Omicron Variant: ಒಮಿಕ್ರಾನ್ ಸೋಂಕಿಗೆ ಯುಎಸ್ನಲ್ಲಿ ಮೊದಲ ಸಾವು; ಲಸಿಕೆ ಪಡೆಯದ ವ್ಯಕ್ತಿ ಬಲಿ
ಡಿಸೆಂಬರ್ ಪ್ರಾರಂಭದಲ್ಲಿ ಬ್ರಿಟನ್ನಲ್ಲಿ ಒಮಿಕ್ರಾನ್ನಿಂದ ಮೊದಲ ಸಾವು ಸಂಭವಿಸಿತ್ತು. ಇದು ವಿಶ್ವದಲ್ಲೇ ಮೊದಲ ಒಮಿಕ್ರಾನ್ ಸಾವಾಗಿದೆ. ಅದಾದ ಬಳಿಕ ಬ್ರಿಟನ್ನಲ್ಲಿ ಮತ್ತೆ 12 ಜನರು ಮೃತಪಟ್ಟಿದ್ದಾರೆ.
ಒಮಿಕ್ರಾನ್ ವೈರಾಣು (Omicron Variant) ವಿಶ್ವಕ್ಕೇ ವ್ಯಾಪಿಸಿದ್ದರೂ ಇದುವರೆಗೆ ಈ ಸೋಂಕಿಗೆ ಯುಕೆಯಲ್ಲಿ 14 ಸಾವಾಗಿದೆ. ಆದರೆ ವಿಶ್ವದ 77ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸೋಂಕು ಹರಡಿದೆ. ಆದರೆ ಇದೀಗ ಯುಎಸ್ನಲ್ಲಿ ಒಮಿಕ್ರಾನ್ಗೆ ಮೊದಲ ಬಲಿಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈಗ ಯುಎಸ್ನಲ್ಲಿ ಒಮಿಕ್ರಾನ್ನಿಂದ ಮೃತಪಟ್ಟ ವ್ಯಕ್ತಿಗೆ ಕೊವಿಡ್ 19 ಲಸಿಕೆ (Covid 19 Vaccine)ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಈ ಸಾವಿನ ಬಗ್ಗೆ ಯುಎಸ್ನ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (CDC) ಯಾವುದೇ ಹೇಳಿಕೆಯನ್ನೂ ನೀಡಿಲ್ಲ.
ಯುನೈಟೆಡ್ ಸ್ಟೇಟ್ನ ಟೆಕ್ಸಾಸ್ ರಾಜ್ಯದಲ್ಲಿ ಹ್ಯಾರಿ ಕೌಂಟಿ ಎಂಬಲ್ಲಿ ಒಮಿಕ್ರಾನ್ ನಿಂದ ವ್ಯಕ್ತಿ ಮೃತಪಟ್ಟಿದ್ದು, ಇವರಿಗೆ 50 ರಿಂದ 60ರೊಳಗೆ ವಯಸ್ಸಾಗಿರಬಹುದು ಎಂದು ಹೇಳಲಾಗಿದೆ. ಇವರು ಸ್ಥಳೀಯವಾಗಿ ಕೊವಿಡ್ 19 ಹೊಸ ತಳಿ ಒಮಿಕ್ರಾನ್ನಿಂದ ಮೃತಪಟ್ಟ ಮೊದಲ ವ್ಯಕ್ತಿ ಎಂದು ಕೌಂಟಿ ಜಡ್ಜ್ ಲಿನಾ ಹಿಡಾಲ್ಗೋ ಟ್ವೀಟ್ ಮಾಡಿ ತಿಳಿಸಿದ್ದಾರೆ. ಹಾಗೇ, ದಯವಿಟ್ಟು ಎಲ್ಲರೂ ಲಸಿಕೆ ಪಡೆಯಿರಿ ಎಂದೂ ಮನವಿ ಮಾಡಿದ್ದಾರೆ. ಡಿ.18ರ ಡಾಟಾ ಅನ್ವಯ, ಯುಎಸ್ನಲ್ಲಿ ಒಮಿಕ್ರಾನ್ ರೂಪಾಂತರ ಪ್ರಮಾಣ ಶೇ.73ರಷ್ಟಿದೆ ಎಂದು ಸಿಡಿಸಿ ತಿಳಿಸಿದೆ. ಅಮೆರಿಕದಲ್ಲಿ ಒಮಿಕ್ರಾನ್ ಹೆಚ್ಚುತ್ತಿರುವ ಬೆನ್ನಲ್ಲೇ ಅಧ್ಯಕ್ಷ ಜೋ ಬೈಡನ್ ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. ಕೊವಿಡ್ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರಿಗೆ, ಅವರ ತ್ಯಾಗಕ್ಕೆ ನಾನು ಕೃತಜ್ಞನಾಗಿರುತ್ತೇನೆ. ಈ ಎರಡು ವರ್ಷಗಳ ಕಠಿಣ ಸಮಯದಲ್ಲಿ ನಿಮ್ಮ ಶ್ರಮವನ್ನೆಂದೂ ಮರೆಯಲಾಗದು. ಆ ಋಣ ನಮ್ಮ ಮೇಲೆ ಇದೆ. ಇನ್ನೂ ಕೂಡ ಹೋರಾಟ ಮುಂದುವರಿಯಲಿದೆ. ಜನರೂ ಕೂಡ ಸರಿಯಾಗಿ ಮಾಸ್ಕ್ ಧರಿಸಬೇಕು. ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಕೊರೊನಾ ಮತ್ತದರ ರೂಪಾಂತರಿಗಳ ವಿರುದ್ಧ ಹೋರಾಡಲು ಒಗ್ಗಟ್ಟಾಗಬೇಕು ಎಂದು ಬೈಡನ್ ಹೇಳಿದ್ದಾರೆ.
ಡಿಸೆಂಬರ್ ಪ್ರಾರಂಭದಲ್ಲಿ ಬ್ರಿಟನ್ನಲ್ಲಿ ಒಮಿಕ್ರಾನ್ನಿಂದ ಮೊದಲ ಸಾವು ಸಂಭವಿಸಿತ್ತು. ಇದು ವಿಶ್ವದಲ್ಲೇ ಮೊದಲ ಒಮಿಕ್ರಾನ್ ಸಾವಾಗಿದೆ. ಅದಾದ ಬಳಿಕ ಬ್ರಿಟನ್ನಲ್ಲಿ ಮತ್ತೆ 12 ಜನರು ಮೃತಪಟ್ಟಿದ್ದಾರೆ. 104 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಈ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು, ಇಲ್ಲಿ 160ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಒಮಿಕ್ರಾನ್ ವೈರಾಣು ಹರಡುವಿಕೆ ವೇಗ ಅತ್ಯಂತ ಹೆಚ್ಚು ಎಂದು ಆರೋಗ್ಯ ತಜ್ಞರು ಈಗಾಗಲೇ ಹೇಳಿದ್ದು, ಭಾರತದಲ್ಲಿ ಮೂರನೇ ಅಲೆಯ ಆತಂಕ ಶುರುವಾಗಿದೆ.
ಇದನ್ನೂ ಓದಿ: ಕಾಲೇಜಿಗೆ ಹೋಗುವಾಗ, ಬರುವಾಗ ಪುಂಡರಿಂದ ಕಿರುಕುಳ: ಬೇಸತ್ತ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ