ಜಿನೀವಾ: ಕಳೆದ ಒಂದೂವರೆ ವರ್ಷದಿಂದ ಇಡೀ ಜಗತ್ತನ್ನೇ ಕೊರೊನಾವೈರಸ್ (Coronavirus) ಎಂಬ ಮಾರಣಾಂತಿಕ ರೋಗ ಕಾಡುತ್ತಿದೆ. ಕೊವಿಡ್ವೈರಸ್ (Covid-19) ರೂಪಾಂತರಿಯಾಗಿ ಪರಿವರ್ತನೆಗೊಂಡು ಇನ್ನಷ್ಟು ಅಪಾಯಕಾರಿಯಾಗುತ್ತಿದೆ. ಕೊವಿಡ್ವೈರಸ್ನ ಒಮಿಕ್ರಾನ್ (Omicron) ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ (Delta Variant) ವೇಗವಾಗಿ ಹರಡುತ್ತಿದೆ ಮತ್ತು ಈಗಾಗಲೇ ಲಸಿಕೆ ಹಾಕಿದ ಅಥವಾ ಕೊವಿಡ್-19 ಕಾಯಿಲೆಯಿಂದ ಚೇತರಿಸಿಕೊಂಡ ಜನರಲ್ಲಿ ಕೂಡ ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥರು ಹೇಳಿದ್ದಾರೆ.
ಒಮಿಕ್ರಾನ್ ವೈರಸ್ ಡೆಲ್ಟಾ ರೂಪಾಂತರಕ್ಕಿಂತ ಅತ್ಯಂತ ವೇಗವಾಗಿ ಹರಡುತ್ತಿದೆ ಎಂಬುದಕ್ಕೆ ಹಲವು ಸಾಕ್ಷಿಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಲಸಿಕೆ ಹಾಕಿದ ಅಥವಾ COVID-19 ನಿಂದ ಚೇತರಿಸಿಕೊಂಡ ಜನರು ಕೂಡ ಒಮಿಕ್ರಾನ್ ಸೋಂಕಿಗೆ ಒಳಗಾಗಬಹುದು ಅಥವಾ ಮರು-ಸೋಂಕಿಗೆ ಒಳಗಾಗಬಹುದು ಎಂದು ಟೆಡ್ರೊಸ್ ಹೇಳಿದ್ದಾರೆ.
WHO ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಕೆಲವು ಕೊವಿಡ್ ಲಸಿಕೆಗಳಿಂದ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ತಪ್ಪಿಸುವಲ್ಲಿ ಒಮಿಕ್ರಾನ್ ಉತ್ತಮವಾಗಿದೆ. ಆದರೆ ಸೋಂಕು ಮತ್ತು ರೋಗವನ್ನು ತಡೆಯುವ ಇತರ ರೀತಿಯ ರೋಗನಿರೋಧಕ ಶಕ್ತಿಗಳಿವೆ. ರೋಗನಿರೋಧಕ ಶಕ್ತಿ ಹೆಚ್ಚಾಗಿ ಇಲ್ಲದ ವ್ಯಕ್ತಿಗಳನ್ನೇ ಈ ಒಮಿಕ್ರಾನ್ ವೈರಸ್ ಗುರಿಯಾಗಿಸಿಕೊಳ್ಳುತ್ತಿದೆ. ಆದರೆ, ಒಮಿಕ್ರಾನ್ ವಿರುದ್ಧ ಯಾವ ಕೊವಿಡ್ ಲಸಿಕೆಗಳೂ ಪರಿಣಾಮಕಾರಿಯಾಗುವುದಿಲ್ಲ ಎಂದು ನಮಗೆ ಅನಿಸುವುದಿಲ್ಲ. ಕೆಲವು ಲಸಿಕೆಗಳಿಂದ ಒಮಿಕ್ರಾನ್ ಪರಿಣಾಮ ಅಥವಾ ಒಮಿಕ್ರಾನ್ ತಗುಲುವ ಸಾಧ್ಯತೆ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.
ಆದರೆ, ಡೆಲ್ಟಾಗಿಂತ ಒಮಿಕ್ರಾನ್ ಹೆಚ್ಚು ಅಪಾಯಕಾರಿಯಲ್ಲ ಎಂದು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಗಳು ಹೇಳಿದ್ದರು. ಅಲ್ಲದೆ, ಈಗಾಗಲೇ ಕೊವಿಡ್ಗೆ ನೀಡಲಾಗುತ್ತಿರುವ ಲಸಿಕೆಯೇ ಒಮಿಕ್ರಾನ್ ಸೋಂಕಿಗೂ ಸಾಕಾಗುತ್ತದೆ ಎಂದಿದ್ದರು. ಪ್ರಾಥಮಿಕ ಮಾಹಿತಿಯು ಡೆಲ್ಟಾ ಮತ್ತು ಇತರ ತಳಿಗಳಂತೆ ಇದು ಜನರನ್ನು ಅನಾರೋಗ್ಯಕ್ಕೆ ಒಳಪಡಿಸುವುದಿಲ್ಲ ಎಂದು ಸೂಚಿಸುತ್ತದೆ. ಪ್ರಾಥಮಿಕ ದತ್ತಾಂಶವು ಇದು ಹೆಚ್ಚು ತೀವ್ರವಾಗಿದೆ ಎಂದು ಸೂಚಿಸುವುದಿಲ್ಲ. ವಾಸ್ತವವಾಗಿ ಏನಾದರೂ ಇದ್ದರೆ ನಿರ್ದೇಶನವು ಕಡಿಮೆ ತೀವ್ರತೆಯ ಕಡೆಗೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತುರ್ತು ನಿರ್ದೇಶಕ ಮೈಕೆಲ್ ರಯಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು.
Omicron: ಲಸಿಕೆಯ ದಕ್ಷತೆಯನ್ನು ಕುಗ್ಗಿಸಲಿದೆ ಒಮಿಕ್ರಾನ್, ಪ್ರಸರಣದ ವೇಗ ಡೆಲ್ಟಾಕ್ಕಿಂತಲೂ ಹೆಚ್ಚು: ಡಬ್ಲ್ಯೂಎಚ್ಒ
Published On - 1:06 pm, Tue, 21 December 21