ಚೀನಾ ಸೇರಿ ಹಲವು ದೇಶಗಳಲ್ಲಿ ಜ್ವರ- ನೆಗಡಿ ಔಷಧಿಗಳಿಗಿಂತ ಕಾಂಡೋಮ್ ಸೇಲ್ ಭರ್ಜರಿ
ಹಲವು ದೇಶಗಳಲ್ಲಿ ಕೊರೊನಾ ಬಿಗಿ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ಲಸಿಕೆ ಹಾಕುವ ಕಾರ್ಯ ವೇಗದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಸೇರಿ ಹಲವು ದೇಶಗಳಲ್ಲಿ ಮೊದಲ ತ್ರೈಮಾಸಿಕ ಕಾಂಡೋಂ ಸೇಲ್ ಭರ್ಜರಿಯಾಗಿದೆ.
ಕೊರೊನಾ ಲಾಕ್ಡೌನ್ನಿಂದ ವಿನಾಯಿತಿ ಸಿಗುತ್ತಿದ್ದಂತೆ ಚೀನಾ ಸೇರಿದ ಹಾಗೆ ಹಲವು ದೇಶಗಳಲ್ಲಿ ಕಾಂಡೋಮ್ ಮಾರಾಟದಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿದೆ ಎಂದು ಗ್ರಾಹಕ ವಸ್ತುಗಳ ದೈತ್ಯ ಕಂಪೆನಿ ರೆಕಿಟ್ (Reckitt)ತಿಳಿಸಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ 2021ನೇ ಇಸವಿಯ ಮೊದಲ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್) ಡ್ಯುರೆಕ್ಸ್ ಮಾರಾಟ “ಎರಡಂಕಿಯಲ್ಲಿ” ಹೆಚ್ಚಳವಾಗಿದೆ ಎಂದು ವರದಿ ಆಗಿದೆ. ಆದರೆ ಶೀತ, ಜ್ವರರದಂಥ ಸಮಸ್ಯೆಗಳಿಗೆ ಔಷಧವನ್ನು ಸಂಗ್ರಹಿಸಿಡುವ ಗ್ರಾಹಕರ ಸಂಖ್ಯೆ ಒಟ್ಟಾರೆಯಾಗಿ ಇಳಿಕೆ ಆಗಿದೆ. ಇನ್ನು ರೆಕಿಟ್ ಮುಖ್ಯಸ್ಥರು ಗುರುತಿಸಿರುವಂತೆ, ಜನರಲ್ಲಿ ಸ್ವಚ್ಛತೆಯ ಅಭ್ಯಾಸ ಹೆಚ್ಚಾಗಿದ್ದು, Lysol (ಲೈಸಲ್) ಮತ್ತು Dettol(ಡೆಟಾಲ್) ಮಾರಾಟದಲ್ಲಿ ಭಾರೀ ಪ್ರ,ಮಾಣದಲ್ಲಿ ಹೆ್ಚ್ಚಳವಾಗಿದೆ.
ಕಳೆದ ವರ್ಷ ಕೊರೊನಾ ಶುರುವಾದ ಹೊಸತರಲ್ಲಿ ಜನರ ಲೈಂಗಿಕ ಸಂಪರ್ಕ ಪ್ರಮಾಣ ಕಡಿಮೆ ಇತ್ತು ಎಂದಿರುವ ಸಂಸ್ಥೆ, ಭಾಗಶಃ ಆತಂಕದ ಕಾರಣವೂ ಇರಬಹುದು ಎಂದು ಹೇಳಿದೆ. ಇನ್ನು ಸಾಮಾಜಿಕ ಅಂತರದ ನಿಯಮದಲ್ಲಿ ಬೇಸಿಗೆ ಹೊತ್ತಿಗೆ ವಿನಾಯಿತಿ ನೀಡಿದ ಮೇಲೆ ಡ್ಯುರೆಕ್ಸ್ ಮಾರಾಟ ಹೆಚ್ಚಳವಾಯಿತು ಎಂದು ಕಂಪೆನಿ ಹೇಳಿದೆ. ನ್ಯೂಟ್ರಿಷನ್ ವಿಭಾಗದಲ್ಲಿ ಬೇಬಿ ಫಾರ್ಮುಲಾ ಬ್ರ್ಯಾಂಡ್ ಎನ್ಫಾ ಕೂಡ ಇದ್ದು, ಮೊದಲ ತ್ರೈಮಾಸಿಕದ ಮಾರಾಟ ಶೇ 12.3ರಷ್ಟು ಕುಸಿದಿದೆ. ಆದರೆ ಸ್ವಚ್ಛತೆ ಉತ್ಪನ್ನಗಳ ಮಾರಾಟ ಶೇ 21.1ರಷ್ಟು ಏರಿಕೆ ಆಗಿದೆ. ಒಟ್ಟಾರೆಯಾಗಿ ವರ್ಷದ ಮೊದಲ ಮೂರು ತಿಂಗಳಲ್ಲಿ 350 ಕೋಟಿ ಪೌಂಡ್ ಆಗಿದ್ದು, ಶೇ 1.1ರಷ್ಟು ಇಳಿಕೆ ಆಗಿದೆ.
ಲೈಸಲ್ ಮತ್ತು ಡೆಟಾಲ್ ಬೇಡಿಕೆ ಮುಂದುವರಿಕೆ ಮುಖ್ಯಾಧಿಕಾರಿ ಲಕ್ಷ್ಮಣ್ ನರಸಿಂಹನ್ ಮಾತನಾಡಿ, ಕೊರೊನಾ ಹರಡುವಿಕೆ ಬಗ್ಗೆ ಗ್ರಾಹಕರು ಬಹಳ ಜಾಗ್ರತೆಯಿಂದ ಇದ್ದಾರೆ. ಆದ್ದರಿಂದ ಲೈಸಲ್ ಮತ್ತು ಡೆಟಾಲ್ ಬೇಡಿಕೆ ಮುಂದುವರಿದಿದೆ. ಮತ್ತೆ ಜನಜೀವನ ಸಹಜವಾಗುವತ್ತ ಸಾಗುತ್ತಿರುವುದರಿಂದ ಸ್ವಚ್ಛತೆಯ ಹವ್ಯಾಸ ಈ ಅವಧಿಯಲ್ಲಿ ಜಾಸ್ತಿ ಆಗಿದೆ. ಗ್ರಾಹಕರ ನಡವಳಿಕೆ ಮತ್ತು ಕೊರೊನಾದ ವಿವಿಧ ಹಂತದಲ್ಲಿ ಇರುವ ವಿವಿಧ ಉತ್ಪನ್ನಗಳ ಬೇಡಿಕೆಯನ್ನು ಕಂಪೆನಿಯು ಗುರುತಿಸುತ್ತಿದೆ ಎಂದು ಹೇಳಿದ್ದಾರೆ.
ಶೀತ, ಜ್ವರ ನಿವಾರಣೆಗೆ ಬಳಸುವಂಥ ಆರೋಗ್ಯ ಉತ್ಪನ್ನಗಳಾದ ನ್ಯೂರೋಫೆನ್ ಅಥವಾ ಸ್ಟ್ರೆಪ್ಸಿಲ್ಸ್ ಮಾರಾಟ ಶೇ 16.4ರಷ್ಟು ಕಡಿಮೆ ಆಗಿದೆ ಎಂದು ಕಂಪೆನಿ ವರದಿ ಮಾಡಿದೆ. ಕಂಪೆನಿ ಅಂದಾಜು ಮಾಡುವಂತೆ, ಜ್ವರದ ಪ್ರಕರಣಗಳು ಶೇ 90ರಷ್ಟು ಕಡಿಮೆ ಆಗಿದೆ. ಕಳೆದ ವರ್ಷವೇ ಗ್ರಾಹಕರು ಔಷಧವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಇನ್ನು ನರಸಿಂಹನ್ ಅವರು ಮುಂದುವರಿದು ಹೇಳುವಂತೆ, ಯಾವ ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿ, ಲಸಿಕೆ ಹಾಕುವ ಪ್ರಮಾಣ ಹೆಚ್ಚಾಗಿದೆಯೋ ಅಲ್ಲಿ ಕೈ ತೊಳೆಯಬೇಕು ಅಥವಾ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂಬುದರಿಂದ ವಿನಾಯಿತಿ ಇದೆ. ಆದರೂ ಕೊರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಮುಂಚಿನ ಪ್ರಮಾಣಕ್ಕಿಂತ ಬಳಕೆ ಹೆಚ್ಚಾಗಿದೆ.
ಉದಾಹರಣೆಗೆ ಡೆಟಾಲ್ ಮಾರಾಟ ಭಾರತದಲ್ಲಿ ಭಾರೀ ಹೆಚ್ಚಾಗಿದೆ. ಸದ್ಯಕ್ಕೆ ಕೊರೊನಾ ಪ್ರಕರಣಗಳು ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿದ್ದು, ಚೀನಾದಲ್ಲಿ ಕಡಿಮೆ ಆಗಿದೆ. “ಲೈಂಗಿಕ ಸ್ವಾಸ್ಥ್ಯ” ಉತ್ಪನ್ನಗಳು ಸಹ ಚೀನಾದಂಥ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗುತ್ತಿದೆ. ಅದರ ಜತೆಗೆ ಅಮೆರಿಕದ ಕೆಲವು ಭಾಗ ಮತ್ತು ಯುರೋಪ್ನಲ್ಲಿ ಮಾರಾಟ ಹೆಚ್ಚಾಗಿದೆ.
ಸಹಜ ಸ್ಥಿತಿಗೆ ಮರಳಿದೆಯೇ? ಸಾಮಾಜಿಕ ಅಂತರ ಮತ್ತು ಲಾಕ್ಡೌನ್ನಂಥ ಕ್ರಮಗಳು ಈಗಲೂ ಇತರ ದೇಶಗಳಲ್ಲಿ ಇರುವುದರಿಂದ ಉತ್ಪನ್ನಗಳ ಮಾರಾಟ ಬೆಳವಣಿಗೆಗೆ ಅಲ್ಲೆಲ್ಲ ಅವಕಾಶಗಳಿವೆ ಎಂದು ಕಂಪೆನಿಗಳ ಮುಖ್ಯಸ್ಥರು ಅಭಿಪ್ರಾಯ ಪಡುತ್ತಾರೆ. ಇನ್ನು ಆರಂಭದಲ್ಲಿ ತಿಳಿಸಿದ ನಿದರ್ಶನಗಳು ಲಾಕ್ಡೌನ್ ನಿಯಮಗಳು ಸಡಿಲವಾದ ಮೇಲೆ ಗ್ರಾಹಕರ ಖರ್ಚು ಮಾಡುವ ಹವ್ಯಾಸ ಏನಾಗಬಹುದು ಎಂಬುದಕ್ಕೆ ನಿದರ್ಶನವಾಗಿ ಸಿಕ್ಕಿದೆ. ಕಳೆದ ಮಂಗಳವಾರ ಮಾರುಕಟ್ಟೆ ಸಂಶೋಧನಾ ಸಂಸ್ಥೆ Kantar ತಿಳಿಸುವಂತೆ, ಲಾಕ್ಡೌನ್ನಿಂದ ವಿನಾಯಿತಿ ಸಿಕ್ಕ ಮೇಲೆ ಹಾಗೂ ಲಸಿಕೆ ಹಾಕುವ ಕಾರ್ಯಕ್ಕೆ ವೇಗ ದೊರೆತ ನಂತರ ಯುನೈಟೆಡ್ ಕಿಂಗ್ಡಂ ಖರೀದಿದಾರರು ಸೂಪರ್ ಮಾರ್ಕೆಟ್ಗಳಿಗೆ ಹೆಚ್ಚು ತೆರಳುತ್ತಿದ್ದಾರೆ ಮತ್ತು ಆನ್ಲೈನ್ ಖರೀದಿ ಕಡಿಮೆ ಮಾಡಿದ್ದಾರೆ.
ಯುನೈಟೆಡ್ ಕಿಂಗ್ಡಮ್ನಲ್ಲಿ 3.3 ಕೋಟಿ ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಲಾಗಿದೆ. ಏಪ್ರಿಲ್ 18ನೇ ತಾರೀಕಿನವರೆಗಿನ 12 ವಾರಗಳಲ್ಲಿ ಒಟ್ಟಾರೆ ಸೂಪರ್ಮಾರ್ಕೆಟ್ಗಳ ಮಾರಾಟದಲ್ಲಿ ಶೇ 5.7ರಷ್ಟು ಏರಿಕೆಯಾಗಿ 31.6 ಬಿಲಿಯನ್ ಪೌಂಡ್ಸ್ ಮುಟ್ಟಿದೆ. ಇನ್ನು ಕೊರೊನಾದ ಆರಂಭದ ದಿನಗಳಿಗೆ ಹೋಲಿಸಿದಲ್ಲಿ ಬೆಳವಣಿಗೆ ದರ ಕಡಿಮೆ ಇದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ Kantar ರೀಟೇಲ್ ಮತ್ತು ಗ್ರಾಹಕರ ಒಳನೋಟ ವಿಭಾಗದ ಮುಖ್ಯಸ್ಥ ಫ್ರೇಸರ್ ಮೆಕ್ಕೆವಿಟ್ ತಿಳಿಸುವಂತೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಮಾರುಕಟ್ಟೆಯು ಮುಂಬರುವ ತಿಂಗಳಲ್ಲಿ ಏರಿಕೆ ಮತ್ತು ಇಳಿಕೆ ಮಧ್ಯೆ ಹೊಯ್ದಾಡಬಹುದು. ಮಾರುಕಟ್ಟೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಖರೀದಿ ಪ್ರಮಾಣ ಕಡಿಮೆ ಆಗಿದೆ. ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿದೆ ಎಂದಿದ್ದಾರೆ.
(ಮಾಹಿತಿ ಕೃಪೆ: ಬಿಬಿಸಿ)
ಇದನ್ನೂ ಓದಿ: ಕೊರೊನಾದಿಂದ ಕಂಗಾಲಾದ ಭಾರತ; ಸಹಾಯಕ್ಕೆ ಧಾವಿಸಿದ ಹಾಂಕಾಂಗ್, ಐರ್ಲೆಂಡ್
(Reckkit revealed that, Durex company condom sales increased by double digit in first quarter (January to March) in 2021)