Peru Earthquake: ಪೆರುವಿನಲ್ಲಿ ಅವಳಿ ಭೂಕಂಪ: 6 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ,ಐತಿಹಾಸಿಕ ಚರ್ಚ್ ನೆಲಸಮ

ದಕ್ಷಿಣ ಅಮೆರಿಕದ ಪೆರುವಿನಲ್ಲಿ ಸಂಭವಿಸಿದ ಅವಳಿ ಭೂಕಂಪಗಳು ಭಾರಿ ವಿನಾಶ ಸೃಷ್ಟಿಸಿವೆ. 6 ಮಂದಿ ಪ್ರಾಣ ಕಳೆದುಕೊಂಡಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು ನೆಲಸಮವಾಗಿವೆ ಮತ್ತು 16ನೇ ಶತಮಾನದ ಐತಿಹಾಸಿಕ 'ಸ್ಯಾಂಟಿಯಾಗೋ ಡಿ ಲಿಯಾನ್' ಚರ್ಚ್ ಧ್ವಂಸಗೊಂಡಿದೆ. ಪೆಸಿಫಿಕ್ ರಿಂಗ್ ಆಫ್ ಫೈರ್ ವಲಯದಲ್ಲಿರುವ ಪೆರು ಈ ರೀತಿಯ ಭೂಕಂಪಗಳಿಗೆ ಆಗಾಗ್ಗೆ ತುತ್ತಾಗುತ್ತದೆ.

Peru Earthquake: ಪೆರುವಿನಲ್ಲಿ ಅವಳಿ ಭೂಕಂಪ: 6 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ,ಐತಿಹಾಸಿಕ ಚರ್ಚ್ ನೆಲಸಮ
ಪೆರು

Updated on: Jul 20, 2026 | 8:12 AM

ಲಿಮಾ, ಜುಲೈ 20: ದಕ್ಷಿಣ ಅಮೆರಿಕದ ಸುಂದರ ದೇಶ ಪೆರವಿನ ಮಧ್ಯ ಜುನಿನ್​ ಪರ್ವತ ಪ್ರದೇಶದಲ್ಲಿ ಅವಳಿ ಭೂಕಂಪ(Earthquake)ಗಳು ಸಂಭವಿಸಿದ್ದು, ಭಾರಿ ವಿನಾಶವನ್ನು ಸೃಷ್ಟಿಸಿವೆ. ಈ ದುರಂತದಲ್ಲಿ ಕನಿಷ್ಠ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.30ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು ಉರುಳಿವೆ, 200ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 5.1 ಹಾಗೂ 3.7 ತೀವ್ರತೆಯ ಭೂಕಂಪ ಸಂಭವಿಸಿದೆ.

ರಾಜಧಾನಿ ಲಿಮಾದಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಹುವಾನ್‌ಕಾಯೊ ಪ್ರಾಂತ್ಯದ ಸಿಕಾಯಾ ನಗರದ ಬಳಿ ಈ ಕಂಪನ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, 5.1 ತೀವ್ರತೆಯ ಭೂಕಂಪವು ರಾತ್ರಿ 9.24 ಕ್ಕೆ ಭೂಮಿಯ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.

ಮನೆಗಳು ನೆಲಸಮ: ಬೀದಿಗೆ ಬಿದ್ದ ಜನರು
ಪೆರುವಿನ ಆಂಡಿಸ್ ಪರ್ವತ ಸರಣಿಯ ಗ್ರಾಮಗಳಲ್ಲಿ ಬಹುತೇಕ ಮನೆಗಳನ್ನು ಒಣಗಿಸಿದ ಮಣ್ಣಿನ ಇಟ್ಟಿಗೆಗಳಿಂದ ನಿರ್ಮಿಸಲಾಗಿರುತ್ತದೆ. ಇವು ಪ್ರಬಲ ಭೂಕಂಪದ ಕಂಪನ ತಡೆಯಲು ಸಾಧ್ಯವಾಗದೆ ತಕ್ಷಣವೇ ಕುಸಿದು ಬಿದ್ದಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ 48 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, 18 ಕ್ಕೂ ಹೆಚ್ಚು ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ.

ಮತ್ತಷ್ಟು ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪನ: ದೆಹಲಿ, ಜಮ್ಮು ಸೇರಿ ಇಡೀ ಉತ್ತರ ಭಾರತದಲ್ಲೂ ನಡುಗಿದ ಭೂಮಿ!

ಚೊಂಗೊಸ್ ಬಹೋ ಎಂಬ ಕೃಷಿ ಪ್ರದೇಶದ ನೂರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು, ತೀವ್ರ ಚಳಿಯಲ್ಲಿ ಕಂಬಳಿಗಳನ್ನು ಹೊದ್ದು ರಸ್ತೆ ಬದಿಗಳಲ್ಲಿ ರಾತ್ರಿ ಕಳೆದಿದ್ದಾರೆ. ಇವರ ಸಾಕಷ್ಟೂ ಜಾನುವಾರುಗಳು ಕೂಡ ಅವಶೇಷಗಳ ಅಡಿಯಲ್ಲಿ ಸಿಲುಕಿ ನರಳುತ್ತಿರುವ ದೃಶ್ಯಗಳು ಕಂಡುಬಂದಿವೆ.

16ನೇ ಶತಮಾನದ ಐತಿಹಾಸಿಕ ‘ಸ್ಯಾಂಟಿಯಾಗೊ ಡಿ ಲಿಯಾನ್’ ಚರ್ಚ್ ನೆಲಸಮ
ಈ ಭೂಕಂಪದಲ್ಲಿ ದೇಶದ ಪ್ರಸಿದ್ಧ ರಾಷ್ಟ್ರೀಯ ಪರಂಪರೆಯ ತಾಣವೂ ಹಾನಿಗೊಳಗಾಗಿದೆ. 1565 ರಲ್ಲಿ ನಿರ್ಮಿಸಲಾಗಿದ್ದ ಚೊಂಗೊಸ್ ಬಹೋ ಪ್ರದೇಶದ ಐತಿಹಾಸಿಕ ‘ಸ್ಯಾಂಟಿಯಾಗೊ ಡಿ ಲಿಯಾನ್’ ಚರ್ಚ್ ಮತ್ತು ಅದರ ಪಕ್ಕದಲ್ಲಿದ್ದ ಕಾನ್ವೆಂಟ್​ಗೆ ಭಾರಿ  ಹಾನಿಯಾಗಿದೆ.

ವಿಡಿಯೋ

ಪೆರುವಿನಲ್ಲಿ ಆಗಾಗ ಭೂಕಂಪ ಏಕೆ ಸಂಭವಿಸುತ್ತದೆ?
ಪೆರು ದೇಶವು ಜಗತ್ತಿನ ಅತ್ಯಂತ ಅಪಾಯಕಾರಿ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ವಲಯದಲ್ಲಿದೆ. ಜಗತ್ತಿನಲ್ಲಿ ಸಂಭವಿಸುವ ಸುಮಾರು 85 ಪ್ರತಿಶತ ಭೂಕಂಪಗಳಿಗೆ ಈ ವಲಯವೇ ಕಾರಣ.

ಭೂಮಿಯ ಅಡಿಯಲ್ಲಿರುವ ‘ನಾಜ್ಕಾ’ ಟೆಕ್ಟೋನಿಕ್ ಪ್ಲೇಟ್, ‘ದಕ್ಷಿಣ ಅಮೆರಿಕನ್’ ಪ್ಲೇಟ್‌ನ ಕೆಳಗೆ ನಿಧಾನವಾಗಿ ಜಾರುವುದರಿಂದ ಭಾರಿ ಒತ್ತಡ ನಿರ್ಮಾಣವಾಗುತ್ತದೆ. ಈ ಒತ್ತಡವು ಶಕ್ತಿಯಾಗಿ ಬಿಡುಗಡೆಯಾದಾಗ ಭೂಕಂಪಗಳು ಸಂಭವಿಸುತ್ತವೆ.

ಇದಕ್ಕೂ ಮುನ್ನ, 2007 ರಲ್ಲಿ ಪಿಸ್ಕೋ ಪ್ರಾಂತ್ಯದಲ್ಲಿ 7.9 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ ಬರೋಬ್ಬರಿ 600 ಜನರು ಪ್ರಾಣ ಕಳೆದುಕೊಂಡಿದ್ದರು. ಸದ್ಯ ಪೆರುವಿನ ರಾಷ್ಟ್ರೀಯ ನಾಗರಿಕ ರಕ್ಷಣಾ ಪಡೆಗಳು ಧ್ವಂಸಗೊಂಡ ಮನೆಗಳ ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಸಂತ್ರಸ್ತರಿಗೆ ತುರ್ತು ಆಹಾರ, ಆಶ್ರಯ  ಒದಗಿಸುತ್ತಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us