
ಕರಾಚಿ, ಅಕ್ಟೋಬರ್ 13: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಸಮೀಪ ಮಂಗಳವಾರ ಮುಂಜಾನೆ ಭೀಕರ ರೈಲು ದುರಂತ ಸಂಭವಿಸಿದೆ. ಕರಾಚಿಯಿಂದ ಪೇಶಾವರಕ್ಕೆ ತೆರಳುತ್ತಿದ್ದ ‘ರೆಹಮಾನ್ ಬಾಬಾ ಎಕ್ಸ್‌ಪ್ರೆಸ್’ ಪ್ಯಾಸೆಂಜರ್ ರೈಲಿನ ಎಲ್ಲಾ 14 ಬೋಗಿಗಳು ಶೇರ್ ಶಾ ಸೇತುವೆಯ ಬಳಿ ಹಳಿತಪ್ಪಿ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ 5:15 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ರಕ್ಷಣಾ ತಂಡಗಳು ಗಾಯಾಳುಗಳನ್ನು ಮುಲ್ತಾನ್‌ನ ನಿಶ್ತಾರ್ ಆಸ್ಪತ್ರೆಗೆ ದಾಖಲಿಸಿವೆ.
ಸ್ಥಳೀಯ ಪತ್ರಿಕೆ ‘ಡಾನ್’ ಜತೆ ಮಾತನಾಡಿದ ಲೋಕೋ ಪೈಲಟ್ ರಿಜ್ವಾನ್ ಅಬ್ಬಾಸ್ ದುರಂತದ ಕ್ಷಣವನ್ನು ವಿವರಿಸಿದ್ದಾರೆ. ಸಿಗ್ನಲ್ ಗ್ರೀನ್ ಇತ್ತು ಮತ್ತು ಸ್ಪಷ್ಟವಾಗಿತ್ತು. ರೈಲು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿತ್ತು. ಶೇರ್ ಶಾ ನಿಲ್ದಾಣದ ಪ್ರದೇಶವನ್ನು ದಾಟುತ್ತಿದ್ದಂತೆ ರೈಲಿನಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಆಘಾತ ಮತ್ತು ತಳ್ಳುವಿಕೆಯ ಅನುಭವವಾಯಿತು. ನಾನು ತಕ್ಷಣ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದೆ. ಎಂಜಿನ್‌ನಿಂದ ಕೆಳಗಿಳಿದು ನೋಡಿದಾಗ ಹಿಂದಿನ ಎಲ್ಲಾ ಬೋಗಿಗಳು ಹಳಿ ಬಿಟ್ಟು ಬದಿಗೆ ಉರುಳಿ ಬಿದ್ದಿದ್ದವು ಎಂದು ಚಾಲಕ ತಿಳಿಸಿದ್ದಾರೆ.
14 ಬೋಗಿಗಳಿಂದ ರಕ್ಷಣೆ: ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ಮತ್ತು ಅರೆವೈದ್ಯಕೀಯ ತಂಡಗಳು ಹಳಿತಪ್ಪಿದ ಬೋಗಿಗಳಿಂದ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. 13 ಬೋಗಿಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದ್ದು, ಕೊನೆಯ ಬೋಗಿಯ ತೆರವು ಕಾರ್ಯ ಮುಂದುವರೆದಿದೆ.
ಪ್ರಧಾನಿ, ಅಧ್ಯಕ್ಷರ ಸಂತಾಪ: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಮತ್ತು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಆದೇಶಿಸಿದ್ದಾರೆ.
ಮತ್ತಷ್ಟು ಓದಿ: ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ: ಪಹಲ್ಗಾಮ್ ದಾಳಿ ಪ್ರಸ್ತಾಪಿಸಿ ಜಾಗತಿಕ ವೇದಿಕೆಯಲ್ಲಿ ಪಾಕ್ ವಿರುದ್ಧ ಭಾರತ ನೇರ ವಾಗ್ದಾಳಿ
ಪರ್ಯಾಯ ಸಾರಿಗೆ ವ್ಯವಸ್ಥೆ: ಸುಮಾರು 500ಕ್ಕೂ ಹೆಚ್ಚು ಪ್ರಯಾಣಿಕರಿಗೆ ಶೇರ್ ಶಾ ನಿಲ್ದಾಣದಿಂದ ಪರ್ಯಾಯ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಮೂಲಕ ತೆರಳುವವರಿಗೆ ವಿಶೇಷ ಬಸ್ಸುಗಳ ಸೌಲಭ್ಯ ಹಾಗೂ ಟಿಕೆಟ್ ಹಣ ಮರುಪಾವತಿ (Refund) ಕೌಂಟರ್‌ಗಳನ್ನು ತೆರೆಯಲಾಗಿದೆ.ಅಪಘಾತಕ್ಕೂ ಮುನ್ನ ರೋಹ್ರಿ ನಿಲ್ದಾಣದ ಬಳಿ 9ನೇ ನಂಬರ್ ಬೋಗಿಯ ನಟ್ ಮತ್ತು ಬೋಲ್ಟ್‌ಗಳನ್ನು ರೈಲ್ವೆ ಕಾರ್ಮಿಕರು ತುರ್ತಾಗಿ ರಿಪೇರಿ ಮಾಡಿದ್ದರು ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಈ ದುರಸ್ತಿಗೂ ಹಳಿತಪ್ಪಿದ್ದಕ್ಕೂ ಸಂಬಂಧವಿದೆಯೇ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.
🚨At least five people killed and 30 injured after a passenger train Rehman Baba Express derailed in Pakistan’s Punjab province https://t.co/TV19BOWCSt
— The Tatva (@thetatvaindia) October 13, 2026
ಉನ್ನತ ಮಟ್ಟದ ತನಿಖೆ: ರೈಲ್ವೆ ಸಚಿವ ಹನೀಫ್ ಅಬ್ಬಾಸಿ ಪ್ರತಿಕ್ರಿಯಿಸಿ, ಘಟನೆಯ ನಿಖರ ಕಾರಣ ಪತ್ತೆಹಚ್ಚಲು ಫೆಡರಲ್ ಸರ್ಕಾರಿ ರೈಲ್ವೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಬ್ರಿಟಿಷರ ಕಾಲದ ಹಳೆಯ ಟ್ರ್ಯಾಕ್‌ಗಳು, ಸಿಗ್ನಲಿಂಗ್ ವ್ಯವಸ್ಥೆಯ ಕೊರತೆ ಮತ್ತು ಕಳಪೆ ನಿರ್ವಹಣೆಯಿಂದಾಗಿ ರೈಲು ಅಪಘಾತಗಳು ನಿರಂತರವಾಗಿ ಮರುಕಳಿಸುತ್ತಿವೆ.
ಅಪಘಾತ ನಡೆದ ಮುಖ್ಯ ಲೈನ್-1 (ML-1) ಮಾರ್ಗವು ಪಾಕಿಸ್ತಾನದ ಅತ್ಯಂತ ಜನನಿಬಿಡ ರೈಲು ಕಾರಿಡಾರ್ ಆಗಿದ್ದು, ಈ ಮಾರ್ಗದ ನವೀಕರಣಕ್ಕೆ ಸಿಪಿಇಸಿ ಅಡಿಯಲ್ಲಿ ಚೀನಾದ ಅನುದಾನ ನಿರೀಕ್ಷಿಸಲಾಗಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದು ಸುರಕ್ಷತಾ ಲೋಪಗಳಿಗೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ