ಕೈವ್: ಕಳೆದ 10 ದಿನಗಳ ಹಿಂದೆ ರಷ್ಯಾದ ಪಡೆಗಳು ಉಕ್ರೇನ್‌ನ ಖೆರ್ಸನ್ (Kherson) ನಗರವನ್ನು ಬಿಟ್ಟು ಹಿಂದೆ ಸರಿದಿತ್ತು. ಇದರಿಂದ ಉಕ್ರೇನ್ಗೆ (Ukraine) ದೊಡ್ಡ ಜಯ ಉಂಟಾಗಿತ್ತು. ಇದಾದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ‘ಖೆರ್ಸನ್ ಪ್ರಜೆಗಳು ನಮ್ಮವರು’ ಎಂದು ಹೇಳಿದ್ದರು. ಇದರಿಂದ ರಷ್ಯಾಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೆ, ಇದೀಗ ಮತ್ತೆ ಉಕ್ರೇನ್ ನಗರದ ಖೆರ್ಸನ್ ಮೇಲೆ ರಷ್ಯಾದ (Russia) ಶೆಲ್ ದಾಳಿ ನಡೆಸಿದ್ದು, 15 ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಉಕ್ರೇನ್ ದೇಶಾದ್ಯಂತ ಎಂಜಿನಿಯರ್‌ಗಳು ಪ್ರಮುಖ ನಗರಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.
ದೇಶಾದ್ಯಂತ ಇತ್ತೀಚಿನ ವಾರಗಳಲ್ಲಿ ರಷ್ಯಾದ ವೈಮಾನಿಕ ದಾಳಿಗಳು ಉಕ್ರೇನ್‌ನ ಶಕ್ತಿಯ ಮೂಲಸೌಕರ್ಯಕ್ಕೆ ಭಾರೀ ಪೆಟ್ಟು ಕೊಟ್ಟಿದೆ. ಚಳಿಗಾಲದ ಸಮೀಪಿಸುತ್ತಿದೆ. ಆರೋಗ್ಯ ಬಿಕ್ಕಟ್ಟು ಕೂಡ ಎದುರಾಗಿದೆ. ಇತ್ತೀಚೆಗಷ್ಟೇ ಉಕ್ರೇನಿಯನ್ ಪಡೆಗಳು ಪುನಃ ವಶಪಡಿಸಿಕೊಂಡ ಪೂರ್ವದ ಪ್ರಮುಖ ನಗರವಾದ ಖೆರ್ಸನ್‌ನಲ್ಲಿ ರಷ್ಯಾದ ಅತ್ಯಂತ ಭೀಕರ ಬಾಂಬ್ ದಾಳಿ ಅಪ್ಪಳಿಸಿತ್ತು.
ಶತ್ರುಗಳ ಶೆಲ್ ದಾಳಿಯಿಂದ 1 ಮಗು ಸೇರಿದಂತೆ ಒಟ್ಟು 15 ನಿವಾಸಿಗಳು ಸಾವನ್ನಪ್ಪಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಹಲವಾರು ಮನೆಗಳು ಮತ್ತು ಬಹುಮಹಡಿ ಕಟ್ಟಡಗಳು ಹಾನಿಗೊಳಗಾಗಿವೆ. ರಷ್ಯಾದ ಆಕ್ರಮಣಕಾರರು ಬಹು ರಾಕೆಟ್ ಲಾಂಚರ್‌ಗಳೊಂದಿಗೆ ವಸತಿ ಪ್ರದೇಶದ ಮೇಲೆ ಗುಂಡು ಹಾರಿಸಿದರು. ಇದರಿಂದ ದೊಡ್ಡ ಕಟ್ಟಡವೊಂದು ಬೆಂಕಿಗೆ ಆಹುತಿಯಾಯಿತು ಎಂದು ಖೆರ್ಸನ್ ಮಿಲಿಟರಿ ಆಡಳಿತದ ಮುಖ್ಯಸ್ಥ ಯಾರೋವ್ಸ್ಲಾವ್ ಯಾನುಶೋವಿಚ್ ಹೇಳಿದ್ದಾರೆ.
ನವೆಂಬರ್ 2ನೇ ವಾರದಲ್ಲಿ ಖೆರ್ಸನ್ ನಗರವನ್ನು ಬಿಟ್ಟು ರಷ್ಯಾ ಹಿಂದೆ ಸರಿದುಕೊಳ್ಳುತ್ತಿದ್ದಂತೆ ಖೆರ್ಸನ್ ಪ್ರಜೆಗಳು ಸಂಭ್ರಮ ಪಟ್ಟು ಉಕ್ರೇನ್ ಸೈನ್ಯಕ್ಕೆ ಸಂಭ್ರಮದ ಶುಭಾಶಯ ಹಂಚಿಕೊಂಡು ಉಕ್ರೇನ್ ದೇಶದ ಧ್ವಜಾರೋಹಣದ ಮೂಲಕ ಸಂಭ್ರಮ ಆಚರಿಸಿಕೊಂಡಿದ್ದರು. ರಸ್ತೆ, ಸರ್ಕಲ್, ಪ್ರತಿಮೆಗಳ ಬಳಿ ಉಕ್ರೇನ್ ಪ್ರಜೆಗಳು ಧ್ವಜ ಹಾರಿಸಿದ್ದರು.
ಖೆರ್ಸನ್ ನಗರವು ಯುದ್ಧದ ಆರಂಭದಿಂದಲೂ ರಷ್ಯಾ ಸೈನ್ಯಕ್ಕೆ ಗುರಿಯಾಗಿದ್ದ ಏಕೈಕ ಪ್ರಮುಖ ಉಕ್ರೇನಿಯನ್ ಪ್ರಾದೇಶಿಕ ರಾಜಧಾನಿಯಾಗಿದೆ. ರಷ್ಯಾ ಸೈನ್ಯ ಸೆಪ್ಟೆಂಬರ್ ಅಂತ್ಯದಲ್ಲಿ ಹಕ್ಕು ಸಾಧಿಸಿದ 4 ಪ್ರದೇಶಗಳಲ್ಲಿ ಖರ್ಸನ್ ಪ್ರಾಂತ್ಯವು ಒಂದಾಗಿದೆ. ಈ ಪ್ರದೇಶವು ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ಕಾರ್ಯತಂತ್ರದ ಹೆಬ್ಬಾಗಿಲು ಕೂಡ ಆಗಿತ್ತು.