ಪಾಕಿಸ್ತಾನದ ಪಾಪಿಗಳು; ದಾವೂದ್ ಇಬ್ರಾಹಿಂ ವರ್ಸಸ್ ಲೆಯಾರಿ ಕಿಂಗ್ ರೆಹಮಾನ್ ಡಕಾಯಿಟ್

Real life feud between Rahman Dikait and Dawood Ibrahim: ಧುರಂಧರ್ ಸಿನಿಮಾಗಳನ್ನು ನೋಡಿದವರಿಗೆ ಈಗ ಪಾಕಿಸ್ತಾನದ ಭೂಗತಲೋಕದ ಪರಿಚಯವಾಗಿರುತ್ತದೆ. ಅನೇಕ ಪಾತ್ರಗಳು ನಿಜಜೀವನದಲ್ಲಿ ಇದ್ದಂತಹವು. ಕರಾಚಿಯ ನೊಟೋರಿಯಸ್ ಪ್ರದೇಶವಾದ ಲಯಾರಿಯ ದೊರೆ ಎನಿಸಿದ್ದ ರೆಹಮಾನ್ ಡೆಕಾಯಿಟ್ ಮತ್ತು ದಾವೂದ್ ಇಬ್ರಾಹಿಂ ನಡುವೆ ರಿಯಲ್ ಲೈಫ್​ನಲ್ಲಿ ದೊಡ್ಡ ಸಂಘರ್ಷವೇ ನಡೆದಿತ್ತು. ಧುರಂಧರ್-2ನಲ್ಲಿ ಇಲ್ಲದ ಕಥೆ ಇದು.

ಪಾಕಿಸ್ತಾನದ ಪಾಪಿಗಳು; ದಾವೂದ್ ಇಬ್ರಾಹಿಂ ವರ್ಸಸ್ ಲೆಯಾರಿ ಕಿಂಗ್ ರೆಹಮಾನ್ ಡಕಾಯಿಟ್
ಡಕಾಯಿಟ್, ದಾವೂದ್ ಮತ್ತು ಧುರಂಧರ್​ನಲ್ಲಿ ದಾವೂದ್ ಪಾತ್ರ
Image Credit source: Wikipedia

Updated on: Apr 05, 2026 | 5:19 PM

ದುರಂಧರ್ ಸರಣಿಯ ಸಿನಿಮಾಗಳು ಪಾಕಿಸ್ತಾನದ ಭೂಗತ ಲೋಕವನ್ನು ಭಾರತೀಯ ಜನಸಾಮಾನ್ಯರಿಗೆ ಸ್ಪಷ್ಟವಾಗಿ ಪರಿಚಯಿಸಿವೆ. ಮುಂಬೈ ಅಂಡರ್​ವರ್ಲ್ಡ್ ಸ್ಟೋರಿಗಳನ್ನು ನೆನಪಿಸುವಂತಹ ಕ್ರೈಮ್​ಗಳು ಕರಾಚಿಯಲ್ಲಿ ನಡೆದಿರುವುದನ್ನು ಈ ಸಿನಿಮಾಗಳಲ್ಲಿ ನೋಡಬಹುದು. ಪಾಕಿಸ್ತಾನದಲ್ಲಿ ಭೂಗತಲೋಕ, ಪೊಲೀಸ್, ರಾಜಕಾರಣಿಗಳು, ಭಾರತೀಯ ಗೂಢಚಾರಿಗಳ ಜಾಲ ಇವೆಲ್ಲವೂ ಹೇಗಿದೆ ಎನ್ನುವುದನ್ನು ದುರಂಧರ್​ಗಳಲ್ಲಿ ಕಾಣಬಹುದು. ಆದರೆ, ಅವು ಅಪ್ಪಟ ವಾಸ್ತವವಾ, ಕಾಲ್ಪನಿಕವಾ ಇದು ಯಾವತ್ತಿಗೂ ಹೊರಬರದ ಸಂಗತಿ. ಇದೇ ವೇಳೆ, ಅಕ್ಷಯ್ ಖನ್ನಾ ನಟಿಸಿದ್ದ ರೆಹಮಾನ್ ಡೆಕಾಯಿಟ್ ಪಾತ್ರ ರಿಯಲ್ ಲೈಫ್​ನಲ್ಲಿ ಇದ್ದಂಥದ್ದೇ. ಮುಂಬೈ ಭೂಗತಲೋಕ ಆಳಿ ನಂತರ ಕರಾಚಿಗೆ ಶಿಫ್ಟ್ ಆಗಿದ್ದ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ರಹಮಾನ್ ಡಕಾಯಿಟ್ (Rahman Dikait) ನಡುವಿನ ರಿಯಲ್ ಲೈಫ್ ಡೆಡ್ಲಿ ಫೈಟ್​ಗಳ ಕಥೆ ಹರಿದಾಡುತ್ತಿದೆ.

ಬೆಂಗಳೂರು, ಮುಂಬೈ, ಮಂಗಳೂರು ಇತ್ಯಾದಿ ನಗರಗಳಲ್ಲಿ ಭೂಗತ ಲೋಕದಲ್ಲಿ ವಿವಿಧ ಗ್ಯಾಂಗ್​ಗಳ ನಡುವೆ ಗ್ಯಾಂಗ್ ವಾರ್ ಸಾಮಾನ್ಯ. ಕರಾಚಿಯೂ ಹೊರತಲ್ಲ. ದಾವೂದ್ ಇಬ್ರಾಹಿಂ ಕರಾಚಿ ಭೂಗತಲೋಕದ ದೊರೆ. ಆದರೆ, ರೆಹಮಾನ್ ಡೆಕಾಯಿಟ್ ನೊಟೋರಿಯಸ್ ಲಯಾರಿ ಏರಿಯಾದ ಕಿಂಗ್. ಇವರಿಬ್ಬರ ನಡುವಿನ ಗ್ಯಾಂಗ್ ವಾರ್ ಭೀಕರವಾಗಿತ್ತಂತೆ.

ಇದನ್ನೂ ಓದಿ: ‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

ಲ್ಯಾಂಡ್ ಡೀಲ್​ನಿಂದ ಶುರುವಾಗಿತ್ತು ದಾವೂದ್-ಡೆಕಾಯಿಟ್ ಫೈಟ್

ಕರಾಚಿಯ ಪ್ರಮುಖ ಪ್ರದೇಶವೊಂದರಲ್ಲಿ 100ರಿಂದ 400 ಕೋಟಿ ರೂ ಮೌಲ್ಯವಿರುವ ಜಾಗವೊಂದರಲ್ಲಿ ದಾವೂದ್ ಒಂದು ಮಾಲ್ ಕಟ್ಟಲು ಯೋಜಿಸುತ್ತಾನೆ. ಕೇವಲ ಒಂದು ಕೋಟಿ ರೂಗೆ ನೀಡಬೇಕೆಂದು ಆ ಜಾಗದ ಮಾಲೀಕನಿಗೆ ಧಮಕಿ ಹಾಕಿಸುತ್ತಾನೆ. ಮುಂಬೈನಲ್ಲೂ ದಾವೂದ್ ಮಾಡುತ್ತಿದ್ದುದು ಇಂಥ ಕೆಲಸಗಳನ್ನೇ. ಆದರೆ, ಆ ಜಾಗವು ರೆಹಮಾನ್ ಡೆಕಾಯಿಟ್​ನ ಸಂಬಂಧಿಯದ್ದಾಗಿರುತ್ತದೆ. ರೆಹಮಾನ್ ಎಂಟ್ರಿಯಾಗಬೇಕಾಗುತ್ತದೆ. ಈ ಜಮೀನಿನ ತಂಟೆಗೆ ಬರಬೇಡವೆಂದು ಫೋನ್​ನಲ್ಲೇ ದಾವೂದ್​ಗೆ ಧಮಕಿ ಹಾಕುತ್ತಾನೆ. ರೆಹಮಾನ್​ನನ್ನು ದಾವೂದ್ ಹೀಯಾಳಿಸುತ್ತಾನೆ.

ದಾವೂದ್ ಸಹೋದರನಿಗೆ ಡೆಕಾಯಿಟ್​ನಿಂದ ನರಕ

ದಾವೂದ್​ಗೆ ಪಾಠ ಕಲಿಸಬೇಕೆಂದು ನಿರ್ಧರಿಸುವ ರೆಹಮಾನ್ ಡೆಕಾಯಿಟ್, ಆತನ ಸಹೋದರ ನೂರ್ ಉಲ್ ಹಕ್ ಅಲಿಯಾಸ್ ನೂರಾನನ್ನು ಕಿಡ್ನಾಪ್ ಮಾಡಿಸುತ್ತಾನೆ. ಫಾರ್ಮ್ಹೌಸ್​ವೊಂದರಲ್ಲಿ ನೂರಾನನ್ನು ಇರಿಸಿ ವಿಪರೀತ ಚಿತ್ರಹಿಂಸೆ ಕೊಡುತ್ತಾನೆ. ಸಹೋದರನ ಚೀರಾಟದ ಶಬ್ದವನ್ನು ದಾವೂಡ್​ಗೆ ನೇರವಾಗಿ ಕೇಳಿಸಿಸುತ್ತಾನೆ. ಇಷ್ಟು ದಿನ ಎಲ್ಲರಿಗೂ ಚಿತ್ರಹಿಂಸೆ ಕೊಡುತ್ತಿದ್ದ ದಾವೂದ್​ಗೆ ಈಗ ತನ್ನ ಆಟ ರುಚಿ ತಾನೇ ಮೆಲ್ಲುವಂತಾಗುತ್ತದೆ. ಯಾವ ಜಾಗವನ್ನು ಒಂದು ಕೋಟಿಗೆ ಖರೀದಿಸಬೇಕೆಂದಿದ್ದರೋ ಅದಕ್ಕೆ 580 ಕೋಟಿ ರೂ ಕೊಡಲು ಒಪ್ಪಬೇಕಾಗುತ್ತದೆ. ಇದು ದಾವೂದ್​ಗೆ ಆದ ಮೊದಲ ಅವಮಾನ.

ಇದನ್ನೂ ಓದಿ: ‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಇಷ್ಟಾದ ಬಳಿಕ ನೂರಾನನ್ನು ಡೆಕಾಯಿಟ್ ಬಿಡುಗಡೆ ಮಾಡದೆ ಕೊಂದು ಹಾಕುತ್ತಾನೆ. ಕರಾಚಿಯಲ್ಲಿರುವ ದಾವೂದ್ ಮನೆ ಸಮೀಪ ನೂರಾನ ಶವ ಎಸೆಯಲಾಗುತ್ತದೆ. ಇದು ದಾವೂದ್​ಗೆ ಆದ ಅವಮಾನದ ಮೇಲೆ ಅವಮಾನ. ಇದಾಗಿದ್ದು, 2009ರ ಮಧ್ಯಭಾಗದಲ್ಲಿ. ಈ ಘಟನೆ ನಡೆದು ಒಂದು ತಿಂಗಳಲ್ಲಿ ರೆಹಮಾನ್ ಡೆಕಾಯಿಟ್​ನನ್ನು ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಎನ್​ಕೌಂಟರ್​ನಲ್ಲಿ ಸಾಯಿಸುತ್ತಾರೆ. ಈ ಘಟನೆ ದುರಂಧರ್ ಸಿನಿಮಾದಲ್ಲಿದೆ.

ಅನಧಿಕೃತ ದಾಖಲೆಗಳು, ಗೂಢಚಾರಿಗಳು, ಪೊಲೀಸ್ ಗುಪ್ತಚರರು ಮೊದಲಾದವರು ನೀಡಿರುವ ಮಾಹಿತಿಯನ್ನಾಧರಿಸಿ ಹರಿದಾಡುತ್ತಿರುವ ಕಥೆಗಳಾಗಿವೆ. ಅನೇಕ ಭೂಗತಲೋಕದ ಕಥೆಗಳು ಇರುವುದೇ ಹೀಗೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us