ಡಿಸೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುವುದು ಖಚಿತವಾಗಿತ್ತಾದರೂ ದಿನಾಂಕವನ್ನು ಘೋಷಿಸಿರಲಿಲ್ಲ. ಇದೀಗ ಈ ವರ್ಷದ ಅಂತ್ಯ ಅಂದರೆ ಡಿಸೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ದೃಢಪಡಿಸಿದೆ. ಚೀನಾದಲ್ಲಿ ನಡೆಯಲಿರುವ ಪ್ರಾದೇಶಿಕ ಶೃಂಗಸಭೆಯ ಸಂದರ್ಭದಲ್ಲಿ ಪುಟಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಮಾಸ್ಕೋ, ಆಗಸ್ಟ್ 29: ಭಾರತವು ರಷ್ಯಾದ ತೈಲ ಖರೀದಿಗೆ ವಿಧಿಸಿರುವ ಅಮೆರಿಕದ ಸುಂಕಗಳ ನಡುವೆ ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳನ್ನು ಬಲಪಡಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Putin) ಡಿಸೆಂಬರ್‌ನಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ಇಂದು ದೃಢಪಡಿಸಿದೆ. ಚೀನಾದಲ್ಲಿ ನಡೆಯಲಿರುವ ಪ್ರಾದೇಶಿಕ ಶೃಂಗಸಭೆಯ ಸಂದರ್ಭದಲ್ಲಿ ಪುಟಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಕ್ರೆಮ್ಲಿನ್ ಅಧಿಕಾರಿ ಯೂರಿ ಉಷಾಕೋವ್ ಹೇಳಿದ್ದಾರೆ. ಅಲ್ಲಿ ಇಬ್ಬರೂ ನಾಯಕರು ಡಿಸೆಂಬರ್ನ ಭೇಟಿಗೆ ಸಿದ್ಧತೆಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ.
ಕಳೆದ ತಿಂಗಳು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಾರೆ ಎಂದು ದೃಢಪಡಿಸಿದ್ದರು. ಆ ಸಮಯದಲ್ಲಿ ದಿನಾಂಕಗಳನ್ನು ಅಂತಿಮಗೊಳಿಸಿರಲಿಲ್ಲ. “ನಮ್ಮೆರಡು ದೇಶಗಳ ನಡುವೆ ವಿಶೇಷ, ದೀರ್ಘ ಸಂಬಂಧವಿದೆ. ನಾವು ಈ ಸಂಬಂಧವನ್ನು ಗೌರವಿಸುತ್ತೇವೆ” ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. “ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಬಳಿಕ, ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರನ್ನು ಕೊಲ್ಲಲಾಗುತ್ತಿದೆ ಎಂಬುದು ಭಾರತಕ್ಕೆ ಮುಖ್ಯವಲ್ಲ. ಭಾರತ ಪರೋಕ್ಷವಾಗಿ ಯುದ್ಧಕ್ಕೆ ಹಣ ಸಹಾಯ ಮಾಡುತ್ತಿದೆ” ಎಂದು ಟ್ರಂಪ್ ಆರೋಪಿಸಿದ್ದರು.
2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಉಕ್ರೇನ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದ ರಫ್ತು ಗಳಿಕೆಯನ್ನು ಕಡಿತಗೊಳಿಸಲು ಪ್ರಯತ್ನಿಸಿವೆ. ಆದರೆ ರಷ್ಯಾ ಇಂಧನದ ಮಾರಾಟವನ್ನು ಯುರೋಪಿನಿಂದ ಭಾರತ ಮತ್ತು ಚೀನಾ ಸೇರಿದಂತೆ ಇತರೆ ದೇಶಗಳಿಗೆ ಮರುನಿರ್ದೇಶಿಸಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




