ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್ ಪುತಿನ್
ವ್ಲಾದಿಮಿರ್ ಪುತಿನ್ ಅವರು ವಿಭಿನ್ನ ಉಡುಗೆಯನ್ನು ಧರಿಸಿ ಹುಲ್ಲುಗಾವಲುಗಳ ಮೇಲೆ ಕಾಲ್ನಡಿಗೆಯಲ್ಲಿ ಓಡಾಡಿದ್ದಾರೆ. ಮರಕ್ಕೆ ಆತುನಿಂತು ಪೋಸ್ ಕೊಟ್ಟಿದ್ದಾರೆ.
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ (Vladimir Putin) ಸೆಪ್ಟೆಂಬರ್ ಪ್ರಾರಂಭದಲ್ಲಿ ಸೈಬೀರಿಯಾದಲ್ಲಿ ತುಂಬ ಜಾಲಿಯಾಗಿ ದಿನ ಕಳೆದಿದ್ದಾರೆ. ಬೆಟ್ಟ-ಗುಡ್ಡ ಹತ್ತಿ, ಹೊಳೆಯಲ್ಲಿ ಇಳಿದು ನಡೆದಾಡಿದ್ದಾರೆ. ಮೀನು ಹಿಡಿದಿದ್ದಾರೆ. ವ್ಲಾದಿಮಿರ್ ಪುತಿನ್ರ ಈ ವಿಶೇಷ ಕ್ಷಣಗಳ ಫೋಟೋವನ್ನು ರಷ್ಯಾ ಸರ್ಕಾರ ಇದೀಗ ಬಿಡುಗಡೆ ಮಾಡಿದೆ. ರಷ್ಯಾ ಸರ್ಕಾರದ ವೆಬ್ಸೈಟ್ನಲ್ಲಿ ಒಟ್ಟು 20 ಫೋಟೋಗಳನ್ನು ಬಿಡುಗಡೆ ಮಾಡಲಾಗಿದ್ದು, ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಕೆಲ ಕಾಲ ತಮ್ಮ ಸರ್ಕಾರಿ ಕೆಲಸಗಳಿಂದ ಬಿಡುವು ಪಡೆದು, ಸೈಬೀರಿಯಾದ ಅಪರಿಚಿತ ಸ್ಥಳದಲ್ಲಿ ಸಮಯ ಕಳೆದಿದ್ದಾರೆ ಎಂದು ಹೇಳಿದೆ.
ಸೆಪ್ಟೆಂಬರ್ ಪ್ರಾರಂಭದಲ್ಲಿ ವ್ಲಾದಿಮಿರ್ ಪುತಿನ್ ಅವರ ಸುತ್ತಲಿನ ಹಲವು ಜನರಲ್ಲಿ ಕೊವಿಡ್ 19 ಕಾಣಿಸಿಕೊಂಡಿದ್ದರಿಂದ ಅವರೂ ಕೂಡ ಐಸೋಲೇಟ್ ಆಗಬೇಕಾಗಿತ್ತು. ತಜಕಿಸ್ತಾನದ ಪ್ರವಾಸವನ್ನೂ ರದ್ದುಗೊಳಿಸಲಾಗಿತ್ತು. ಹೀಗೆ ಐಸೋಲೇಟ್ ಆಗಬೇಕಾದ ಸಂದರ್ಭವನ್ನು ಪುತಿನ್ ಸೈಬೀರಿಯಾದ ಸುಂದರ ಜಾಗದಲ್ಲಿ ಕಳೆದಿದ್ದಾರೆ. ಸದಾ ರಾಜಕೀಯ ಕೆಲಸದಲ್ಲಿ ತೊಡಗಿಕೊಳ್ಳುವ ಅಧ್ಯಕ್ಷರು, ಇದೀಗ ವಿಭಿನ್ನ ಉಡುಗೆಯನ್ನು ಧರಿಸಿ ಹುಲ್ಲುಗಾವಲುಗಳ ಮೇಲೆ ಕಾಲ್ನಡಿಗೆಯಲ್ಲಿ ಓಡಾಡಿದ್ದಾರೆ. ಮರಕ್ಕೆ ಆತುನಿಂತು ಪೋಸ್ ಕೊಟ್ಟಿದ್ದಾರೆ.
ಈ ಹಿಂದೆ ರಷ್ಯಾ ಅಧ್ಯಕ್ಷರು ಶರ್ಟ್ ಹಾಕದೆ, ಸನ್ಗ್ಲಾಸ್ ಹಾಕಿಕೊಂಡಿರುವ ಫೋಟೋ ಕೂಡ ವೈರಲ್ ಆಗಿತ್ತು. ರೈಫಲ್ ಹಿಡಿದ, ಫೈಟರ್ ಜೆಟ್ನ ಪೈಲಟ್ ಸ್ಥಳದಲ್ಲಿ ಕುಳಿತ ಫೋಟೋಗಳೂ ಕೂಡ ಆಕರ್ಷಿಸಿದ್ದವು. ವ್ಲಾದಿಮಿರ್ ಪುತಿನ್ಗೆ 68 ವರ್ಷ ವಯಸ್ಸಾಗಿದ್ದು, ಸ್ಪುಟ್ನಿಕ್ ವಿ ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. ಅವರೀಗ ಆರೋಗ್ಯವಾಗಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ತಿಳಿಸಿದೆ.
ಇದನ್ನೂ ಓದಿ: Viral Video: ಶಾಪಿಂಗ್ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!
ಮುಂದಕ್ಕೆ ಹೋಗುತ್ತಾ ‘ಕೋಟಿಗೊಬ್ಬ 3’ ರಿಲೀಸ್ ಡೇಟ್? ನಾಳೆ ಸುದೀಪ್ ಜತೆ ‘ಸಲಗ’ ನಿರ್ಮಾಪಕರ ಭೇಟಿ
(Russian President Vladimir Putin Fishing and Hiking In Siberia)
Published On - 4:39 pm, Sun, 26 September 21