
ಇಟಲಿ, ನವೆಂಬರ್ 21: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇಟಲಿಯ ಬಾಲ್ಯದ ಮನೆ ಇದೀಗ ಸದ್ದು ಮಾಡುತ್ತಿದೆ. ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಇಟಲಿಯಲ್ಲಿ ನೆಲೆಸಿರುವ ಸಿಖ್ ಉದ್ಯಮಿ ಸುಖದೇವ್ ಸಿಂಗ್ ಕಾಂಗ್ ಯೋಜನೆ ರೂಪಿಸಿದ್ದಾರೆ. ಆರು ವರ್ಷಗಳ ಹಿಂದೆ ಈ ಮನೆಯನ್ನು ಖರೀದಿಸಿದ್ದ ಅವರು, ಸೋನಿಯಾ ಗಾಂಧಿ ಅವರ ಬಾಲ್ಯದ ನೆನಪುಗಳು ಮತ್ತು ಕುಟುಂಬದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಹೊಂದಿದ್ದಾರೆ.
ಇಟಲಿಯ ವಿಸೆಂಜಾ ಪ್ರಾಂತ್ಯದ ಲುಸಿಯಾನಾ ಎಂಬ ಪಟ್ಟಣದಲ್ಲಿ ಈ ಆರು ಕೊಠಡಿಗಳ ಮನೆ ಇದೆ. ಸೋನಿಯಾ ಗಾಂಧಿ ಅವರು 1946ರ ಡಿಸೆಂಬರ್ 9ರಂದು ಇದೇ ಮನೆಯಲ್ಲಿ ಜನಿಸಿದ್ದರು ಮತ್ತು ತಮ್ಮ ಬಾಲ್ಯದ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದಿದ್ದರು ಎಂದು ವರದಿಗಳು ತಿಳಿಸಿವೆ. ಬೂದು ಬಣ್ಣದ ಕಲ್ಲು ಮತ್ತು ಕಾಂಕ್ರೀಟ್‌ನಿಂದ ನಿರ್ಮಿಸಿರುವ ಈ ಮನೆಯ ಹೊರಭಾಗದಲ್ಲಿ ತ್ರಿವರ್ಣ ಧ್ವಜವಿದೆ. ಮನೆಯ ಮುಂದೆ ‘ಇಂಡಿಯನ್ ಹೌಸ್’ ಎಂಬ ಹೆಸರಿನ ಫಲಕದ ಜೊತೆಗೆ ಸೋನಿಯಾ ಗಾಂಧಿ ಅವರ ಜನ್ಮಸ್ಥಳ ಎಂಬ ಉಲ್ಲೇಖವೂ ಇದೆ.
ಸುಖದೇವ್ ಸಿಂಗ್ ಕಾಂಗ್ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಹಳ್ಳಿಯೊಂದರ ಮೂಲದವರು. 1992ರಲ್ಲಿ ಉದ್ಯೋಗಕ್ಕಾಗಿ ಇಟಲಿಗೆ ತೆರಳಿದ ಅವರು ಆರಂಭದಲ್ಲಿ ಡೈರಿ ಫಾರ್ಮ್, ಕೃಷಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದರು. ನಂತರ ಇಟಲಿಯಲ್ಲೇ ನೆಲೆಸಿದರು. 2020ರಲ್ಲಿ ತಮ್ಮ ಪತ್ನಿ ಮತ್ತು ಮಗಳ ಹೆಸರಿನಲ್ಲಿ ಸೋನಿಯಾ ಗಾಂಧಿ ಅವರ ಬಾಲ್ಯದ ಮನೆಯನ್ನು ಖರೀದಿಸಿದರು.
ಈ ಮನೆಯ ನಿರ್ವಹಣೆಗಾಗಿ ಒಬ್ಬ ಕೇರ್‌ಟೇಕರ್‌ರನ್ನು ನೇಮಿಸಲಾಗಿದೆ. ಪ್ರವಾಸಿಗರು ಮನೆ ನೋಡಲು ಬಯಸಿದರೆ ಅವರ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ. ಆಸ್ತಿ ತೆರಿಗೆ ಸೇರಿದಂತೆ ಮನೆಯ ನಿರ್ವಹಣೆಗೆ ವರ್ಷಕ್ಕೆ ಸುಮಾರು 1,000 ಯೂರೋ ಖರ್ಚು ಮಾಡುತ್ತಿರುವುದಾಗಿ ಕಾಂಗ್ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ಬಗ್ಗೆ ತಮಗೆ ಗೌರವವಿದೆ ಎಂದು ಕಾಂಗ್ ಹೇಳಿದ್ದಾರೆ. ಮನೆಯ ಐತಿಹಾಸಿಕ ಹಿನ್ನೆಲೆಯನ್ನು ಉಳಿಸುವ ಉದ್ದೇಶದಿಂದ ಬಾಡಿಗೆಗೆ ನೀಡುವ ಮತ್ತು ಗುರುದ್ವಾರವನ್ನಾಗಿ ಪರಿವರ್ತಿಸುವ ಪ್ರಸ್ತಾಪಗಳನ್ನು ತಮ್ಮ ಕುಟುಂಬ ತಿರಸ್ಕರಿಸಿದೆ ಎಂದೂ ತಿಳಿಸಿದ್ದಾರೆ.
ಈ ಮನೆಯನ್ನು ಆಧುನಿಕ ವಸ್ತುಸಂಗ್ರಹಾಲಯವನ್ನಾಗಿ ಅಭಿವೃದ್ಧಿಪಡಿಸಿ, ಇಟಲಿಗೆ ಭೇಟಿ ನೀಡುವ ಭಾರತೀಯರಿಗೆ ವಿಶೇಷ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಅವರ ಆಶಯ. ಇದರಿಂದ ಸ್ಥಳೀಯ ಗ್ರಾಮಕ್ಕೂ ಪ್ರವಾಸೋದ್ಯಮದ ಮೂಲಕ ಆರ್ಥಿಕ ಲಾಭವಾಗಬಹುದು ಎಂಬ ನಿರೀಕ್ಷೆಯಿದೆ.
ಇದನ್ನೂ ಓದಿ: ರಾಜೀವ್-ಸೋನಿಯಾ ಮೊದಲು ಭೇಟಿಯಾಗಿದ್ದ ಜಾಗಕ್ಕೆ ಗೆಳತಿಯನ್ನು ಕರೆದುಕೊಂಡು ಹೋಗಿದ್ರಂತೆ ರಾಹುಲ್
ಮ್ಯೂಸಿಯಂನಲ್ಲಿ ಪ್ರದರ್ಶಿಸಲು ಸೋನಿಯಾ ಗಾಂಧಿ ಅವರ ಬಾಲ್ಯದ ಛಾಯಾಚಿತ್ರಗಳು, ಕುಟುಂಬಕ್ಕೆ ಸಂಬಂಧಿಸಿದ ದಾಖಲೆಗಳು, ವೈಯಕ್ತಿಕ ವಸ್ತುಗಳು ಮತ್ತು ಇತರ ನೆನಪಿನ ಸಂಗ್ರಹಗಳು ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಸುಖದೇವ್ ಸಿಂಗ್ ಕಾಂಗ್ ಆಸಕ್ತಿ ತೋರಿದ್ದಾರೆ.
ಗಾಂಧಿ ಕುಟುಂಬದ ಸಹಕಾರ ದೊರೆತರೆ ಮ್ಯೂಸಿಯಂಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಸಿದ್ಧಪಡಿಸಬಹುದು ಎಂಬುದು ಅವರ ಆಶಯ. ಯೋಜನೆಯನ್ನು ಆದಷ್ಟು ಬೇಗ ಮುಂದಕ್ಕೆ ಕೊಂಡೊಯ್ಯಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್, ಎ ಜರ್ನಿ ಆಫ್ ಲವ್ ಎಂಬ ಆತ್ಮಕಥೆ ಬಿಡುಗಡೆಯಾಗಿದೆ. ಇದರಿಂದ ಅವರ ಜೀವನ, ಇಟಲಿಯ ಬಾಲ್ಯ ಮತ್ತು ಕುಟುಂಬದ ಹಿನ್ನೆಲೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಆಸಕ್ತಿ ಹೆಚ್ಚಾಗಿದೆ. ಇದೇ ಸಮಯದಲ್ಲಿ ಅವರ ಬಾಲ್ಯದ ಮನೆಯನ್ನು ಮ್ಯೂಸಿಯಂ ಆಗಿ ರೂಪಿಸುವ ಯೋಜನೆಯೂ ಗಮನ ಸೆಳೆದಿದೆ. ಈ ಯೋಜನೆ ಪೂರ್ಣಗೊಂಡರೆ ಸೋನಿಯಾ ಗಾಂಧಿ ಅವರ ಜೀವನದ ಆರಂಭಿಕ ದಿನಗಳನ್ನು ಪರಿಚಯಿಸುವ ಹೊಸ ಪ್ರವಾಸಿ ತಾಣ ಇಟಲಿಯಲ್ಲಿ ನಿರ್ಮಾಣವಾಗಬಹುದು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Sat, 21 November 26