ರಾಣಿ ಎಲಿಜಬೆತ್ ಮರಣ ಪ್ರಮಾಣ ಪತ್ರದ ಉದ್ಯೋಗ ಶೀರ್ಷಿಕೆಯಡಿ ನಮೂದಾಗಿರುವ ಉಲ್ಲೇಖ ಅಸಾಮಾನ್ಯವಾದದ್ದು!
ರಾಣಿಯ ಈ ದಾಖಲೆ ಪ್ರಮಾಣ ಪತ್ರದಲ್ಲಿ ಅವರ ದಿವಂಗತ ಪತಿ ಪ್ರಿನ್ಸ್ ಫಿಲಿಪ್, ಅವರ ತಂದೆ-ತಾಯಿ ಕಿಂಗ್ ಜಾರ್ಜ್ ಮತ್ತು ಕ್ವೀನ್ ಎಲಿಜಬೆತ್ ದಿ ಕ್ವೀನ್ ಮದರ್ ಅಂತ ನಮೂದಿಸಲಾಗಿದೆ. ಆದರೆ ಈ ಅಸಾಧರಣ ಮಹಿಳೆಯ ಉದ್ಯೋಗವನ್ನು ಏನಂತ ಹೇಳಲಾಗಿದೆ ಗೊತ್ತಾ?
ಬ್ರಿಟನ್ನಿನ ಮಹಾರಾಣಿ ಎಲಿಜಬೆತ್ ll (Queen Elizabeth ll) ಅವರ ಮರಣ ಪ್ರಮಾಣ ಪತ್ರವನ್ನು (Death Certificate) ಗುರುವಾರ ಅಂದರೆ ಸೆಪ್ಟೆಂಬರ್ 29ರಂದು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದರೊಂದಿಗೆ ಅವರ ಸಾವಿನ ಕಾರಣ ಬಹಿರಂಗಗೊಂಡಿದೆ (revealed). ಸತ್ತವರು ಯಾರೇ ಆಗಿರಲಿ, ಅವರ ಹೆಸರಲ್ಲಿ ಒಂದು ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಇಲಾಖೆ ಕುಟುಂಬದ ಸದಸ್ಯರಿಗೆ ನೀಡುತ್ತದೆ ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ರಾಣಿಗೆ ನೀಡಿರುವ ಮರಣ ಪ್ರಮಾಣ ಪತ್ರದಲ್ಲಿ ಮಾಡುತ್ತಿದ್ದ ಉದ್ಯೋಗದ ಶೀರ್ಷಿಕೆ ಅಡಿ ನಮೂದಿಸಿರುವುದು ನಿಸ್ಸಂದೇಹವಾಗಿ ವಿಶೇಷ ಮತ್ತು ಅಸಾಮಾನ್ಯವಾದದ್ದು.
ಪ್ರಮಾಣ ಪತ್ರದಲ್ಲಿ ರಾಣಿಯ ಸಾವಿನ ಕಾರಣವನ್ನು ಅದಕ್ಕೆ ಸಂಬಂಧಿಸಿದ ಕಾಲಮ್ಮಿನಲ್ಲಿ ವೃದ್ಧಾಪ್ಯ ಎಂದು ನಮೂದಿಸಲಾಗಿದೆ ಮತ್ತು ಸಾವು ಸೆಪ್ಟೆಂಬರ್ 8, ಗುರುವಾರ ಮಧ್ಯಾಹ್ನ 3.10 ನಿಮಿಷ ಎಂದು ಉಲ್ಲೇಖಿಸಲಾಗಿದೆ. ಬಾಲ್ಮೋರಲ್ ಕ್ಯಾಸಲ್ ನಲ್ಲಿ ಸಂಭವಿಸಿದ ಅವರ ಸಾವಿನ ಸುದ್ದಿಯನ್ನು ಮೂರು ಗಂಟೆಗಳ ನಂತರ ಸಾರ್ವಜನಿಕಗೊಳಿಸಲಾಗಿತ್ತು. ರಾಣಿಯ ಮಗಳು ರಾಜಕುಮಾರಿ ಆ್ಯನ್ ತನ್ನ ತಾಯಿ ಸ್ವರ್ಗಸ್ಥರಾದ ಸಂಗತಿ ಬಹಿರಂಗಪಡಿಸಿದರೆಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.
ರಾಣಿಯ ಈ ದಾಖಲೆ ಪ್ರಮಾಣ ಪತ್ರದಲ್ಲಿ ಅವರ ದಿವಂಗತ ಪತಿ ಪ್ರಿನ್ಸ್ ಫಿಲಿಪ್, ಅವರ ತಂದೆ-ತಾಯಿ ಕಿಂಗ್ ಜಾರ್ಜ್ ಮತ್ತು ಕ್ವೀನ್ ಎಲಿಜಬೆತ್ ದಿ ಕ್ವೀನ್ ಮದರ್ ಅಂತ ನಮೂದಿಸಲಾಗಿದೆ. ಆದರೆ ಈ ಅಸಾಧರಣ ಮಹಿಳೆಯ ಉದ್ಯೋಗವನ್ನು ಏನಂತ ಹೇಳಲಾಗಿದೆ ಗೊತ್ತಾ?
ಅದನ್ನು ಸರಳವಾಗಿ ‘ಹರ್ ಮೆಜೆಸ್ಟಿ ದಿ ಕ್ವೀನ್’ ಎಂದು ನಮೂದಿಸಲಾಗಿದೆ!
ರಾಣಿಯ ಮರಣದ ನಂತರ ಯುನೈಟೆಡ್ ಕಿಂಗ್ಡಮ್ ನಲ್ಲಿ 10-ದಿನ ಶೋಕ ಆಚರಿಸಲಾಯಿತು. ಎಡಿನ್ ಬರ್ಗ್ನಲ್ಲಿರುವ ಹೋಲಿರೂಡ್ ಅರಮನೆಯಲ್ಲಿ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು. ಅದಕ್ಕೆ ಮೊದಲು ಅವರ ದೇಹವನ್ನು ಲಂಡನ್ ಗೆ ತಂದು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ಶವಪಟ್ಟಿಗೆಯನ್ನು ವೆಸ್ಟ್ ಮಿಂಸ್ಟರ್ ಹಾಲ್ ನಲ್ಲಿ ಇರಿಸಿದಾಗ ಲಕ್ಷಾಂತರ ಜನ ಸಾಲಿನಲ್ಲಿ ಬಂದು ತಮ್ಮ ನೆಚ್ಚಿನ ರಾಣಿಯ ಅಂತಿಮ ದರ್ಶನ ಪಡೆದು ಕಾಣ್ಣೀರು ಸುರಿಸುತ್ತಾ ವಿದಾಯ ಹೇಳಿದರು.
ರಾಣಿ ಅಂತಿಮ ಯಾತ್ರೆ ಸೆಪ್ಟೆಂಬರ್ 19 ರಂದು ರಾಜಮನೆತನದ ಸದಸ್ಯರು ಮತ್ತು ವಿದೇಶಗಳ ಹಲವಾರು ಅಗ್ರಗಣ್ಯ ನಾಯಕರ ಸಮ್ಮುಖದಲ್ಲಿ ವೆಸ್ಟ್ ಮಿಂಸ್ಟರ್ ಅಬ್ಬೀಯಲ್ಲಿ ನಡೆಯಿತು. ಲಂಡನ್ ನಗರದ ಪ್ರಮುಖ ಬೀದಿಗಳಲ್ಲಿ ನೆರೆದಿದ್ದ ಜನ ರೋದಿಸುತ್ತಾ ವಿದಾಯ ಹೇಳಿದರು. ರಾಣಿಯ ದೇಹವನ್ನು ವಿಂಡ್ಸರ್ ಕ್ಯಾಸಲ್ ನಲ್ಲಿರುವ ಸೆಂಟ್ ಜಾರ್ಜ್ಸ್ ಚಾಪಲ್ ನಲ್ಲಿ ಏಪ್ರಿಲ್ 2021ರಲ್ಲಿ ನಿಧನರಾದ ಅವರ ದಿವಂಗತ ಪತಿ ಪ್ರಿನ್ಸ್ ಫಿಲಿಪ್ ಅವರ ಸಮಾಧಿ ಪಕ್ಕದಲ್ಲಿ ಹೂತಿಡಲಾಯಿತು.