ಪೊಲೀಸ್ ಸ್ಟೇಶನ್ ಗೆ 12,500 ಸಲ ಕರೆ ಮಾಡಿ ಅದನ್ನು ಸ್ವೀಕರಿಸಿದವರನ್ನು ಸುಖಾಸುಮ್ಮನೆ ತೆಗಳಿ ಹೀಯಾಳಿಸುತ್ತಿದ್ದ ಫ್ಲೋರಿಡಾ ಮಹಿಳೆಯ ಬಂಧನ

ಕಳೆದ ತಿಂಗಳು ಕಾರ್ಲಾ ಕೇವಲ 24 ಗಂಟೆಗಳ ಅವಧಿಯಲ್ಲಿ 512 ಬಾರಿ ಪೊಲೀಸ್ ಸ್ಟೇಶನ್ ಗೆ ಕರೆ ಮಾಡಿದ್ದಳಂತೆ. ನ್ಯಾಯಾಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಪೊಲೀಸರು ಕರೆಗಳನ್ನು ಅಶ್ಲೀಲ, ನಿಂದನೀಯ ಅವಾಚ್ಯ ಮತ್ತು ಹೆದರಿಸುವಂಥವಾಗಿದ್ದವು ಅಂತ ಬಣ್ಣಿಸಿದ್ದಾರೆ, ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಪೊಲೀಸ್ ಸ್ಟೇಶನ್ ಗೆ 12,500 ಸಲ ಕರೆ ಮಾಡಿ ಅದನ್ನು ಸ್ವೀಕರಿಸಿದವರನ್ನು ಸುಖಾಸುಮ್ಮನೆ ತೆಗಳಿ ಹೀಯಾಳಿಸುತ್ತಿದ್ದ ಫ್ಲೋರಿಡಾ ಮಹಿಳೆಯ ಬಂಧನ
ಕಾರ್ಲಾ ಜೆಫರ್ಸನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 20, 2022 | 8:08 AM

ವಿನಾಕಾರಣ ಪೊಲೀಸ್ ಸ್ಟೇಶನ್ ಗೆ ಪೋನ್ ಮಾಡಿ ಯಾರೇ ಕರೆ ಸ್ವೀಕರಿಸಿದರೂ ಮನಬಂದಂತೆ ನಿಂದಿಸುತ್ತಿದ್ದ ಫ್ಲೋರಿಡಾದ (Florida) ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಫಾಕ್ಸ್ ನ್ಯೂಸ್ ಟಿವಿಯ ವರದಿಯೊಂದರ ಪ್ರಕಾರ ಸದರಿ ಮಹಿಳೆಯು ಈ ವರ್ಷದ ಜನೆವರಿಯಿಂದ ಇಲ್ಲಿಯವರೆಗೆ 12, 512 ಸಲ ಪೊಲೀಸರಿಗೆ ಫೋನ್ ಮಾಡಿದ್ದಾಳೆ. ಸೆಂಟ್ ಪೀಟರ್ಸ್ ಬರ್ಗ್ (St Petersburg) ಮತ್ತು ಪಿನೆಲ್ಲಾಸ್ ಕೌಂಟಿ ಶೆರೀಫ್ ಕಚೇರಿಯ ತುರ್ತು ಸೇವೆಯಾಗಿರದ ನಂಬರ್ ಗಳಿಗೆ ಕರೆ ಮಾಡುತ್ತಿದ್ದ 51-ವರ್ಷ-ವಯಸ್ಸಿನ ಕಾರ್ಲಾ ಜೆಫರ್ಸನ್ (Carla Jefferson), ಕರೆಯನ್ನು ಯಾರೇ ಸ್ವೀಕರಿಸಿದರರೂ ಬಯ್ಯುತ್ತಿದ್ದಳು, ಅಪಮಾನಿಸುತ್ತಿದ್ದಳು, ಹೀಯಾಳಿಸುತ್ತಿದ್ದಳು ಮತ್ತು ಸುಖಾಸುಮ್ಮನೆ ವಾದ ಮಾಡುತ್ತಿದ್ದಳು, ಎಂದು ಆಕೆಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ದೂರನ್ನು ಆಧರಿಸಿ ಚ್ಯಾನೆಲ್ ವರದಿ ಮಾಡಿದೆ.

ಸೆಂಟ್ ಪೀಟರ್ಸ್ ಬರ್ಗ್ ಪೊಲೀಸ್ ಸ್ಟೇಶನ್ ಗೆ ಒಳಬರುತ್ತಿದ್ದ ಕರೆಗಳಲ್ಲಿ ಶೇಕಡಾ 10 ಕರೆಗಳು ಕಾರ್ಲಾಳವೇ ಅಗಿರುತ್ತಿದ್ದವು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಕಾರ್ಲಾ ಕೇವಲ 24 ಗಂಟೆಗಳ ಅವಧಿಯಲ್ಲಿ 512 ಬಾರಿ ಪೊಲೀಸ್ ಸ್ಟೇಶನ್ ಗೆ ಕರೆ ಮಾಡಿದ್ದಳಂತೆ. ನ್ಯಾಯಾಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಪೊಲೀಸರು ಕರೆಗಳನ್ನು ಅಶ್ಲೀಲ, ನಿಂದನೀಯ ಅವಾಚ್ಯ ಮತ್ತು ಹೆದರಿಸುವಂಥವಾಗಿದ್ದವು ಅಂತ ಬಣ್ಣಿಸಿದ್ದಾರೆ, ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಆಕೆ ಯಾವುದೇ ಪೊಲೀಸ್ ಸೇವೆಗಾಗಿ ಫೋನ್ ಮಾಡುವುದಿಲ್ಲ. ಕರೆ ಸ್ವೀಕರಿಸಿದವರನ್ನು ಹೀಯಾಳಿಸಲು ಮಾತ್ರ ಫೋನ್ ಮಾಡುತ್ತಾಳೆ. ಆಕೆಯ ಸತತವಾದ ಕರೆಗಳಿಂದಾಗಿ ನಾವು ಅಸಲಿಗೆ ತುರ್ತಾಗಿ ನಮ್ಮ ಸೇವೆ ಅಗತ್ಯವಿದ್ದ ಕರೆಗಳನ್ನು ಸ್ವೀಕರಿಸುವುದು ಸಾಧ್ಯವಾಗುತ್ತಿರಲಿಲ್ಲ, ಎಂದು ಪೊಲೀಸ್ ಇಲಾಖೆ ವಕ್ತಾರೆ ಯೊಳಂದಾ ಫರ್ನಾಂಡಿಸ್ ಫಾಕ್ಸ್ ನ್ಯೂಸ್ ಗೆ ತಿಳಿಸಿದ್ದಾರೆ.

ನ್ಯೂ ಯಾರ್ಕ್ ಪೋಸ್ಟ್ ಪತ್ರಿಕೆಯ ವರದಿಯೊಂದು ಪೊಲೀಸರು ಜೂನ್ ನಲ್ಲಿ ಒಂದು ಪತ್ರದ ಮೂಲಕ ಸೂಚನೆಯೊಂದನ್ನು ನ ರವಾನಿಸಿ ಕರೆ ಮಾಡಿ ಕಿರಿಕಿರಿ ಹುಟ್ಟಿಸುವುದನ್ನು ನಿಲ್ಲಿಸದಿದ್ದರೆ ಬಂಧಿಸುವುದಾಗಿ ಬೆದರಿಸಿದ್ದರು ಅಂತ ಹೇಳುತ್ತದೆ.

ಪೊಲೀಸರ ಎಚ್ಚರಿಕೆ ಹೊರತಾಗಿಯೂ ಕಾರ್ಲಾ ಪೊಲೀಸ್ ಸ್ಟೇಶನ್ ಗೆ ಕರೆ ಮಾಡುವುದನ್ನು ಮುಂದುವರಿಸಿದಳು ಎಂದು ಪತ್ರಿಕೆ ಹೇಳಿದೆ. ಆಗ ಪೊಲೀಸರು ಬಂಧಿಸಿ ಸ್ವಲ್ಪ ಸಮಯದ ಬಳಿಕ ಬಿಡುಗಡೆ ಮಾಡಿದ್ದರು.

ಅಷ್ಟಾದ ನಂತರವೂ ಆಕೆ ಕರೆ ಮಾಡುವುದನ್ನು ಮುಂದುವರಿಸಿದ್ದರಿಂದ ಪೋಲಿಸರು ಕಳೆದವಾರ ಪುನಃ ಬಂಧಿಸಿದ್ದಾರೆ. ಅಪರಾಧೀ ಹಿನ್ನೆಲೆ ಹೊಂದಿರುವ ಕಾರ್ಲಾ ಹಿಂದೆ ಹಲವಾರು ವರ್ಷಗಳ ಜೈಲುವಾಸ ಅನುಭವಿಸಿದ್ದಾಳಂತೆ.

ಪ್ರಾಯಶಃ ಅದೇ ಕಾರಣಕ್ಕೆ ಆಕೆ ಪೊಲೀಸರನ್ನು ಗೋಳು ಹೊಯ್ದುಕೊಳ್ಳುವ ಹವ್ಯಾಸ ಬೆಳಸಿಕೊಂಡಿರಬಹುದೆಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.