ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ; ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 10 ರೂ ಹೆಚ್ಚಾಗುವ ಸಾಧ್ಯತೆ
Petrol Price Hike in Pakistan: ಉಕ್ರೇನ್ ಬಿಕ್ಕಟ್ಟು ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಾಗುವ ಆತಂಕ ಎದುರಾಗಿದೆ. ಈ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Ukraine Crisis | ಸೋಮವಾರದಿಂದ ಪಾಕಿಸ್ತಾನದಲ್ಲಿ (Pakistan) ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು (Petroleum Price) 8 ರಿಂದ 10 ಪಾಕಿಸ್ತಾನಿ ರೂಪಾಯಿಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಈ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದನ್ನು ಉಲ್ಲೇಖಿಸಿ ಎಎನ್ಐ ತಿಳಿಸಿದೆ. ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿನ ಹೆಚ್ಚಳ, ಹೆಚ್ಚುವರಿ ಪೆಟ್ರೋಲಿಯಂ ಲೆವಿ ಅನ್ವಯ ಮತ್ತು ಕರೆನ್ಸಿ ಅಪಮೌಲ್ಯೀಕರಣವು ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಸೋಮವಾರದಿಂದ ಮುಂದಿನ ಹದಿನೈದು ದಿನಗಳವರೆಗೆ ಹೊಸ ದರ ಅನ್ವಯವಾಗಬಹುದು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಪೆಟ್ರೋಲ್ ಮತ್ತು ಹೈಸ್ಪೀಡ್ ಡೀಸೆಲ್ ದರ ಪ್ರತಿ ಲೀಟರ್‌ಗೆ ಕ್ರಮವಾಗಿ ಸುಮಾರು 5.60 ಮತ್ತು 4.50 ರೂಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಂತೆಯೇ, ಸೀಮೆಎಣ್ಣೆ ಮತ್ತು ಲಘು ಡೀಸೆಲ್ ತೈಲ ಬೆಲೆಗಳು ಕ್ರಮವಾಗಿ ಲೀಟರ್‌ಗೆ ಸುಮಾರು 4 ಮತ್ತು 3.70 ರೂ.ಗಳಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.
ಇಮ್ರಾನ್ ಖಾನ್ (Imran Khan) ನೇತೃತ್ವದ ಪಾಕಿಸ್ತಾನಿ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (IMF) ತನ್ನ ಬದ್ಧತೆಯ ಪ್ರಕಾರ ಫೆಬ್ರವರಿ 15 ರಂದು ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಪೆಟ್ರೋಲಿಯಂ ಲೆವಿಯನ್ನು ಪ್ರತಿ ಲೀಟರ್‌ಗೆ 4 ರೂ.ಗಳಷ್ಟು ಹೆಚ್ಚಿಸಿತ್ತು. ಪೆಟ್ರೋಲ್ ಮತ್ತು ಹೆಚ್ಎಸ್ಡಿಯ ಎಕ್ಸ್-ಡಿಪೋ ಬೆಲೆಗಳು ಪ್ರಸ್ತುತ ಪ್ರತಿ ಲೀಟರ್‌ಗೆ 159.86 ಮತ್ತು 147.83 ರೂಗೆ ಸ್ಥಿರವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆದಾಗ್ಯೂ, ಸರ್ಕಾರವು ಪ್ರತಿ ತಿಂಗಳು ಪೆಟ್ರೋಲಿಯಂ ಲೆವಿಯನ್ನು ಪ್ರತಿ ಲೀಟರ್‌ಗೆ 4 ರೂ ಹೆಚ್ಚಿಸುವ ಪರಂಪರೆಯನ್ನು ಮುಂದುವರೆಸಿದರೆ, ಪೆಟ್ರೋಲ್ ಮತ್ತು ಎಚ್‌ಎಸ್‌ಡಿಯ ಎಕ್ಸ್-ಡಿಪೋ ಮಾರಾಟದ ಬೆಲೆಗಳಲ್ಲಿ ಕ್ರಮವಾಗಿ ಲೀಟರ್‌ಗೆ ರೂ 9.60 ಮತ್ತು ರೂ 8.50 ರಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದಲ್ಲಿ ಹಣದುಬ್ಬರದಲ್ಲಿ ಭಾರೀ ಏರಿಕೆಯು ಬೇಡಿಕೆಯ ನಾಶಕ್ಕೆ ಕಾರಣವಾಗಬಹುದು ಮತ್ತು ಸರ್ಕಾರವು ತನ್ನ ತೆರಿಗೆ ಗುರಿಗಳನ್ನು ಪೂರೈಸಲು ತೊಂದರೆಗಳನ್ನು ಉಂಟುಮಾಡಬಹುದು ಎಂದು ಈ ಹಿಂದೆ ಡಾನ್ ಪತ್ರಿಕೆ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಕ್ರೇನ್ ಬೆಳವಣಿಗೆಗಳೂ ಇದಕ್ಕೆ ಕಾರಣವೇ?
ಗುರುವಾರದಂದು ಉಕ್ರೇನ್ ಮೇಲೆ ರಷ್ಯಾವು ಯುದ್ಧ ಘೋಷಿಸಿದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಬಹಳಷ್ಟು ಏರಿಳಿತವಾಗುತ್ತಿವೆ. ಈ ಕುರಿತು ವರದಿ ಮಾಡಿರುವ ಪಾಕಿಸ್ತಾನಿ ಮಾಧ್ಯಮವೊಂದು, ‘ಉಕ್ರೇನ್ ಬಿಕ್ಕಟ್ಟಿನ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರಗಳು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದಿತ್ತು.
ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯು ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯ ಮೇಲೆ ಪರಿಣಾಮ ಬೀರಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಮಾರ್ಚ್ 1 ರವರೆಗೆ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $ 100 ರಷ್ಟಿದ್ದರೆ, ನಂತರದಲ್ಲಿ ಪಾಕಿಸ್ತಾನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಲೀಟರ್‌ಗೆ 7 ರೂ.ವರೆಗೆ ಹೆಚ್ಚಾಗಬಹುದು ಎಂದು ತೈಲ ಉದ್ಯಮದ ಮೂಲಗಳು ವರದಿ ಮಾಡಿದ್ದವು. ಫೆಬ್ರವರಿ 15ರಂದು ಪಾಕಿಸ್ತಾನ ಸರ್ಕಾರ ಸುಮಾರು 12.03 ಪಾಕಿಸ್ತಾನಿ ರೂಗಳಷ್ಟು ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾಗಲಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ:
ಉಕ್ರೇನ್- ರಷ್ಯಾ ಧ್ವಜ ಹೊದ್ದು ನಿಂತ ಜೋಡಿಯ ಪೋಟೋ ವೈರಲ್: ಇಲ್ಲಿದೆ ಫೋಟೋ ಹಿಂದಿನ ಅಸಲಿ ಕಹಾನಿ