ಪಾಕಿಸ್ತಾನದಲ್ಲಿ ಭೀಕರ ದುರಂತ: ಪೇಶಾವರದಲ್ಲಿ ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿದು 17 ಮಕ್ಕಳು, ಶಿಕ್ಷಕಿ ದುರ್ಮರಣ

ಪಾಕಿಸ್ತಾನದ ಪೇಶಾವರದಲ್ಲಿ ಖಾಸಗಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಭೀಕರ ದುರಂತ ಸಂಭವಿಸಿದೆ. 17 ಪುಟ್ಟ ಮಕ್ಕಳು ಮತ್ತು ಒಬ್ಬ ಶಿಕ್ಷಕಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಹಳೆಯ ಕಟ್ಟಡಗಳ ಕಳಪೆ ನಿರ್ವಹಣೆ, ಸುರಕ್ಷತಾ ಮಾನದಂಡಗಳ ಕೊರತೆಯೇ ಈ ದುರ್ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಪಾಕಿಸ್ತಾನದಲ್ಲಿ ಭೀಕರ ದುರಂತ: ಪೇಶಾವರದಲ್ಲಿ ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿದು 17 ಮಕ್ಕಳು, ಶಿಕ್ಷಕಿ ದುರ್ಮರಣ
ಶಾಲೆ
Image Credit source: X account screen shot Sajjad Tarakzai

Updated on: Oct 15, 2026 | 12:51 PM

ಇಸ್ಲಾಮಾಬಾದ್, ಅಕ್ಟೋಬರ್ 15: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ (KP) ಪ್ರಾಂತ್ಯದ ರಾಜಧಾನಿ ಪೇಶಾವರದಲ್ಲಿ ಗುರುವಾರ ಬೆಳಗ್ಗೆ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ನಗರದ ದಿರ್ ಕಾಲೋನಿ ಪ್ರದೇಶದಲ್ಲಿದ್ದ ಖಾಸಗಿ ಶಾಲೆಯೊಂದರ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕನಿಷ್ಠ 17 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟ ಎಲ್ಲಾ ಮಕ್ಕಳೂ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ತರಗತಿಯಲ್ಲಿ ಪಾಠ ಕೇಳುತ್ತಿದ್ದ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.

ಪೇಶಾವರದ ಜನನಿಬಿಡ ಪ್ರದೇಶವಾದ ದಿರ್ ಕಾಲೋನಿಯ ಖಾಸಗಿ ಶಾಲೆಯಲ್ಲಿ ಬೆಳಗಿನ ತರಗತಿಗಳು ನಡೆಯುತ್ತಿದ್ದಾಗ ಕಟ್ಟಡದ ಮೇಲ್ಛಾವಣಿ ಭಾರೀ ಶಬ್ದದೊಂದಿಗೆ ಕುಸಿದು ಬಿದ್ದಿದೆ. ಛಾವಣಿಯ ಕಾಂಕ್ರೀಟ್ ಸ್ಲ್ಯಾಬ್ ಮತ್ತು ಇಟ್ಟಿಗೆಗಳ ಅವಶೇಷಗಳ ಅಡಿಯಲ್ಲಿ ಡಜನ್‌ಗಟ್ಟಲೆ ಮಕ್ಕಳು ಹಾಗೂ ಶಿಬ್ಬಂದಿ ಸಿಲುಕಿಕೊಂಡರು. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು, ಅಗ್ನಿಶಾಮಕ ದಳ ಮತ್ತು ಸ್ಥಳೀಯ ನಿವಾಸಿಗಳು ಜೆಸಿಬಿ ಹಾಗೂ ಗ್ಯಾಸ್ ಕಟರ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಪೇಶಾವರದ ಪ್ರಮುಖ ಲೇಡಿ ರೀಡಿಂಗ್ ಆಸ್ಪತ್ರೆಗೆ (LRH) 17 ಮಕ್ಕಳ ಶವಗಳು ಮತ್ತು ಒಬ್ಬ ಶಿಕ್ಷಕಿಯ ಮೃತದೇಹವನ್ನು ತರಲಾಗಿದೆ ಎಂದು ಆಸ್ಪತ್ರೆಯ ವಕ್ತಾರ ಮೊಹಮ್ಮದ್ ಅಸಿಮ್ ದೃಢಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಮಕ್ಕಳಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಇಮ್ರಾನ್ ಹತ್ಯೆ ಶಂಕೆ: ಹಾಡಹಗಲೇ ಬೈಕ್ ಸವಾರನ ಮೇಲೆ ಗುಂಡಿನ ಮಳೆಗರೆದ ಅಪರಿಚಿತ

ಪೇಶಾವರ ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ (CCPO) ಡಾ. ಮಿಯಾನ್ ಸಯೀದ್ ಘಟನೆಯನ್ನು ಖಚಿತಪಡಿಸಿದ್ದು, ಗಾಯಗೊಂಡ 40ಕ್ಕೂ ಹೆಚ್ಚು ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ದುರ್ಘಟನೆಗೆ ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದು, ಅವಶೇಷಗಳ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಮತ್ತು ಗಾಯಾಳುಗಳಿಗೆ ಅತ್ಯುನ್ನತ ಗುಣಮಟ್ಟದ ಉಚಿತ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಖೈಬರ್ ಪಖ್ತುನ್ಖ್ವಾ ರಾಜ್ಯಪಾಲರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಲಹೆಗಾರ ಸಮರ್ ಹರೂನ್ ಬಿಲೋರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ದುರ್ಘಟನೆಗೆ ಕಾರಣವಾದ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಪಾಕಿಸ್ತಾನದ ಸಣ್ಣ ಮತ್ತು ಖಾಸಗಿ ಶಾಲೆಗಳಲ್ಲಿ ಸುರಕ್ಷತಾ ಮಾನದಂಡಗಳ ಕೊರತೆ, ಹಳೆಯ ಕಟ್ಟಡಗಳ ದುರ್ಬಲ ನಿರ್ವಹಣೆ ಮತ್ತು ಕಳಪೆ ಗುಣಮಟ್ಟದ ಸಿಮೆಂಟ್-ಕಬ್ಬಿಣದ ಬಳಕೆ ಇಂತಹ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿದೆ.

ಮಳೆ ಮತ್ತು ಹವಾಮಾನ ವೈಪರೀತ್ಯ: ಇತ್ತೀಚಿನ ದಿನಗಳಲ್ಲಿ ವಾಯವ್ಯ ಪಾಕಿಸ್ತಾನದಲ್ಲಿ ಸುರಿದ ಮಳೆಯಿಂದಾಗಿ ಹಳೆಯ ಕಟ್ಟಡಗಳ ಗೋಡೆಗಳು ಹಾಗೂ ಛಾವಣಿಗಳು ತೇವಗೊಂಡು ದುರ್ಬಲವಾಗಿದ್ದವು. ಈ ಕಟ್ಟಡದ ಫಿಟ್ನೆಸ್ ಪ್ರಮಾಣಪತ್ರ ಮತ್ತು ಸುರಕ್ಷತಾ ತಪಾಸಣೆ ನಡೆದಿತ್ತೇ ಎಂಬ ಬಗ್ಗೆ ಪ್ರಾಂತೀಯ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:50 pm, Thu, 15 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us