South Africa: ದಕ್ಷಿಣ ಆಫ್ರಿಕಾದಲ್ಲಿ ಮನೆಹೊಕ್ಕ ದುಷ್ಕರ್ಮಿಗಳಿಂದ ಗುಂಡಿನ ದಾಳಿ; 10 ಸಾವು
ದಕ್ಷಿಣ ಆಫ್ರಿಕಾದ ಮನೆಯೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಂದೇ ಕುಟುಂಬದ ಹತ್ತು ಸದಸ್ಯರು ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.
ಜೋಹಾನ್ಸ್‌ಬರ್ಗ್: ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ ಏಳು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 10 ಮಂದಿ ಸಾವನ್ನಪ್ಪಿದ ಘಟನೆ ದಕ್ಷಿಣ ಆಫ್ರಿಕಾದ (South Africa) ಪೂರ್ವ ಕ್ವಾಝುಲು-ನಟಾಲ್ ಪ್ರಾಂತ್ಯದ ಪೀಟರ್‌ಮರಿಟ್ಜ್‌ಬರ್ಗ್ ನಗರದಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ (Gunfire) ಒಂದೇ ಕುಟುಂಬದ 7 ಮಹಿಳೆಯರು, ಒಂದು ಮಗು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಓರ್ವನನ್ನು ಎನ್ಕೌಂಟರ್ ಮಾಡಲಾಗಿದ್ದು, ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ, ತಲೆಮರೆಸಿಕೊಂಡಿರುವ ಮತ್ತೋರ್ವನ ಬಂಧನಕ್ಕೆ ತನಿಖೆ ಮುಂದುವರಿದಿದೆ ಎಂದು ಸಚಿವ ಭೆಕಿ ಸೆಲೆ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಪೂರ್ವ ಕ್ವಾಝುಲು-ನಟಾಲ್ ಪ್ರಾಂತ್ಯದ ಪೀಟರ್‌ಮರಿಟ್ಜ್‌ಬರ್ಗ್ ನಗರದ ಮನೆಯೊಂದರ ಸದಸ್ಯರನ್ನು ಗುರಿಯಾಗಿಸಿ ನುಗ್ಗಿದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತ್ಯೆಗೈದಿದ್ದಾರೆ. ಈ ಘಟನೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಮುಂಜಾನೆ ನಡುವೆ ನಡೆದಿದೆ. ಸಾವನ್ನಪ್ಪಿದವರ ಪೈಕಿ 7 ಮಹಿಳೆಯರಾಗಿದ್ದು, ಇಬ್ಬರು ಪುರುಷರು ಮತ್ತು ಓರ್ವ 13 ವರ್ಷದ ವ್ಯಕ್ತಿ (ಪೊಲೀಸರು ಲಿಂಗ ಬಹಿರಂಗಪಡಿಸಿಲ್ಲ) ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Delhi: ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು
ಸಾಮೂಹಿಕ ಹತ್ಯೆ ನಡೆದ ಮನೆಯಿಂದ ಸುಮಾರು ಒಂದು ಮೈಲಿ ದೂರದಲ್ಲಿ ಪೊಲೀಸರಿಗೆ ಎದುರಾದ ದುಷ್ಕರ್ಮಿಗಳು ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿ ಓರ್ವನನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ, ಘಟನೆಯಲ್ಲಿ ಗಾಯಗೊಂಡ ಓರ್ವನ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಮತ್ತೋರ್ವ ಪರಾರಿಯಾಗಿದ್ದು, ಗುರುತು ಪತ್ತೆಯಾಗಿದೆ ಎಂದು ಸಚಿವ ಸೆಲೆ ಹೇಳಿದರು.
ಪೊಲೀಸರ ಗುಂಡೇಟಿಗೆ ಸಾವನ್ನಪ್ಪಿದ ದುಷ್ಕರ್ಮಿ ಕುಖ್ಯಾತ ಮತ್ತು ಪ್ರದೇಶದ ಇತರ ಅಪರಾಧಗಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಸಚಿವ ಸೆಲೆ ಮಾಹಿತಿ ನೀಡಿದ್ದಾರೆ. ಅದಾಗ್ಯೂ, ಸಾಮೂಹಿಕ ಗುಂಡಿನ ದಾಳಿಗೆ ಕಾರಣ ಏನೆಂದು ಸ್ಪಷ್ಟಪಡಿಸಿಲ್ಲ. ತನಿಖೆ ನಂತರವಷ್ಟೇ ತಿಳಿದುಬರಲಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 pm, Fri, 21 April 23