Omicron Death: ಒಮಿಕ್ರಾನ್ ವೈರಸ್ಗೆ ಇಂಗ್ಲೆಂಡ್ನಲ್ಲಿ ಮೊದಲ ಬಲಿ; ಕೊವಿಡ್ ರೂಪಾಂತರಿಯಿಂದ ವಿಶ್ವಾದ್ಯಂತ ಹೈ ಅಲರ್ಟ್
Omicron Virus: ಇಂಗ್ಲೆಂಡ್ನಲ್ಲಿ ಕೊವಿಡ್ ಲಸಿಕಾ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಒಮಿಕ್ರಾನ್ ಓರ್ವ ವ್ಯಕ್ತಿಯನ್ನು ಬಲಿ ಪಡೆದಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಘೋಷಿಸಿದ್ದಾರೆ.
ಲಂಡನ್: ಕಳೆದ ವರ್ಷದ ಆರಂಭದಿಂದ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾವೈರಸ್ (Coronavirus) ಇದೀಗ ರೂಪಾಂತರಿ ವೈರಸ್ಗಳ (Covid Variant) ರೂಪ ತಾಳಿ ಮತ್ತೆ ವಿಶ್ವವನ್ನು ಕಂಗೆಡಿಸುತ್ತಿದೆ. ಹೊಸದಾಗಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿಯಾದ ಒಮಿಕ್ರಾನ್ನಿಂದ (Omicron) ಮತ್ತೆ ಲಾಕ್ಡೌನ್ ಉಂಟಾಗಬಹುದು ಎಂಬ ಭೀತಿ ನಡುವೆಯೇ ಈ ಮಾರಣಾಂತಿಕ ಒಮಿಕ್ರಾನ್‌ಗೆ ಇಂಗ್ಲೆಂಡ್ನಲ್ಲಿ (United Kingdom) ಮೊದಲ ರೋಗಿ ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್ನಲ್ಲಿ ಕೊವಿಡ್ ಲಸಿಕಾ ಅಭಿಯಾನ (Covid Vaccine Campaign) ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಒಮಿಕ್ರಾನ್ ಓರ್ವ ವ್ಯಕ್ತಿಯನ್ನು ಬಲಿ ಪಡೆದಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Prime Minister Boris Johnson) ಇಂದು ಘೋಷಿಸಿದ್ದಾರೆ.
ಬ್ರಿಟನ್ನಲ್ಲಿ ವಿಶ್ವದ ಮೊದಲ ವ್ಯಕ್ತಿ ಒಮಿಕ್ರಾನ್‌ಗೆ ಬಲಿಯಾಗಿರುವುದರಿಂದ ಮತ್ತೆ ಪ್ರಾಣ ಭೀತಿ ಹೆಚ್ಚಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಒಮಿಕ್ರಾನ್ ಸೋಂಕು ಆವರಿಸಿದೆ. ಡೆಲ್ಟಾ ವೈರಸ್ಗಿಂತಲೂ 5 ಪಟ್ಟು ವೇಗವಾಗಿ ಈ ಒಮಿಕ್ರಾನ್ ವೈರಸ್ ಹರಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ, ಒಮಿಕ್ರಾನ್ನ ರೋಗ ಲಕ್ಷಣಗಳು ಹೆಚ್ಚು ತೀವ್ರವಾಗಿರುವುದಿಲ್ಲ ಎನ್ನಲಾಗಿತ್ತು. ಆದರೆ, ಇದೀಗ ಒಮಿಕ್ರಾನ್ನಿಂದ ಓರ್ವ ರೋಗಿ ಸಾವನ್ನಪ್ಪಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷದಿಂದ ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ ಬ್ರಿಟನ್ ಒಂದಾಗಿದೆ. ಇಂಗ್ಲೆಂಡ್ ಕೊವಿಡ್ ವೈರಸ್ ರೂಪಾಂತರದಿಂದ ಸಾವನ್ನು ಅಧಿಕೃತವಾಗಿ ಘೋಷಿಸಿದ ಮೊದಲ ಸರ್ಕಾರವಾಗಿದೆ. ಪಶ್ಚಿಮ ಲಂಡನ್‌ನಲ್ಲಿರುವ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ಜಾನ್ಸನ್, ಬ್ರಿಟಿಷ್ ರಾಜಧಾನಿಯಲ್ಲಿ ಸುಮಾರು 40 ಪ್ರತಿಶತ ಪ್ರಕರಣಗಳಿಗೆ ಓಮಿಕ್ರಾನ್ ಕಾರಣವೆಂದು ಹೇಳಿದ್ದಾರೆ. ಹಾಗೇ, ಇಂಗ್ಲೆಂಡ್ನ ಆಸ್ಪತ್ರೆಯಲ್ಲಿ ಕೊರೊನಾದಿಂದ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ತಿಳಿಸಿದ್ದಾರೆ.
British Prime Minister Boris Johnson said on Monday the first patient had died after contracting the #Omicron variant of the #coronavirus: Reuters
— ANI (@ANI) December 13, 2021
ಇಡೀ ಜಗತ್ತಿಗೆ ತಲ್ಲಣ ಸೃಷ್ಟಿಸುತ್ತಿರುವ ಕೋವಿಡ್‌ನ ಹೊಸ ತಳಿ ಒಮಿಕ್ರಾನ್ ಡೆಲ್ಟಾಗಿಂತ ಅತಿ ವೇಗವಾಗಿ ಹರಡಬಲ್ಲದು ಹಾಗೂ ಲಸಿಕೆಯ ಪರಿಣಾಕಾರಿಯನ್ನು ತಗ್ಗಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ರೂಪಾಂತರಿ ಡೆಲ್ಟಾ ಪ್ರಪಂಚದಲ್ಲೇ ಹೆಚ್ಚಿನ ಕೊವಿಡ್ ಪ್ರಕರಣಗಳಿಗೆ ಕಾರಣವಾಗಿದೆ. ಈ ಹೊಸ ವೈರಸ್ ಇಲ್ಲಿಯವರೆಗೆ ಸೌಮ್ಯ ಅನಾರೋಗ್ಯ ಅಥವಾ ಲಕ್ಷಣರಹಿತ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಆದರೆ, ಮುಂದಿನ ದಿನಗಳಲ್ಲಿ ಸೋಂಕು ತೀವ್ರವಾಗಬಹುದು ಎಂದು WHO ಎಚ್ಚರಿಕೆ ನೀಡಿದೆ.
ಇದೇ ವರ್ಷದ ನವೆಂಬರ್ 24ರಂದು ಒಮಿಕ್ರಾನ್ ವೈರಸ್ ಬಗ್ಗೆ ದಕ್ಷಿಣ ಆಫ್ರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿತ್ತು. ಒಮಿಕ್ರಾನ್‌ಗೆ ಫೈಜರ್ ಹೆಚ್ಚು ಪರಿಣಾಮಕಾರಿ ಎಂದು ಹೇಳಿಕೊಂಡಿತ್ತು. ಆದರೆ ಇದೀಗ ಡಬ್ಲ್ಯೂಹೆಚ್‌ಒನ ಈ ಹೇಳಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಒಮಿಕ್ರಾನ್ ವಿರುದ್ಧ ಹೋರಾಡಲು ಮೂರನೇ ಬೂಸ್ಟರ್ ಲಸಿಕೆ ಪಡೆಯುವಂತೆ ತಮ್ಮ ದೇಶದ ಜನರಿಗೆ ಸೂಚನೆ ನೀಡಿವೆ.
ಇದನ್ನೂ ಓದಿ: ಒಮಿಕ್ರಾನ್ ಆತಂಕದ ನಡುವೆ ಬೂಸ್ಟರ್ ಡೋಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?
ಯುಕೆಯಲ್ಲಿ ಒಮಿಕ್ರಾನ್ ಅಲೆ ಸಾಧ್ಯತೆ ವರದಿ; ಬೂಸ್ಟರ್ ಡೋಸ್, ಹೆಚ್ಚಿನ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
Published On - 6:20 pm, Mon, 13 December 21