ಸಾಂಸ್ಕೃತಿಕ ಸಂಪರ್ಕಕ್ಕೆ ದೂರ ಅಡ್ಡಿಯಾಗದು; ಅರ್ಜೆಂಟೀನಾದ ಭಾರತೀಯರ ಸ್ವಾಗತಕ್ಕೆ ಪ್ರಧಾನಿ ಮೋದಿ ಸಂತಸ

ಪ್ರಧಾನಿ ನರೇಂದ್ರ ಮೋದಿ ತಮ್ಮ ಐದು ರಾಷ್ಟ್ರಗಳ ಪ್ರವಾಸದ ಮೂರನೇ ಹಂತವಾಗಿ ಅರ್ಜೆಂಟೀನಾಕ್ಕೆ ಆಗಮಿಸಿದ್ದಾರೆ. ಮೋದಿ ಅವರಿಗೆ ಅಲ್ಲಿನ ಭಾರತೀಯ ವಲಸಿಗರು ಅದ್ದೂರಿ ಸ್ವಾಗತ ಕೋರಿದರು. ಮೋದಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಭಾರತೀಯ ವಲಸಿಗರು ಸಾಂಪ್ರದಾಯಿಕ ಭಾರತೀಯ ನೃತ್ಯ ಪ್ರದರ್ಶನವನ್ನು ಮಾಡುವ ಮೂಲಕ ಮೋದಿಯನ್ನು ಸ್ವಾಗತಿಸಿದರು.

ಸಾಂಸ್ಕೃತಿಕ ಸಂಪರ್ಕಕ್ಕೆ ದೂರ ಅಡ್ಡಿಯಾಗದು; ಅರ್ಜೆಂಟೀನಾದ ಭಾರತೀಯರ ಸ್ವಾಗತಕ್ಕೆ ಪ್ರಧಾನಿ ಮೋದಿ ಸಂತಸ
Modi In Argentina

Updated on: Jul 05, 2025 | 3:28 PM

ಬ್ಯೂನಸ್ ಐರಿಸ್, ಜುಲೈ 5: ಅರ್ಜೆಂಟಿನಾಗೆ ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಅಲ್ಲಿನ ಭಾರತೀಯ ವಲಸಿಗರು ಸಾಂಪ್ರದಾಯಿಕ ನೃತ್ಯದ ಮೂಲಕ ವಿಶೇಷ ಸ್ವಾಗತ ನೀಡಿದರು. ಪ್ರಧಾನಿ ಮೋದಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಆತ್ಮೀಯವಾಗಿ ಸಂವಹನ ನಡೆಸುತ್ತಿದ್ದಂತೆ “ಭಾರತ್ ಮಾತಾ ಕಿ ಜೈ” ಮತ್ತು “ಮೋದಿ-ಮೋದಿ” ಎಂಬ ಘೋಷಣೆಗಳು ಪ್ರತಿಧ್ವನಿಸಿದವು. ಅರ್ಜೆಂಟೀನಾದಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತವನ್ನು ಪಡೆದಿರುವುದು ನನಗೆ ಗೌರವ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗೇ, ಸಾಂಸ್ಕೃತಿಕ ಸಂಪರ್ಕದ ವಿಷಯದಲ್ಲಿ ದೂರವು ಅಡ್ಡಿಯಾಗುವುದಿಲ್ಲ. ಎಲ್ಲೇ ಇದ್ದರೂ ಭಾರತೀಯರು ತಮ್ಮ ಬೇರುಗಳನ್ನು ಮರೆಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಬಗ್ಗೆ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ಸಾಂಸ್ಕೃತಿಕ ಸಂಪರ್ಕದ ವಿಷಯದಲ್ಲಿ ದೂರವು ಅಡ್ಡಿಯಾಗುವುದಿಲ್ಲ! ಬ್ಯೂನಸ್ ಐರಿಸ್‌ನಲ್ಲಿ ಭಾರತೀಯ ಸಮುದಾಯದಿಂದ ದೊರೆತ ಭವ್ಯ ಸ್ವಾಗತದಿಂದ ಗೌರವಿಸಲ್ಪಟ್ಟಿದ್ದೇನೆ. ಮನೆಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಕೂಡ ನಮ್ಮ ಭಾರತೀಯ ಸಮುದಾಯದ ಮೂಲಕ ಭಾರತದ ಚೈತನ್ಯವು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂಬುದನ್ನು ನೋಡುವುದು ನಿಜವಾಗಿಯೂ ಹೃದಯಸ್ಪರ್ಶಿ ಸಂಗತಿಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಭಾರತೀಯರಿಗೆ ಪ್ರಜಾಪ್ರಭುತ್ವವೆಂದರೆ ಜೀವನ ವಿಧಾನ; ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್​​ನಲ್ಲಿ ಪ್ರಧಾನಿ ಮೋದಿ

ಐದು ರಾಷ್ಟ್ರಗಳ ಪ್ರವಾಸದ ಮೂರನೇ ಹಂತದಲ್ಲಿ ಪ್ರಧಾನಿ ಮೋದಿ ಇಂದು ಅರ್ಜೆಂಟಿನಾದ ಬ್ಯೂನಸ್ ಐರಿಸ್‌ಗೆ ಆಗಮಿಸಿದರು. ಎಝೀಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. ಅವರನ್ನು ಭಾರತೀಯ ವಲಸಿಗರ ತಂಡ ಸ್ವಾಗತಿಸಿತು. ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸಾಂಪ್ರದಾಯಿಕ ಭಾರತೀಯ ನೃತ್ಯ ಪ್ರದರ್ಶನದೊಂದಿಗೆ ಸ್ವಾಗತಿಸಲಾಯಿತು. ಮೋದಿ ಅವರು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸಿದರು.

ಇದನ್ನೂ ಓದಿ: ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮೊದಲ ವಿದೇಶಿ ನಾಯಕರಾದ ಪ್ರಧಾನಿ ಮೋದಿ


ಅರ್ಜೆಂಟೀನಾ ಗಣರಾಜ್ಯದ ಅಧ್ಯಕ್ಷ ಜೇವಿಯರ್ ಮಿಲಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಅರ್ಜೆಂಟೀನಾಕ್ಕೆ ಅಧಿಕೃತ ಭೇಟಿಯಲ್ಲಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 57 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ