ಬಾಂಗ್ಲಾದೇಶ: ಮೀಸಲಾತಿ ವಿರೋಧಿಸಿ ಪ್ರತಿಭಟನೆ, ಕರ್ಫ್ಯೂ, ಸಾವಿನ ಸಂಖ್ಯೆ 105ಕ್ಕೆ ಏರಿಕೆ, ಭಾರತೀಯ ವಿದ್ಯಾರ್ಥಿಗಳು ವಾಪಸ್
ಬಾಂಗ್ಲಾದೇಶದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು ಅದು ಹಿಂಸಾಚಾರಕ್ಕೆ ತಿರುಗಿದೆ. ಢಾಕಾ ಸೇರಿದಂತೆ ದೇಶದ ವಿವಿಧೆಡೆ ನಡೆದ ಹಿಂಸಾಚಾರದಲ್ಲಿ 105 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರದ ಹಾದಿ ಹಿಡಯುತ್ತಿದೆ. ಇದುವರೆಗೆ 105 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರ್ಫ್ಯೂ ಹೇರಲಾಗಿದ್ದು, ಭಾರತೀಯ ವಿದ್ಯಾರ್ಥಿಗಳು ವಾಪಸಾಗಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣದಲ್ಲಿ, ಪ್ರಧಾನಿ ಶೇಖ್ ಹಸೀನಾ ಅವರು ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಮಾತುಕತೆಗೆ ವಿದ್ಯಾರ್ಥಿಗಳನ್ನು ಆಹ್ವಾನಿಸಿದರು. ಆದರೆ, ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಸರ್ಕಾರದ ಪ್ರಸ್ತಾಪವನ್ನು ವಿದ್ಯಾರ್ಥಿಗಳು ಒಪ್ಪಿಕೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಕೆಲವೆಡೆ ಇಂಟರ್ನೆಟ್ ಹಾಗೂ ಮೊಬೈಲ್ ಸೇವೆ ಕಡಿತಗೊಳಿಸಲಾಗಿದ್ದು ಪ್ರತಿಭಟನಕಾರರ ಮೇಲೆ ಪೊಲೀಸರು, ಭದ್ರತಾ ಪಡೆಗಳು ಗುಂಡಿನ ದಾಳಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಕಳೆದೊಂದು ವಾರದಲ್ಲಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಿಗ್ಗೆ ರಾಜಧಾನಿ ಢಾಕಾದಲ್ಲಿ ಇಂಟರ್‌ನೆಟ್ ಸೇವೆ ಆರಂಭಗೊಂಡರೂ, ನಿಧಾನಗತಿಯಿಂದ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಪುಟಗಳು ತೆರೆಯುತ್ತಿರಲಿಲ್ಲ.
ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹಿಂಸಾಚಾರ ಇದುವರೆಗೆ 32 ಮಂದಿ ಸಾವು, ಸರ್ಕಾರಿ ಸುದ್ದಿವಾಹಿನಿಗೆ ಬೆಂಕಿ
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ ಶೇ. 56 ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ಶೇ.30 ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ಪ್ರಧಾನಿಗಳು ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಭಾರತದಕ್ಕೆ ಹಿಂದಿರುಗುತ್ತಿರುವ ಬಹುತೇಕ ವಿದ್ಯಾರ್ಥಿಗಳು ಉತ್ತರ ಪ್ರದೇಶ, ಹರ್ಯಾಣ, ಮೇಘಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೂಲದವರಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಎಂಬಿಬಿಎಸ್ ಪದವಿ ಪಡೆಯುತ್ತಿದ್ದರು. ಅಗರ್ತಲಾ ಬಳಿಕ ಅಖುರ್ ಗಡಿಯ ಮೂಲಕ ಬಹುತೇಕ ವಿದ್ಯಾರ್ಥಿಗಳು ವಾಪಸಾಗಿದ್ದಾರೆ. ಸಾಕಷ್ಟು ದಿನಗಳು ಕಾದ ಬಳಿಕ ಅಂತಿಮವಾಗಿ ಬಾಂಗ್ಲಾದೇಶವನ್ನು ಬಿಡಲು ನಿರ್ಧರಿಸಿದ್ದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.
ಪ್ರತಿಭಟನೆಗಳನ್ನು ನಿಯಂತ್ರಿಸಲು ಬಾಂಗ್ಲಾದೇಶದ ಹಲವೆಡೆ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿತ್ತು. ಈ ಕಾರಣದಿಂದ ಬೇಸರಗೊಂಡ ವಿದ್ಯಾರ್ಥಿಗಳು ಢಾಕಾದಲ್ಲಿ ಕೋಲು, ದೊಣ್ಣೆ ಮತ್ತು ಕಲ್ಲುಗಳೊಂದಿಗೆ ರಸ್ತೆಗಿಳಿದು ಹೆದ್ದಾರಿಗಳನ್ನು ತಡೆದರು. ಸರ್ಕಾರಿ ಕಟ್ಟಡಗಳನ್ನು ಹಾನಿಗೊಳಿಸಿ, ಸಶಸ್ತ್ರ ಪೊಲೀಸರರೊಂದಿಗೆ ಘರ್ಷಣೆಗೆ ಇಳಿದಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ