? ಅಮೆರಿಕದ ನ್ಯಾಯಾಂಗ ಇಲಾಖೆಯ ಮಾಜಿ ಪ್ರಾಸಿಕ್ಯೂಟರ್ ಮಾರ್ಕ್ ಡೊನ್ನೆಲ್ಲಿ ಅವರು ಮಡುರೊ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಇದರರ್ಥ ನಿಕೋಲಸ್ ಕುಟುಂಬವು ಅಮೆರಿಕದ ಅತ್ಯಂತ ಅನುಭವಿ ವಕೀಲರನ್ನು ಕಾನೂನು ಹೋರಾಟದಲ್ಲಿ ಕಣಕ್ಕಿಳಿಸಿದೆ.

ಜಗತ್ತಿಗೆ ಯಾಕಿಷ್ಟು ಕುತೂಹಲ? ಇದು ಕೇವಲ ಮಾದಕವಸ್ತು ವಿಚಾರಣೆಯಲ್ಲ, ಬದಲಾಗಿ ಅಮೆರಿಕದ ಆಡಳಿತ ಬದಲಾವಣೆ ನೀತಿ, ಅಂತಾರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವದ ಪರೀಕ್ಷೆಯಾಗಿದೆ. ಈ ಪ್ರಕರಣದಲ್ಲಿ ಪೊಲಾಕ್‌ಗೆ ಕಾನೂನು ಪರಿಹಾರ ಸಿಕ್ಕರೆ, ಅದು ಅಮೆರಿಕದ ಪ್ರಾಸಿಕ್ಯೂಷನ್ ವ್ಯವಸ್ಥೆಗೆ ದೊಡ್ಡ ಹೊಡೆತವಾಗುವುದಂತೂ ಸತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:49 pm, Tue, 6 January 26