
ಇಸ್ಲಾಮಾಬಾದ್, ಸೆಪ್ಟೆಂಬರ್ 24: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರ ಮುಂಜಾನೆ ಅಫ್ಘಾನಿಸ್ತಾನದ 10 ಪ್ರಮುಖ ನೆಲೆಗಳ ಮೇಲೆ ಪಾಕಿಸ್ತಾನದ ವಾಯುಪಡೆ ನಿಖರ ವೈಮಾನಿಕ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ತನ್ನ ಗಡಿ ಠಾಣೆಗಳ ಮೇಲೆ ಅಫ್ಘಾನಿಸ್ತಾನದಿಂದ ಎಂಟು ಡ್ರೋನ್‌ಗಳನ್ನು ಹಾರಿಸಿ ಶೆಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು ಈ ದಾಳಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಡ್ರೋನ್‌ಗಳನ್ನು ಸಂಗ್ರಹಿಸಲು ಹಾಗೂ ಉಡಾಯಿಸಲು ಬಳಸುತ್ತಿದ್ದ 10 ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಅತ್ಯಂತ ಜಾಗರೂಕತೆಯಿಂದ ‘ಸ್ವರಕ್ಷಣೆಯ ಹಕ್ಕಿನಡಿಯಲ್ಲಿ’ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಫ್ಘಾನ್ ತಾಲಿಬಾನ್ ಸರ್ಕಾರದ ಬೆದರಿಕೆಗಳು ಅಥವಾ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನಗಳು ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ತನ್ನ ಸಾರ್ವಭೌಮತ್ವ ಮತ್ತು ನಾಗರಿಕರನ್ನು ರಕ್ಷಿಸಿಕೊಳ್ಳುವ ಸಂಪೂರ್ಣ ಹಕ್ಕು ಪಾಕಿಸ್ತಾನಕ್ಕಿದೆ. ಪಾಕ್ ನೆಲದ ವಿರುದ್ಧ ಭಯೋತ್ಪಾದನೆ ನಡೆಸಲು ಅಫ್ಘಾನ್ ನೆಲವನ್ನು ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಕೊಹಾಟ್ ಮೇಲಿನ ಉಗ್ರರ ದಾಳಿ:ಖೈಬರ್ ಪಖ್ತುಂಖ್ವಾದ ಕೊಹಾಟ್ನಲ್ಲಿರುವ ಹಳೆಯ ಪೊಲೀಸ್ ಲೈನ್ಸ್ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಹಾಗೂ ಗುಂಡಿನ ದಾಳಿಯಲ್ಲಿ 23 ಮಂದಿ ಪೊಲೀಸರು/ನಾಗರಿಕರು ಸಾವನ್ನಪ್ಪಿ, ಸುಮಾರು 100 ಜನರು ಗಾಯಗೊಂಡಿದ್ದರು.
ಕುನಾರ್ ಮತ್ತು ಪಕ್ತಿಕಾ ದಾಳಿಗಳು: ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಸೋಮವಾರ ಅಫ್ಘಾನಿಸ್ತಾನದ ಗಡಿ ಪ್ರಾಂತ್ಯಗಳಾದ ಕುನಾರ್ ಮತ್ತು ಪಕ್ತಿಕಾ ಮೇಲೆ ದಾಳಿ ನಡೆಸಿ 28 ಉಗ್ರರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿತ್ತು. ಆದರೆ, ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮೂವರು ಅಮಾಯಕ ನಾಗರಿಕರು ಬಲಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದರು.
ಮತ್ತಷ್ಟು ಓದಿ:
ಅಫ್ಘಾನ್ ಡ್ರೋನ್ ನುಸುಳುವಿಕೆ: ಇದರ ಮುಂದುವರಿದ ಭಾಗವಾಗಿ, ಅಫ್ಘಾನಿಸ್ತಾನದ ಕಡೆಯಿಂದ ತೊರ್ಖಾಮ್ ಮತ್ತು ಕೊಹಾಟ್ ಗಡಿ ಠಾಣೆಗಳ ಕಡೆಗೆ ಎಂಟು ಡ್ರೋನ್‌ಗಳನ್ನು ಹಾರಿಸಲಾಗಿತ್ತು. ಈ ಡ್ರೋನ್‌ಗಳನ್ನು ಹೊಡೆದುರುಳಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಹೊಸ ಸುತ್ತಿನ 10 ವೈಮಾನಿಕ ದಾಳಿಗಳನ್ನು ಸಂಘಟಿಸಿದೆ.
ಪಾಕಿಸ್ತಾನದ ಸೇನೆಯು ತನ್ನ ದೇಶದ ಆಂತರಿಕ ಭದ್ರತಾ ವೈಫಲ್ಯಗಳನ್ನು ಮುಚ್ಚಿಹಾಕಲು ಅಫ್ಘಾನಿಸ್ತಾನದ ನಾಗರಿಕರ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಎಂದು ಜಬಿಹುಲ್ಲಾ ಮುಜಾಹಿದ್ ಕಿಡಿಕಾರಿದ್ದಾರೆ. ಈ ಆಕ್ರಮಣ ಮತ್ತು ಅನ್ಯಾಯಕ್ಕೆ ಅಫ್ಘಾನ್ ಪಡೆಗಳು ಸೂಕ್ತ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡಲಿವೆ ಎಂದು ತಾಲಿಬಾನ್ ಆಡಳಿತ ಶಪಥ ಮಾಡಿದೆ.
ವಿಡಿಯೋ
Pakistan has officially confirmed carrying out airstrikes with fighter jets in Afghanistan’s Kandahar and Khost provinces, as well as in Gardez, the capital of Paktia province. pic.twitter.com/Q8GZ1kLdPO
— @intel_izhan (@intel_izhan) September 24, 2026
ಟಿಟಿಪಿ ಉಪಟಳವೇ ಸಂಘರ್ಷಕ್ಕೆ ಮೂಲ: ಪಾಕಿಸ್ತಾನದಲ್ಲಿ ನಿಷೇಧಿತವಾಗಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಉಗ್ರರಿಗೆ ಕಾಬೂಲ್‌ನಲ್ಲಿರುವ ಅಫ್ಘಾನ್ ತಾಲಿಬಾನ್ ಆಡಳಿತವು ಆಶ್ರಯ ಮತ್ತು ತರಬೇತಿ ನೀಡುತ್ತಿದೆ ಎಂಬುದು ಇಸ್ಲಾಮಾಬಾದ್‌ನ ದೀರ್ಘಕಾಲದ ಗಂಭೀರ ಆರೋಪವಾಗಿದೆ. ಆದರೆ ಕಾಬೂಲ್ ಈ ಆರೋಪವನ್ನು ಸತತವಾಗಿ ನಿರಾಕರಿಸುತ್ತಾ ಬಂದಿದೆ
ಡ್ಯೂರಾಂಡ್ ರೇಖೆ ವಿವಾದ: ಬ್ರಿಟಿಷರ ಕಾಲದಲ್ಲಿ ಎಳೆಯಲಾದ 2,640 ಕಿ.ಮೀ ಉದ್ದದ ‘ಡ್ಯೂರಾಂಡ್ ರೇಖೆ’ಯನ್ನು ಅಫ್ಘಾನಿಸ್ತಾನವು ಅಧಿಕೃತ ಅಂತರರಾಷ್ಟ್ರೀಯ ಗಡಿಯಾಗಿ ಎಂದಿಗೂ ಒಪ್ಪಿಕೊಂಡಿಲ್ಲ. ಪಾಕಿಸ್ತಾನವು ಗಡಿಗೆ ತಂತಿಬೇಲಿ ಅಳವಡಿಸಲು ಮುಂದಾದಾಗಿನಿಂದಲೂ ಉಭಯ ದೇಶಗಳ ಪಡೆಗಳ ನಡುವೆ ನಿರಂತರ ಗುಂಡಿನ ಚಕಮಕಿ ನಡೆಯುತ್ತಲೇ ಇದೆ.
ಮಧ್ಯಸ್ಥಿಕೆ ಪ್ರಯತ್ನಗಳಿಗೆ ಹಿನ್ನಡೆ: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಕತಾರ್, ಸೌದಿ ಅರೇಬಿಯಾ, ಟರ್ಕಿ ಮತ್ತು ಚೀನಾ ನಡೆಸುತ್ತಿದ್ದ ರಾಜತಾಂತ್ರಿಕ ಮಾತುಕತೆಗಳಿಗೆ ಈ ನೇರ ಡ್ರೋನ್ ಹಾಗೂ ವೈಮಾನಿಕ ದಾಳಿಗಳು ಭಾರಿ ಹಿನ್ನಡೆ ತಂದೊಡ್ಡಿವೆ. ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡರೆ ಇಡೀ ದಕ್ಷಿಣ ಏಷ್ಯಾದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆಯಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ